'ಗೀತ ಸಾಹಿತ್ಯದಿಂದ ಕ್ಷೇತ್ರ ಇತಿಹಾಸ ತಿಳಿಯಲಿ': ಪೇಜಾವರ ಶ್ರೀ

Upayuktha
0

'ಪುಣ್ಯ ನೆಲ ಪೆರಣಂಕಿಲ' ಭಕ್ತಿ ಕರಂಡಿಕೆ ಬಿಡುಗಡೆ




ಉಡುಪಿ: 'ಶ್ರೀ ಮಹಾಲಿಂಗೇಶ್ವರ ಮತ್ತು ಉದ್ಭವ ಗಣಪತಿಯ ಸಾನಿಧ್ಯವಿರುವ ಪೆರ್ಣಂಕಿಲ ಕ್ಷೇತ್ರವು ಅತ್ಯಂತ ಪುರಾತನವಾಗಿದ್ದು ಅದರ ಮಹಿಮೆಯನ್ನು ಎಲ್ಲರೂ ತಿಳಿಯುವಂತಾಗಬೇಕು. ಅದಕ್ಕಾಗಿ ಗೀತಾ ಸಾಹಿತ್ಯವನ್ನು ರಚಿಸಿ ನಾಡಿನ ಶ್ರೇಷ್ಠ ಸಂಗೀತಜ್ಞರ ಧ್ವನಿಯಲ್ಲಿ ಭಕ್ತಿ ಕರಂಡಿಕೆಯನ್ನು ಸಿದ್ಧಗೊಳಿಸಿರುವುದು ಶ್ಲಾಘನೀಯ. ಇದರಿಂದ ಕ್ಷೇತ್ರದ ಪುರಾಣ - ಇತಿಹಾಸಗಳು ಜನಮಾನಸಕ್ಕೆ ತಲುಪಲಿ' ಎಂದು ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಗಳು ಹೇಳಿದರು.


ಉಡುಪಿ ಜಿಲ್ಲೆಯ ಪೆರ್ಣಂಕಿಲ ಶ್ರೀ ಮಹಾಲಿಂಗೇಶ್ವರ ಮಹಾ ಗಣಪತಿ ದೇವಾಲಯದಲ್ಲಿ ಮೇ 21ರಂದು ಜರಗಿದ ನೂತನ ಗರ್ಭಗುಡಿಯ ಷಢಾಧಾರ,ನಿಧಿ ಕುಂಭ ಪ್ರತಿಷ್ಠೆ ಮತ್ತು ಗರ್ಭನ್ಯಾಸ ಕಾರ್ಯಕ್ರಮದಲ್ಲಿ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವೇದಮೂರ್ತಿ ಪೆರ್ಣಂಕಿಲ ಹರಿದಾಸ ಭಟ್ ಮುಂಬೈ ಅವರ ಸಂಪೂರ್ಣ ಪ್ರಾಯೋಜಕತ್ವದಲ್ಲಿ ನಿರ್ಮಾಣಗೊಂಡ 8 ಹಾಡುಗಳ 'ಪುಣ್ಯ ನೆಲ ಪೆರಣಂಕಿಲ' ತುಳು - ಕನ್ನಡ ಭಕ್ತಿಗೀತಾ ಸಂಗಮದ ಧ್ವನಿ ಕರಂಡಿಕೆಯನ್ನು ಬಿಡುಗಡೆಗೊಳಿಸಿ ಅವರು ಆಶೀರ್ವಚನ ನೀಡಿದರು.


ಕಲಾವಿದ ತಂತ್ರಜ್ಞರಿಗೆ ಸನ್ಮಾನ:

ಸಮಾರಂಭದಲ್ಲಿ 2 ತುಳು ಹಾಗೂ 6 ಕನ್ನಡ ಹಾಡುಗಳ ಭಕ್ತಿಗೀತಾ ಸಾಹಿತ್ಯವನ್ನು ರಚಿಸಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ, ಕವಿ - ಸಾಹಿತಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಮತ್ತು ಸಮಗ್ರ ಯೋಜನೆಯ ನೇತೃತ್ವ ವಹಿಸಿದ  ಮುಂಬೈ ಕಲಾ ಸೌರಭ ಸಂಗೀತ ಸಂಸ್ಥೆಯ ನಿರ್ದೇಶಕ, ಗಾಯಕ ಪದ್ಮನಾಭ ಸಸಿಹಿತ್ಲು ಅವರನ್ನು ಪೇಟ ತೊಡಿಸಿ, ಶಾಲು - ಹಾರ ಮತ್ತು ಫಲ ಮಂತ್ರಾಕ್ಷತೆ ನೀಡಿ ಸ್ವಾಮೀಜಿ ಸನ್ಮಾನಿಸಿದರು. ಭಕ್ತಿ ಸಾಹಿತ್ಯಕ್ಕೆ ಕಂಠದಾನ ನೀಡಿದ ಪ್ರಸಿದ್ಧ ಗಾಯಕರಾದ ವಿದ್ಯಾಭೂಷಣ ಬೆಂಗಳೂರು, ಎಂ.ಡಿ. ಪಲ್ಲವಿ, ಸುಪ್ರಿಯಾ ರಘುನಂದನ್, ಶ್ರಾವ್ಯ ಆಚಾರ್, ಶ್ರದ್ಧಾ ವಿನಯ್ ಮುಂಬಯಿ ಹಾಗೂ ರಾಗ ಸಂಯೋಜನೆ ಮಾಡಿದ ಬಿ.ವಿ. ಶ್ರೀನಿವಾಸ್ ಬೆಂಗಳೂರು ಮತ್ತು ತೋನ್ಸೆ ಪುಷ್ಕಳ ಕುಮಾರ್ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು. ಸಂಗೀತದಲ್ಲಿ ಸಹಕರಿಸಿದ ಬೆಂಗಳೂರಿನ ಗಿಟಾರ್ ಶ್ರೀ ಶ್ರೀನಿವಾಸ ಆಚಾರ್ ಮತ್ತು ಬಿ.ಎಸ್. ವೇಣುಗೋಪಾಲ ರಾಜ್ ಅವರನ್ನು ಗೌರವಿಸಲಾಯಿತು.


ಯೋಜನೆಯ ಪ್ರಾಯೋಜಕರು ಮತ್ತು ಪೆರ್ಣಂಕಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ವಿದ್ವಾನ್ ಪೆರ್ಣಂಕಿಲ ಹರಿದಾಸ ಭಟ್ ಸ್ವಾಗತಿಸಿ ಪ್ರಸ್ತಾವನೆಗೈದರು. ಶ್ರೀ ಪೇಜಾವರ ಅಧೋಕ್ಷಜ ಮಠದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು. ಗೌರವ ಪ್ರಧಾನ ಕಾರ್ಯದರ್ಶಿ ಶ್ರೀಶ ನಾಯಕ್ ವಂದಿಸಿದರು. ಶಿಕ್ಷಕ ಉಮೇಶ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

    

ನೃತ್ಯಾರ್ಪಣ:

ಕಾರ್ಯಕ್ರಮದ ಅಂಗವಾಗಿ ಮುಂಬಯಿಯ ಅಮಿತ ಕಲಾನಿಕೇತನ ತಂಡದಿಂದ 'ನೃತ್ಯಾರ್ಪಣ' ಜರಗಿತು. ಅಮಿತ ಕಲಾಮಂದಿರ ಮುಂಬಯಿ ನಿರ್ದೇಶಕಿ ಅಮಿತಾ  ಜತಿನ್  ಅವರು 'ಪುಣ್ಯ ನೆಲ ಪೆರ್ಣಂಕಿಲ' ಧ್ವನಿ ಸುರುಳಿಯ ಎಲ್ಲಾ ಹಾಡುಗಳಿಗೆ ನೃತ್ಯ  ಸಂಯೋಜಿಸಿ ಪ್ರದರ್ಶಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top