ಮನೆಯೇ ಮೊದಲ ಪಾಠಶಾಲೆ, ಜನನಿ ತಾನೇ ಮೊದಲ ಗುರು ಎಂಬುದು ಸಾರ್ವಕಾಲಿಕ ಸತ್ಯ. ಪುಟ್ಟ ಹಸುಗೂಸು ಕೂಡ ನಮ್ಮ ಧ್ವನಿಯಲ್ಲಿನ ಏರಿಳಿತಗಳನ್ನು ಗುರುತಿಸುತ್ತದೆ. ಗದರಿದರೆ ಭಯಪಡುತ್ತದೆ. ಅಳಲಾರಂಭಿಸುತ್ತದೆ. ನಗುತ್ತಾ ಮಾತನಾಡಿಸಿದರೆ ನಕ್ಕು ತನ್ನದೇ ಬಾಲ ಭಾಷೆಯಲ್ಲಿ ಮಾತನಾಡಲು ಪ್ರಯತ್ನಿಸುತ್ತದೆ.
ಮಗು 1 ವರ್ಷ ವಯಸ್ಸಿನಲ್ಲಿ ನಡೆಯಲು ಆರಂಭಿಸಿದ ನಂತರ ಅಪ್ಪ ಅಮ್ಮರ ಹಿಂದೆ ತಿರುಗುತ್ತಾ ಅವರ ಎಲ್ಲ ಕ್ರಿಯೆಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತದೆ, ಗ್ರಹಿಸುತ್ತದೆ. ಮನೆಯ ವಿವಿಧ ಸದಸ್ಯರು ಮಾಡುವ ಎಲ್ಲ ಕ್ರಿಯೆಗಳು ಮಗುವಿನ ಗ್ರಹಿಕೆಗೆ ಒಳಪಡುತ್ತದೆ. ಎಷ್ಟೋ ಬಾರಿ ತಮ್ಮ ಮನೆಯ ಇತರ ಸದಸ್ಯರನ್ನು ಮಕ್ಕಳು ಅನುಕರಿಸಲು ಆರಂಭಿಸುತ್ತವೆ. ಒಂದರಿಂದ ಐದು ವರ್ಷದ ಒಳಗಿನ ಮಕ್ಕಳು ಈ ಸಮಯದಲ್ಲಿ ಕೆಳಗಿನ ಐದು ವಿಷಯಗಳಲ್ಲಿ ಪರಿಣತರಾಗುತ್ತಾರೆ.
ಅವುಗಳು ದೈನಂದಿನ ಚಟುವಟಿಕೆಗಳಲ್ಲಿ ಪಂಚೇಂದ್ರಿಯಗಳ ಕಾರ್ಯನಿರ್ವಹಣೆ, ಚಟುವಟಿಕೆ, ಭಾಷೆ, ಅರಿವು ಮತ್ತು ವ್ಯಕ್ತಿತ್ವ. ಬೆಳವಣಿಗೆ ಎಂದರೆ ಬೇರುಗಳಿಂದ ಬೇರ್ಪಡಿಸಿಕೊಂಡು ಮತ್ತೊಂದೆಡೆ ನೆಡುವುದಲ್ಲ... ಬದಲಾಗಿ ಹೊಸ ಜ್ಞಾನವನ್ನು ತುಂಬುವುದು. ಮಕ್ಕಳಿಗೆ ನಮ್ಮ ಪಂಚೇಂದ್ರಿಯಗಳ ಕುರಿತು, ಅವುಗಳ ಕಾರ್ಯ ಚಟುವಟಿಕೆಗಳ ಅರಿವನ್ನು ಮೂಡಿಸಬೇಕು. ಇಂಗ್ಲೀಷಿನಲ್ಲಿ ಹೇಳುವುದಾದರೆ ಗ್ರಾಸ್ ಮೋಟಾರ್ ಸ್ಕಿಲ್ ಅಂಡ್ ಫೈನ ಮೋಟರ್ ಸ್ಕಿಲ್‌ಗಳು.
ಗ್ರಾಸ್ ಮೋಟಾರ್ ಸ್ಕಿಲ್ ಎಂದರೆ ಮಕ್ಕಳ ದೇಹದ ಬೆಳವಣಿಗೆಗೆ ಅಗತ್ಯವಾಗುವ ದೊಡ್ಡ ಸ್ನಾಯುಗಳ ಕಾರ್ಯ ಚಟುವಟಿಕೆಗಳಾದ ಮಗು ತಾನೆ ತಾನಾಗಿ ಕುಳಿತುಕೊಳ್ಳುವುದು, ನಿಲ್ಲುವುದು, ನಡೆಯುವುದು ಓಡುವುದು ಹೀಗೆ ಹತ್ತು ಹಲವು ಚಟುವಟಿಕೆಗಳನ್ನು ಮಾಡುತ್ತದೆ. ಫೈನ್ ಮೋಟರ್ ಸ್ಕಿಲ್ ಎಂದರೆ ಪುಟಗಳನ್ನು ತಿರುಗಿಸುವುದು, ಚಿತ್ರ ಬಿಡಿಸುವುದು, ಬಣ್ಣ ತುಂಬುವುದು, ಬರೆಯುವುದು, ಕತ್ತರಿಸುವುದು, ಅಂಟಿಸುವುದು ಅಳತೆ ಮಾಡುವುದು ಮುಂತಾದ ಸೂಕ್ಷ್ಮ ಚಟುವಟಿಕೆಗಳು. ಈ ಕ್ರಿಯೆಗಳಲ್ಲಿ ಮಕ್ಕಳು ಸಾಮಾನ್ಯವಾಗಿ ಭಾಗವಹಿಸುತ್ತಾರೆ. ಆ ರೀತಿ ಭಾಗವಹಿಸುವಂತೆ ಮಾಡುವ ಜವಾಬ್ದಾರಿ ತಾಯಂದಿರದು. ಮಕ್ಕಳು ಸದಾಕಾಲ ಓಡಾಡುತ್ತಾ ತಮ್ಮ ದೈಹಿಕ ಬೆಳವಣಿಗೆಯನ್ನು, ಸ್ನಾಯುಗಳ ದೃಢತೆಯನ್ನು ಹೆಚ್ಚಿಸಿಕೊಳ್ಳುತ್ತಾರೆ.
ಚಟುವಟಿಕೆ.... ಒಂದೇ ಎರಡೇ ಮಕ್ಕಳ ಚಟುವಟಿಕೆಗಳು!! ಮಗು ಯಾವತ್ತೂ ಚಟುವಟಿಕೆಯ ಕೇಂದ್ರ. ಕುಳಿತಲ್ಲಿ ಕೂಡದೆ ನಿಂತಲ್ಲಿ ನಿಲ್ಲದೆ ಸದಾ ಏನನ್ನಾದರೂ ಎಳೆಯುವ, ಕೀಳುವ, ಹರಿಯುವ ಸ್ವತಃ ತಾನೇ ಬಿದ್ದು ಮೇಲೇಳುವ ಚಟುವಟಿಕೆಗಳನ್ನು ಮಾಡುತ್ತದೆ. ಹರಿವ ನೀರಿನ ಕೆಳಗೆ ಹರಿದಾಡುವ ಮಗು ಗಾಳಿಯಲ್ಲಿ ತೇಲ ಬಯಸುತ್ತದೆ. ತನಗೆ ಬೇಕಾದ ವಸ್ತುವನ್ನು ಕಂಡು ಹಿಡಿಯಲು ಓಡುತ್ತದೆ. ಈ ಎಲ್ಲಾ ಚಟುವಟಿಕೆಗಳಿಗೆ ಮಗುವಿಗೆ ಬೇಕಾಗಿರುವುದು ದೈಹಿಕ ಸ್ವಾಸ್ಥ ಮತ್ತು ಆರೋಗ್ಯಕರ ಹವ್ಯಾಸಗಳು. ಮನೆಯಲ್ಲಿರುವ ಸಾಮಾನುಗಳು ಒಂದೆಡೆ ಇರುವುದಿಲ್ಲ ಎಂದರೆ ಅದರ ಅರ್ಥ ಮಗುವಿಗೆ ನಾವು ಸೂಕ್ತ ತರಬೇತಿ ಕೊಟ್ಟಿಲ್ಲ ಎಂದು. ಉದಾಹರಣೆಗೆ ಚಿಕ್ಕಮಗುವಿದ್ದಾಗಲೇ ಮಗು ಎಸೆದ ಬಾಲನ್ನು ತಂದುಕೊಡುವವರು ನಾವೇ? ಅಯ್ಯೋ ಪಾಪ ಮಗು ಹೇಗೆ ಹೋಗಿ ತರುತ್ತದೆ ಎಂದು!!. ಆದರೆ ಮಗು ಹಾಗೆ ತಾನೇ ಎಸೆದ ಚಂಡನ್ನು ತಾನೆ ತಂದರೆ ಮಗುವಿನ ಕಾರ್ಯ ಚಟುವಟಿಕೆಗೆ ಇಂಬು ನೀಡಿದಂತಾಗುತ್ತದೆ. ಹಾಗೆ ತಂದ ಮಗು ಚಂಡನ್ನು ನಮ್ಮ ಕೈಯಲ್ಲಿಟ್ಟಾಗ ಚಪ್ಪಾಳೆ ತಟ್ಟುವ ಮೂಲಕ ಅದನ್ನು ಹುರಿದುಂಬಿಸಬೇಕು ಅದು ಮಗುವಿನ ಮಾನಸಿಕ ಸಂತುಷ್ಟಿಗೆ ಮತ್ತು ಸಂತೃಪ್ತಿಗೆ ಕಾರಣವಾಗುತ್ತದೆ. ಮಾನಸಿಕ ಸ್ವಾಸ್ಥ್ಯ ಹೆಚ್ಚಾಗಲು ಮಗುವನ್ನು ಪ್ರೋತ್ಸಾಹಿಸುವುದು ಅತ್ಯಂತ ಅವಶ್ಯಕ. ಹಾಗೆಂದು ಅನವಶ್ಯಕವಾಗಿ ಹುರಿದುಂಬಿಸಿದರೆ ಅದು ಮಗುವಿನಲ್ಲಿ ಪೊಳ್ಳು ಪ್ರತಿಷ್ಠೆ ಉಂಟಾಗಲು ಕಾರಣವಾಗುತ್ತದೆ. ಅಂತಹ ಮಕ್ಕಳು ತಾವು ಮಾಡಿದ್ದೆ ಸರಿ ಎಂಬ ಭಾವವನ್ನು ಹೊಂದುತ್ತಾರೆ, ಇದು ಮಗುವಿನ ಬೆಳವಣಿಗೆಗೆ ಮಾರಕ.
ಹಾಡುವುದು, ಬಿಲ್ಡಿಂಗ್ ಬ್ಲಾಕ್ಸ್ ಗಳಿಂದ ಮನೆ ಮತ್ತು ಇನ್ನಿತರ ಇಮಾರತುಗಳನ್ನು ಕಟ್ಟುವುದು, ಮಣ್ಣಿನಿಂದ ಸಣ್ಣಪುಟ್ಟ ವಸ್ತುಗಳನ್ನು ತಯಾರಿಸುವುದು ಇತ್ತೀಚೆಗೆ ದೊರಕುವ ಕ್ಲೆ ಗಳಿಂದ ವಿವಿಧ ಬಗೆಯ ಹಣ್ಣು ಹೂಗಳಂತಹ ರಚನೆಗಳನ್ನು ತಯಾರಿಸುವುದು ಈ ಚಟುವಟಿಕೆಯಲ್ಲಿ ಬರುತ್ತದೆ.
ಭಾಷೆ ಮಗುವಿನ ಬದುಕಿನಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಮಗು ತನ್ನ ಹುಟ್ಟಿನ ಪರಿಸರದ ಭಾಷೆಯನ್ನು ಹೆಚ್ಚಾಗಿ ಬಳಸಿದರೆ ಮಗುವಿನಲ್ಲಿ ಶಬ್ದ ಸಂಗ್ರಹ ಹೆಚ್ಚಾಗುತ್ತದೆ. ಶುದ್ಧವಾದ ಮತ್ತು ಸ್ಪುಟವಾದ ಮಾತುಗಳನ್ನು ಕಲಿಯಲು ಭಾಷೆ ಅತಿ ದೊಡ್ಡ ಸಂವಹನ ಮಾಧ್ಯಮವಾಗಿ ಪರಿಣಮಿಸಿದೆ. ಯಾವುದೇ ಭಾಷೆಯಾದರೂ ಮಗು ತನ್ನ ಕುಟುಂಬದವರು ಮಾತನಾಡುವ ಭಾಷೆಯನ್ನು ಮೊದಲು ಕಲಿತರೆ ತಾನು ವಾಸಿಸುವ ಪರಿಸರದ ಭಾಷೆಯನ್ನು ಕೂಡ ಬಲು ಬೇಗನೆ ಕಲಿಯುತ್ತದೆ. ಭಾಷೆಯು ಭಾವನೆಗಳನ್ನು ಹಂಚಿಕೊಳ್ಳುವ ಒಂದು ಮಾಧ್ಯಮ. ಭಾಷೆಯು ಮಗುವಿನಲ್ಲಿ ವ್ಯಾಕರಣದ ಜ್ಞಾನವನ್ನು ಹೆಚ್ಚಿಸುತ್ತದೆ, ಶಬ್ದಗಳ ಒಳಾರ್ಥವನ್ನು ತಿಳಿಸಿಕೊಡುತ್ತದೆ. ಭಾಷೆಯ ಮೂಲಕ ಮಗು ಭಾವನೆಗಳನ್ನು ವ್ಯಕ್ತಪಡಿಸುವುದನ್ನು ಕಲಿಯುತ್ತದೆ. ಭಾಷೆಯ ಕಲಿಕೆ ಮಗುವಿನ ಪ್ರಬುದ್ಧತೆಯನ್ನು ಹೆಚ್ಚಿಸುತ್ತದೆ.
ಅರಿವು.... ಬಿಸಿಯನ್ನು ಮುಟ್ಟಬಾರದು, ತಗ್ಗಿನಲ್ಲಿ ಇಳಿಯಬಾರದು ಮೇಲೆ ಹತ್ತುವಾಗ ಏನನ್ನಾದರೂ ಹಿಡಿದುಕೊಳ್ಳಬೇಕು, ಅಮ್ಮನ ಕಣ್ಸನ್ನೆಯ ಭಯದಲ್ಲಿಯೇ ಕಲಿಯಬೇಕು ಎಂಬ ಸೂಕ್ಷ್ಮತೆಗಳ ಅರಿವನ್ನು ಮಗು ಹೊಂದುತ್ತದೆ. ಹಿರಿಯರಿಗೆ ಗೌರವ ಕೊಡುವ, ತನಗಿಂತ ಕಿರಿಯರನ್ನು ಪ್ರೀತಿಸುವ, ಕಾಳಜಿ ಮಾಡುವ, ತಪ್ಪು ಸರಿಗಳ ಕುರಿತು ಸೂಕ್ಷ್ಮ ಅವಗಾಹನೆ ಮಗುವಿನಲ್ಲಿ ಉಂಟಾಗುತ್ತದೆ. ಯಾವ ಕೆಲಸಗಳನ್ನು ಮಾಡಿದರೆ ಅಮ್ಮ ಕಣ್ಣು ಬಿಡುವಳು, ಯಾವುದಕ್ಕೆ ಪ್ರೋತ್ಸಾಹಿಸುವಳು ಎಂಬ ಸೂಕ್ಷ್ಮಜ್ಞತೆ ಮಗುವಿನಲ್ಲಿ ಉಂಟಾಗುತ್ತದೆ.
ಅಂತಿಮವಾಗಿ ವ್ಯಕ್ತಿತ್ವ ನಿರ್ಮಾಣ... ನಗುವಿನಲ್ಲಿ ಸಣ್ಣಪುಟ್ಟ ತೊಂದರೆಗಳನ್ನು ತಾನೇ ತಾನಾಗಿ ನಿವಾರಿಸಿಕೊಳ್ಳುವ ಕೌಶಲದ ಜೊತೆ ಜೊತೆಗೆ, ನಿರ್ಧಾರಗಳನ್ನು ತೆಗೆದುಕೊಳ್ಳುವ ಕೌಶಲವು ಬೆಳೆಯುತ್ತದೆ. ಸಾಮಾಜಿಕವಾಗಿ ಹೇಗೆ ಎಲ್ಲಿ ಮತ್ತು ಯಾರೊಂದಿಗೆ ಬೆರೆಯಬೇಕೆಂಬ ಜಾಣತನವನ್ನು ಮಗು ಕಲಿಯುತ್ತದೆ. ಕುಟುಂಬದ ಪರಿಸರಕ್ಕಿಂತ ಸಮಾಜದ ಪರಿಸರ ವಿಭಿನ್ನ ಮತ್ತು ಅಲ್ಲಿ ಕಲಿಯುವಿಕೆ ಇನ್ನೂ ಹೆಚ್ಚಾಗಿ ಇದ್ದು ಮಗುವಿನ ಸರ್ವತೋಮುಖ ಬೆಳವಣಿಗೆಗೆ ಇದು ಕಾರಣವಾಗುತ್ತದೆ. ಸ್ವತಂತ್ರವಾಗಿ ಮಗು ನಿರ್ಧಾರಗಳನ್ನು ತೆಗೆದುಕೊಳ್ಳುವ ಕಲೆ ವ್ಯಕ್ತಿತ್ವ ನಿರ್ಮಾಣದಲ್ಲಿ ಬರುತ್ತದೆ.
ಮಗುವಿನ ಈ ಐದು ಕಾರ್ಯ ಚಟುವಟಿಕೆಗಳನ್ನು ತಿದ್ದಿ,ತೀಡುವಲ್ಲಿ ತಾಯಿಯ, ಮನೆಯ ಮತ್ತು ಕುಟುಂಬದ ಪಾತ್ರ ಹೆಚ್ಚು. ಮನೆಯ ಎಲ್ಲಾ ಸದಸ್ಯರು ಏಕ ಪಕ್ಷೀಯವಾಗಿ ಮಗುವಿನ ಬೆಳವಣಿಗೆಯಲ್ಲಿ ತಮ್ಮ ತಮ್ಮ ಪಾಲನ್ನು ಸಲ್ಲಿಸುತ್ತಾರೆ. ಮಗುವಿಗೆ ನೀತಿ ಕಥೆಗಳನ್ನು ಹೇಳುವ ಮೂಲಕ, ಹಾಡುಗಳನ್ನು ಕಲಿಸುವ ಮೂಲಕ ವಚನಗಳನ್ನು ಹೇಳಿಸುವ ಮೂಲಕ ಅಜ್ಜ ಅಜ್ಜಿ ಸಂಸ್ಕೃತಿಯ ಮತ್ತು ಸಮಾಜದ ಅರಿವನ್ನು ಮೂಡಿಸಿದರೆ, ತಾಯಿ ದೈನಂದಿನ ಕಾರ್ಯ ಚಟುವಟಿಕೆಗಳ ನಿರ್ವಹಣೆ, ಆಹಾರ ಸೇವನೆ ಮತ್ತು ಹಿರಿಯರನ್ನು ಗೌರವಿಸುವ ಕಲೆಯನ್ನು ಮಕ್ಕಳಿಗೆ ಹೇಳಿಕೊಡುತ್ತಾಳೆ. ತಾನು ನೋಡದ್ದನ್ನು, ಕಲಿಯದ್ದನ್ನು ತನ್ನ ಮಗು ನೋಡಲಿ ಕಲಿಯಲಿ ಬೆಳೆಯಲಿ ಎಂಬ ಮಹದಾಸೆಯಿಂದ ತಂದೆ ಮಗುವಿನಲ್ಲಿ ಆತ್ಮವಿಶ್ವಾಸವನ್ನು ಧೈರ್ಯವನ್ನು, ಅಣ್ಣಂದಿರು ಅಕ್ಕಂದಿರು ಮಗುವಿನಲ್ಲಿ ಪ್ರೀತಿ ವಿಶ್ವಾಸ ಮಮತೆಯ ಸಹೋದರತ್ವ ಕಾಳಜಿ ಮಾಡುವ ಕಲಿಕೆಯನ್ನು ನೀಡುತ್ತಾರೆ. ಹೀಗೆ ಮಗುವಿನ ಶೈಶವಾವಸ್ಥೆಯಿಂದ ಶಾಲೆಯ ಪ್ರಾಥಮಿಕ ಹಂತದವರೆಗಿನ ಕಲಿಕೆಯಲ್ಲಿ ಮನೆಯ ಪಾತ್ರ ಅತ್ಯಂತ ಮುಖ್ಯವಾದದ್ದು ಮತ್ತು ಅತ್ಯವಶ್ಯಕ ಕೂಡ.ಅದಕ್ಕೆ ಹೇಳುವುದು ಮಕ್ಕಳಿಸ್ಕೂಲ್ ಮನೇಲಲ್ವೆ!! ಎಂದು.
- ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ