ಮಂಗಳೂರು: ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಅವಧಿಯಲ್ಲಿ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಕಾಂಗ್ರೆಸ್‌ನ ರಮಾನಾಥ ರೈ ಅವರು ಮುಸ್ಲಿಂ ತುಷ್ಟೀಕರಣದ ಪರಮಾವಧಿಯನ್ನು ಪ್ರದರ್ಶಿಸುತ್ತ, ಪಿಎಫ್‌ಐ-ಎಸ್‌ಡಿಪಿಐ, ಎಸ್‌ಎಫ್‌ಐನಂತಹ ಮೂಲಭೂತವಾದಿ ಸಮಾಜದ್ರೋಹಿ ಸಂಘಟನೆಗಳನ್ನು ಬೆಳೆಸಿಕೊಂಡು ಬಂದರು. ನಿಷೇಧಿತ ಭಯೋತ್ಪಾದಕ ಸಂಘಟನೆಗಳ ಸ್ಲೀಪರ್ ಸೆಲ್‌ಗಳ ಬಂಟ್ವಾಳ ಕ್ಷೇತ್ರದಲ್ಲಿ ಈಗಲೂ ಸಕ್ರಿಯವಾಗಿದ್ದು, ಇದಕ್ಕೆ ರಮಾನಾಥ ರೈಗಳ ನೀತಿಯೇ ಕಾರಣ ಎಂದು ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಹೇಳಿದರು.
ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದ ಮಕ್ಕಳಿಗೆ ದೇವಸ್ಥಾನಗಳಿಂದ ಬರುತ್ತಿದ್ದ ಬಿಸಿಯೂಟವನ್ನು ನಿಲ್ಲಿಸುವ ಮೂಲಕ ಹಿಂದೂ ವಿರೋಧಿ ಮಾನಸಿಕತೆಯನ್ನು ಪ್ರದರ್ಶಿಸಿದ್ದ ಕಾಂಗ್ರೆಸ್ ನಾಯಕರು, ಬಂಟ್ವಾಳ ಕ್ಷೇತ್ರವನ್ನು ದೇಶದ್ರೋಹಿಗಳ ಅಡ್ಡೆಯನ್ನಾಗಿ ಮಾಡಿದ್ದರು ಎಂದು ಅವರು ಆರೋಪಿಸಿದರು.
ಪಕ್ಷದ ಮಂಗಳೂರು ವಿಭಾಗ ಮಾಧ್ಯಮ ಕೇಂದ್ರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಬಂಟ್ವಾಳ ಕ್ಷೇತ್ರದಲ್ಲಿ ಕಳೆದ ಬಾರಿ ಬಿಜೆಪಿ 15,900ಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದ ಬಳಿಕ ಅಲ್ಲಿನ ಚಿತ್ರಣವೇ ಬದಲಾಗಿದೆ ಎಂದು ಹರಿಕೃಷ್ಣ ಬಂಟ್ವಾಳ್ ನುಡಿದರು.
ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ರಾಜೇಶ್ ನಾಯಕ್ ಅವರು ಈ ಬಾರಿ 25,000ಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದುಬರುವುದು ನಿಶ್ಚಿತ ಎಂದು ಹರಿಕೃಷ್ಣ ಬಂಟ್ವಾಳ್ ಅವರು ಹೇಳಿದರು.
ಈ ಬಾರಿ ಕಾಂಗ್ರೆಸ್ ಹಾಗೂ ಆ ಪಕ್ಷದ ಅಭ್ಯರ್ಥಿ ರಮಾನಾಥ ರೈಗಳು ಎಷ್ಟು ಹತಾಶರಾಗಿದ್ದಾರೆ ಎಂದರೆ, ತಮ್ಮ ಪರ ಪ್ರಚಾರ ನಡೆಸಲು ಕೇರಳದಿಂದ ಮುಸ್ಲಿಂ ಲೀಗ್ ಮುಖಂಡರನ್ನು ಕರೆಸಿಕೊಂಡಿದ್ದಾರೆ. ದೇಶ ವಿಭಜನೆಯಲ್ಲಿ ಮುಸ್ಲಿಂ ಲೀಗ್‌ನ ಪಾತ್ರ ಏನೆಂಬುದು ಇತಿಹಾಸವನ್ನು ಓದಿದ ಎಲ್ಲರಿಗೂ ತಿಳಿದಿದೆ. ಅಂತಹ ಮುಸ್ಲಿಂ ಲೀಗ್‌ನ ಬೆಂಬಲ ಯಾಚಿಸುವ ಕಾಂಗ್ರೆಸ್ ಪಕ್ಷವನ್ನು ಜನತೆ ಬೆಂಬಲಿಸಿದರೆ ಭವಿಷ್ಯ ಏನಾದೀತು ಎಂಬುದನ್ನು ತಿಳಿದುಕೊಳ್ಳಲು ಸಾಮಾನ್ಯ ಜ್ಞಾನವೇ ಸಾಕು ಎಂದು ಬಂಟ್ವಾಳ್ ನುಡಿದರು.
ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಹತ್ಯೆಯ ಪ್ರಾಥಮಿಕ ಸ್ಕೆಚ್‌ಗಳು ತಯಾರಾಗಿದ್ದು, ಕುಕ್ಕರ್ ಬಾಂಬ್ ಸ್ಫೋಟಕ್ಕೆ ಮುನ್ನ ಸ್ಲೀಪರ್ ಸೆಲ್ ಉಗ್ರರು ನಡೆಸಿದ ತಾಲೀಮುಗಳು ಬಂಟ್ವಾಳ ಕ್ಷೇತ್ರದ ವ್ಯಾಪ್ತಿಯಲ್ಲೇ ನಡೆದಿದ್ದವು. ನಿಷೇಧಿತ ಪಿಎಫ್‌ಐನ ಹಿಟ್ ಸ್ಕ್ಯಾಡ್‌ನ ಮುಖ್ಯಸ್ಥ ತುಫೈಲ್‌ನನ್ನು ಪೊಲೀಸರು ಬಂಧಿಸಿದ ಬಳಿಕ ಹಲವು ಮಹತ್ವದ ಸಂಚುಗಳು ಬೆಳಕಿಗೆ ಬಂದವು ಎಂದು ಅವರು ನುಡಿದರು.
2018ರಲ್ಲಿ ರಾಜೇಶ್ ನಾಯಕ್ ಅವರು ಬಿಜೆಪಿ ಶಾಸಕರಾಗಿ ಗೆದ್ದು ಬಂದ ನಂತರ ಕ್ಷೇತ್ರದಲ್ಲಿ ಯಾವುದೇ ಕೋಮು ಹಿಂಸಾಚಾರಗಳು, ಗಲಭೆಗಳು ನಡೆದಿಲ್ಲ. ಎಲ್ಲ ವರ್ಗದವರನ್ನು ಸಮಾನವಾಗಿ ಕಾಣುತ್ತ, ಯಾರನ್ನೂ ಓಲೈಸದೆ ಅಭಿವೃದ್ಧಿಪರವಾದ ಸ್ವಚ್ಛ ರಾಜಕಾರಣ ಮಾಡುತ್ತ ಕ್ಷೇತ್ರದ ಚಿತ್ರಣವನ್ನು ಸಮಗ್ರವಾಗಿ ಬದಲಾಯಿಸಿದ್ದಾರೆ. ಇಂತಹ ಬದಲಾವಣೆ ಮತ್ತು ಶಾಂತಿ-ಸಾಮರಸ್ಯದ ಬದುಕಿಗಾಗಿ ರಾಜೇಶ್ ನಾಯಕ್ ಅವರನ್ನು ಪ್ರಚಂಡ ಬಹುಮತದಿಂದ ಪುನರಾಯ್ಕೆ ಮಾಡಲು ಕ್ಷೇತ್ರದ ಜನತೆ ನಿರ್ಧರಿಸಿದ್ದಾರೆ ಎಂದು ಹರಿಕೃಷ್ಣ ಬಂಟ್ವಾಳ್ ಹೇಳಿದರು.
ಕೊರೊನಾ ನಂತರದ ಅವಧಿಯಲ್ಲಿ ರಾಜೇಶ್ ನಾಯಕ್ ಅವರು ಕೆಎಸ್ಸಾರ್ಟಿಸಿ ಅಧಿಕಾರಿಗಳ ಜತೆಗೆ ಮಾತುಕತೆ ನಡೆಸಿ ವಿಶೇಷವಾದ ಸಂಚಾರಿ ಐಸಿಯು ಒಂದನ್ನು ಕ್ಷೇತ್ರದ ಜನತೆಯ ಆರೋಗ್ಯ ಪಾಲನೆಗಾಗಿ ಪ್ರಾರಂಭಿಸಿದ್ದಾರೆ. ಇದು ಕರ್ನಾಟಕದಲ್ಲೇ ಮೊದಲ ಪ್ರಯತ್ನವಾಗಿದೆ. 59 ಗ್ರಾಮಗಳಿಗೆ ಈ ಸಂಚಾರಿ ಆಸ್ಪತ್ರೆ ಭೇಟಿ ನೀಡಿ ಜನರಿದ್ದಲ್ಲಿಗೇ ತೆರಳಿ ಆರೋಗ್ಯ ಸೇವೆ ನೀಡುತ್ತಿದೆ. ಇದುವರೆಗೆ 17,002 ಮಂದಿಯ ಆರೋಗ್ಯ ತಪಾಸಣೆ ನಡೆಸಲಾಗಿದೆ. ಅಲ್ಲದೆ ಏಕಕಾಲಕ್ಕೆ 75 ಜನರಿಗೆ ಡಯಾಲಿಸಿಸ್ ನಡೆಸುವ ಸೌಲಭ್ಯವನ್ನು ತಾಲೂಕು ಆಸ್ಪತ್ರೆಯಲ್ಲಿ ಮಾಡಲಾಗಿದೆ ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಮಂಡಲ ಅಧ್ಯಕ್ಷ ದೇವಪ್ಪ ಪೂಜಾರಿ, ಮುಖಂಡರಾದ ಮಾಧವ ಮಾವೆ, ಜಿಲ್ಲಾ ಮಾಧ್ಯಮ ಸಂಚಾಲಕರಾದ ಸಂದೇಶ್ ಶೆಟ್ಟಿ ಮತ್ತು ರಣದೀಪ್ ಕಾಂಚನ್ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ