ಪುತ್ತೂರು: ಅಮ್ಮ ಎಂದರೆ ಎಂದೆಂದಿಗೂ ಸಂಸಾರದಲ್ಲಿ ವಾತ್ಸಲ್ಯವನ್ನು ಉಕ್ಕಿಸುವವಳು. ಸಂಸಾರದ ಖುಷಿ ಸಂತಸಗಳಿಗೆ ಹಾತೊರೆಯುವ ಒಂದು ಜೀವ ಸಂವೇದಿ. ಅಲ್ಲದೇ ಆಕೆ ಎಂದರೆ ನಮ್ಮೆಲ್ಲರನ್ನು ಸುರಕ್ಷಿತವಾಗಿ ನೋಡಿಕೊಳ್ಳುವವರು ಎಂಬ ನಂಬಿಕೆ. ಎಂತದೇ ಸಂದರ್ಭದಲ್ಲಿಯೂ ಅಮ್ಮ ನಮ್ಮ ಜೊತೆಗಿದ್ದರೆ ಅವಳು ನಮ್ಮನ್ನು ಕಾಪಾಡುತ್ತಾಳೆ ಎನ್ನುವ ಆತ್ಮವಿಶ್ವಾಸ ನಮ್ಮಲ್ಲಿ ಎಲ್ಲರಲ್ಲೂ ಸದಾ ಇರುತ್ತದೆ. ಅಂತೆಯೇ ಅವಳು ನಮ್ಮನ್ನು ಜೋಪಾನ ಮಾಡುತ್ತಾಳೆ ಎಂದು ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಅಕ್ಷಯ್‍ಕುಮಾರ್ ರೈ ಹೇಳಿದರು.
ಇವರು ಪುತ್ತೂರಿನ ವಿವೇಕಾನಂದ ಕಲಾ,ವಿಜ್ಞಾನ ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗ ಆಯೋಜಿಸಿದ ಮಣಿಕರ್ಣಿಕ ಮಾತುಗಾರ ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಭವ್ಯಾ ಪಿ.ಆರ್ ನಿಡ್ಪಳ್ಳಿ ಮಾತನಾಡಿ, ಮಾತೃತ್ವ ಎನ್ನುವುದು ಎಲ್ಲರಲ್ಲೂ ಇರುತ್ತದೆ. ತಂದೆಯು ಕೂಡ ಮಾತೃ ಹೃದಯವನ್ನು ಹೊಂದಿರುತ್ತಾರೆ. ನಮ್ಮನ್ನು ಕಾಳಜಿ ಮಾಡುವ ಪ್ರತಿಯೊಬ್ಬರು ಅಮ್ಮನೇ. ಮಗುವಿನ ಹುಟ್ಟಿನಿಂದ ಹಿಡಿದು ಬದುಕು ಕಟ್ಟಿಕೊಳ್ಳುವವರೆಗೂ ತಾಯಿ ಸಲುಹುತ್ತಾಳೆ. ತಾಳ್ಮೆಯಿಲ್ಲದೇ ಸಣ್ಣ ಸಣ್ಣ ವಿಷಯಗಳಿಗೂ ದುಡುಕು ನಿರ್ಧಾರಗಳನ್ನು ತೆಗೆದುಕೊಳ್ಳುವ ಇಂದಿನ ಯುವಜನತೆ ತಾಯಿಯ ತಾಳ್ಮೆ, ಆಕೆಗಿರುವ ಸಹನೆಯನ್ನು ಗಮನಿಸಿಲೇ ಬೇಕು. ಆಕೆ ಮಕ್ಕಳನ್ನು ಒಂದೊಳ್ಳೆಯ ಸ್ಥಾನಕ್ಕೆ ಕೊಂಡೊಯ್ಯಲು ಪಡುವ ಕಷ್ಟ, ಜೀವನದಲ್ಲಿ ಅವಳಿಗೆ ಇರುವ ಧೈರ್ಯವನ್ನು ನಾವಿಂದು ಅರಿತು ಬಾಳ ಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ವಿಭಾಗದ ಉಪನ್ಯಾಸಕಿ ಹವ್ಯಶ್ರೀ ಪಿ.ಕೆ ಹಾಗೂ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಅಭಿಪ್ರಾಯವನ್ನು ಹಂಚಿಕೊಂಡರು.
ವಾರದ ಮಾತುಗಾರ್ತಿಯಾಗಿ ತೃತೀಯ ಪತ್ರಿಕೋದ್ಯಮ ವಿಭಾಗದ ಶುಭ್ರ ಪುತ್ರಕಳ ಪ್ರಶಸ್ತಿ ಪಡೆದರು. ವಾರದ ಮಾತುಗಾರರ ತಂಡವಾಗಿ ದ್ವಿತೀಯ ವರ್ಷದ ವಿದ್ಯಾರ್ಥಿಗಳು ತಂಡ ಪ್ರಶಸ್ತಿಯನ್ನು ಪಡೆದರು.
ಕಾರ್ಯಕ್ರಮವನ್ನು ತೃತೀಯ ಕಲಾ ವಿಭಾಗದ ವಿದ್ಯಾರ್ಥಿಗಳಾದ ನಿರೀಕ್ಷಾ ಸಿ ಸ್ವಾಗತಿಸಿ, ಅರಿಹಂತ್ ಜೈನ್ ವಂದಿಸಿ, ನಮಿತಾ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ