ತ್ರಿಭಿರ್ಗುಣಮಯೈರ್ಭಾವೈ:
ಏಭಿ: ಸರ್ವಮಿದಂ ಜಗತ್ |
ಮೋಹಿತಂ ನಾಭಿಜಾನಾತಿ
ಮಾಮೇಭ್ಯಹ ಪರಮವ್ಯಯಮ್ ||07-13||
ಪರಿಪೂರ್ಣ ಮತ್ತು ಅತ್ಯಂತ ಸಮೀಪವಾಗಿದ್ದರೂ ಜನರು ಭಗವಂತನನ್ನು ಯಾತಕ್ಕಾಗಿ ಗುರುತಿಸುವುದಿಲ್ಲ ಎಂಬುವುದಕ್ಕೆ ಭಗವಂತನು ಈ ರೀತಿಯಾಗಿ ಹೇಳುತ್ತಾನೆ. ಗುಣಗಳ ಕಾರ್ಯರೂಪವಾದ ಸಾತ್ವಿಕ, ರಾಜಸ ಮತ್ತು ತಾಮಸಗಳೆಂಬ ಪ್ರಕಾರದ ಭಾವಗಳಿಂದ ಎಲ್ಲ ಜಗತ್ತಿನ ಪ್ರಾಣಿ ಸಮುದಾಯ ಮೋಹಿತವಾಗುತ್ತಿದೆ. ಹಾಗಾಗಿ ಈ ಮೂರು ಗುಣಗಳಿಂದ ಅತೀತನಾದ, ಅವಿನಾಶಿಯಾದ ಭಗವಂತನನ್ನು ತಿಳಿಯುವುದಿಲ್ಲ .
ಮನುಷ್ಯರ ವಿವೇಕ ದೃಷ್ಟಿ ಈ ಮೂರೂ ಗುಣಗಳ ವಿನಾಶ ಶೀಲ ರಾಜ್ಯದಿಂದ ಮುಂದಕ್ಕೆ ಹೋಗುವುದಿಲ್ಲ. ಆದುದರಿಂದ ಇವುಗಳಿಂದ ಸರ್ವಥಾ ಅತೀತ ಹಾಗೂ ಅವಿನಾಶಿಯಾದ ಭಗವಂತನನ್ನು ತಿಳಿಯುವುದಿಲ್ಲವೆಂದು ಶ್ರೀ ಕೃಷ್ಣ ಪರಮಾತ್ಮ ತಿಳಿಸಿದ್ದಾನೆ.
ಮನಸ್ಸಿನ ಭಾವನೆಗಳಂತೆ ಸನ್ನಿವೇಶಗಳು ಒದಗಿ ಬಂದರೆ ಸರಾಗವಾಗಿ ಮುಂದುವರಿಯಲು ಸಹಕಾರಿಯಾಗುತ್ತವೆ. ಹೊಟ್ಟೆಯೊಳಗಿನ ಜೀರ್ಣಕ್ರಿಯೆ ನಮಗರಿವಿಲ್ಲದಂತೆ ಜರುಗುತ್ತದೆ. ಅದಕ್ಕೆ ನಾವೇನೂ ಶ್ರಮಪಡಬೇಕಾಗಿಲ್ಲ. ಆದರೆ ಗಮನವಿರಿಸಿದಾಗ ಮನಸ್ಸಿನ ಮೂಲೆಯಲ್ಲೊಂದು ತುಡಿತದ ಭಾವದ ಅನುಭವವಾಗುತ್ತಿರುತ್ತದೆ. ಆ ತುಡಿತದ ಭಾವವೇ ಇತರರ ಮೇಲಿನ ಮಮಕಾರವೂ ಆಗಿರುತ್ತದೆ. ಭಾವದೊಡಲಿನ ಮರುಗುವಿಕೆ ನೈಜವಾಗಿರುತ್ತದೆ. ನಿಯತ್ತಾಗಿರುವ ಪ್ರತಿ ಜೀವಿಗೂ ಈ ತೆರನಾದ ಭಾವಗಳ ಉತ್ಪತ್ತಿ ಸದಾ ಆಗುತ್ತಿರುತ್ತದೆ.
ಮೊಳಕೆಯೊಡೆದ ಬೀಜ ಆಗ ತಾನೇ ಮಣ್ಣಿನಿಂದ ಹೊರಗಿಣುಕಿದಾಗ ಎಲ್ಲವೂ ಸೊಗಸಾಗಿಯೇ ಇರುವುದನ್ನು ಗ್ರಹಿಸುವಂತೆ, ಈ ಮನವು ಕೂಡಾ ಅತ್ಯುನ್ನತವಾದುದನ್ನೇ ನಿರೀಕ್ಷಿಸುತ್ತಿರುತ್ತದೆ. ನಿರೀಕ್ಷೆಯು ಉತ್ತಮ ಫಲ ನೀಡಿದರೆ ಸುಸ್ಪಷ್ಟವಾಗಿ ಬೆಳೆಯಲು ಅನುವಾಗುತ್ತದೆ. ಮೊಳಕೆಯೊಡೆಯದ ಬೀಜಗಳು ಮಣ್ಣಲ್ಲಿ ಮಣ್ಣಾಗಿ ಫಲವತ್ತತೆಯನ್ನು ಹೆಚ್ಚಿಸುತ್ತವೆ. ಅದು ಮೊಳಕೆಯೊಡೆದ ಬೀಜಗಳ ಬೆಳವಣಿಗೆಗೆ ಸಾವಯವವಾಗಿ ಸದಾ ಋಣಿಯಾಗಿರುವಂತೆ ಮಾಡುತ್ತವೆ. ಇಂತಹ ಸಂದರ್ಭಗಳು ಬದುಕನ್ನು ಕಷ್ಟದಲ್ಲೂ ಮೇಲೆತ್ತಬಹುದಾದ ಆಧಾರ ಸ್ತಂಭಗಳಾಗುತ್ತವೆ.
ಮನುಷ್ಯನು ಸಹಜವಾಗಿ ಬೆಳೆಯುವುದನ್ನು ರೂಢಿಸಿಕೊಳ್ಳಬೇಕು. ಆಗಲೇ ತನ್ನ ನಿರೀಕ್ಷೆಗಳಿಗೆ ಉತ್ತಮ ಫಲಿತಾಂಶ ದೊರಕಿಸಿ ಕೊಡುವಲ್ಲಿ ಸಫಲನಾಗುತ್ತಾನೆ. ಕೃತಕ ಬೆಳವಣಿಗೆಗಳಿಗೆ ಯಾವಾಗಲೂ ಕಡಿಮೆ ಆಯುಷ್ಯವಾಗಿರುತ್ತದೆ. ಬದುಕು ನಾವು ಎಷ್ಟು ತೃಪ್ತಿಯಿಂದಿರುತ್ತೇವೆಯೋ ಅಷ್ಟು ಸಿಹಿಯನ್ನು ಕಟ್ಟಿಕೊಡುತ್ತದೆ. ಅತೃಪ್ತಿ ಹೆಚ್ಚಾದಷ್ಟು ಕಹಿ ಅನುಭವಗಳೇ ಎದುರಾಗುತ್ತಿರುತ್ತವೆ. ಇನ್ನಷ್ಟು ಬೇಕು ಎಂಬ ತುಡಿತವು ಏನಾದರೊಂದು ಕುಂದುಕೊರತೆಗಳನ್ನೇ ಕಾಣುವಂತಾಗುತ್ತದೆ. ಸಾಕು ಎಂಬ ಭಾವನೆ ಯಾವಾಗ ಮನಸ್ಸಲ್ಲಿ ಬೇರೂರುವುದೋ ಆಗ ತೃಪ್ತಿಯೆoಬ ಹೂ ಹಣ್ಣುಗಳು ಉತ್ಪತ್ತಿಯಾಗುತ್ತವೆ. ನಿಜದ ನೆಲೆಗೆ ಕಾಣದ ಅತೃಪ್ತಿಯ ಗೆರೆಗಳು ಒಂದಕ್ಕೊಂದು ತಾಕಲಾಟವಾಗಿ ಇನ್ನಷ್ಟು ಬದುಕನ್ನು ಸಿಕ್ಕಿಹಾಕಿಕೊಳ್ಳುವಂತೆ ಮಾಡುತ್ತವೆ. ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡಾಗ ಎಲ್ಲಾ ಗುಣಗಳು ಸಮತೋಲನ ಸ್ಥಿತಿಗೆ ಬರುತ್ತವೆ. ಆಗ ಯಾವುದೇ ಪ್ರತಿಕ್ರಿಯೆಗಳು ಸಹಜವಾಗಿಯೇ ಇರುತ್ತವೆ ಅಥವಾ ಬರುತ್ತವೆಯೇ ಹೊರತು ಉತ್ಪ್ರೇಕ್ಷೆಯಾಗುವುದಿಲ್ಲ.
ಹೇಳಿದ್ದನ್ನು ಕೇಳುತ್ತಾ ಒಮ್ಮೆ ಮಾಡುವುದೇ ಕಾರ್ಯವೆಂದು ಬಗೆದರೂ ನಂತರದ ಹೊತ್ತಿಗಾಗುವಾಗ ಪುನಃ ನೆನಪಿಸಿದಾಗ ಮಾತ್ರ ಮಾಡುವ ವ್ಯಕ್ತಿಗಳನ್ನು ಸಾಮಾನ್ಯವಾಗಿ ಕಾಣುತ್ತೇವೆ. ಇದು ಶ್ರದ್ಧೆಯಿಂದ ಮಾಡುವ ಕಾರ್ಯವಂತೂ ಆಗುವುದೇ ಇಲ್ಲ. ತಮ್ಮ ಬುದ್ಧಿಗೆ ಹೊಳೆದು ಮನವನ್ನು ಅದಕ್ಕೆ ತೊಡಗಿಸಿಕೊಂಡು ನಿಷ್ಪಕ್ಷವಾಗಿ ಮಾಡಿಕೊಂಡು ಹೋಗುವುದು ಸುಕಾರ್ಯವೆನಿಸಿಕೊಳ್ಳುತ್ತದೆ. ಬೆಳಗಿನ ಜಾವದ ಹೊತ್ತಿನ ಸೂರ್ಯೋದಯದ ಸೊಬಗನ್ನು ಒಂದು ದಿನ ನೋಡಿದರೆ ಸಾಕಾಗುವುದಿಲ್ಲ. ದಿನಂಪ್ರತಿ ನೋಡಿದರೇನೇ ಅದರ ಶೋಭೆ ಹೆಚ್ಚುತ್ತಾ ಹೋಗುತ್ತದೆ. ಹಾಗೆಯೇ ಮಾಡುವ ಕಾರ್ಯವು ತನ್ನಿಂತಾನೇ ಮನಸ್ಸಿಗೆ ಹೊಳೆದು ಅದನ್ನು ಕೃತಜ್ಞತಾಪೂರ್ವಕವಾಗಿ ಮಾಡಿದಾಗಲೇ ಆ ಕಾರ್ಯಕ್ಕೊಂದು ಹೊಸ ಕಳೆ ಬರಿಸುತ್ತಾ ಮನಸ್ಸನ್ನು ಉಲ್ಲಾಸವಾಗಿಡುವುದು. ಕಶ್ಮಲ, ಕೊಳೆಗಳಿಂದ ಕೂಡಿದ ವಸ್ತ್ರವು ಹೇಗೆ ಶೋಭಿಸುವುದಿಲ್ಲವೋ ಕಾರ್ಯಗಳಿಲ್ಲದೇ ಸುಮ್ಮನೇ ಕಾಲಹರಣ ಮಾಡುತ್ತಾ ಕುಳಿತಾಗ ಅದು ಶೋಭಾಯಮಾನವೆನಿಸಿಕೊಳ್ಳುವುದಿಲ್ಲ. ಹಾಗಾಗಿ ಮನವನ್ನು ದಿನವು ಕೆಲಸ ಕಾರ್ಯಗಳನ್ನು ಕೊಡುತ್ತಾ ಸ್ವಚ್ಛವಾಗಿರಿಸಿಕೊಳ್ಳಬೇಕು. ದೇವರನ್ನು ಭಕ್ತಿ ಪೂರ್ವಕ ಧ್ಯಾನಿಸುವುದು ಶ್ರೇಷ್ಠ ಕಾರ್ಯವೆಂದೆನಿಸಿಕೊಳ್ಳುತ್ತದೆ. ಹಾಗೆಯೇ ಡಂಭಾಚಾರಕ್ಕಾಗಿ ಧ್ಯಾನಿಸುವುದು ಒಳಗಿರುವ ಆತ್ಮಕ್ಕೆ ವಂಚನೆ ಮಾಡಿಕೊಳ್ಳುವುದಾಗಿದೆ . ಇತರ ಕಾರ್ಯಗಳು ಅಂತೆಯೇ, ಮತ್ತೊಬ್ಬರು ಹೇಳಿ ಆಮೇಲೆ ಮಾಡುವುದಕ್ಕಿಂತ ತಾನಾಗಿ ಮಾಡಿ ಮನ, ಮನೆ ಹಾಗೂ ಸಮಾಜವನ್ನು ಸ್ವಚ್ಛ ಮಾಡುವುದೊಳಿತು ಹೊರತು ಸುಮ್ಮನೇ ಕೂರುವುದಲ್ಲ. ಸುಮ್ಮನೆ ಕೂರಲೆಂದು ಇಂತಹ ಮನುಷ್ಯ ಶರೀರವನ್ನು ದೇವರು ಕೊಟ್ಟಿದ್ದಾನೆoದಾದರೆ ಕೈ ಕಾಲುಗಳ ಅಗತ್ಯವೇ ಇರುತ್ತಿರಲಿಲ್ಲ. ಅದು ದುಡಿದು ಬಾಳುವುದರ ಸಂಕೇತವಾಗಿದೆ. ಕೆಲವರು ಇನ್ನೊಬ್ಬರಿಗೆ ಮೋಸ ಮಾಡುವುದೇ ತಮ್ಮ ಕಾರ್ಯವೇನೋ ಎಂಬಂತೆ ವರ್ತಿಸುತ್ತಿರುತ್ತಾರೆ. ಕೇಳಲೆಂದು ಕಿವಿ ಎರಡು ಇಟ್ಟ, ಮಾತಾಡಲೆಂದು ಒಂದೇ ಬಾಯಿ ಕೊಟ್ಟ. ಅದರಲ್ಲಿ ಚಿಂತನೆಯನ್ನು ಪುಟಗಟ್ಟಲೆ ಗಂಟೆಗಟ್ಟಲೆ ಮಾಡಲು ಸಾಧ್ಯ. ಅಂತರಾತ್ಮದೊಳಗೆ ಆತ್ಮ ಪರಮಾತ್ಮನೊಂದಿಗಿನ ಆಟವನ್ನು ದಿನದಲ್ಲಿ ಮೂರು ಬಾರಿಯಾದರೂ ಗಮನಿಸುವುದುತ್ತಮ. ಊಟ ಮಾಡಲು, ತಿಂಡಿ ತಿನ್ನಲು ಮನವು ಬಯಸಿಯೇ ಬಯಸುತ್ತದೆ. ಅದಕ್ಕೆ ಬೇಕಾದ ಯಾವುದೇ ರೂಪದ ಒಳಿತಿನ ಕಾರ್ಯ ಮಾಡಿ ಪರಮಾತ್ಮ ಕೊಟ್ಟ ಆ ಅನ್ನದ ಋಣವನ್ನು ಕಳೆಯ ಲೋಸುಗ ದೇವರು ಅಂದರೆ ಈ ಉಸಿರನ್ನು ಗಮನವಿರಿಸುವುದುತ್ತಮ. ಆಗ ದೇವರ ಬಗೆಗಿನ ಮಹಿಮೆಯು ಸಾಕ್ಷಾತ್ಕಾರಗೊಳ್ಳುತ್ತದೆ.
ಮನಸ್ಸಾಕ್ಷಿಗೆ ವಿರುದ್ಧವಾಗಿ ಕೆಲಸ ಮಾಡುವುದು ತನ್ನನ್ನು ತಾನು ಆತ್ಮಾಹುತಿ ಮಾಡಿಕೊಂಡಂತೆ. ಇಂದಿನ ರಾಜಕೀಯದ ಆಟ ದುಡ್ಡಿನ ಮುಖದೊಟ್ಟಿಗೆ ಸಾಗುತ್ತಿದೆ. ಮುಖವಾಡ ಹಾಕಿ ಕುಣಿಯುವ ಹೆಬ್ಬುಲಿಗಳ ನಡುವೆ ಕುರಿಗಳು ಅಸಹಾಯಕರಾಗುತ್ತಿದ್ದಾರೆ. ರಾಜಕೀಯ ಎಂಬುದು ಸೇವೆಯಾಗಬೇಕು. ಆದರೆ ಈಗ ಅದು ಎಲ್ಲರ ಕಣ್ಣಿಗೆ ಮಣ್ಣೆರಚಿ ತಾನೇ ಸ್ವಾಹ ಮಾಡುವ ವೃತ್ತಿಯೆಂದರೂ ತಪ್ಪಾಗಲಾರದು. ಒಳಗೊಂದು ಹೊರಗೊಂದು ಮಾಡುತ್ತಾ ವಿಶ್ವಾಸವನ್ನು ಕಳೆದುಕೊಳ್ಳದೇ ಕೊನೆಯವರೆಗೂ ಬಾಳುವುದು ಮಾನವ ರೀತಿಯಾಗಿದೆ. ಹರಿಯುವ ರಕ್ತ, ಕುಡಿಯುವ ನೀರು, ವಾಸಿಸುವ ನೆಲ, ಉಸಿರಾಡುವ ಗಾಳಿ ಒಂದೇ ಆಗಿರುವಾಗ ಜಾತಿಯ ಪರವಾಗಿ ನಿಲ್ಲುವುದು ಯಾವ ನ್ಯಾಯ. ಮಾನವ ಜಾತಿ ಎಲ್ಲರೂ ಒಂದೇ ಎಂಬುದು ದೇವನೀತಿಯೇ ಹೌದು. ಎಲ್ಲರ ಲೆಕ್ಕವೂ ಚೊಕ್ಕವಾಗಿರುವುದು. ಸರ್ವೇ ಜನ ಸುಖಿನೋ ಭವಂತು. ಯೋಚಿಸಿ ಹೆಜ್ಜೆಯಿಡೋಣ.
-ಮಲ್ಲಿಕಾ ಜೆ ರೈ ಗುಂಡ್ಯಡ್ಕ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ

.jpg)


