ಉಜಿರೆ: ಜ್ಞಾನ ಸಂಪಾದನೆ ಮಾಡುವುದು ಜೀವನದ ಮುಖ್ಯ ಉದ್ದೇಶವಾಗಿರಬೇಕು. ಸಾಯುವುದಕ್ಕೂ ಮುಂಚೆ ಸಮಾಜಕ್ಕೆ, ಜನರಿಗೆ ಒಳಿತಾಗುವಂತಹ ಕೆಲಸ ಮಾಡಬೇಕು. ಅಂತಹವರು ಮಾತ್ರ ಸತ್ತ ನಂತರವೂ ಬದುಕಿರುತ್ತಾರೆ ಎಂದು ಉಪನ್ಯಾಸಕ ಮತ್ತು ಬರಹಗಾರ ಜಿ.ಎಸ್. ನಟೇಶ್ ನುಡಿದರು.
ಇಂದು ಉಜಿರೆಯ ಎಸ್‌ಡಿಎಂ ಪದವಿಪೂರ್ವ ಕಾಲೇಜಿನ ರತ್ನತ್ರಯ ಸಭಾಂಗಣದಲ್ಲಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಯಾಗಿದ್ದ ದಿ. ಡಾ. ಬಿ.ಯಶೋವರ್ಮ ಸ್ಮರಣಾರ್ಥ ಜರುಗಿದ 'ಅರಿವಿನ ದೀವಿಗೆ' ಉಪನ್ಯಾಸ ಮಾಲೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ 'ಮಂಕುತಿಮ್ಮನ ಕಗ್ಗ- ಜೀವನ ಮೌಲ್ಯ'ದ ಬಗ್ಗೆ ಮಾತನಾಡುತ್ತಿದ್ದರು.
ಡಿವಿಜಿಯವರು ವಿಶ್ವವಿದ್ಯಾಲಯ ಪ್ರಾಧ್ಯಾಪಕರಿಗೂ ಅರ್ಥವಾಗಲಾರದ ಸಾಹಿತ್ಯ ರಚನೆ ಮಾಡಿದವರು. ಸಾಹಿತ್ಯ ಮನುಷ್ಯನಿಗೆ ಆನಂದವನ್ನು ಉಂಟುಮಾಡುತ್ತದೆ. ವಿದ್ಯಾರ್ಥಿಗಳಿಗೆ ಮಾನವೀಯತೆಯನ್ನು ಪ್ರತಿಪಾದಿಸುವ ಶಿಕ್ಷಣವನ್ನು ಕೊಡಬೇಕು. ಮನುಷ್ಯರಾಗಿ ಹುಟ್ಟಿದ್ದಕ್ಕೆ ಭಗವಂತನಿಗೆ ಕೃತಜ್ಞನಾಗಿರಬೇಕು ಎಂದು ಕಗ್ಗದ ಉದಾಹರಣೆ ಕೊಡುತ್ತಾ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲ ಪ್ರಮೋದ್ ಕುಮಾರ್ ಮಾತನಾಡಿ, ಯುವಜನತೆಯು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾಗಿರುವ ಮೌಲ್ಯಗಳು ಕಗ್ಗದಲ್ಲಿವೆ. ಉತ್ತಮ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ಆಶಿಸಿದರು.
ಕಾರ್ಯಕ್ರಮವನ್ನು ಪ್ರಾಧ್ಯಾಪಕ ಮಹಾವೀರ ಜೈನ್ ನಿರೂಪಿಸಿ, ಡಾ.ರಾಜೇಶ್. ಬಿ ಸ್ವಾಗತಿಸಿದರು.
ಸೋನಿಯಾ ಯಶೋವರ್ಮ ಗೌರವ ಉಪಸ್ಥಿತರಾಗಿದ್ದರು. ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಸೋಮಶೇಖರ್ ಶೆಟ್ಟಿ, ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥರಾದ ಡಾ. ಬೋಜಮ್ಮ ಕೆ.ಎನ್, ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ: ಸಂಜಯ್ ಚಿತ್ರದುರ್ಗ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ


