ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯ: ಎನ್.ಎಂ.ಐ.ಟಿ ಸುಸ್ಥಿರತೆ ಕ್ಲಬ್ ಉದ್ಘಾಟನೆ ಸಮಾರಂಭ

Upayuktha
0


ಬೆಂಗಳೂರು:
‘ಕಾಫಿ ಮಂಡಳಿ, ಏಲಕ್ಕಿ ಮಂಡಳಿ ಇತ್ಯಾದಿಗಳಂತೆ ನಮ್ಮ ಸರ್ಕಾರ ‘ಬಿದಿರು ಅಭಿವೃದ್ಧಿ ಮಂಡಳಿ’ಯನ್ನು ಸ್ಥಾಪಿಸಬೇಕು. ಇದರಿಂದ ತಮ್ಮ ಸ್ವಂತ ಜಮೀನುಗಳಲ್ಲಿ ಬಿದಿರು ಬೆಳೆಯುವಂತೆ ರೈತರಿಗೆ ಪ್ರೋತ್ಸಾಹಿಸಿದಂತಾಗುತ್ತದೆ ಹಾಗೂ ಮಾರುಕಟ್ಟೆಯನ್ನು ಸುಸಜ್ಜಿತವಾಗಿ ಒದಗಿಸಲು ನೆರವು ನೀಡಿದಂತಾಗುತ್ತದೆ. ಏಕೆಂದರೆ ಈಗ ಬಿದಿರು, ಕಟ್ಟಡ ನಿರ್ಮಾಣದಲ್ಲಿ, ರಸ್ತೆ ವಿಭಜಕಗಳ ಅಳವಡಿಕೆಯಲ್ಲಿ ಹಾಗೂ ವಾಹನಗಳ ನಿರ್ಮಾಣದಲ್ಲಿ ಮಹತ್ವದ ಪಾತ್ರವಹಿಸುತ್ತಿದೆ. ಹೆಚ್ಚು ಇಂಗಾಲದ ಡೈ ಆಕ್ಸೈಡ್ ಅನ್ನು ತಾನು ಬಳಸಿಕೊಂಡು, ಜೀವಿಗಳಿಗೆ ಹೇರಳವಾದ ಆಮ್ಲಜನಕವಿರುವ ಪರಿಶುದ್ಧ ವಾತಾವರಣವನ್ನು ಸೃಷ್ಟಿಸುವ ಸಾಮಥ್ರ್ಯ ಬಿದಿರಿಗಿದೆ’, ಎಂದು ಭಾರತ ಬಿದಿರು ಸೊಸೈಟಿ (ಬಾಂಬೂ ಸೊಸೈಟಿ JA.L.n ಇಂಡಿಯಾ)ಯ ಅಧ್ಯಕ್ಷ ಹಾಗೂ ವಿಶ್ರಾಂತ ಭಾರತೀಯ ಅರಣ್ಯಸೇವೆಯ ಅಧಿಕಾರಿ ಪುನತಿ ಶ್ರೀಧರ್ ಒತ್ತಾಯಿಸಿದರು. 


ಅವರು ಬೆಂಗಳೂರಿನ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಬಾಂಬೂ ಸೊಸೈಟಿ JA.L.n ಇಂಡಿಯಾದ ಸಹಯೋಗದೊಂದಿಗೆ ಸ್ಥಾಪಿತವಾಗಿರುವ ‘ಎನ್.ಎಂ.ಐ.ಟಿ ಸುಸ್ಥಿರತೆ ಕ್ಲಬ್’ (ಎನ್.ಎಂ.ಐ.ಟಿ ಸಸ್ಟೈನಬಿಲಿಟಿ ಕ್ಲಬ್) ಅನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. 


‘ಬಿದಿರು ಬೆಳೆಗಾರರಿಗೆ ಕಡಿಮೆ ಪರಿಶ್ರಮದಲ್ಲಿ ಉತ್ತಮ ಲಾಭ ಬರುತ್ತದೆ. ಪ್ರತಿ 3 ವರ್ಷಗಳಿಗೊಮ್ಮೆ ಬಿದಿರುಗಳು ಲಭ್ಯವಾಗುತ್ತದೆ. ಅಷ್ಟೇ ಅಲ್ಲ, ಬಿದಿರು ಬೆಳೆಯುವ ತಾಣಗಳಲ್ಲಿ ಮಣ್ಣಿನ ಗುಣಮಟ್ಟ ವೃದ್ಧಿಸುತ್ತದೆ. ಈಗ ನಮ್ಮ ಇಂಜಿನಿಯರಿಂಗ್ ಕಾಲೇಜುಗಳು ಬಿದಿರಿನ ಬಹುಮುಖ ಉಪಯೋಗಗಳ ಬಗ್ಗೆ ಸೂಕ್ತ ಸಂಶೋಧನೆ ನಡೆಸಬೇಕು’, ಎಂದರು.


ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಂಡಿದ್ದ, ಬಾಂಬೂ ಸೊಸೈಟಿ JA.L.n ಇಂಡಿಯಾದ ರಾಷ್ಟ್ರೀಯ ಕಾರ್ಯಕಾರಿ ಮಂಡಳಿ ಸದಸ್ಯ ಕೆ.ಪಿ. ಮೂರ್ತಿ ಅವರು ಬಿದಿರು ಸಾರ್ವಜನಿಕ ಬದುಕಿನಲ್ಲಿ ವಹಿಸುವ ಮಹತ್ವದ ಪಾತ್ರದ ಬಗ್ಗೆ ಮಾತನಾಡಿ, ‘ಬಿದಿರು, ಕಟ್ಟಡ ನಿರ್ಮಾಣದಲ್ಲಿ, ಉಕ್ಕು ಬಳಕೆಯನ್ನು ಗಣನೀಯವಾಗಿ ಇಳಿಕೆ ಮಾಡಲಿದೆ; ಈಗಾಗಲೇ ಈ ಬಗ್ಗೆ ನಮ್ಮ ತಂತ್ರಜ್ಞರು ಸಂಶೋಧನೆಗಳನ್ನು ನಡೆಸಿ ಬಿದಿರನ್ನು ಕಾರ್‍ಗಳ ಮೇಲುಹೊದಿಕೆಗೆ, ಬೈಸಿಕಲ್‍ಗಳ ತಯಾರಿಕೆಗೆ, ವಾತಾವರಣದಲ್ಲಿನ ಇಂಗಾಲದ ಅಂಶವನ್ನು ಕಡಿಮೆ ಮಾಡುವುದಕ್ಕೆ ಪರಿಣಾಮಕಾರಿಯಾಗಿ ಬಳಸಬಹುದು ಎಂಬುದನ್ನು ಸಾಬೀತು ಮಾಡಿದ್ದಾರೆ’, ಎಂದು ವಿವರಿಸಿದರು. 


ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ. ಎನ್.ಆರ್. ಶೆಟ್ಟಿ ಅವರು ಮಾತನಾಡಿ, ‘ನಮ್ಮ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಬಿದಿರಿನ ಪರಿಷ್ಕರಣೆ ಮಾಡಿ ಅದರ ವೈವಿಧ್ಯಮಯ ಬಳಕೆಗಳಿಗೆ ಅನುವು ಮಾಡಿಕೊಡುವುದು ಮಾತ್ರವಲ್ಲದೆ ಬಿದಿರನ್ನಾಧರಿಸಿದ ಸ್ವಂತ ಉದ್ಯಮಗಳನ್ನು ಸ್ಥಾಪಿಸಬೇಕು. ಹಾಗಾದ ಮಾತ್ರದಲ್ಲಿ ಸಸ್ಟೈನಬಿಲಿಟಿ ಅಂದರೆ ಸುಸ್ಥಿರತೆಯ ಕ್ಲಬ್‍ಗಳಿಗೆ ಮಹತ್ವ ಬರುತ್ತದೆ’, ಎಂದರು.


ಪ್ರಾರಂಭದಲ್ಲಿ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಹೆಚ್.ಸಿ. ನಾಗರಾಜ್ ‘ಸುಸ್ಥಿರತೆ ಕ್ಲಬ್’ನ ಉದ್ದೇಶಗಳನ್ನು ಸಾದರ ಪಡಿಸಿದರು. ಸಮಾರಂಭದಲ್ಲಿ ಕ್ಲಬ್‍ನ ಸದಸ್ಯರಾಗಿ ನೋಂದಣೆಯಾದ ನೂರಾರು ವಿದ್ಯಾರ್ಥಿಗಳು, ನಿಟ್ಟೆ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ರೋಹಿತ್ ಪೂಂಜ, ಶೈಕ್ಷಣಿಕ ವಿಭಾಗದ ಮುಖ್ಯಸ್ಥ ಡಾ. ವಿ. ಶ್ರೀಧರ್, ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥೆ ಡಾ. ಭಾರತಿ ಗಣೇಶ್, ಕ್ಲಬ್‍ನ ಅಧ್ಯಕ್ಷರಾದ ಡಾ. ಸುಮಾರಾಜ್, ಕ್ಲಬ್‍ನ ಸಂಚಾಲಕರಾದ ಡಾ. ಮೇಘಾ ಕುಲಕರ್ಣಿ ಹಾಗೂ ಡಾ. ಅರುಣ್ ಕುಮಾರ್ ಉಪಸ್ಥಿತರಿದ್ದರು. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top