ಮುಚ್ಚಿದ ಎಲ್ಲಾ ಬಾಗಿಲುಗಳಿಗೆ ಕೀಲಿ ಹಾಕಿರುವುದಿಲ್ಲ !

Upayuktha
0

    


ಧ್ಯ ವಯಸ್ಸಿನ ಮಹಿಳೆಯೋರ್ವಳು ತನ್ನ ಪದವಿ ವಿದ್ಯಾಭ್ಯಾಸದ ಅಸೈನ್ಮೆಂಟ್ ಒಂದನ್ನು ಬರೆಯುತ್ತಿದ್ದಳು. ಎಂಟು ವಿಷಯಗಳಲ್ಲಿ ಏಳು ವಿಷಯಗಳ ಅಸೈನ್ಮೆಂಟ್ಗಳನ್ನು ಬರೆದ ಆಕೆ ಅವುಗಳನ್ನು ತಾನು ಓದುತ್ತಿರುವ ಮುಕ್ತ ವಿಶ್ವವಿದ್ಯಾಲಯಕ್ಕೆ ತಲುಪಿಸುವ ಗಡುವಿಗೆ ಕೇವಲ ಎರಡು ದಿನಗಳಿತ್ತು. ಕೊನೆಯ ಅಸೈನ್ಮೆಂಟ್ ನ ಪತ್ರಿಕೆಯನ್ನು ತೆರೆದಾಗ, ಪತ್ರಿಕೆಯೇ ಸುಮಾರು ಆರೇಳು ಪುಟದ್ದಾಗಿತ್ತು. ಅಯ್ಯೋ ಪ್ರಶ್ನೆ ಪತ್ರಿಕೆಯೇ ಇಷ್ಟು ದೊಡ್ಡದಾಗಿದ್ದರೆ ಸುಮಾರು 25 ಕ್ಕಿಂತ ಹೆಚ್ಚು ಪುಟಗಳಷ್ಟು ಉತ್ತರ ಬರೆಯಬೇಕು. ಇಷ್ಟು ಕಮ್ಮಿ ಸಮಯದಲ್ಲಿ ಅದು ಹೇಗೆ ಸಾಧ್ಯ ಎಂಬ ಆತಂಕ, ಭಯ ಅವಳಲ್ಲಿ ಮನೆ ಮಾಡಿತು.


ಆಶ್ಚರ್ಯವೆಂಬಂತೆ ಆ ಕೊನೆಯ ಪತ್ರಿಕೆ ಇಂಗ್ಲಿಷ್ ಭಾಷಾ ಶಾಸ್ತ್ರದ ಕುರಿತಾಗಿದ್ದು, ರೀಡಿಂಗ್ ಮತ್ತು ಸ್ಪೀಕಿಂಗ್ ಸ್ಕಿಲ್ಸ್ ,ಭಾಷೆ ಬೆಳೆದು ಬಂದ ರೀತಿ, ಕಥೆ ಕವನಗಳನ್ನು ಹೇಗೆ ಬರೆಯಬೇಕು, ಅವುಗಳ ರಚನೆಯ ಹಿಂದಿನ ವಿವರಗಳ ಕುರಿತಾಗಿ ಇತ್ತು. ದೊಡ್ಡ ದೊಡ್ಡ ಲೇಖನಗಳನ್ನು ನೀಡಿ ಆ ಲೇಖನಗಳ ಮೇಲೆ ಪ್ರಶ್ನೆಗಳನ್ನು ಕೇಳಲಾಗಿತ್ತು. ಆ ದೊಡ್ಡ ದೊಡ್ಡ ಲೇಖನಗಳೇ ಪ್ರಶ್ನೆ ಪತ್ರಿಕೆಯ ಪುಟಗಳನ್ನು ಬಹಳಷ್ಟು ತುಂಬಿಸಿತ್ತು. ತನ್ನೆಲ್ಲ ಮನೆಗೆಲಸ ಮತ್ತು ವೃತ್ತಿಯ ಕೆಲಸಗಳ ಜೊತೆಗೆ ಒಂದೊಂದು ಅಸೈನ್ಮೆಂಟ್  ಬರೆಯಲು ಆಕೆ ತೆಗೆದುಕೊಂಡ ಸಮಯ ಕನಿಷ್ಠ ಎರಡು ದಿನಗಳಾದರೆ ಇದನ್ನು ಬರೆಯಲು ಆಕೆಗೆ ತಗುಲಿದ ಸಮಯ ಕೇವಲ ಮೂರುವರೆ ಗಂಟೆ. ಅಸೈನ್ಮೆಂಟ್ ಬರೆದು ಮುಗಿಸಿದ ಆಕೆಯ ಬಾಯಿಂದ ಬಂದ ಮಾತು 'ನಾಟ್ ಆಲ್ ಕ್ಲೋಸ್ಡ್ ಡೋರ್ಸ್ ಆರ್ ಲಾಕ್ಡ್' !'


ನಿಜ, ಎಲ್ಲಾ ಮುಚ್ಚಿದ ಬಾಗಿಲುಗಳು ಲಾಕ್ ಮಾಡಲ್ಪಟ್ಟಿರುವುದಿಲ್ಲ. ಬಾಗಿಲನ್ನು ತಲುಪುವ, ಮುಟ್ಟುವ, ತೆರೆಯುವ ತಾಳ್ಮೆ ವ್ಯವಧಾನ ನಮಗಿರಬೇಕಷ್ಟೆ. ನಮ್ಮ ಜೀವನದಲ್ಲಿಯೂ ಹೀಗೆ ಎಷ್ಟೋ ಘಟನೆಗಳು ನಡೆದು ಹೋಗಿರುತ್ತವೆ, ಅಲ್ಲವೇ? ಎಷ್ಟೋ ಬಾರಿ ಬೆಟ್ಟದಂತೆ ಬಂದ ಕಷ್ಟಗಳು ಮಂಜಿನ ಹನಿಗಳಂತೆ ಕರಗಿ ಹೋಗಿರುತ್ತವೆ. ಜೀವನವೇ ಹಾಗೆ ಆಕಸ್ಮಿಕಗಳ ಸರಮಾಲೆ.


ಎಷ್ಟೋ ಬಾರಿ ನಮಗೆ ಅಸಾಧ್ಯವೆನಿಸಿದ ಸಂಗತಿಗಳು ಉಳಿದವರಿಗೆ ಅತ್ಯಂತ ಸರಳ ಮತ್ತು ಸುಲಭ ಎಂದು ತೋರುವಲ್ಲಿ ಆ ಸಂಗತಿಗಳ ಕುರಿತ ನಮ್ಮ ಅವಗಾಹನೆ ಮತ್ತು ದೃಷ್ಟಿಕೋನವು ಪ್ರಮುಖ ಪಾತ್ರ ವಹಿಸುತ್ತದೆ.


ಮ್ಯಾನೇಜ್ಮೆಂಟ್ ತರಬೇತಿ ಪಡೆಯುತ್ತಿರುವ ಇಬ್ಬರು ವ್ಯಕ್ತಿಗಳನ್ನು ಶೂ ತಯಾರಿಕಾ ಕಂಪನಿಯೊಂದು ಗ್ರಾಹಕರನ್ನು ಹುಡುಕಲು ದಕ್ಷಿಣ ಆಫ್ರಿಕಾದ ಅಮೆಜಾನ್ ಕಾಡುಗಳ ಮಧ್ಯದ ದ್ವೀಪವೊಂದಕ್ಕೆ ಕಳಿಸಿದಾಗ, ಮೊದಲ ವ್ಯಕ್ತಿ- "ಅಯ್ಯೋ ಆ ದ್ವೀಪದಲ್ಲಿ ಯಾರೂ ಶೂಗಳನ್ನು ಧರಿಸುವುದಿಲ್ಲ" ಎಂದು ನಿರಾಶೆಯಿಂದ ಮರಳಿದರೆ ಎರಡನೇ ವ್ಯಕ್ತಿ- "ಓಹೋ, ಅಲ್ಲಿ ಯಾರೂ ಶೂಗಳನ್ನು ಧರಿಸುವುದಿಲ್ಲ. ಶೂಗಳನ್ನು ಮಾರಲು ಇದಕ್ಕಿಂತ ಉತ್ತಮ ಸ್ಥಳ ನಮಗೆಲ್ಲೂ ದೊರೆಯದು" ಎಂದು ಭಾವಿಸಿದನು. ಶೂ ಧರಿಸಿ ನಡೆಯುವ ವಿಧಾನದಿಂದ ಆಗುವ ಉಪಯೋಗಗಳು, ಪಾದಗಳಿಗೆ ಸಿಗುವ ರಕ್ಷೆ, ಆರಾಮದಾಯಕ ಅನುಭವ, ಕಾಲಿಂದ ಶೂ ಬಿಚ್ಚಿ ಬೀಳದೆ ಹೋಗುವ ಅನುಕೂಲತೆಗಳ ಕುರಿತು  ಅವರೆಲ್ಲರಿಗೂ ಸಾಕಷ್ಟು ತಿಳಿಹೇಳಿ, ಪ್ರಾತ್ಯಕ್ಷಿಕೆಯನ್ನು ನೀಡಿ ಸಾಕಷ್ಟು ಶೂಗಳಿಗೆ ಆರ್ಡರ್ ಪಡೆದುಕೊಂಡು ಬಂದನು.

ಇಲ್ಲಿ ನಾವು ಅರಿಯಬೇಕಾದದ್ದು ಇಷ್ಟೇ. ವಸ್ತು ಮತ್ತು ಸ್ಥಿತಿ ಒಂದೇ ಆದರೂ ಅದನ್ನು ಗ್ರಹಿಸುವ ವ್ಯಕ್ತಿಗಳ  ಆಲೋಚನಾ ವಿಧಾನ ಬೇರೆಯಾಗಿತ್ತು.


ಒಂದು ಸೀರೆ ಅಂಗಡಿಯ ಎಲ್ಲಾ ಸೀರೆಗಳು ಎಲ್ಲರಿಗೂ ಇಷ್ಟವಾಗಬೇಕೆಂದೇನಿಲ್ಲ. ಬಣ್ಣ, ವಿನ್ಯಾಸ, ಬಟ್ಟೆಯ ಗುಣಮಟ್ಟ ಮತ್ತು ಅವುಗಳನ್ನು ಖರೀದಿಸುವ ಯಥೋಚಿತ ಶಕ್ತಿ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಹಾಗೆಯೇ ಒಬ್ಬರೇ ಶಿಕ್ಷಕ ಹೇಳಿ ಕೊಡುವ ಪಾಠವನ್ನು ತರಗತಿಯ ಎಲ್ಲಾ ಮಕ್ಕಳು ಒಂದೇ ರೀತಿಯಲ್ಲಿ ಗ್ರಹಿಸುವುದಿಲ್ಲ. ಕೆಲವರಿಗೆ ಆಸಕ್ತಿದಾಯಕವೆನಿಸುವ ಎಷ್ಟೋ ವಿಷಯಗಳು ಮತ್ತೆ ಕೆಲವರಿಗೆ ನೀರಸವೆನಿಸುತ್ತವೆ. ಕೆಲವರು ಏಕ ಪಠ್ಯ ಗ್ರಾಹಿಗಳಾದರೆ ಇನ್ನೂ ಕೆಲವರಿಗೆ ಕಬ್ಬಿಣದ ಕಡಲೆ ಎಂದೆನಿಸುವುದು ಸಹಜ. ವಿಭಿನ್ನ ಅಭಿರುಚಿಗಳು ವಿಭಿನ್ನ ಆಯ್ಕೆಗೆ ಕಾರಣವಾಗುತ್ತವೆ.


ಎಷ್ಟೋ ಬಾರಿ ಹಿರಿಯರು ಸಾಮಾನ್ಯವಾಗಿ ತಾವು ಚಿಕ್ಕವರಿದ್ದಾಗ  ಅನುಭವಿಸಿದ ತೊಂದರೆಗಳನ್ನು ಕಷ್ಟಗಳನ್ನು ತಮಗಿಂತ ಕಿರಿಯರಿಗೆ ಹೇಳುವಾಗ ಜಿನುಗಿದ ನೀರು ಕಣ್ಣಂಚಿನಲ್ಲಿದ್ದರೂ, ಆ ಪರಿಸ್ಥಿತಿಗಳನ್ನು ಎದುರಿಸಿ ತಾವು ಪಡೆದ ಅನುಭವ, ತೃಪ್ತಿ ಮತ್ತು ಎದುರಿಸಿ ಗೆದ್ದ  ಹೆಮ್ಮೆ, ಮಾಸದ ಮುಗುಳ್ನಗೆ ತುಟಿಯಂಚಲ್ಲಿರುತ್ತದೆ.


ಆದ್ದರಿಂದ ಜೀವನದಲ್ಲಿ ಬರುವ ಎಲ್ಲಾ ಸಮಸ್ಯೆಗಳು ಕಷ್ಟಕರವೇನಲ್ಲ. ಸುಖದ ಹಾದಿಗೆ ರಹದಾರಿಗಳು ಎಂದೂ, ಎಲ್ಲಾ ಮುಚ್ಚಿದ ಬಾಗಿಲುಗಳು ಚಿಲಕ/ಅಗಳಿ ಹಾಕಲ್ಪಟ್ಟಿರುವುದಿಲ್ಲ ಎಂಬ ಸತ್ಯವನ್ನು ಅರಿತು ಬಾಳುವ ಸಂಕಲ್ಪ ಮಾಡೋಣ. ಅಕಸ್ಮಾತ್ ಮುಚ್ಚಿದ್ದರೂ ನಮ್ಮ ಆತ್ಮ ಬಲದಿಂದ, ಸ್ವ ಪ್ರಯತ್ನದಿಂದ, ಪರಿಶ್ರಮದಿಂದ ತೆಗೆಯುವ ಪ್ರಯತ್ನ ಮಾಡೋಣ.


-ವೀಣಾ ಹೇಮಂತ್ ಗೌಡ ಪಾಟೀಲ್

ಮುಂಡರಗಿ, ಗದಗ್


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top