ಬೆಂಗಳೂರು: ಭಾಗವತರು ಸಾಂಸ್ಕೃತಿಕ ಸಂಘಟನೆಯ ಸುವರ್ಣ ಮಹೋತ್ಸವ ವರ್ಷಾಚರಣೆ ಪ್ರಯುಕ್ತ ಬೆಂಗಳೂರಿನಲ್ಲಿ ಜೂನ್ 10ರಿಂದ 14ರ ವರೆಗೆ ಐದು ದಿನಗಳ 'ಸುವರ್ಣ ರಂಗಪಥ- ಕಲಾ ಗಂಗೋತ್ರಿ 50' ಹೆಸರಿನ ರಂಗಹಬ್ಬವನ್ನು ಆಯೋಜಿಸಲಾಗಿತ್ತು.
ರಂಗೋತ್ಸವದ ಉದ್ಘಾಟನೆ ಜೂ.10ರಂದು ನಯನ ರಂಗಮಂದಿರದಲ್ಲಿ ನಡೆಯಿತು. ಹಿರಿಯ ಕಲಾವಿದ ಎಚ್.ಜಿ ದತ್ತಾತ್ರೇಯ (ದತ್ತಣ್ಣ) ಅವರು ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಹಿರಿಯ ರಂಗಕಲಾವಿದ ಡಾ. ಮುಖ್ಯಮಂತ್ರಿ ಚಂದ್ರು ಮತ್ತು ಡಾ. ಬಿ.ವಿ ರಾಜಾರಾಂ ಅವರಿಗೆ ರಂಗ ಗೌರವ ನೀಡಿ ಪುರಸ್ಕರಿಸಲಾಯಿತು. ಖ್ಯಾತ ನಾಡಟಕಕಾರ ಡಾ. ಕೆ.ವೈ. ನಾರಾಯಣ ಸ್ವಾಮಿ ಅಭಿನಂದನಾ ಭಾಷಣ ಮಾಡಿದರು. ಹಿರಿಯ ವಿಮರ್ಶಕಿ ಡಾ. ವಿಜಯಾ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಆಯೋಜಿಸಲಾಗಿತ್ತು.
ರಂಗೋತ್ಸವದ ಭಾಗವಾಗಿ ಜೂನ್ 11ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ. ಭೀಮಸೇನ ಆರ್ ಅವರಿಗೆ ರಂಗ ಗೌರವ ನೀಡಲಾಯಿತು. ಸಮಾರಂಭದಲ್ಲಿ ಹಿರಿಯ ಕಲಾ ನಿರ್ದೇಶಕ ಶಶಿಧರ ಅಡಪ ಭಾಗವಹಿಸಿದ್ದರು. ಬಳಿಕ ಸಂಜೆ 7 ಗಂಟೆಗೆ ಡಾ. ಕೋಟ ಶಿವರಾಮ ಕಾರಂತರ ಕಾದಂಬರಿ ಆಧರಿತ ಮೂಕಜ್ಜಿಯ ಕನಸುಗಳು ನಾಟಕ ಪ್ರದರ್ಶನ ಏರ್ಪಡಿಸಲಾಯಿತು. (ರಂಗರೂಪ: ಎಸ್. ರಾಮಮೂರ್ತಿ, ನಿರ್ದೇಶನ: ಡಾ. ಬಿ.ವಿ ರಾಜಾರಾಂ)
ಜೂನ್ 12ರಂದು ಕೆ.ಎಸ್ ನರಸಿಂಹ ಸ್ವಾಮಿ ವಿರಚಿತ ಮೈಸೂರು ಮಲ್ಲಿಗೆ ಕವನಗಳ ಆಧರಿತ ನಾಟಕ ಪ್ರದರ್ಶನ ನಡೆಯಿತು. ಇದಕ್ಕೆ ಮೊದಲು ಹಿರಿಯ ನೇಪಥ್ಯ ಕಲಾವಿದ ನಂಜಪ್ಪ ಅವರಿಗೆ ರಂಗ ಗೌರವ ನೀಡಲಾಯಿತು. ಹಿರಿಯ ರಂಗ ಕಲಾವಿದ ಟಿ.ಎಸ್ ನಾಗಾಭರಣ ಉಪಸ್ಥಿತರಿದ್ದರು.
ಜೂನ್ 13ರಂದು ಹಿರಿಯ ರಂಗ ಕಲಾವಿದೆ ಶ್ರೀಮತಿ ಲೀಲಾವತಿ ಬಸವರಾಜು ಅವರಿಗೆ ರಂಗ ಗೌರವ ನೀಡಲಾಯಿತು. ಡಾ. ಬಿವಿ ರಾಜಾರಾಂ ಉಪಸ್ಥಿತರಿದ್ದರು. ಬಳಿಕ ಶೇಖ್ಸ್‌ಪಿಯರ್ ವಿರಚಿತ ಕಾದಂಬರಿ ಆಧರಿತ ಮುದಿದೊರೆ ಮತ್ತು ಮೂವರು ಮಕ್ಕಳು ನಾಟಕ ಪ್ರದರ್ಶನ ನಡೆಯಿತು. (ನಾಟಕದ ರಚನೆ: ಡಾ. ಎಚ್..ಎಸ್. ವೆಂಕಟೇಶ ಮೂರ್ತಿ, ಸಂಗೀತ: ಗಜಾನನ ನಾಯ್ಕ, ನಿರ್ದೇಶನ: ಎನ್. ಮಂಗಳಾ)
ಜೂನ್ 14ರಂದು ರವೀಂದ್ರ ಕಲಾಕ್ಷೇತ್ರದಲ್ಲಿ 'ಮುಖ್ಯಮಂತ್ರಿ' ನಾಟಕ ಪ್ರದರ್ಶಿಸಲಾಯಿತು. ಇದಕ್ಕೆ ಮುನ್ನ ಹಿರಿಯ ರಂಗ ಕಲಾವಿದ ಟಿ.ಬಿ. ಪರೇಶ್ ಅವರಿಗೆ ರಂಗ ಗೌರವ ನೀಡಲಾಯಿತು. ಹಿರಿಯ ರಂಗ ಕಲಾಔಇದ ಪಾಲ್ ಸುದರ್ಶನ್ ಉಪಸ್ಥಿತರಿದ್ದರು. (ಮುಖ್ಯಮಂತ್ರಿ ನಾಟಕದ ಹಿಂದಿ ಮೂಲ: ರಣಜಿತ್ ಕಪೂರ್, ಕನ್ನಡಾನುವಾದ: ಟಿ.ಎಸ್ ಲೋಹಿತಾಶ್ವ, ನಿರ್ದೇಶನ: ಡಾ. ಬಿ.ವಿ ರಾಜಾರಾಂ).
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


