ಮರೆಯಲಾಗದ 2023ರ ಮೇ 23..!

Upayuktha
0


2023ರ ಮೇ 23ನೇ ತಾರೀಕು ನಾನು ಮರೆಯಲೇ ಬಾರದ ದಿನ. ಕಾರಣ ನಿಮ್ಮ ಮುಂದಿಡುತ್ತೇನೆ ಓದಿಕೊಳ್ಳಿ. ನನ್ನ ವರ್ತಮಾನದ ವೃತ್ತಿ ಅಡುಗೆ. ಮನೆಯಲ್ಲಿ ಮಾಡಿಕೊಡುವುದರ ಜತೆಗೆ ಬೇರೆಯವರ ಮನೆಗೆ ಹೋಗಿ ಮಾಡಿಕೊಡುವುದೂ ಇದೆ. ಸಹಜವಾಗಿಯೇ ಅಡುಗೆಯ ಆದೇಶಗಳು ಬಂದೊಡನೆ ಡೈರಿಯಲ್ಲಿ ಬರೆದುಕೊಳ್ಳುತ್ತೇನೆ. ಅಂತೆಯೇ ಕ್ಯಾಲೆಂಡರ್ನಲ್ಲೂ ಗುರುತು ಹಾಕಿಕೊಳ್ಳುತ್ತೇನೆ. ಅಲ್ಲಿಗೆ ಅದನ್ನು ಮರೆಯುವಂತೆಯೇ ಇಲ್ಲ. ಸಾಧಾರಣ ನನ್ನ ಪತ್ನಿ ಮಹಾಲಕ್ಷ್ಮಿಯ ಕಾಲದಿಂದಲೂ ಈ ಪದ್ಧತಿ ರೂಢಿಯಾಗಿತ್ತು. ಹಾಗೂ ಅದು ವೈಜ್ಞಾನಿಕವಾಗಿಯೂ ಸರಿಯಾಗಿತ್ತು. ಆದರೂ ಕೆಲವೊಮ್ಮೆ ವಾಹನ ಚಲಾಯಿಸುತ್ತಿರುವಾಗ, ಅಡುಗೆಯ ಕೆಲಸದಲ್ಲಿರುವಾಗ, ಅಥವಾ ಫೋನಿನ ವ್ಯಾಪ್ತಿಯಲ್ಲಿ ಇಲ್ಲದೆ ಇರುವಾಗ ಅಡುಗೆಯ ಆದೇಶಗಳು ಬಂದರೆ ಮನೆಗೆ ಹೋದಮೇಲೆ ಬರೆದಿಟ್ಟುಕೊಳ್ಳುತ್ತೇನೆ. ಆವಾಗಲೆ ಎಡವಟ್ಟಾಗುವುದು. ತಾರೀಕು ಅಥವಾ ತಿಂಗಳು ವ್ಯತ್ಯಾಸವಾಗಬಹುದು, ವೇಳೆ ಬದಲಾಗಬಹುದು, ಹೇಳಿದ ಪ್ರಕಾರಗಳು ಹೆಚ್ಚು ಕಡಿಮೆ ಆಗಬಹುದು, ಅದಕ್ಕಿಂತಲೂ ಬರೆದಿಟ್ಟುಕೊಳ್ಳಲೇ ಮರೆತು ಹೋಗಬಹುದು. ಫೋನುಗಳಲ್ಲಿ ಫೋನ್ ರೆಕಾರ್ಡರ್ ಇರುತ್ತದೆ ಆದರೂ ಕೆಲವೊಮ್ಮೆ ಕೆಲವು ಕರೆಗಳು ರೆಕಾರ್ಡ್ ಆಗುವುದೇ ಇಲ್ಲ. ಕಾರಣಗಳು ಇರಬಹುದು ಆದರೆ ಪರಿಣಾಮ ಮಾತ್ರ ನಮಗೆ ಬಾಧಕವೆ. 


ಅಂತಯೇ ಈ ಮರೆವಿನ ಅಥವಾ ನೆನಪಿನ ಆಟದಲ್ಲಿ ಒಂದು ಸಲ ನಾನು ಸಿಕ್ಕಿಹಾಕಿಕೊಂಡೆ. ಮೇಲೆ ಹೇಳಿದ ತಾರೀಕಿಗೆ ಅಡುಗೆ ಮಾಡಿಕೊಡಿ ಎಂದು ನನ್ನಲ್ಲಿ ಯಾರೊ ಹೇಳಿದಂತೆ ನೆನಪೊಂದು ನನ್ನ ತಲೆಯಲ್ಲಿ ನುಸುಳಿತು. ಕೂಡಲೆ ಕಾರ್ಯಪ್ರವೃತ್ತನಾದೆ. ಡೈರಿ ನೋಡಿದೆ.. ಬರೆದದ್ದಿಲ್ಲ. ಕ್ಯಾಲೆಂಡರ್ ನೋಡಿದೆ.. ಬರೆದದ್ದಿಲ್ಲ. ಫೋನ್ ನೋಡಿದೆ.. ಯಾವುದೇ ರೆಕಾರ್ಡ್ ಆದದ್ದಿಲ್ಲ. ಅಲ್ಲಿಗೆ ಸುಳುಹುಗಳು ಮುಗಿದವು. ಇನ್ನುಳಿದದ್ದು ಸಂಶಯ ಮಾತ್ರ. ಆದರೆ ಅದು ಅಷ್ಟು ಸುಲಭವಾಗಿ ಪರಿಹಾರವಾಗದೆಂಬ ಅರಿವು ನಿಧಾನ ತಲೆಯಲ್ಲಿ ತುಂಬ ತೊಡಗಿತು. ಹಾಗಾದರೆ ನನ್ನ ನೆನಪು ಸುಳ್ಳಾಗಿರಬಹುದೆ? ಸುಳ್ಳಾದರೆ ತೊಂದರೆ ಇಲ್ಲ, ಒಂದು ವೇಳೆ ಸತ್ಯವಾದರೆ.... ಸಣ್ಣಗೆ ಒಂದು ಭಯ ಆವರಿಸತೊಡಗಿತು. ಈ ತಾರೀಕು ತಲೆಯೊಳಗೆ ಬಂದದ್ದಾದರೂ ಹೇಗೆ? ಬರೆಯದೆ ಇದ್ದುದಾದರೂ ಯಾಕೆ? ಎಲ್ಲವೂ ಗೊಂದಲ. ತುಂಬಾ ಯೋಚನೆ ಮಾಡಿದರೂ ಯಾರೆಂದು ನೆನಪಿಗೇ ಬಾರದು. ಹಾಗೆಂದು ಸುಮ್ಮನೆ ಕೂರುವಂತಿಲ್ಲ. ನನಗೆ ಪರಿಚಯವಿದ್ದ ಅಥವಾ ನನಗೆ ಹೆಚ್ಚಾಗಿ ಅಡುಗೆಗೆ ಹೇಳುತ್ತಿದ್ದವರನ್ನು ವಿಚಾರಿಸಿದೆ. ಉಹೂಂ ಎಲ್ಲಿಯೂ 23 ರ ಸುಳಿವಿಲ್ಲ. ಡೈರಿಯಲ್ಲೂ ಬೇರೆ ಯಾವುದಾದರು ತಿಂಗಳಲ್ಲಿ 23 ತಾರಿಕಿಗೆ ತಪ್ಪಿ ಬರೆದಿರಬಹುದೇ ಎಂದು ನೋಡಿದರೂ ಎಲ್ಲ 23 ತಾರೀಕುಗಳು ಖಾಲಿ ಖಾಲಿ. ಅಲ್ಲಿಗೆ ಇದು ಕಾಲವೇ ಉತ್ತರಿಸಬೇಕಾದ ಸಮಸ್ಯೆ ಎಂದುಕೊಂಡೆ. ಆದರೂ ಒಂದು ಸಣ್ಣ ಪರಿಹಾರವಿತ್ತು. ಅದೇನೆಂದರೆ ಅಡುಗೆ ಹೇಳಿದವರು ಅವರು ಹೇಳಿದ ವ್ಯಂಜನಗಳಲ್ಲೋ, ಸಂಖ್ಯೆಯಲ್ಲೋ ವ್ಯತ್ಯಾಸವಾದಾಗ ನೆನಪಿಸಲು ಅಥವಾ ದೃಢೀಕರಿಸಲು ಮತ್ತೊಮ್ಮೆ ಫೋನ್ ಮಾಡಿ ಹೇಳುತ್ತಿದ್ದರು. ಹಾಗೇನಾದರು ಫೊನ್ ಬಂದರೆ ನನ್ನ ಸಮಸ್ಯೆ ಪರಿಹಾರವಾದಂತೆಯೇ. ಅಂತೆಯೇ ಒಂದು ಫೋನ್ ಕರೆ ಬಂತು ಭಟ್ರೆ ನಾಡಿದ್ದು 23ಕ್ಕೆ... ಎನ್ನುವಾಗ ಫೋನ್ ಕಟ್ಟಾಯಿತು. ಅಬ್ಬಾ ಅಂತು ಸಮಸ್ಯೆಗೆ ಪರಿಹಾರ ಸಿಕ್ಕಬಹುದು ಎಂಬ ಖುಷಿಯಲ್ಲಿರುವಾಗ ಅವರದ್ದೇ ಇನ್ನೊಮ್ಮೆ ಕರೆ ಬಂತು. 'ಭಟ್ರೆ 23ಕ್ಕೆ ಫುರುಸೊತ್ತುಂಟ?' ಎಂದು. ಅಲ್ಲಿಗೆ ಅದೊಂದು ಆಸೆಯೂ ಬಿಟ್ಟು ಹೋಯಿತು. 'ಭಟ್ರೆ 23 ತಾರೀಕು ನೆನಪುಂಟ?' ಎನ್ನುತ್ತಿದ್ದರೆ ಆಶಾಭಾವ ಇರುತ್ತಿತ್ತು. ಇಲ್ಲ ಆಮೇಲೆ ಹಾಗೆ ಯಾರೂ ಫೋನ್ ಮಾಡಿಲ್ಲ. 


ಹಾಗೇ ಕೆಲವರು ಹೇಳಿ ಆಗಿದೆ ಮರೆಯುವ ಮಾತೇ ಇಲ್ಲ. ಇದುವರೆಗು ಅಂಥ ಪ್ರಸಂಗ ಬಂದಿಲ್ಲ ಎಂಬ ವಿಶ್ವಾಸದಿಂದ ನೆನಪಿಸದೆ ಮಧ್ಯಾಹ್ನದವರೆಗೂ ಸುಮ್ಮನಿದ್ದು ವೇಳೆ ಕಳೆದಂತೆ ಊಟ ಯಾಕೆ ತಡವೆಂದು ಫೋನ್ ಮಾಡಿದರೆ ಗತಿ ಏನು? ಬರಿದೆ ಉಪ್ಪಿಟ್ಟು ಅವ್ಲಕ್ಕಿ ಆದರೆ ಒಂದು ಗಂಟೆಯೊಳಗಾದರೂ ಮಾಡಿಕೊಡಬಹುದು. ನೂರು ಜನಕ್ಕೆ ಊಟ ತಯಾರಿಸಲು ಕನಿಷ್ಟ ನಾಲ್ಕು ಗಂಟೆಗಳಾದರೂ ಬೇಕು. ಅದೂ ಕುಚ್ಚಿಲನ್ನವಾದರೆ ಇನ್ನೂ ಒಂದು ಗಂಟೆ ಜಾಸ್ತಿಯೇ. ಆದ್ದರಿಂದ ತಡವಾಗಿ ಕರೆ ಬಂದರೂ ಉಪಯೋಗವಿಲ್ಲ. ಹಾಗಾದರೆ ಇದಕ್ಕೇನು ಪರಿಹಾರ. ಏನೋ ನನ್ನ ಭ್ರಮೆ ಎಂದು ಸುಮ್ಮನಿದ್ದರೂ ಮನದೊಳಗೆ ಒಂದು ಭಯ ಇದ್ದೇ ಇರುತ್ತಿತ್ತು. ಹಾಗೆ ಒಂದು ಚಿತ್ರಣವೇ ನನ್ನ ಕಣ್ಣ ಮುಂದೆ ಬಂದು ನಿಂತಿತು. ನೂರಾರು ಜನರು ಬಂದು ಸೇರಿದ್ದಾರೆ. ಊಟದ ವೇಳೆಯಾಗುತ್ತಿದ್ದಂತೆ ಎಲ್ಲರ ದೃಷ್ಟಿ ಮಾರ್ಗದ ಕಡೆಗಿರುತ್ತದೆ. ಹನ್ನೆರಡುವರೆ ಗಂಟೆಯವರೆಗೆ ಎಲ್ಲವೂ ಸಹಜ ಸ್ಥಿತಿಯಲ್ಲಿರುತ್ತದೆ. ಮುಂದೆ ನಿಮಿಷ ನಿಮಿಷ ಹೆಚ್ಚಾದಂತೆ ಊಟ ಯಾಕೆ ಬಂದಿಲ್ಲ  ಎಂಬ ಆತಂಕ ಉಂಟಾಗುತ್ತದೆ. ಕೊನೆಗೆ ಮನೆಯ ಯಜಮಾನನಿಗೆ ಫೋನ್ ಮಾಡಲು ಹೇಳುತ್ತಾರೆ. ಕೂಡಲೇ ಆತ ಭಟ್ರೆ ಊಟ ಯಾಕೆ ತಡ? ಎಷ್ಟ್ಹೊತ್ತಾದೀತು ಎಂದು ಸೌಜನ್ಯದಿಂದಲೇ ವಿಚಾರಿಸುತ್ತಾರೆ. ನಾನು ಆವಾಗ ಉತ್ತರವನ್ನು ಕೊಡುವ ಸ್ಥಿತಿಯಲ್ಲಿರಬೇಕು. ಯಾವ ರೀತಿಯಲ್ಲಿ ಉತ್ತರಿಸಲಿ? ನನ್ನ ಮನಸ್ಥಿತಿ ಹೇಗಿರಬಹುದು? ನಾನು ಅಡಿಗೆ ಆಗಿಲ್ಲ ಒಂದರ್ಧ ಗಂಟೆ ತಡವಾಗಬಹುದು ಎಂದರೆ ಸಹಿಸಿಯಾರು. ಆದರೆ ಅಡುಗೆಯನ್ನೇ ಪ್ರಾರಂಭಿಸಿಲ್ಲ. ನನಗೆ ನೆನಪಿದ್ದರೂ ಯಾರಿಗೆ ಯಾವಾಗ ಎಂಬ ಗೊಂದಲದಲ್ಲಿ ಅಡುಗೆಯನ್ನೇ ಮಾಡಿಲ್ಲ ಎಂದರೆ  ಸೇರಿದಂಥ ಜನರ ಪ್ರತಿಕ್ರಿಯೆ ಹೇಗಿರಬಹುದು? ಆ ಕ್ಷಣವೇ ಊಟದ ವ್ಯವಸ್ಥೆಯನ್ನು ಮಾಡುವುದಾದರೂ ಹೇಗೆ? ನನ್ನ ಬೇಜವಾಬ್ದಾರಿಯ ಈ ವ್ಯವಹಾರಕ್ಕೆ ಕೊನೆಯಾದರೂ ಹೇಗೆ? ಬರಿದೆ ಕ್ಷಮಿಸಿ ಎಂದು ಸುಮ್ಮನಿರುವ ವ್ಯವಹಾರವೇ ಇದು? ಬಂದಂಥ ಪ್ರತಿಯೊಬ್ಬರೂ ಹಸಿವೆಂಬ ಕಾರಣದಿಂದ ಮನಸ್ಸಿಗೆ ಬಂದಂತೆ ಬೈಯುವುದರ ಜತೆಗೆ ಜಗಳಕ್ಕೂ ಬಾರದೆ ಇರಲಾರರು. ಅಂತು ಇಷ್ಟು ದಿನ ಕಾಪಾಡಿಕೊಂಡು ಬಂದಂಥ ನಿಯತ್ತು ಒಂದು ಕ್ಷಣದ ಮರೆವಿನಿಂದ ಬೀದಿ ಪಾಲಾಗುವುದಂತು ನಿಜ. ಮನೆ ಬಿಟ್ಟು ಓಡಿಹೋಗಲೇ, ಆತ್ಮಹತ್ಯೆ ಮಾಡಿಕೊಳ್ಳಲೇ, ಬಂದದ್ದೆಲ್ಲ ಬರಲಿ ಎಂದು ಸುಮ್ಮನಿರಲೇ ??? ಅರ್ಥವೇ ಆಗದ ಸ್ಥಿತಿ...


ಇದರ ಮಧ್ಯೆ ನನ್ನೊಡನೆ ಸಹಾಯಕ್ಕಾಗಿ ಬರುವ ಒಂದೆರಡು ಜನರನ್ನು ಈ ವಿಷಯ ಹೇಳಿ ಸದಾ ಸಿದ್ಧರಾಗಿರುವಂತೆ ವಿನಂತಿಸಿಕೊಂಡೆ. ಯಾವ ಕ್ಷಣಕ್ಕಾದರೂ ಕರೆದೇನು ಸಾಧ್ಯವಾದಷ್ಟು ಬೇಗ ಅಡುಗೆ ಮಾಡಿಕೊಡಬೇಕಾಗಬಹುದು ಎಂದು. ಖಂಡಿತ ಬರುತ್ತೇವೆ ನಮ್ಮಿಂದ ಏನು ಸಾಧ್ಯವೋ ಅದನ್ನು ಮಾಡಿಕೊಡುತ್ತೇವೆ ಎಂದು ಹೇಳಿದ್ದರು. ಅಂತೆಯೇ ಬೆಳಿಗ್ಗೆ ಹತ್ತು ಗಂಟೆಯವರೆಗೂ ಆಗಾಗ ಫೋನ್ ಮಾಡುತ್ತಿದ್ದರು. ಯಾವುದೇ ಸುಳುಹು ಇಲ್ಲದ ಕಾರಣ ತಟಸ್ಥರಾಗಿದ್ದೆವು. ಅಂತೆಯೇ ಮರುದಿನ ಅಂದರೆ 24 ತಾರೀಕಿಗೆ ಅಡುಗೆ ಇದ್ದ ಕಾರಣ ಅದರ ಪೂರ್ವ ತಯಾರಿಯಾಗಿ ಎಲ್ಲ ದಿನಸಿ ತರಕಾರಿಗಳನ್ನು ಒಂದು ದಿನ ಮುಂಚಿತವಾಗಿಯೇ ತಂದಿಟ್ಟಿದ್ದೆ. ಇವತ್ತಿನ ದಿನದ ಮಧ್ಯಾಹ್ನದ ಒಂದು ಗಂಟೆ ಎಂದರೆ ನನ್ನ ಅಡುಗೆ ವ್ಯವಹಾರದ ನಿರ್ಣಾಯಕ ಸಮಯವೆಂದು ಎಣಿಸಿಕೊಂಡು ಬಂದದ್ದೆಲ್ಲವನ್ನೂ ಸ್ವೀಕರಿಸಲು ತಯಾರಾಗತೊಡಗಿದೆ. ಅಪಮಾನವಾಗಬಹುದು, ಏಟು ಬೀಳಬಹುದು, ಜನರು ಛೀ.. ಥೂ.. ಎನ್ನಬಹುದು, ಸಮಾಜದಲ್ಲಿ ಗೌರವ ಮಣ್ಣು ಪಾಲಾಗಬಹುದು, ಪ್ರತಿಯೊಂದು ಅಡುಗೆಯವರಿಗೂ ಒಂದು ಪಾಠವಾಗಬಹುದು, ನನ್ನ ಮುಂದಿನ ಅಡುಗೆ ವೃತ್ತಿಗೂ ಕಲ್ಲು ಬೀಳಬಹುದು.... ಹೀಗೆ ಎಲ್ಲದಕ್ಕೂ ಸಿದ್ಧವಾಗಿ ಗಂಟೆಯ ನಿರ್ಣಾಯಕ ಅವಧಿಯನ್ನು ವೀಕ್ಷಿಸತೊಡಗಿದೆ. ಅದೇ ವೇಳೆ ಬಂದಂಥ ಪ್ರತಿಯೊಂದು ಹೆಸರಿಲ್ಲದ ಕರೆಯೂ ಗುಂಡಿಗೆಯನ್ನು ಬಡಿದೆಬ್ಬಿಸುತ್ತಿದ್ದವು. ದೇವರೇ ಹೇಗಾದರೂ ಮಾಡಿ ಇವತ್ತಿನ ದಿನವನ್ನು ಸುಖಾಂತ್ಯಗೊಳಿಸು ಎಂದಷ್ಟೇ ಬೇಡುವುದು ನನ್ನ ಕೊನೆಯ ಪ್ರಯತ್ನವಾಗಿತ್ತು. ಗಂಟೆ ಹನ್ನೊಂದು, ಹನ್ನೊಂದುವರೆ, ಹನ್ನೆರಡು, ಹನ್ನೆರಡುವರೆ, ಹನ್ನೆರಡು ಮುಕ್ಕಾಲು, ಒಂದು.... ಶಹಬ್ಬಾಸ್!!  ಇಲ್ಲ ಯಾವ ಕರೆಯೂ ಬಂದಿಲ್ಲ ಇನ್ನು ಬರುವುದೂ ಇಲ್ಲ..!! ಇವತ್ತು ನಾನು ಅಪರಾಧಿ ಅಲ್ಲ..!! ನನ್ನ ಮೇಲೆ ನಾನೇ ಆರೋಪಿಸಿಕೊಂಡಂಥ ಎಲ್ಲ ನಕಾರಾತ್ಮಕ ಭಾವಗಳು ಕರಗಿ ನೀರಾಗಿ ಹೋದಂಥ ನಿರಾಳ ಅನುಭವ..!! ಒಂದು ಸಣ್ಣ ಎಡವಟ್ಟಾದರೂ ಏನಾದೀತೆಂಬ ಪ್ರಾತ್ಯಕ್ಷಿಕೆಯ ರೊಮಾಂಚನ..!! ಮುಂದೆ ವ್ಯವಹಾರದಲ್ಲಿ ಎಷ್ಟು ಜಾಗ್ರತೆ ವಹಿಸಿಕೊಳ್ಳಬೇಕೆಂಬ ಪಾಠ... ಹೀಗೆ ಎಲ್ಲವನ್ನೂ ಏಕ ಕಾಲದಲ್ಲಿ ಅನುಭವಿಸಿದ ಭಾವಕ್ಕೆ ಒಳಗಾದೆ. ಅನಾವಶ್ಯಕವಾದ ನೆನಪೊಂದು ಅವಶ್ಯಕವಾದ ಮರೆವನ್ನು ಮೀರಿ ವಿಜ್ರಂಭಿಸಿದುದಕ್ಕೆ ನಾನು ಜ್ವಲಂತ ಸಾಕ್ಷಿಯಾದೆ. ಹೀಗೆ ಬೇರೆ ಬೇರೆ ವೃತ್ತಿಗಳಲ್ಲಿ ಬೇರೆ ಬೇರೆ ಜನರಿಗೆ ಬೇರೆ ಬೇರೆ ಅನುಭವಗಳು ಹಲವಾರಿರಬಹುದು... (ಸ್ವಾನುಭವದಿಂದ)

- ಬಾಲಕೃಷ್ಣ ಸಹಸ್ರಬುದ್ಧೆ ಮುಂಡಾಜೆ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top