ಆನ್‌ಲೈನ್‌ ಸುದ್ದಿ ಮೂಲಗಳಿಗೆ ವಿಶ್ವಾಸಾರ್ಹತೆಯೇ ಪ್ರಮುಖ: ಗೂಗಲ್ ವರದಿಯ ಆಸಕ್ತಿಕರ ಅಂಶಗಳು

Upayuktha
0

ಭಾರತದಲ್ಲಿನ ಹೆಚ್ಚಿನ ಇಂಟರ್ನೆಟ್ ಬಳಕೆದಾರರು ಆನ್‌ಲೈನ್‌ನಲ್ಲಿ ಸುದ್ದಿಗಳನ್ನು ಓದುತ್ತಾರೆ, ವಿಶ್ವಾಸಾರ್ಹತೆ (ನಂಬಿಕೆ)ಯೇ ಸುದ್ದಿ ಬಳಕೆಯ ಹೆಚ್ಚಳಕ್ಕೆ ಪ್ರಧಾನ ಅಂಶ


ಬೇರೆಲ್ಲ ಭಾಷೆಗಳಿಗೆ ಹೋಲಿಸಿದರೆ ಕನ್ನಡದಲ್ಲಿ ಆನ್ಲೈನ್ ಬಳಕೆದಾರರು ಶೇ 91 ಮಂದಿ ಡಿಜಿಟಲ್ ಮಾಧ್ಯಮಗಳ ಮೂಲಕ ಸುದ್ದಿ ಪಡೆಯಲು ಬಯಸುತ್ತಾರೆ. ಸಾಂಪ್ರದಾಯಿಕ ಮುದ್ರಣ ಮಾಧ್ಯಮ ಹಾಗೂ ಅವುಗಳ ವೆಬ್‌ ತಾಣಗಳ ಬೇಡಿಕೆ ತೀವ್ರ ಕುಸಿದಿದ್ದು, ಶೇ 40 ಮಂದಿ ಮಾತ್ರ ಆ ಮೂಲಗಳಿಂದ ವಿಷಯಗಳನ್ನು ಪಡೆಯುತ್ತಾರೆ. ಈ ಅಂಕಿ ಅಂಶಗಳನ್ನು ಗಮನಿಸಿದರೆ ಸ್ವತಂತ್ರ ಡಿಜಿಟಲ್ ಮಾಧ್ಯಮಗಳಿಗಿರುವ ಉಜ್ವಲ ಭವಿಷ್ಯವನ್ನು ತಿಳಿಯಬಹುದು.




ಹೊಸದಿಲ್ಲಿ: ಭಾರತದಲ್ಲಿ ಅರ್ಧಕ್ಕಿಂತ ಹೆಚ್ಚು ಇಂಟರ್ನೆಟ್ ಬಳಕೆದಾರರು ಆನ್‌ಲೈನ್‌ನಲ್ಲಿ ಸುದ್ದಿಗಳನ್ನು ಬಳಸುತ್ತಿದ್ದಾರೆ ಮತ್ತು ಅವರಲ್ಲಿ ಅರ್ಧದಷ್ಟು ಜನರು ವಿಶ್ವಾಸಾರ್ಹತೆಯೇ ಸುದ್ದಿ ಬಳಕೆಯ ಪ್ರಮುಖ ಚಾಲಕ ಶಕ್ತಿ ಎಂದು ನಂಬುತ್ತಾರೆ ಎಂದು ಕಾಂತಾರ್-ಗೂಗಲ್ ಅಧ್ಯಯನ ವರದಿ ತಿಳಿಸಿದೆ.


ನಗರ ಕೇಂದ್ರಗಳಲ್ಲಿ 37 ಪ್ರತಿಶತ ಇಂಟರ್ನೆಟ್ ಬಳಕೆದಾರರಿಗೆ ಹೋಲಿಸಿದರೆ ಗ್ರಾಮೀಣ ಭಾರತದಲ್ಲಿ ಸುದ್ದಿ ಬಳಕೆಯಲ್ಲಿ ಆಸಕ್ತಿ ಹೆಚ್ಚು (ಶೇ 63 ಅಥವಾ 238 ಮಿಲಿಯನ್) ಎಂದು ವರದಿ ಕಂಡುಕೊಂಡಿದೆ.


ವರದಿಯ ಪ್ರಕಾರ, ಭಾರತೀಯ ಭಾಷೆಗಳಲ್ಲಿ 52 ಪ್ರತಿಶತ ಅಥವಾ 379 ಮಿಲಿಯನ್ ಇಂಟರ್ನೆಟ್ ಬಳಕೆದಾರರು ವಿವಿಧ ಸುದ್ದಿ ಅಪ್ಲಿಕೇಶನ್‌ಗಳು/ ವೆಬ್‌ಸೈಟ್‌ಗಳು, ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು, ಸಂದೇಶ ಫಾರ್ವರ್ಡ್‌ಗಳು, ಯೂಟ್ಯೂಬ್ ಇತ್ಯಾದಿಗಳ ಮೂಲಕ ಆನ್‌ಲೈನ್‌ನಲ್ಲಿ ಸುದ್ದಿಗಳನ್ನು ಪಡೆಯುತ್ತಾರೆ.



"ಸಾಂಪ್ರದಾಯಿಕ ಟಿವಿ ಚಾನೆಲ್‌ಗಳಿಗಿಂತ ಸಮಾನ ಆಸಕ್ತಿಯ ವಲಯಗಳಲ್ಲಿ ಆನ್‌ಲೈನ್ ಹೆಚ್ಚು ಜನಪ್ರಿಯವಾಗಿದೆ ಎಂದು ಶೇಕಡಾ 48 ರಷ್ಟು ಹೇಳುತ್ತಾರೆ" ಎಂದು ವರದಿ ತಿಳಿಸಿದೆ.


ಭಾರತದಲ್ಲಿ 729 ಮಿಲಿಯನ್ ಇಂಟರ್ನೆಟ್ ಬಳಕೆದಾರರಿದ್ದಾರೆ ಎಂದು ವರದಿ ಅಂದಾಜಿಸಿದೆ.


8 ಭಾಷೆಗಳಲ್ಲಿ 14 ರಾಜ್ಯಗಳಲ್ಲಿ 15 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಭಾರತೀಯ ಭಾಷಾ ಡಿಜಿಟಲ್ ಸುದ್ದಿ ಗ್ರಾಹಕರ ಸುದ್ದಿ ಬಳಕೆಯ ಅಭ್ಯಾಸವನ್ನು ಅರ್ಥಮಾಡಿಕೊಳ್ಳಲು 16 ನಗರಗಳಲ್ಲಿ 4,600 ವೈಯಕ್ತಿಕ ಸಂದರ್ಶನಗಳನ್ನು ಮತ್ತು 64 ಗುಣಾತ್ಮಕ ಚರ್ಚೆಗಳನ್ನು ನಡೆಸಲಾಗಿದೆ ಎಂದು ಕಾಂತಾರ್ ಹೇಳಿದೆ.


ಆನ್‌ಲೈನ್ ಸುದ್ದಿ ಗ್ರಾಹಕರಿಗೆ ವೀಡಿಯೊದ ರೂಪದಲ್ಲಿ ಸುದ್ದಿ ಪಡೆಯುವುದು ಅತ್ಯಂತ ಮೆಚ್ಚಿನ ವಿಚಾರವಾಗಿದೆ. ಪಠ್ಯ ಮತ್ತು ಆಡಿಯೊ ಸ್ವರೂಪದ (ಫಾರ್ಮ್ಯಾಟ್) ಸುದ್ದಿಗಳು ಆದ್ಯತೆಯ ಪಟ್ಟಿಯಲ್ಲಿ ನಂತರದ ಸ್ಥಾನ ಪಡೆದಿವೆ.



ವೀಡಿಯೋ ಸ್ವರೂಪದ ಕಂಟೆಂಟ್‌ಗಳಿಗೆ ಹೆಚ್ಚಿನ ಬೇಡಿಕೆಯಿದೆ. ಯಾವ್ಯಾವ ಭಾಷೆಯಲ್ಲಿ ವಿಡಿಯೋ ಕಂಟೆಂಟ್‌ಗಳಿಗೆ ಇರುವ ಬೇಡಿಕೆಯ ಅಂಕಿ-ಅಂಶ ಇಲ್ಲಿದೆ ನೋಡಿ:  ಬೆಂಗಾಲಿಯಲ್ಲಿ (ಶೇ 81), ತಮಿಳು (ಶೇ 81), ತೆಲುಗು (ಶೇ 79), ಹಿಂದಿ (ಶೇ 75), ಗುಜರಾತಿ (ಶೇ 72), ಮಲಯಾಳಂ (ಶೇ 70 ರಷ್ಟು), ಮರಾಠಿ ಮತ್ತು ಕನ್ನಡ ಭಾಷೆಯಲ್ಲಿ ಶೇ.66ರಷ್ಟು.


ಗುಜರಾತಿ ಮತ್ತು ಕನ್ನಡ ವಿಷಯಕ್ಕೆ ಶೇ.20 ಮತ್ತು ಮರಾಠಿಗೆ ಶೇ.18ರಷ್ಟು ಪಠ್ಯ ಬಳಕೆ ಹೆಚ್ಚಿದೆ. ಆಡಿಯೋ ಸುದ್ದಿ ವಿಷಯಕ್ಕೆ ಮರಾಠಿ ಮತ್ತು ಮಲಯಾಳಂನಲ್ಲಿ ಹೆಚ್ಚಿನ ಬೇಡಿಕೆಯಿದೆ ಮತ್ತು ಆನ್‌ಲೈನ್ ಸುದ್ದಿ ಓದುಗರಲ್ಲಿ ಶೇಕಡಾ 16 ರಷ್ಟು ಜನರು ಪಠ್ಯ, ಆಡಿಯೋದಲ್ಲಿ ಆಸಕ್ತಿ ಹೊಂದಿದ್ದಾರೆ.


ಆನ್‌ಲೈನ್ ಸುದ್ದಿಗಳ ಆಕರಗಳನ್ನು ಗಮನಿಸಿದರೆ, ಯೂಟ್ಯೂಬ್ ಶೇ 93ರಷ್ಟು ಆನ್‌ಲೈನ್ ಬಳಕೆದಾರರ ಆಸಕ್ತಿಯ ತಾಣವಾಗಿ ಅಗ್ರಸ್ಥಾನದಲ್ಲಿದೆ.  ನಂತರ ಸಾಮಾಜಿಕ ಮಾಧ್ಯಮ 88 ಶೇಕಡಾ, ಚಾಟ್ ಅಪ್ಲಿಕೇಶನ್‌ಗಳು 82 ಶೇಕಡಾ, ಸರ್ಚ್ ಎಂಜಿನ್‌ಗಳು 61 ಶೇಕಡಾ, ಪ್ರಕಾಶಕರ ಸುದ್ದಿ ಅಪ್ಲಿಕೇಶನ್‌ಗಳು ಅಥವಾ ವೆಬ್‌ಸೈಟ್‌ಗಳು 45 ಶೇಕಡಾ, ಆಡಿಯೊ ಸುದ್ದಿ 39 ಶೇಕಡಾ, OTT ಅಥವಾ ಸಂಪರ್ಕಿತ ಟಿವಿ 21 ಶೇಕಡಾ ಬಳಕೆದಾರರ ಆದ್ಯತೆಯ ಮೂಲಗಳಾಗಿವೆ.



ವರದಿಯ ಪ್ರಕಾರ, 80 ಪ್ರತಿಶತದಷ್ಟು ಆನ್‌ಲೈನ್ ಸುದ್ದಿ ಗ್ರಾಹಕರು ಸುದ್ದಿಗಳನ್ನು ನೈಜವೇ ಅಥವಾ ಸುಳ್ಳು ಸುದ್ದಿಗಳೇ ಎಂಬ ಅನುಮಾನದಿಂದ ನೋಡುತ್ತಾರೆ.


ತಪ್ಪು ಮಾಹಿತಿಯನ್ನು ಪತ್ತೆಹಚ್ಚಲು ಜನರು ತಮ್ಮದೇ ಮಾರ್ಗವನ್ನು ಬಳಸುತ್ತಾರೆ. ಶೇಕಡಾ 43 ರಷ್ಟು ಜನರು ವಾಟ್ಸಾಪ್ ಅಥವಾ ಬಾಯಿಮಾತಿನ ಮೂಲಕ ಸುದ್ದಿಯನ್ನು ಸ್ವೀಕರಿಸಿದರೆ ಮತ್ತು ಯಾವುದೇ ಸುದ್ದಿ ವೆಬ್‌ಸೈಟ್‌ನಲ್ಲಿ ಕಂಡುಬರದಿದ್ದರೆ ಅದನ್ನು ತಪ್ಪು ಮಾಹಿತಿ ಎಂದು ಪರಿಗಣಿಸುತ್ತಾರೆ ಮತ್ತು ಶೇಕಡಾ 40 ರಷ್ಟು ಜನರು ಸುತ್ತಮುತ್ತಲಿನ ಯಾರಿಂದಲೂ ಕೇಳಿರದ ದೊಡ್ಡ ಘಟನೆಯನ್ನು ತಪ್ಪು ಮಾಹಿತಿ ಎಂದೇ ಪರಿಗಣಿಸುತ್ತಾರೆ.


38 ಪ್ರತಿಶತದಷ್ಟು ಓದುಗರಿಗೆ  ಪುನರಾವರ್ತನೆ ಅಥವಾ ಹಳೆಯ ಸುದ್ದಿಗಳೇ ಹೊಸದೆಂಬಂತೆ ಮರುಕಳಿಸುವುದನ್ನು ತಪ್ಪು ಮಾಹಿತಿ ಎಂದು ಪರಿಗಣಿಸುತ್ತಾರೆ. ಶೇ 37ರಷ್ಟು ಮಂದಿ ಉತ್ಪ್ರೇಕ್ಷಿತ (ಸೆನ್ಸೇಶನಲ್) ಸುದ್ದಿಗಳನ್ನು ತಪ್ಪು ಮಾಹಿತಿ ಎಂದೇ ಪರಿಗಣಿಸುತ್ತಾರೆ.



ಶೇ 70ರಷ್ಟು ಸಮೀಕ್ಷಿತರು 60 ಪದಗಳಿಗಿಂತ ಕಡಿಮೆಯಿರುವ ಸಾರಾಂಶಗಳನ್ನು ಓದುತ್ತಾರೆ, ಶೇ 67 ಮಂದಿ ಪ್ರಮುಖ ಸುದ್ದಿಗಳ ಹೆಡ್‌ಲೈನ್‌ಗಳನ್ನು ಮಾತ್ರ ಓದುತ್ತಾರೆ.   48 ಪ್ರತಿಶತದಷ್ಟು ದೀರ್ಘವಾದ ವಿಷಯವನ್ನು ಓದುತ್ತಾರೆ.


ಸುಮಾರು 25 ಪ್ರತಿಶತದಷ್ಟು ಆನ್‌ಲೈನ್ ಸುದ್ದಿ ಗ್ರಾಹಕರು 60 ಸೆಕೆಂಡುಗಳೊಳಗಿನ ಕ್ಲಿಪ್‌ಗಳನ್ನು ಬಯಸುತ್ತಾರೆ ಮತ್ತು 19 ಪ್ರತಿಶತದಷ್ಟು ಜನರು ವಿವರವಾದ ಕ್ಲಿಪ್‌ಗಳನ್ನು ವೀಕ್ಷಿಸಲು ಬಯಸುತ್ತಾರೆ.


ಶೇ 73ರಷ್ಟು ಆನ್‌ಲೈನ್ ಸುದ್ದಿ ಓದುಗರು ಹೈಪರ್‌ಲೋಕಲ್ ವಿಷಯವನ್ನು ಬಯಸುತ್ತಾರೆ.


ಪ್ರಮುಖ ಸುದ್ದಿ ವಿಭಾಗದಲ್ಲಿ, 379 ಮಿಲಿಯನ್ ಆನ್‌ಲೈನ್ ಸುದ್ದಿ ಗ್ರಾಹಕರಲ್ಲಿ ಶೇಕಡಾ 76 ರಷ್ಟು ಜನರು ಮನರಂಜನೆಯನ್ನು ಬಯಸುತ್ತಿದ್ದು ಒಟ್ಟಾರೆ ಪಟ್ಟಿಯಲ್ಲಿ ಮನರಂಜನೆಯೇ ಅಗ್ರಸ್ಥಾನದಲ್ಲಿದೆ. ಅದರ ನಂತರ ಅಪರಾಧ, ಮತ್ತು ನಗರ ಮತ್ತು ಪ್ರದೇಶದ ಭದ್ರತಾ ಸುದ್ದಿಗಳು ಶೇ 72 ಮಂದಿಯನ್ನು ಸೆಳೆದರೆ,  71 ಪ್ರತಿಶತದಷ್ಟು ಜನರು ರಾಷ್ಟ್ರೀಯ, ರಾಜ್ಯ ಮತ್ತು ನಗರ ಮುಖ್ಯಾಂಶಗಳಿಗೆ ಸಂಬಂಧಿಸಿದ ಘಟನೆಗಳ ತಾಜಾ ಅಪ್‌ಡೇಟ್‌ಗಳಲ್ಲಿ ಆಸಕ್ತಿ ಹೊಂದಿದ್ದಾರೆ.



ಬಂಗಾಳಿ ಭಾಷೆಯಲ್ಲಿ ಸುದ್ದಿಯನ್ನು ಪಡೆಯುವ ಜನರು ಕ್ರೀಡಾ ಸುದ್ದಿಗಳಿಗೆ  ಆದ್ಯತೆ ನೀಡುತ್ತಾರೆ; ನಂತರ ಹವಾಮಾನ ಮತ್ತು ಗಾಳಿಯ ಗುಣಮಟ್ಟದ ಕುರಿತ ಅಪ್ಡೇಟ್‌ಗಳು ಮತ್ತು ರಾಷ್ಟ್ರೀಯ, ರಾಜ್ಯ ಮತ್ತು ನಗರಗಳ ಮುಖ್ಯಾಂಶಗಳನ್ನು ಬಯಸುತ್ತಾರೆ.


ಮಲಯಾಳಂನಲ್ಲಿ ವಿಷಯವನ್ನು ಓದುವ ಆನ್‌ಲೈನ್ ಸುದ್ದಿ ಓದುಗರು ಶಿಕ್ಷಣ ಮತ್ತು ಮನರಂಜನಾ ಸುದ್ದಿಗಳ ನಂತರ ವಿದೇಶಿ ಸುದ್ದಿಗಳನ್ನು ಬಯಸುತ್ತಾರೆ.



ಪ್ರಮುಖವಲ್ಲದ (Non-core) ಸುದ್ದಿ ವಿಭಾಗದಲ್ಲಿ, ಆರೋಗ್ಯ ಮತ್ತು ಫಿಟ್‌ನೆಸ್ ಶೇ 71 ರಷ್ಟು ಆಸಕ್ತ ಓದಗರೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ತಂತ್ರಜ್ಞಾನ (ಶೇ.61 ಮಂದಿಗೆ ಆಸಕ್ತಿ) ಮತ್ತು ಫ್ಯಾಷನ್ (ಶೇ. 56 ಮಂದಿಗೆ ಆಸಕ್ತಿ) ಇವೆ.


ಹಿಂದಿ, ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ಸುದ್ದಿಗಳನ್ನು ಓದುವ ಜನರು ಪ್ರಮುಖವಲ್ಲದ (Non-core)  ವಿಭಾಗದಲ್ಲಿ ಆಧ್ಯಾತ್ಮಿಕ ಮತ್ತು ಜ್ಯೋತಿಷ್ಯದ ವಿಚಾರಗಳನ್ನು ಬಯಸುತ್ತಾರೆ. ಬಂಗಾಳಿ ಮತ್ತು ಮಲಯಾಳಂ ವಿಷಯದಲ್ಲಿ, ಸುದ್ದಿ ಓದುಗರು  ಪ್ರವಾಸಕ್ಕೆ ಸಂಬಂಧಿಸಿದ ಸುದ್ದಿಗಳಿಗೆ ಆದ್ಯತೆ ನೀಡಿದರೆ, ಮರಾಠಿ ಸುದ್ದಿ ಓದುಗರು ಕಲೆ ಮತ್ತು ಸಂಸ್ಕೃತಿಗೆ ಆದ್ಯತೆ ನೀಡುತ್ತಾರೆ.


ತಮಿಳು ಆನ್‌ಲೈನ್ ಸುದ್ದಿ ಗ್ರಾಹಕರು ಸರಾಸರಿ 6.19 ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶಿಸುತ್ತಾರೆ. ಗುಜರಾತಿ 5.73, ಕನ್ನಡ 5.68 ಮತ್ತು ಹಿಂದಿ 5.21 ಪ್ಲಾಟ್‌ಫಾರ್ಮ್‌ಗಳನ್ನು ಪ್ರವೇಶಿಸಿ ತಮಗಿಷ್ಟದ ಮಾಹಿತಿಗಳನ್ನು ಪಡೆಯುತ್ತಾರೆ.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top