ವಿದ್ಯಾಗಿರಿ: ‘ಅಂತರ್ಜಾಲದಲ್ಲಿ ನಮ್ಮತನವನ್ನು ಉಳಿಸಿಕೊಳ್ಳಲು ಪಡೆಯುವುದಕ್ಕಿಂತ ಕೊಡುವ ಕುರಿತು ಯೋಜಿಸಬೇಕು’ ಎಂದು ಸೆಂಟರ್ ಫಾರ್ ಇಂಟರ್ನೆಟ್ ಆಂಡ್ ಸೊಸೈಟಿಯ ಕಾರ್ಯನಿರ್ವಾಹಕ ನಿರ್ದೇಶಕ ತನ್ವೀರ್ ಹಸನ್ ಎ.ಕೆ. ಹೇಳಿದರು.
ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಾಂತ್ರಿಕ ವಿದ್ಯಾಲಯದಲ್ಲಿ ರೋಸ್ಟ್ರಮ್ ಸ್ಪೀಕರ್ಸ್ ವೇದಿಕೆ ಹಮ್ಮಿಕೊಂಡ ‘ನ್ಯಾವಿಗೇಟಿಂಗ್ ವಿಕಿಸ್ಪಿಯರ್' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡಿಸ್‍ಇನ್‍ಫರ್‍ಮೇಶನ್ (ತಪ್ಪು ಮಾಹಿತಿ) ಇಂದಿನ ಸವಾಲಾಗಿದೆ. ಇದರ ವಿರುದ್ಧ ಪ್ರತಿಯೊಬ್ಬರೂ ಧ್ವನಿ ಎತ್ತಬೇಕು. ಪ್ರತಿ ಸಂದರ್ಭದಲ್ಲೂ ಪ್ರಶ್ನಿಸಬೇಕು ಎಂದರು.
ಮುಂಬರುವ ಲೋಕಸಭಾ ಚುನಾವಣೆ ವೇಳೆ ಸುಳ್ಳು ಸುದ್ದಿ ಬಗ್ಗೆ ವಿಕಿಪೀಡಿಯಾವೂ ಜಾಗೃತಿ ಮೂಡಿಸುವ ಹಾಗೂ ಎಚ್ಚರ ವಹಿಸುವ ಕೆಲಸ ಮಾಡಲಿದೆ ಎಂದರು.
ವಿಕಿಪೀಡಿಯಾ ಮುಕ್ತ ವೇದಿಕೆ. ಜಗತ್ತಿನ 300ಕ್ಕೂ ಹೆಚ್ಚು ಭಾಷೆಗಳಲ್ಲಿ ಇದ್ದು, ಯಾರು ಬೇಕಾದರೂ ಕೊಡುಗೆ ನೀಡಬಹುದು. ಇದಕ್ಕೆ ಕೆಲವೊಂದು ಪ್ರಕ್ರಿಯೆಗಳಿವೆ. ಕನ್ನಡ ವಿಕಿಪೀಡಿಯಾಕ್ಕೆ ಆಳ್ವಾಸ್ ಕಾಲೇಜು ಕೊಡುಗೆ ಮಹತ್ತರವಾಗಿದೆ ಎಂದರು.
ಅಮೆರಿಕಾದಂತಹ ರಾಷ್ಟ್ರಗಳ ರಸ್ತೆ, ತಿನಿಸು ಸೇರಿದಂತೆ ಬಹುತೇಕ ಎಲ್ಲ ಮಾಹಿತಿಗಳು ಅಂತರ್ಜಾಲದಲ್ಲಿ ಲಭ್ಯ. ಆದರೆ, ನಮ್ಮ ದೇಶದಲ್ಲಿ ಅದಕ್ಕಿಂತ ಹೆಚ್ಚು ವಿಚಾರಗಳಿದ್ದರೂ, ಅಂತರ್ಜಾಲದಲ್ಲಿ ಮಾಹಿತಿ ಇಲ್ಲ. ಸಕ್ರಿಯ ಪಾಲ್ಗೊಳ್ಳುವಿಕೆಯ ಕೊರತೆಯೇ ಇದಕ್ಕೆ ಕಾರಣ ಎಂದರು.
ವಿಕಿಪೀಡಿಯಾವನ್ನು ಉತ್ತಮ ಉದ್ದೇಶದಿಂದ ಸೃಜಿಸಲಾಗಿದೆ. ಬಳಕೆದಾರರು ಮಾಹಿತಿ ದಾಖಲಿಸಿರುತ್ತಾರೆ. ಹೀಗಾಗಿ, ಯಾವುದೇ ಅಧ್ಯಯನ, ಸಂಶೋಧನೆಗಳಿಗೆ ವಿಕಿಪೀಡಿಯಾ ಮೊದಲ ಹೆಜ್ಜೆಯಾಗಿದೆ. ಆದರೆ, ಇದೇ ಅಂತಿಮ ಅಲ್ಲ ಎಂದರು.
ಅಂತರ್ಜಾಲವು ಮಾಹಿತಿ ಪಡೆಯಲು ಮುಕ್ತ ಅವಕಾಶವನ್ನು ಒದಗಿಸುತ್ತದೆ. ಹೊಸ ಆಲೋಚನೆಗೆ ಪರಿಸರದಲ್ಲಿ ಸ್ಪಂದನೆ ದೊರೆಯದಿದ್ದರೂ, ಅಂತರ್ಜಾಲದ ನಿರ್ದಿಷ್ಟ ಆಸಕ್ತಿ ಸಮುದಾಯವು ಬೆಂಬಲಿಸುತ್ತದೆ. ಇದು ಆ ವ್ಯಕ್ತಿಗಳ ಬೆಳವಣಿಗೆಗೆ ನೆರವಾಗುತ್ತದೆ’ ಎಂದರು.
ಕನ್ನಡವು ಜ್ಞಾನದ ಭಾಷೆ ಆಗಿ ಬಳಕೆಯಾಗದೇ ಇರುವುದು ವಿಷಾದನೀಯ ಎಂದ ಅವರು, ತಜ್ಞರ ಜ್ಞಾನವನ್ನು ಪರೀಕ್ಷೆ ಮಾಡಲು ಹೋಗಬೇಡಿ. ಆದರೆ, ಅವರು ವೈಜ್ಞಾನಿಕ ಸಾಕ್ಷ್ಯ ನೀಡದಿದ್ದರೆ ನಂಬಬೇಡಿ ಎಂದರು.
ಅಂತರ್ಜಾಲವು ಮೊದಲಿಗೆ ರಹಸ್ಯ ಸಂವಹನ ರೂಪದಲ್ಲಿತ್ತು. ಬಳಿಕ ಆಯ್ಕೆಯ ಸಂಸ್ಕೃತಿಯಾಯಿತು. ಬಳಿಕ ಮೌಲ್ಯೀಕರಣಕ್ಕಾಗಿ ಬಳಕೆಯಾಯಿತು ಎಂದರು.
ಅಂತರ್ಜಾಲದಲ್ಲಿ ಜನಪ್ರಿಯ, ನಂಬಿಕರ್ಹ, ಸಂಕೀರ್ಣ ಹಾಗೂ ಮುಕ್ತ ವೈವಿಧ್ಯಗಳಿವೆ. ನಾವು ವಿಮರ್ಶಾತ್ಮಕವಾಗಿ ನೋಡುವ ದೃಷ್ಟಿಕೋನ ಬೆಳೆಸಿಕೊಳ್ಳಬೇಕು ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಂಯೋಜಕ ಪ್ರಸಾದ್ ಶೆಟ್ಟಿ ಇದ್ದರು.
ವಿದ್ಯಾರ್ಥಿ ಅವಿನಾಶ್ ಕಟೀಲ್ ಸ್ವಾಗತಿಸಿ, ಪ್ರತೀಕ್ಷಾ. ಜಿ ನಿರೂಪಿಸಿ ವಂದಿಸಿದರು. ಸಹಾಯಕ ಪ್ರಾಧ್ಯಾಪಕ ಸಾತ್ವಿಕ್ ಇದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ