ದಣಿಯದಿರು ಧ್ರುವತಾರೆ

Upayuktha
0

 


ಬಾನು, ಈ ಭೂಮಿ ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುವುದನ್ನು ನೋಡುತ್ತ ಬಂದವರು ನಾವು. ಒಮ್ಮೆ ಮಳೆ, ಒಮ್ಮೆ ಬಿಸಿಲ ಬೇಗೆ. ಇದಕ್ಕೆ ತಕ್ಕಂತೆ ಪ್ರಕೃತಿ ಮಾತೆಯ ಪ್ರತಿಕ್ರಿಯೆ ಸಹಜವಾಗಿಯೇ ಇರುತ್ತದೆ. ಎಲ್ಲವನ್ನು ಆಕೆ ಸಹಿಸಿ ಸಾಧಿಸಿದವಳು. ನಮ್ಮ ಜೀವನ ಕೂಡ ಹೀಗೆ ಅಲ್ವಾ ! ಪರಿಸ್ಥಿತಿಗಳು ನಾನಾ ರೂಪದಲ್ಲಿ, ನಾನು ಅನುಭವಗಳ ಸರಮಾಲೆಯಾಗಿ ಬದುಕಲ್ಲಿ ರಾರಾಜಿಸುತ್ತದೆ. ಎಲ್ಲ ಪರಿಸ್ಥಿತಿಗಳನ್ನು ಎದುರಿಸುವ ಮನಸ್ಥಿತಿ ಇಲ್ಲಿ ಬಹಳ ಮುಖ್ಯ ಪಾತ್ರವಹಿಸುತ್ತದೆ. ಬದುಕು ನಿಂತ ನೀರಲ್ಲ, ಸದಾ ಹರಿಯುವ ನದಿಯಂತಿರಬೇಕೆಂದು ಹೇಳಿದ ಗುರುಗಳ ಮಾತು ಆಗಾಗ ನೆನಪಾಗುವುದುಂಟು. ಬದುಕಿನ ಏರಿಳಿತಗಳ ಮಾಯೆ ಅರಿಯುವುದೇ ವಿದ್ಯಾರ್ಥಿ ಜೀವನಕ್ಕೆ ವಿದಾಯ ಹೇಳಿದಾಗಲೇ. ಕಾಲೇಜಿನ ಪುಸ್ತಕದ ಕಲಿಕೆ ಮುಗಿಸಿ, ಬದುಕಿನ ಪುಸ್ತಕ ತೆರೆಯುವಾಗಲೇ ಅನೇಕ ಸವಾಲುಗಳು, ಸಮಸ್ಯೆಗಳು ಕೈ ಬೀಸಿ ಕರೆದ ಅನುಭವ ಅನೇಕರಿಗಾಗುತ್ತದೆ. ಏನೇ ಆದರೂ ಇದೆಲ್ಲವನ್ನು ಮೀರಿ ಪ್ರಯತ್ನಿಸಿದವರು ಗೆಲುವಿನ ಮೆಟ್ಟಿಲೇರುತ್ತಾರೆ. ಗೆಲುವು ಕಾಣದೇ ಮೆಟ್ಟಿಲಲ್ಲೇ ಕೈ ಸೋತು ಕುಳಿತವರು ಇದ್ದಾರೆ. ಪ್ರಯತ್ನ ಕೈ ಬಿಟ್ಟು ಸುಮ್ಮನಾದವರು ಇದ್ದಾರೆ. ಅಂದುಕೊಂಡಿದ್ದು ಆಗಲಿಲ್ಲವೆಂಬ ಸೋಲನ್ನು ಪಠಿಸಿದವರಿಗಿಂತ, ಸೋಲೆ ಗೆಲುವಿಗೆ ಹಾದಿ ಎಂದುಕೊಂಡವರು ಗೆದ್ದು ತೋರಿಸಿದ್ದೆ ಜಾಸ್ತಿ. ಅಂದುಕೊಳ್ಳುವುದಲ್ಲ, ಹೊಂದಿಕೊಳ್ಳುವುದೇ ಜೀವನ. ನೆಪಗಳನ್ನೇ ನೇವರಿಸಿಕೊಂಡು ನಿಲ್ಲುವ ಬದಲು. ನದಿಯಂತೆ ಧೈರ್ಯವಾಗಿ ಮುನ್ನುಗ್ಗಿ ಸರಾಗವಾಗಿ ಹರಿಯುವುದೇ ಲೇಸಲ್ಲವೇ.


ಈ ಬದುಕು ಅನೇಕ ಪಾಠಗಳನ್ನು ಕಲಿಸುತ್ತದೆ. ಶಾಲಾ-ಕಾಲೇಜಿನಲ್ಲಿ ಎಲ್ಲ ಪಾಠಗಳನ್ನು ಶ್ರದ್ದೆಯಿಂದ ಕೇಳಿ ಕಲಿಯುವ ನಾವು, ಜೀವನ ಪಾಠ ಕಲಿಸುವಾಗ ಬೇಗ ಸೋಲುತ್ತೇನೆ. ಕಾರಣ ದೊಡ್ಡ ದೊಡ್ಡ ಆಸೆ & ಆಕಾಂಕ್ಷೆಗಳು ಆ ಸಮಯದಲ್ಲಿ ಹೂವಾಗಿ ಅರಳುತ್ತಿರುತ್ತದೆ. ಎಲ್ಲಿ ಅವೆಲ್ಲ ಮುದುಡಿ, ಬಾಳು ಕತ್ತಲಾಗುವುದೋ ಎಂಬ ಭಯ,ಹಾತಾಶೆ. ಇನ್ನೊಂದು, ಶಾಲಾ-ಕಾಲೇಜು ದಿನಗಳಲ್ಲಿ ಜವಾಬ್ದಾರಿಗಳ ಹತ್ತಿರವೇ ಸುಳಿಯದ ನಮಗೆ, ಒಮ್ಮೆ ಅದರ ಮೂಟೆಯನ್ನು ಹೊತ್ತರೆ ಆಗುವ ಭಾರ. ಹೀಗೆ ಅನೇಕ ಪರಿಸ್ಥಿತಿಗಳು ಆ ಸಮಯದಲ್ಲಿ ಸಮಸ್ಯೆಗಳಾಗಿ ಕಾಣುವುದೇ ಜಾಸ್ತಿ.ಇಂತಹ ಪರಿಸ್ಥಿತಿಯನ್ನು ಅವಕಾಶಗಳಾಗಿ ಯಾಕೆ ಉಪಯೋಗಿಸಿಕೊಳ್ಳಬಾರದು ? ಇದಕ್ಕೆ ಉದಾಹರಣೆಗಳೂ ಅನೇಕರ ಬಾಳಲ್ಲಿ ನಡೆದಿದೆ. ಸುಮ್ಮನೆ ನಿಲ್ಲದೇ, ನಡೆದು ಸಾಧನೆಯತ್ತ ಸಾಗಿದವರು ಬಹಳ ಮಂದಿ ಇದ್ದಾರೆ. ಇಲ್ಲಿ ಕೆಲವರ ಬಗ್ಗೆ ಹೇಳುವುದಾದರೆ...ಬಡವನಾಗಿಯೇ ಹುಟ್ಟಿದ ನಾನು ಬಡವನಾಗಿಯೇ ಸಾಯುತ್ತೇನೆಯೋ ಎಂದು ಭಾವಿಸುವವರ ಪಾಲಿಗೆ ಭಾರತದ ಮಾಜಿ ರಾಷ್ಟ್ರಪತಿ, ವಿಜ್ಞಾನಿ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರು ಎದ್ದು ಕಾಣುತ್ತಾರೆ. ಮನೆಯ ಬಡತನ ಯೋಚಿಸದೇ ತನ್ನೊಳಗಿರುವ ಶಕ್ತಿಯ ಸಿರಿತನವನ್ನೇ ಉಪಯೋಗಿಸಿ ಇಡೀ ಜಗತ್ತಿಗೆ ಮಾದರಿಯಾದವರು ಇವರು. ಅದೆಷ್ಟೋ ಜನರ ಬಾಳಿಗೆ ಬೆಳಕಾಗಿದ್ದಾರೆ. ಬಾಲ್ಯದಿಂದಲೇ ಎಲ್ಲರಿಂದ ಮಂದಬುದ್ದಿಯೆಂದು ಹೀಯಾಳಿಸಿಕೊಂಡು ಹಲವಾರು ಅವಮಾನಗಳನ್ನು ಎದುರಿಸಿದ 'ಥಾಮಸ್ ಆಲ್ವಾ ಎಡಿಸನ್' ಯಾವುದೋ ಮೂಲೆಯಲ್ಲಿ ಕುಳಿತ್ತಿದ್ದರೇ ಬಲ್ಬನ್ನು ಕಂಡುಹಿಡಿಯಲು ಸಾಧ್ಯವಾಗುತ್ತಿತ್ತೇ !? ತನ್ನೊಳಗೆ ಕೊರಗುತ್ತಾ ಕೂತಿದ್ದರೆ ಈಡೀ ಜಗತ್ತಿಗೆ ಬೆಳಕು ನೀಡುವ ಕೆಲಸ ಅವರಿಂದ ಮಾಡಲು ಸಾಧ್ಯವಾಗುತ್ತಿತ್ತೇ !? ಅಂತರಂಗದ ಶಕ್ತಿ ಪ್ರತಿಯೊಬ್ಬನಲ್ಲೂ ಇರುತ್ತದೆ. ಅದನ್ನು ಎಲ್ಲಿ, ಹೇಗೆ ಉಪಯೋಗಿಸಿಕೊಳ್ಳಬೇಕೆಂಬ ಚಾಕಚಕ್ಯತೆ ಇರಬೇಕಷ್ಟೇ. ತಾನು ಮಾಡುತ್ತಿರುವ ಚಿಕ್ಕ ನೌಕರಿಯಿಂದ ಏನಾಗುತ್ತದೆ ಎಂದು ಸದಾ ಕೊರಗುತ್ತಿದ್ದ ಧೀರು ಬಾಯಿ ಅಂಬಾನಿ ಮನಸ್ಸು ಬದಲಿಸಿದಕ್ಕೆ ತಾನೇ ರಿಲಯನ್ಸ್ ನಂತಹ ಒಂದು ಅದ್ಬುತ ಕಂಪೆನಿ ಚಿಗುರೊಡೆಯಲು ಪ್ರಾರಂಭವಾಗಿದ್ದು. ಕಾಲೇಜಿನ ಪ್ರವೇಶ ಪರೀಕ್ಷೆಯಲ್ಲಿ ಅನುತೀರ್ಣನಾಗಿ, ಗಣಿತ ವಿಷಯದಲ್ಲಿ ತೀರಾ ಹಿಂದುಳಿದ ವಿದ್ಯಾರ್ಥಿ 'ಜಾಕ್ ಮಾ' ಕೆಲಸ ಹುಡುಕಿಕೊಂಡು ಹೋಗಿ ಕೊಟ್ಟ ಇಂಟರ್ವ್ಯೂನಲ್ಲೂ ರಿಜೆಕ್ಟ್ ಆದ್ರು, ತಲೆ ಕೆಡಿಸಿಕೊಳ್ಳಲಿಲ್ಲ. ಯಶಸ್ಸಿಗಾಗಿ ಅನೇಕ ಪ್ರಯತ್ನ ಪಟ್ಟರು ಕೊನೆಗೆ ಅಲಿಬಾಬಾ ಗ್ರೂಪ್ ನ ಮಾಲೀಕರಾದರು. ಕೋಟಿಗೆ ಒಡಯನಾದರು. ನನ್ನಲ್ಲಿ ಸಾಕಷ್ಟು ಹಣವಿಲ್ಲ ಹೇಗೆ ಬ್ಯುಸಿನೆಸ್ ಮಾಡಲಿ ಎಂದು ಕೊರಗುತ್ತಿದ್ದ ಇನ್ಫೋಸಿಸ್ ನ ಸಂಸ್ಥಾಪಕ ನಾರಾಯಣ ಮೂರ್ತಿಯವರು ಎಲ್ಲರಿಗೂ ಚಿರಪರಿಚಿತರೇ. 1981ರಲ್ಲಿ 6 ಸಾಫ್ಟ್ ವೇರ್ ವೃತ್ತಿಪರರೊಂದಿಗೆ ಸೇರಿ, ಆರಂಭಿಕ ಬಂಡವಾಳವಾಗಿ 10,000 ರೂ ಇದನ್ನು ತಮ್ಮ ಹೆಂಡತಿ ಸುಧಾಮೂರ್ತಿಯಿಂದ ಪಡೆದು ಸ್ಥಾಪಿಸಿದರು. ಈಗ ಈ ಕಂಪೆನಿ ಅದೆಷ್ಟೋ ಉದ್ಯೋಗಿಗಳ ಬೀಡಾಗಿಲ್ಲವೇ. ಕೋಟಿ ಕೋಟಿಗೆ ಒಡೆಯನಾಗಲಿಲ್ಲವೇ ! ಒಂದು ದಿನ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ 'ವಾಲ್ಟ್ ಡಿಸ್ನಿ' ಅವರನ್ನು ಕೆಲಸದಿಂದ ತೆಗೆದು ಹಾಕಿದಾಗ ಅವರು ಸುಮ್ಮನೇ ಕೂರಲಿಲ್ಲ, ತನ್ನದೇ ಏನಾದರು ಸಾಧನೆ ಮಾಡಬೇಕೆಂದು 'ಮಿಕ್ಕಿ ಮೌಸ್' ನಂತಹ ಅದ್ಬುತ ಸೃಷ್ಟಿಗೆ ಸೃಷ್ಟಿಕರ್ತನಾದರು. ಕೊನೆಗೆ 22 ಆಸ್ಕರ್ ಪ್ರಶಸ್ತಿಗೆ ಭಾಜನರಾದರು. ಹೀಗೆ ತಿಳಿಯುತ್ತಾ ಹೋದರೆ ಸಾವಿರ ಮಂದಿಯ ಉದಾಹರಣೆಗಳು ಸಿಗುತ್ತದೆ. ಇವರೆಲ್ಲರೂ ಜೀವನದಲ್ಲಿ ಸೋತವರೇ. ಆದರೆ ಸೋತು ಸುಮ್ಮನಾಗಲಿಲ್ಲ ಚರಿತ್ರೆ ಸೃಷ್ಟಿಸಿದರು. ಅಳುತ್ತಾ ಕೂರುವ ಬದಲು, ಅರಳುತ್ತಾ ಬದುಕಿದರೆ ನಾಳೆ ನೀವು ನಿಮ್ಮ ಬಾಳಿಗೆ ಬೆಳಕಾಗುವುದು ಖಂಡಿತ. 


ಆಕಾಶದಲ್ಲಿ ಹಗಲಲ್ಲಿ ಕಾಣುವ ಸುಡು ಬಿಸಿಲ ಸೂರ್ಯನಿಗಿಂತ, ಇರುಳ ತಂಪಲ್ಲಿ ಬೆಳದಿಂಗಳ ಹೊತ್ತು ತರುವ ಚಂದ್ರನ ನೋಡಿ ಖುಷಿ ಪಡುವವರೇ ಹೆಚ್ಚು. ಕಾರಣ ಅಲ್ಲಿರುವ ಅಗಾಧ ಪ್ರಮಾಣದ ಸಕಾರಾತ್ಮಕ ಶಕ್ತಿ. ನಮ್ಮೊಳಗೂ ಇಂತದ್ದೊಂದು ಚಂದಿರನಿದ್ದರೆ ಬದುಕು ಬೆಳಕಾಗುವುದಲ್ಲವೇ ! ಅದೇ ಆಕಾಶದ ನಡುವೆ ಅಗಣಿತ ತಾರಾ ಗಣಗಳ ರಾಶಿಯಿದ್ದರೂ ಆ ತಾರೆಗಳ ಮಧ್ಯೆ ಹೊಳೆಯುವುದು, ಎದ್ದು ಕಂಗೊಳಿಸುವುದು ಧ್ರುವತಾರೆ ತಾನೇ !? ಮಿಂಚಿ ಮರೆಯಾಗುವ ನಕ್ಷತ್ರಗಳ ಸಾಲಲ್ಲಿ ಸದಾ ವಿಜೃಂಭಿಸುವ ಧ್ರುವತಾರೆ ನೀನಾದರೆ, ಹೊಂಚು ಹಾಕಿ ಸೋಲಿಸುವವರು ಬಂದರೂ ಅಸಾಧ್ಯವಾದದ್ದು. ನಕ್ಷತ್ರ ಪುಂಜಗಳ ಮಧ್ಯದಲ್ಲಿ ಪ್ರಕಾಶಮಾನವಾಗಿ ಹೊಳೆದ ಧ್ರುವತಾರೆಯಂತೆ, ಜನರ ಮಧ್ಯದಿ ಮಿನುಗುವ ಅಸಾಮಾನ್ಯ ವ್ಯಕ್ತಿ ನೀನಾದರೆ...ಮಿನುಗುದಷ್ಟೇ ನಿನ್ನ ಕೆಲಸ.

ಲೇಖನ : ಚೈತ್ರ ರಾಜೇಶ್ ಕೋಟ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top