ಮೇ 21: 'ಪುಣ್ಯ ನೆಲ ಪೆರ್ಣಂಕಿಲ' ಭಕ್ತಿಗೀತಾ ಸಂಗಮ ಬಿಡುಗಡೆ

Upayuktha
0

ಮಂಗಳೂರು: ಉಡುಪಿ ಪೇಜಾವರ ಅಧೋಕ್ಷಜ ಮಠದ ಆಡಳಿತಕ್ಕೊಳಪಟ್ಟ ಪುರಾತನ  ಪೆರ್ಣಂಕಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ಕ್ಷೇತ್ರದ ಬಗೆಗಿನ 2 ತುಳು ಮತ್ತು 6 ಕನ್ನಡ ಹಾಡುಗಳ ಸಂಗಮ ' ಪುಣ್ಯ ನೆಲ ಶ್ರೀ ಪೆರಣಂಕಿಲ' ಭಕ್ತಿಗೀತೆಗಳ ಧ್ವನಿಕರಂಡಿಕೆ ಬಿಡುಗಡೆಗೆ ಸಿದ್ಧವಾಗಿದೆ. ಮುಂಬಯಿಯ ಖ್ಯಾತ ಗಾಯಕ ಮತ್ತು ಸಂಗೀತ ನಿರ್ದೇಶಕ ಪದ್ಮನಾಭ ಸಸಿಹಿತ್ಲು ಅವರ ನೇತೃತ್ವದಲ್ಲಿ ಬೆಂಗಳೂರಿನ ಓಂಕಾರ್ ಸ್ಟುಡಿಯೋದಲ್ಲಿ ಧ್ವನಿಮುದ್ರಣ ಕಾರ್ಯ ನೆರವೇರಿದೆ. 


ಡಾ. ವಿದ್ಯಾ ಭೂಷಣರ ಹಾಡುಗಾರಿಕೆ:

ಮಂಗಳೂರಿನ ಕವಿ - ಸಾಹಿತಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅವರ ಸಾಹಿತ್ಯದಲ್ಲಿ ಮೂಡಿ ಬಂದಿರುವ ಕ್ಷೇತ್ರ ಇತಿಹಾಸ, ಸುಪ್ರಭಾತ ಮತ್ತು ಸಾನಿಧ್ಯ ಮಹಿಮೆಗಳನ್ನೊಳಗೊಂಡ ಭಕ್ತಿ ಗೀತಾಗುಚ್ಛದಲ್ಲಿ  4 ಹಾಡುಗಳಿಗೆ ಬೆಂಗಳೂರಿನ ಪ್ರಸಿದ್ಧ ಗಾಯಕ ಮತ್ತು ದಾಸರ ಪದಗಳ ಖ್ಯಾತಿಯ ಡಾ. ವಿದ್ಯಾ ಭೂಷಣ ಕಂಠದಾನ ಮಾಡಿದ್ದಾರೆ. ಉಳಿದಂತೆ ಖ್ಯಾತ ಗಾಯಕಿಯರಾದ ಎಂ.ಡಿ. ಪಲ್ಲವಿ, ಸುಪ್ರಿಯಾ ರಘುನಂದನ್, ಶ್ರಾವ್ಯ ಆಚಾರ್ ಬೆಂಗಳೂರು, ಶ್ರದ್ಧಾ ವಿನಯ್ ಮುಂಬಯಿ ಮತ್ತು ಸಂಯೋಜಕ ಪದ್ಮನಾಭ ಸಸಿಹಿತ್ಲು ನು ಹಾಡಿದ್ದಾರೆ.


ರಾಗ ಸಂಯೋಜನೆ ಡಾ.ವಿದ್ಯಾಭೂಷಣ, ಬಿ.ವಿ. ಶ್ರೀನಿವಾಸ್ ಬೆಂಗಳೂರು, ತೋನ್ಸೆ ಪುಷ್ಕಳ ಕುಮಾರ್ ಮತ್ತು ಪದ್ಮನಾಭ ಸಸಿಹಿತ್ಲು ಅವರದು. ಬೆಂಗಳೂರಿನ ಗಿಟಾರ್ ಶ್ರೀ ಶ್ರೀನಿವಾಸ್ ಸಂಗೀತ ಸಂಯೋಜನೆ ಮಾಡಿದ್ದಾರೆ.‌ ಓಂಕಾರ್ ಮೂರ್ತಿ ಧ್ವನಿಮುದ್ರಿಸಿಕೊಂಡಿದ್ದಾರೆ. ಮುಂಬೈ ವಿದ್ಯಾ ವಿಹಾರ್ ಶ್ರೀ ಅಂಬಿಕಾ ಆದಿನಾಥೇಶ್ವರ ಮಹಾ ಗಣಪತಿ ದೇವಾಲಯದ ಧರ್ಮದರ್ಶಿ ವೇದಮೂರ್ತಿ ಪೆರ್ಣಂಕಿಲ ಹರಿದಾಸ್ ಭಟ್ ಅವರು ಈ ಯೋಜನೆಯ ಸಂಪೂರ್ಣ ಪ್ರಾಯೋಜಕರಾಗಿದ್ದಾರೆ.


ಮೇ 21 ಕ್ಕೆ ಬಿಡುಗಡೆ:

ಇದೇ ಮೇ 21, 2023 ರವಿವಾರ ಬೆಳಗ್ಗೆ ಗಂ. 9.00 ಕ್ಕೆ ಉಡುಪಿ ಹಿರಿಯಡ್ಕ ಸಮೀಪದ ಶ್ರೀಕ್ಷೇತ್ರ ಪೆರ್ಣಂಕಿಲದಲ್ಲಿ ಪೇಜಾವರ ಶ್ರೀಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಯವರು ಗಣ್ಯರ ಸಮ್ಮುಖ 'ಪುಣ್ಯ ನೆಲ ಪೆರಣಂಕಿಲ' ಭಕ್ತಿಗೀತೆಗಳ ಧ್ವನಿ ಕರಂಡಿಕೆಯನ್ನು ಬಿಡುಗಡೆ ಮಾಡಲಿದ್ದು ಅದು ಆಕರ್ಷಕವಾಗಿ ವಿನ್ಯಾಸಗೊಳಿಸಲಾದ ಪೆನ್ ಡ್ರೈವ್ ರೂಪದಲ್ಲಿ ಲಭ್ಯವಿದೆಯೆಂದು ಕ್ಷೇತ್ರ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಿದ್ವಾನ್ ಪೆರ್ಣಂಕಿಲ ಹರಿದಾಸ್ ಭಟ್ ಪ್ರಕಟಿಸಿದ್ದಾರೆ. ಇದೇ ಸಂದರ್ಭದಲ್ಲಿ ಕ್ಷೇತ್ರದ ಜೀರ್ಣೋದ್ದಾರ ಕಾಮಗಾರಿಗಳಿಗೆ ಶಂಕುಸ್ಥಾಪನೆ, ಸಮ್ಮಾನ ಮತ್ತು ನಾಟ್ಯ ವೈಭವ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದು ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀಶ ನಾಯಕ್ ಪೆರ್ಣಂಕಿಲ ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top