ಗೇರು ಕೃಷಿ- ಹೀಗೊಂದು ಪರ್ಯಾಯ ಚಿಂತನೆ

Upayuktha
0

ಕೆಲ ದಿನದ ಹಿಂದೆ ನೀರಿಲ್ಲದವರಿಗೆ ಗೇರು ಕೃಷಿ ವರಬಾಗಬಹುದೇ? ಎಂಬ ಲೇಖನ ಬರೆದಿದ್ದೆ. ಅನೇಕ ಸದಭಿಪ್ರಾಯದ ಮತ್ತು ವಿರೋಧಾಭಿಪ್ರಾಯದ ಪ್ರತಿಕ್ರಿಯೆಗಳು ಬಂದಿತ್ತು. ದೊಡ್ಡ ದೊಡ್ಡ ಗೇರು ಕೃಷಿಕ ಹೆಚ್ಚಿನವರ ಅಭಿಪ್ರಾಯವೂ ಆದಾಯದ ಸಂಪೂರ್ಣ ಹಣ ಸಂಗ್ರಹಣಾ ಖರ್ಚಿಗೆ ಸರಿ ಹೊಂದುತ್ತದೆ ಎಂಬುದು. ಹಾಗಾಗಿ ಲಾಭದಾಯಕವಲ್ಲದ ಕೃಷಿ ಎಂಬ ಅಭಿಪ್ರಾಯ. ಈ ಅಭಿಪ್ರಾಯಕ್ಕೆ ನನ್ನದೂ ಸಹಮತವಿದೆ.


ತೂತು ಬಾವಿಗಳ ಬಲದಿಂದ ಅಡಿಕೆ ಕೃಷಿಯನ್ನೇ ನೆಚ್ಚಿಕೊಂಡ ಅನೇಕ ತೋಟಗಳು ಈ ವರ್ಷ ಬಾಡಿ ಬಸವಳಿದದ್ದನ್ನು ಕಂಡು ನನಗೆ ಆ ಬಗ್ಗೆ ಸ್ವಲ್ಪ ಕುತೂಹಲ ಹುಟ್ಟಿತ್ತು. ನನ್ನ ಕಿರು ಅನುಭವವನ್ನು ಸೇರಿಸಿಕೊಂಡು ಸ್ವತಹ ಮಾಡುವವರಿಗೆ ನಷ್ಟದಾಯಕವಾಗಲಾರದು ಎಂಬ ಕಾರಣದಿಂದ ಬರೆದಿದ್ದೆ. ಮುಂದಿನ ಮೂರು ತೋಟಗಳ ಬಗ್ಗೆ ವಿವರವನ್ನು ಕೊಟ್ಟಾಗ ನನ್ನ ಅಭಿಪ್ರಾಯಕ್ಕೆ ಹೆಚ್ಚಿನ ಸಹಮತ ಇರಬಹುದು ಎಂದು ನನ್ನ ಅನಿಸಿಕೆ.


ಆತನೊಬ್ಬ ಎರಡು ಎಕ್ರೆ ಜಾಗದ ಉತ್ಸಾಹಿ ತರುಣ. ವೃತ್ತಿಯಲ್ಲಿ ಇಲೆಕ್ಟ್ರಿಷಿಯನ್. ರಾತ್ರಿ ಹಗಲೆನ್ನದೇ ದುಡಿತದ ಪರಿಣಾಮವಾಗಿ ಕೈಯಲ್ಲಿ ಹಣಕಾಸಿನ ಓಡಾಟ. ಅದರ ಪರಿಣಾಮವಾಗಿ 6 ವರ್ಷದ ಹಿಂದೆ ಎರಡು ಎಕರೆ ಗುಡ್ಡಕ್ಕೆ ತೂತು ಬಾವಿ ಕೊರೆಸಿ ಅಡಿಕೆಯನ್ನು ಹಾಕಿದ. ಒಳ್ಳೆಯ ಗೊಬ್ಬರವನ್ನು ಕೊಟ್ಟು ಅತ್ಯುತ್ತಮವಾಗಿ ಸಾಕಿ ಎರಡು ವರ್ಷದಿಂದೀಚೆಗೆ ಅಲ್ಪಸಲ್ಪ ಅಡಿಕೆಯೂ ಬಂತು. ಈ ವರ್ಷದ ಖಡು ಬೇಸಿಗೆಯಲ್ಲಿ ಕೊರೆದ ತೂತು ಬಾವಿ ನೀರಿಲ್ಲದೆ ಸೋಲೊಪ್ಪಿತು. ಅನಿವಾರ್ಯವಾಗಿ ಮತ್ತೊಂದು ತೂತು ಬಾವಿ ಕೊರೆತ. 700 ಅಡಿ ವರೆಗಿನ ಕೊರೆತಕ್ಕೂ, ಮೊರೆತಕ್ಕೂ ಕಣ್ಣುಗಳು ಕಿವಿಗಳು ಸಾಕ್ಷಿಯಾದವು. ಹನಿ ನೀರಿಲ್ಲದ ಕಾರಣ ಮತ್ತೊಂದು 800 ಅಡಿಯ ವರೆಗೆ ಕೊರೆದು ಈಗ ಎರಡು ಇಂಚಿನ ನೀರು ಸಿಕ್ಕಿದೆ. 120 ಅಡಿಯ ಕೇಸಿಂಗ್ ಪೈಪು ಬಳಸಲಾಗಿದೆ. ಆದ ಖರ್ಚಿನ ಬಗ್ಗೆ  ನಾ ಬರೆಯಲಾರೆ. ಇನ್ನೊಂದು ಮೂರೋ ನಾಲ್ಕೋ ವರ್ಷ ಈ ಬೋರ್ವೆಲ್ ಬಾಳಿಕೆ ಬರಲೂ ಬಹುದು. ಮತ್ತೆ ಇದೇ ಪರಿಸ್ಥಿತಿಯಾದರೆ ಆತನಿಗೆ ತೋಟ ಬೇಕೇ?


ಮಗದೊಬ್ಬರಿಗೆ ಒಂದು ಎಕರೆ ಗುಡ್ಡೆ ಜಾಗ. ಶಾಲೆ ಒಂದರಲ್ಲಿ ಅಟೆಂಡರ್ ಹುದ್ದೆ. ಜೀವನದ ಅಷ್ಟೂ ವರುಷಗಳ ಉಳಿತಾಯವನ್ನ ಬಳಸಿ ತೂತು ಬಾವಿ ಕೊರೆದು ಅಡಿಕೆ ಕೃಷಿ ಮಾಡಿದರು. ಐದು ವರ್ಷಗಳಲ್ಲಿ ಮೇಲಿನದ್ದೆ ಪರಿಸ್ಥಿತಿ. ಪುನಹ ಖರ್ಚು ಮಾಡಲು ತನ್ನಿಂದ ಸಾಧ್ಯವಿಲ್ಲ ಎಂದು ಕಂಡಾಗ ಕೈಬಿಟ್ಟರು. ಇಂದು ಮರದ ತುದಿ ಬೀಳುವ ಹಂತದಲ್ಲಿದೆ.


ಇನ್ನೊಬ್ಬರದು ಒಂದು ಎಕ್ರೆ ಜಾಗ. ವೃತ್ತಿಯಲ್ಲಿ ಕೃಷಿ ಕೂಲಿ ಕಾರ್ಮಿಕ. ಸ್ವಸಹಾಯ ಸಂಘದ ಸಹಕಾರದಿಂದ ಎತ್ತಿದ ಸಾಲದ ಮೂಲಕ ತೂತುಬಾವಿ. ಸಾಲದ ಕಂತು ಇನ್ನೂ ಬಾಕಿ ಇದೆ. ಆದರೆ ಪರಿಸ್ಥಿತಿ ಮೇಲಿನ ಎರಡಕ್ಕಿಂತ ಭಿನ್ನವೇನಲ್ಲ.


ಮೇಲಿನ ಮೂರು ಉದಾಹರಣೆಗಳನ್ನು ಗಮನಿಸಿ. ಇವರುಗಳು ಅಡಿಕೆ ತೋಟವನ್ನ ನಿರ್ಮಿಸದೆ ಗೇರು ಕೃಷಿಯನ್ನ ಮಾಡಿರುತ್ತಿದ್ದರೆ ಸ್ವತಹ ಅವರು ಅಥವಾ ಅವರ ಹೆಂಡತಿ ಮಕ್ಕಳು ಬೆಳಿಗ್ಗೆ ಹೊತ್ತು ಸಂಜೆ ಹೊತ್ತು ಸಂಗ್ರಹಣೆ ಮಾಡಿದ್ದರೆ (ಅಂತವರು ನಮ್ಮ ಕಣ್ಣ ಮುಂದೆ ನೂರಾರು ಇದ್ದಾರೆ) ಜೀವನದ ಇನ್ನಿತರ ಉದ್ಯೋಗದ  ಶ್ರಮ ವ್ಯರ್ಥವಾಗುತ್ತಿರಲಿಲ್ಲ. ಒಂದಷ್ಟು ಮೇಲ್ಖರ್ಚಿನ ಲೆಕ್ಕಕ್ಕೆ  ಸಮಸ್ಯೆಯೂ ಆಗುತ್ತಿರಲಿಲ್ಲ.ಈ ಬಗ್ಗೆ ಚಿಂತನೆಯನ್ನು ಹೇಳುವವರಾಗಲಿ, ಅನುಭವವನ್ನು ಹಂಚಿಕೊಳ್ಳುವವರಾಗಲಿ ಇಲ್ಲದೆ ಇರುವುದೇ ಅನೇಕ ಸೋಲುಗಳಿಗೆ ಕಾರಣ. ಆಳನ್ನೇ ನಂಬಿ ಮಾಡುವ ನಮ್ಮಂತಹ ದೊಡ್ಡ ಕೃಷಿಕರಿಗೆ ಗೇರಿನ ಬದಲು ಕಾಡು ಪರಿಹಾರ. ಭೂಮಿಗೆ ನೀರಿಂಗಿಸಿ ಮರುಪೂರಣವನ್ನು ಮಾಡಿಕೊಡುತ್ತದೆ. ಏರುತ್ತಿರುವ ಭೂಮಿಯ ಬಿಸಿಗೆ ತನ್ನದೊಂದಷ್ಟಾದರೂ ಕೊಡುಗೆಯನ್ನು ಕೊಡುತ್ತದೆ. ಗೇರು ಕೃಷಿ ಮಾಡಿದ್ದರೂ, ಆರ್ಥಿಕ ಲಾಭದಾಯಕ ಅಲ್ಲದಿದ್ದರೂ ಭೂಮಿಗೆ ನೀರಿಂಗಿಸುವ ಕೆಲಸವನ್ನು ಖಂಡಿತ ಮಾಡಿರುತ್ತದೆ. ನೇರ ಉಪಕಾರಿ ಅಲ್ಲದಿದ್ದರೂ ಪರೋಪಕಾರಿ ಆಗಿದೆ ಎಂಬುದನ್ನು ಒಪ್ಪಿಕೊಳ್ಳಲೇ ಬೇಕಾದ ಸತ್ಯ.


-ಎ.ಪಿ. ಸದಾಶಿವ ಮರಿಕೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top