ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದ ಸಚಿವರಾಗಿ 24 ಮಂದಿ ಪ್ರಮಾಣವಚನ ಸ್ವೀಕರಿಸಿದರು. ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಸಚಿವರಿಗೆ ರಾಜ್ಯಪಾಲ ಥಾವರ್ಚಂದ್ ಗೆಹಲೋತ್ ಅವರು ಪ್ರಮಾಣವಚನ ಭೋದಿಸಿದರು.
ಎಚ್.ಕೆ.ಪಾಟೀಲ, ಕೃಷ್ಣ ಬೈರೇಗೌಡ, ಎನ್.ಚಲುವರಾಯಸ್ವಾಮಿ, ಕೆ.ವೆಂಕಟೇಶ್, ಡಾ.ಎಚ್.ಸಿ.ಮಹದೇವಪ್ಪ, ಈಶ್ವರ ಖಂಡ್ರೆ, ಕೆ.ಎನ್.ರಾಜಣ್ಣ, ದಿನೇಶ್ ಗುಂಡೂರಾವ್, ಶರಣಬಸಪ್ಪ ದರ್ಶನಾಪುರ, ಶಿವಾನಂದ ಪಾಟೀಲ, ಆರ್.ಬಿ.ತಿಮ್ಮಾಪುರ, ಎಸ್.ಎಸ್.ಮಲ್ಲಿಕಾರ್ಜುನ, ಶಿವರಾಜ ತಂಗಡಗಿ, ಶರಣ ಪ್ರಕಾಶ ಪಾಟೀಲ, ಮಂಕಾಳ ಸುಬ್ಬ ವೈದ್ಯ,ಲಕ್ಷ್ಮಿ ಹೆಬ್ಬಾಳಕರ, ರಹೀಂ ಖಾನ್, ಡಿ.ಸುಧಾಕರ್, ಸಂತೋಷ್ ಎಸ್.ಲಾಡ್, ಎನ್.ಎಸ್.ಬೋಸರಾಜು,ಬೈರತಿ ಸುರೇಶ್,ಮಧು ಬಂಗಾರಪ್ಪ, ಡಾ.ಎಂ.ಸಿ.ಸುಧಾಕರ್, ಬಿ.ನಾಗೇಂದ್ರ ಅವರು ಸಂಪುಟ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
ಶಾಸಕ, ಎಂಎಲ್’ಸಿಯೂ ಅಲ್ಲದ ಬೋಸರಾಜ್’ಗೆ ಸಚಿವ ಸ್ಥಾನ
ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ರಾಯಚೂರು ಜಿಲ್ಲೆಯ ಮಾಜಿ ಶಾಸಕ ಎನ್.ಎಸ್.ಬೋಸರಾಜ್ ಅವರಿಗೆ ಅಚ್ಚರಿ ರೀತಿಯಲ್ಲಿ ಮಂತ್ರಿ ಸ್ಥಾನ ಒಲಿದುಬಂದಿದೆ.
ಮೂಲತಃ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಮೊಗಲೂರು ಗ್ರಾಮದವರಾದ ಎನ್.ಎಸ್. ಬೋಸರಾಜ್, ಕೃಷಿಕ ಕುಟುಂಬದಲ್ಲಿ ಜನಿಸಿದರು. ಮದ್ರಾಸ್ನಲ್ಲಿ ಡಿಪ್ಲೊಮಾ ಇನ್ ಆಟೋಮೊಬೈಲ್ ಎಂಜಿನಿಯರಿಂಗ್ ಮುಗಿಸಿದ್ದು, ಓದುತ್ತಿರುವಾಗಲೇ ನಾಯಕತ್ವ ಗುಣ ಹೊಂದಿ ಚುನಾವಣೆಗೆ ಸ್ಪರ್ಧಿಸಬೇಕು ಎಂಬ ಆಸಕ್ತಿ ಹೊಂದಿದ್ದರು.
ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ರಾಯಚೂರು ನಗರ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದರಿಂದ ಹೈಕಮಾಂಡ್ನಿಂದಲೇ ಬೋಸರಾಜ್ ಅವರಿಗೆ ಮಂತ್ರಿಭಾಗ್ಯ ಒಲಿದುಬಂದಿದೆ. ರಾಯಚೂರು ನಗರ ಕ್ಷೇತ್ರ ಟಿಕೆಟ್ ಮುಸ್ಲಿಂ ಅಭ್ಯರ್ಥಿಗೆ ನೀಡಲು ನಿರ್ಧಾರವಾಗಿತ್ತು. ಆದ್ರೆ, ಬೋಸರಾಜ್ ಅವರು ರಾಯಚೂರು ನಗರ ಟಿಕೆಟ್ ಆಕಾಂಕ್ಷಿಯಾಗಿದ್ದರು. ತಮಗೆ ಕೊಡಬೇಕು. ಇಲ್ಲ ತಮ್ಮ ಪುತ್ರ ರವಿ ಬೋಸರಾಜ್ ಅವರಿಗೆ ಈ ಬಾರಿ ಟಿಕೆಟ್ ಕೊಡಲೇಬೇಕೆಂದು ಪಟ್ಟು ಹಿಡಿದಿದ್ದರು. ರಾಜ್ಯ ನಾಯಕರು ಎಷ್ಟೇ ಮನವೊಲಿಸುವ ಪ್ರಯತ್ನ ಪಟ್ಟಿದ್ದರಾದರೂ ಅವರು ಬಗ್ಗಿರಲಿಲ್ಲ. ಕೊನೆಗೆ ಹೈಕಮಾಡ್ ಮಧ್ಯೆ ಪ್ರವೇಶಿಸಿ ಬೋಸರಾಜ್ ಅವರ ಮನವೊಲಿಸಿತ್ತು. ಖುದ್ದು ರಾಹುಲ್ ಗಾಂಧೀ ಅವರೇ ಬೋಸರಾಜ್ ಜೊತೆ ಮಾತುಕತೆ ನಡೆಸಿ, ಸರ್ಕಾರ ಬಂದರೆ ಎಂಎಲ್ಸಿ ಮಾಡಿ ಪ್ರಮುಖ ಹುದ್ದೆ ನೀಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಇದೀಗ ಬೋಸರಾಜ್ಗೆ ಅಚ್ಚರಿ ರೀತಿಯಲ್ಲಿ ಮಂತ್ರಿ ಸ್ಥಾನ ಒಲಿದುಬಂದಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ