ಭಗವದ್ಗೀತೆ- ಜಗತ್ತಿನ ಮೊದಲ ಮನೋವೈಜ್ಞಾನಿಕ ಗ್ರಂಥ

Upayuktha
0

ಗತ್ತಿನ ಮೊಟ್ಟ ಮೊದಲ ಮನೋವಿಜ್ಞಾನದ ಪುಸ್ತಕ ನಾವು ಭಾರತೀಯರು ಪೂಜಿಸುವ, ಪಾರಾಯಣ ಮಾಡುವ ಭಗವದ್ಗೀತೆ. ಜಗತ್ತಿನ ಮೊಟ್ಟ ಮೊದಲ ಮನೋಚಿಕಿತ್ಸಕ ಸಾಕ್ಷಾತ್ ಶ್ರೀ ಕೃಷ್ಣ ಭಗವಾನ್.

ನಿಜ ಹೇಳಬೇಕೆಂದರೆ ಭಗವದ್ಗೀತೆ ನಮ್ಮ ಜೀವನದ ಸುಖ, ದುಃಖ, ದುಮ್ಮಾನ ಸೋಲು-ಗೆಲುವು ಅವಮಾನ ಹೀಗೆ ಎಲ್ಲಾ ವಿಷಯಗಳಿಗೂ ಪರಿಹಾರ ನೀಡುತ್ತದೆ. ಭಗವದ್ಗೀತೆಯು ಹಸಿದ ಹೊಟ್ಟೆಗೆ ಮೃಷ್ಟಾನ್ನದಂತೆ, ಬಿಸಿಲಿಗೆ ಬಾಯಾರಿದವನಿಗೆ ಎಳನೀರಿನಂತೆ, ಸೋತು ನೊಂದ ಮನುಷ್ಯನಿಗೆ ಸಾಂತ್ವನದ ತಂಗಾಳಿಯಂತೆ ಭಾಸವಾಗುತ್ತದೆ. ಆದ್ದರಿಂದಲೇ ನಮ್ಮ ಪೂರ್ವಜರು ಪ್ರತಿನಿತ್ಯವೂ ಭಗವದ್ಗೀತೆಯನ್ನು ಪಾರಾಯಣ ಮಾಡುತ್ತಿದ್ದರು. ಓದು ಬರಹ ಬರದ ಅನಕ್ಷರಸ್ಥರು ಮಠಗಳಲ್ಲಿ, ಮನೆಗಳ ಜಗಲಿಗಳಲ್ಲಿ ನಡೆಯುವ ಭಗವದ್ಗೀತೆಯ ಪಾರಾಯಣವನ್ನು ಬಲ್ಲವರಿಂದ ಕೇಳಿ ಜೀವನದ ಸಾರವನ್ನು ತಿಳಿದು ಅದರಂತೆಯೇ ನಡೆದು ಪುನೀತರಾಗುತ್ತಿದ್ದರು.


ಮಹಾಭಾರತದ ಕುರುಕ್ಷೇತ್ರ ಯುದ್ಧದಲ್ಲಿ ತನ್ನ ಬಂಧು ಬಾಂಧವರನ್ನು ಎದುರಿಸಬೇಕಾದಂತಹ ಪರಿಸ್ಥಿತಿಯಲ್ಲಿ ಅರ್ಜುನನು ತನ್ನವರನ್ನು ಸೋಲಿಸಿ ರಾಜ್ಯವನ್ನು ಮರಳಿ ಪಡೆಯಬೇಕಾದ ಪರಿಸ್ಥಿತಿಯನ್ನು ಹಳಿದು ವಿಷಾದತಪ್ತನಾಗಿ ಯುದ್ಧದಿಂದ ವಿಮುಖನಾದಾಗ ಆತನ ಸಾರಥಿಯಾಗಿದ್ದ ಭಗವಾನ್ ಶ್ರೀ ಕೃಷ್ಣನು ಆತನಿಗೆ ಗೀತೋಪದೇಶವನ್ನು ಮಾಡಿದ. 

ಅಹಿಂಸಾ ಪರಮೋಧರ್ಮಃ ಎಂದು ಹೇಳಿದ್ದು ಶ್ರೀ ಕೃಷ್ಣನೇ. ಆದರೆ ಧರ್ಮ ಉಳಿಸುವುದಕ್ಕಾಗಿ  ಹಿಂಸಾ ಮಾರ್ಗವನ್ನು ಅನುಸರಿಸುವ ಪ್ರಸಂಗ ಬಂದರೆ ಹಿಮ್ಮೆಟ್ಟಬಾರದು ಎಂದು ಹೇಳಿದ್ದು ಕೂಡ ಶ್ರೀ ಕೃಷ್ಣನೇ.


ಸುಖ ದುಃಖ ಸಮೇಕೃತ್ವಹ. ಬದುಕಿನಲ್ಲಿ ಬರುವ ಸುಖ ದುಃಖಗಳನ್ನು ಸಮನಾಗಿ ಸ್ವೀಕರಿಸಬೇಕು ಎಂದು ಶ್ರೀ ಕೃಷ್ಣನು ಹೇಳಿದ. ಹೀಗೆ ಗೀತೆಯೂ ಮನುಷ್ಯನಿಗೆ ಸಾರ್ವಕಾಲಿಕ ಸತ್ಯಗಳನ್ನು ನೇರವಾಗಿ, ಸರಳವಾಗಿ ಮತ್ತು ನಿಷ್ಠುರವಾಗಿ ವಿಷದಪಡಿಸುತ್ತದೆ. ಇಂತಹ ಭಗವದ್ಗೀತೆಯಿಂದ ನಾವು ಕಲಿಯಬಹುದಾದ ಹಲವು ಮುಖ್ಯ ಪಾಠಗಳನ್ನು ಇಲ್ಲಿ ವಿವರಿಸಿದ್ದೇನೆ.


1. ಭಗವದ್ಗೀತೆಯ ಎರಡನೇ ಅಧ್ಯಾಯದ ಮೂರನೇ ಶ್ಲೋಕದಲ್ಲಿ


ಕ್ಲೈಭ್ಯಂ ಮಾಸ್ಮಗಮಃ ಪಾರ್ಥ ನೈತತ್ವಯ್ಯೂಪಪದ್ಯತೆ

ಕ್ಷುದ್ರ ಹೃದಯ ದೌರ್ಬಲ್ಯಂತ್ಯ ಕ್ತೋತ್ತಿಷ್ಟ ಪರಂತಹ


ಯುದ್ಧ ಭೂಮಿಯಲ್ಲಿ ತನ್ನವರನ್ನು ಕಂಡು, ತುಂಡುಭೂಮಿಗಾಗಿ ಇವರೆಲ್ಲರೊಂದಿಗೂ ಯುದ್ಧ ಮಾಡಬೇಕಲ್ಲ ಎಂಬ ವಿಷಾದದಲ್ಲಿ ಅರ್ಜುನನು ಇದ್ದಾಗ ಶ್ರೀಕೃಷ್ಣನು ಆತನಿಗೆ ಹೇಡಿಯಾಗಬೇಡ, ಹೇಡಿತನವು ದೌರ್ಬಲ್ಯ... ಅದು ನಿನಗೆ ತರವಲ್ಲ, ಕ್ಷುಲ್ಲಕವಾದ ಮನಸ್ಸಿನ ಹೇಡಿತನವನ್ನು ಬಿಟ್ಟು ಯುದ್ಧಕ್ಕೆ ತಯಾರಾಗು ಎಂದು ಹೇಳಿದನು.

ಎಷ್ಟೋ ಬಾರಿ ನಾವು ನಮ್ಮ ಜೀವನದಲ್ಲಿ ಅಯ್ಯೋ ಇದು ನನ್ನ ಕೈಲಾಗದ ವಿಷಯ ನನಗೆ ನಿಲುಕದ ವಿಷಯ ಎಂದು ಬದುಕು ಒಡ್ಡುವ ಸವಾಲುಗಳ ಯುದ್ಧಕ್ಕೆ ತಯಾರಾಗುವ ಮುಂಚೆಯೇ ಸೋಲನ್ನು ಒಪ್ಪಿಕೊಂಡು ಬಿಡುತ್ತೇವೆ. ಇದು ತಪ್ಪು. ಸೋಲು ಗೆಲುವುಗಳಿಗಿಂತ ಮುಂಚೆಯೇ ಬರಬೇಕಾಗಿರುವುದು ನಮ್ಮಲ್ಲಿರುವ ಹೋರಾಟದ ಕೆಚ್ಚು, ನಮ್ಮ ಪ್ರಯತ್ನ ಮತ್ತು ನಮ್ಮ ಶ್ರದ್ದೆ. ಭಗವದ್ಗೀತೆಯ ಈ ಮೇಲಿನ ಸಾಲುಗಳು ನಮಗೆ ಫಲಾಫಲಗಳು ಏನೇ ಇರಲಿ ಪ್ರಯತ್ನವನ್ನು ಬಿಡದಿರುವಂತೆ ಬೋಧಿಸುತ್ತವೆ.


ಎರಡನೇ ಅಧ್ಯಾಯದ 27ನೇ ಶ್ಲೋಕವು.                                            

ಜಾತಸ್ಯಹಿ ಧ್ರುವೋ ಮೃತ್ಯುರ್ಧ್ರುವಂ

ಜನ್ಮ ಮೃತಸ್ಯಚ. ತಸ್ಮದ ಪರಿಹಾರ್ಯೇರ್ಥೆ ನ ತ್ವಾಂ ಶೋಚಿಸುವಮರ್ಹಸಿ


ಅಂದರೆ ಹುಟ್ಟಿದವನಿಗೆ ಸಾವು ನಿಶ್ಚಿತ, ಸತ್ತವನಿಗೆ ಹುಟ್ಟು ನಿಶ್ಚಿತ. ಆದ್ದರಿಂದ ಅನಿವಾರ್ಯವಾದ ಹುಟ್ಟು ಸಾವುಗಳ ಕುರಿತು ನಾವು ಶೋಕ ವ್ಯಕ್ತ ಮಾಡುವುದು ಉಚಿತವಲ್ಲ ಎಂದು ಶ್ರೀ ಕೃಷ್ಣನು ಹೇಳಿದ್ದಾನೆ.


38ನೇ ಶ್ಲೋಕದಲ್ಲಿ

ಸುಖ ದುಃಖೇ ಸಮೇಕೃತ್ವ ಲಾಭಾಲಾಭೌ ಜಯಾ ಜಯಃ

ಜೀವನದಲ್ಲಿ ಬರುವ ಸುಖ-ದುಃಖ, ಲಾಭ ನಷ್ಟ ಜಯ ಸೋಲು... ಎಲ್ಲವನ್ನು ಸಮ ಚಿತ್ರದಿಂದ ನೋಡಬೇಕು, ಸಿರಿ ಬಂದಾಗ ಹಿರಿ ಹಿರಿ ಹಿಗ್ಗದೆ ಕಷ್ಟ ಬಂದಾಗ ಕಿರಿಕಿರಿ ಮಾಡಿಕೊಂಡು ಕುಗ್ಗದೆ ಸಮಚಿತ್ತತೆಯನ್ನು ಕಾಯ್ದುಕೊಂಡು ಹೋಗಬೇಕು.


47ನೇ ಶ್ಲೋಕದಲ್ಲಿ 

ಕರ್ಮಣ್ಯೆ ವಾಧಿಕಾರಸ್ತೆ ಮಾಫಲೇಶು

ಕದಾಚನ ಮಾ ಕರ್ಮಫಲ ಯೇತುರ್ಭೂರ್ಮಾತೇ ಸಂಗೋಸ್ತ್ವಕರ್ಮಣಿ

ಅಂದರೆ ನಿನ್ನ ಪಾಲಿಗೆ ಬಂದ ಕರ್ಮಗಳನ್ನು ಮಾಡಲು ಮಾತ್ರ ನಿನಗೆ ಅಧಿಕಾರವಿದೆ. ಫಲಾಫಲಗಳು ನಿನ್ನವಲ್ಲ ಆದ್ದರಿಂದ ನಿನ್ನ ಕರ್ಮವನ್ನು ನೀನು ಮಾಡುತ್ತಾ ಹೋಗು ಎಂದು ಶ್ರೀ ಕೃಷ್ಣನು ಹೇಳಿದ್ದಾನೆ.


ನಾಲ್ಕನೇ ಅಧ್ಯಾಯದ 7ನೇ ಶ್ಲೋಕದಲ್ಲಿ

ಯದಾ ಯದಾಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ ಅಭ್ಯುತ್ತಾನಮ್ ಅಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್

ಅಂದರೆ ಯಾವ ಯಾವ ಕಾಲದಲ್ಲಿ ಧರ್ಮದ ಕುರಿತು ಅಶ್ರದ್ಧೆ, ಮತಿಹೀನತೆ ಉಂಟಾಗುವುದೋ ಆ ಎಲ್ಲಾ ಕಾಲದಲ್ಲಿಯೂ ಭಗವಂತನು ಮತ್ತೆ ಮತ್ತೆ ಧರ್ಮ ಸಂಸ್ಥಾಪನೆಗಾಗಿ ಜನ್ಮ ತಾಳುವನು ಎಂದು ಶ್ರೀ ಕೃಷ್ಣನು ಹೇಳಿದ್ದಾನೆ.


ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಂ ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ

ಸಾಧು ಸಂತರಿಗೆ ತೊಂದರೆಯಾದಾಗ, ಜಗತ್ತು ಘೋರ ಅಂಧಕಾರದಲ್ಲಿ ಮುಳುಗಿದಾಗ, ಅಧರ್ಮವು ತಾಂಡವವಾಡುವಾಗ ದುಷ್ಕರ್ಮಿಗಳನ್ನು ನಾಶ ಮಾಡಿ ಧರ್ಮವನ್ನು ಸ್ಥಾಪಿಸಲು ಪ್ರತಿ ಯುಗದಲ್ಲಿಯೂ ನಾನು ಅವತರಿಸುವೆ ಎಂದು ಶ್ರೀ ಕೃಷ್ಣನು ಗೀತೆಯಲ್ಲಿ ಹೇಳಿದ್ದಾನೆ .


ಚಾತುರ್ವರ್ಣಂ ಮಯಾ ಸ್ಪಷ್ಟಹ ಗುಣ ಕರ್ಮ ವಿಭಾಗಶಹ ತಸ್ಯಕರ್ತಾರಮತಪೀ ಮಾ0 ವಿದ್ವಕರ್ತಾರಮವ್ಯಯಂ


ಅವರವರ ಗುಣ ಮತ್ತು ಕರ್ಮಗಳ ಫಲವಾಗಿ ವೇದಗಳಿಗನುಸಾರವಾಗಿ ನಾಲ್ಕು ವಿಧದ ವರ್ಣಗಳನ್ನು ನಾನು ಸೃಷ್ಟಿಸಿರುವೆ ಎಂದು ಶ್ರೀ ಕೃಷ್ಣನು ಹೇಳಿದ್ದಾನೆ. ಮೂಲತಃ ಮನುಷ್ಯನ ಕಾಯಕವೆ ಆತನ ಜಾತಿಯಾಗಿದೆಯೇ ಹೊರತು ಹುಟ್ಟಿನಿಂದ ಯಾರು ಅವರವರ ಜಾತಿಯನ್ನು ಪಡೆದುಕೊಂಡು ಬರುವುದಿಲ್ಲ. ಯಾರೂ ಮೇಲು ಕೀಳು ಎಂಬ ಭೇದ ಭಾವವಿಲ್ಲ. ಎಲ್ಲರೂ ಸರಿ ಸಮಾನರು ಈ ಸೃಷ್ಟಿಯಲ್ಲಿ.


ಯುಕ್ತಾಹಾರ ವಿಹಾರಸ್ಯ ಯುಕ್ತ ಚೇಷ್ಠಸ್ಯ ಕರ್ಮಸು ಯುಕ್ತ ಸ್ವಪ್ನಾವ ಬೋಧಸ್ಯ ಯೋಗೋ ಭವತಿ ದುಃಖಜಾ

ಅಂದರೆ ಮಿತವಾದ ಆಹಾರ ವಿಹಾರಗಳನ್ನು ಪಾಲಿಸುವವನು, ಕರ್ಮಗಳಲ್ಲಿ ನಿಯಮಿತ ಆಚರಣೆಗಳುಳ್ಳವನು, ನಿದ್ದೆ ಮತ್ತು ಎಚ್ಚರಿಕೆಗಳಲ್ಲಿ ಕೂಡ ಮಿತಿಯನ್ನು ಹೊಂದಿರುವವನು ಆತ್ಮಸಂಯಮ ಯೋಗವನ್ನು ಹೊಂದಿರುತ್ತಾನೆ. ಆ ರೀತಿಯ ಆತ್ಮಸಂಯಮ ಯೋಗದ ಜೀವನವನ್ನು ನಾವು ಪಾಲಿಸಬೇಕು ಎಂದು ಭಗವದ್ಗೀತೆಯ ಆರನೆಯ ಅಧ್ಯಾಯದಲ್ಲಿ ಶ್ರೀ ಕೃಷ್ಣ ಹೇಳಿದ್ದಾನೆ.


ಪತ್ರಂ ಪುಷ್ಪಂ ಫಲಂ ತೋಯಾಂ ಯೋಮೇಭಕ್ತ್ಯಾ ಪ್ರಯಚ್ಚತಿ

ಅಂದರೆ ಯಾರು ಭಕ್ತಿಯಿಂದ ಎಲೆ, ಹೂ, ಹಣ್ಣು, ಕಾಯಿ, ನೀರು ಮೊದಲಾದವುಗಳನ್ನು ಅರ್ಪಿಸುವನೋ ಅಂತಹ ಭಕ್ತಿಯ ಅರ್ಪಣೆಯನ್ನು ನಾನು ಅಂಗೀಕರಿಸುತ್ತೇನೆ. ಎಂದು ಶ್ರೀ ಕೃಷ್ಣನು ಭಗವದ್ಗೀತೆಯ 9ನೆಯ ಅಧ್ಯಾಯದಲ್ಲಿ ಹೇಳಿದ್ದಾನೆ. ಭಗವಂತನನ್ನು ಸಂಪ್ರೀತಗೊಳಿಸಲು ಆಡಂಬರದ ಪೂಜೆ ಪುನಸ್ಕಾರಗಳು, ದಿವ್ಯಾಂಬರಗಳು, ಭಕ್ಷ್ಯ ಭೋಜನಗಳು ಬೇಕಾಗಿಲ್ಲ. ಭಕ್ತಿಯಿಂದ ಹುಲ್ಲು ಗರಿಕೆ ಕಡ್ಡಿಯನ್ನು ಅರ್ಪಿಸಿದರೂ ಭಗವಂತನಿಗೆ ಅದು ಸಲ್ಲುತ್ತದೆ ಎಂಬ ವಿಷಯವನ್ನು ಶ್ರೀ ಕೃಷ್ಣನು ಹೇಳುತ್ತಾನೆ.


ಹೀಗೆ ಭಗವದ್ಗೀತೆಯಲ್ಲಿ ಮನುಷ್ಯನ ಜೀವನದ ಎಲ್ಲಾ ಕಷ್ಟ ಕಾರ್ಪಣ್ಯಗಳಿಗೆ, ಸುಖದ ಘಳಿಗೆಗಳಿಗೆ ಉತ್ತರವಿದೆ. ಭಗವದ್ಗೀತೆಯ ಪ್ರತಿಯೊಂದು ಅಧ್ಯಾಯವು ಭಗವಂತನ ಅನಂತತೆಯನ್ನು, ಅಗೋಚರ ಶಕ್ತಿಯನ್ನು ಚರಾಚರಗಳಲ್ಲಿ ಆತನ ಅಸ್ತಿತ್ವವನ್ನು ಸ್ಪುಟವಾಗಿ ತೆರೆದಿಡುತ್ತದೆ. ಮೇಲಿನ ಕೆಲವು ವಾಕ್ಯಗಳಲ್ಲಿ ಇಡೀ ಭಗವದ್ಗೀತೆಯನ್ನು ತುಂಬಿ ಕೊಡುವುದು ಸಮುದ್ರದ ನೀರನ್ನು ಲೋಟದಲ್ಲಿ ಹಿಡಿದಿಟ್ಟಂತೆ ಎಂಬ ಅರಿವಿದ್ದರೂ  ಹಿಡಿಯಷ್ಟು ಜ್ಞಾನವನ್ನು ಪಡೆಯೋಣ.


-ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top