"ಬಹುಮುಖಿ ಪಾತ್ರ ಪ್ರವೀಣ" ದಿನೇಶ್ ನಾಯ್ಕ ಕನ್ನಾರು

Upayuktha
0

18 ಏಪ್ರಿಲ್ 1997 ರಂದು ಕೆ.ಗುಂಡು ನಾಯ್ಕ ಹಾಗೂ ಕಾವೇರಿ ಇವರ ಮಗನಾಗಿ ದಿನೇಶ್ ನಾಯ್ಕ ಕನ್ನಾರು ಅವರ ಜನನ. ಕರೆಸ್ಪಾಂಡೆನ್ಸ್ ನಲ್ಲಿ ಡಿಗ್ರಿಯ ಜೊತೆಗೆ ಮೇಳದ ತಿರುಗಾಟವನ್ನು ಮುಗಿಸಿ ಪ್ರಸ್ತುತ ಉಡುಪಿಯ ತೆಂಕನಿಡಿಯೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎಂಎಸ್ ಡಬ್ಲ್ಯೂ ವ್ಯಾಸಂಗ ಮಾಡುತ್ತಿದ್ದಾರೆ.


ಗಣೇಶ್ ನಾಯ್ಕ ಚೇರ್ಕಾಡಿ ಹೆಜ್ಜೆಗಾರಿಕೆಯ ಗುರುಗಳು, ಡಾ.ರವಿ ಕುಮಾರ್ ಸೂರಾಲು ಕೈ ತಾಳದ ಗುರುಗಳು, ಉದಯ ಕುಮಾರ್ ಹೊಸಾಳ ಭಾಗವತಿಕೆಯ ಗುರುಗಳು.


"ತಂದೆಯವರ ವೇಷ ನೋಡಿ ಪ್ರೇರಣೆಗೊಂಡು ಯಕ್ಷಗಾನ ರಂಗಕ್ಕೆ ಬಂದರು. 7ನೇ ತರಗತಿಯ ರಜೆಯಲ್ಲಿ ಕನ್ನಾರಿನಲ್ಲಿ ಹೆಜ್ಜೆ ಕಲಿತು, ಆ ಬಳಿಕ ಕೆಲವು ವೇಷಗಳನ್ನು ಮಾಡಿ ಪಿ.ಯು.ಸಿ ರಜೆಯಲ್ಲಿ 2 ತಿಂಗಳು ಮಂದಾರ್ತಿ ಮೇಳಕ್ಕೆ ವೇಷ ಮಾಡುವುದನ್ನು ಕಲಿಯುವುದಕ್ಕೆ ದೊಡ್ಡಪ್ಪ ಬುಕ್ಕಿಗುಡ್ಡೆ ಮಹಾಬಲ ನಾಯ್ಕ ಜೊತೆಗೆ ಹೋದೆ. ಆಗ ಪುಂಡುವೇಷದ ಬಗ್ಗೆ ಆಸಕ್ತಿಯಾಯಿತು, ವಿಶ್ವನಾಥ್ ಆಚಾರ್ಯ ತೊಂಬಟ್ಟು ಅವರ ನಾಟ್ಯಕ್ಕೆ ಪ್ರೇರಣೆಗೊಂಡು ಅವರ ಹಾಗೆ ವೇಷಧಾರಿಯಾಗಿ, ಪ್ರಜ್ವಲ್ ಕುಮಾರ್ ಗುರುವಾಯನಕೆರೆ ಹಾಗೆ 'ಆಲ್ ರೌಂಡರ್' ಕಲಾವಿದನಾಗಬೇಕು ಎಂಬ ಆಸೆ"ಎಂದು ಕನ್ನಾರು ಅವರು ಹೇಳುತ್ತಾರೆ.


ಕುಶ ಲವ, ಅಭಿಮನ್ಯು ಕಾಳಗ, ಚಂದ್ರಹಾಸ ಚರಿತ್ರೆ, ಹರಿಶ್ಚಂದ್ರ ಚರಿತ್ರೆ, ದೇವಿ ಮಹಾತ್ಮೆ ಇನ್ನೂ ಕೆಲವು ಪೌರಾಣಿಕ ಪ್ರಸಂಗಗಳು ಇವರ ನೆಚ್ಚಿನ ಪ್ರಸಂಗಗಳು. ಹಾಸ್ಯ ಮಿಶ್ರಿತ ಪುಂಡು ವೇಷ ತುಂಬಾ ಇಷ್ಟ. ಜೊತೆಗೆ ಮದನ, ಉತ್ತರ, ಕುಶ ಲವ, ಚಂಡ ಮುಂಡ ಹೀಗೆ ಜೋಡಿ ವೇಷವನ್ನು ತುಂಬಾ ಇಷ್ಟ ಪಡುವ ಇವರು, ರಂಗಕ್ಕೆ ಹೋಗುವ ಮೊದಲು ಪಾತ್ರಕ್ಕೆ ಬೇಕಾದ ಪದ್ಯವನ್ನು ಓದಿಕೊಂಡು, ಎದುರು ವೇಷದವರ ಜೊತೆಗೆ ಸಂವಾದ ಕೇಳಿ, ಪದ್ಯಕ್ಕೆ ಇಂತಿಷ್ಟೇ ನಿಗದಿತ ಅರ್ಥ ತಯಾರಿ ಮಾಡಿಕೊಂಡು, ಹೊಸತಾಗಿ ಬಂದಿರುವ ಪೌರಾಣಿಕ ಪ್ರಸಂಗಕ್ಕೆ ಯೂಟ್ಯೂಬ್ ನೋಡಿ ತಯಾರಿ ಮಾಡಿಕೊಳ್ಳುವುದಾಗಿ ಹೇಳುತ್ತಾರೆ.


ಯಕ್ಷಗಾನ ಇಂದಿನ ಸ್ಥಿತಿ ಹಾಗೂ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-


"ಲೋಕೊ ಭಿನ್ನ ರುಚಿ ಎಂಬುವಂತೆ ಒಬ್ಬೊಬ್ಬ ಪ್ರೇಕ್ಷಕ ಒಂದೊಂದು ಬಯಸುತ್ತಾನೆ. ಒಬ್ಬರಿಗೆ ಹಾಸ್ಯ ಬೇಕಾದರೆ ಕೆಲವರು ಕುಣಿತ, ಮಾತು ಇಷ್ಟಪಡುತ್ತಾರೆ. ಕೆಲವರು ಯಕ್ಷಗಾನದಲ್ಲಿ ತಪ್ಪು ಹುಡುಕುವುದಕ್ಕೆ ಇರುತ್ತಾರೆ. ಎಲ್ಲಿ ತಪ್ಪಿದೆ ಅದನ್ನು ಹೇಗೆ ಸರಿ ಮಾಡುವುದು ಕೇಳಿದರೆ ಅವರಿಗೆ ಗೊತ್ತಿರುವುದಿಲ್ಲ. ಕಾಲಕ್ಕೆ ತಕ್ಕ ಹಾಗೆ ಯಕ್ಷಗಾನ ವಿಜೃಂಭಣೆಯಾಗಿ ಮುಂದೆ ಸಾಗುತ್ತಿದೆ."


ಯಕ್ಷಗಾನ ರಂಗದಲ್ಲಿ ನಿಮ್ಮ ಮುಂದಿನ ಯೋಜನೆ:-


"7 ವರ್ಷ ನಿರಂತರ ಮೇಳದ ತಿರುಗಾಟದಲ್ಲಿ ಇದ್ದೆ. ಇದರ ಮಧ್ಯದಲ್ಲಿ ಡಿಗ್ರಿ ಕರೆಸ್ಪಾಂಡೆನ್ಸ್ ಮಾಡಿ ಡಿಗ್ರಿ ಮುಗಿಸಿ ತೆಂಕನಿಡಿಯೂರಿನ ಕಾಲೇಜಿನಲ್ಲಿ M.S.W ಮಾಡುತ್ತಿದ್ದೇನೆ. ಯಕ್ಷಗಾನ ಮೇಳದಲ್ಲಿ 6 ತಿಂಗಳು ತಿರುಗಾಟ ಉಳಿದ 6 ತಿಂಗಳು ಏನು ಮಾಡುವುದು ಎಂದು ಪ್ರಶ್ನೆ ಮೂಡುತ್ತದೆ. ಅದಕ್ಕಾಗಿ ಬೇರೆ ಕೆಲಸ ಮಾಡಿ ಹವ್ಯಾಸಿಯಾಗಿ  ಯಕ್ಷಗಾನವನ್ನು ಮುಂದುವರೆಸಿಕೊಂಡು ಹೋಗಬೇಕು ಎಂದುಕೊಂಡಿದ್ದೇನೆ."


"ನಮ್ಮ ಹತ್ತಿರದ ಊರಾದ ಕರ್ಜೆಯಲ್ಲಿ “ಯಕ್ಷ ಕಿರೀಟಿ" ಹವ್ಯಾಸಿ ಬಳಗವನ್ನು ಪ್ರಾರಂಭಿಸಿ ಯಕ್ಷಗಾನ ಕಲಿಯಲು ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಹೆಜ್ಜೆಗಾರಿಕೆಯನ್ನು ನಾನು ಹಾಗೂ ಆತ್ಮೀಯ ವೇದಾಂತ್ ಕ್ರಮಧಾರಿ ಕರ್ಜೆ ಜೊತೆಗೆ ತರಬೇತಿಯನ್ನು ನೀಡುತ್ತಿದ್ದೇವೆ. ಅದೇ ತಂಡದ ಹೆಸರಿನಿಂದ ಕೆಲವು ಹವ್ಯಾಸಿ ಕಲಾವಿದರ ಒಟ್ಟಿಗೆ ಸೇರಿಸಿ ಕಾರ್ಯಕ್ರಮ ನೀಡಿರುತ್ತೇವೆ. ನಾನು ಯಕ್ಷಗಾನ ಕಲಿತ ಬಳಿಕ ಸಂಸ್ಕಾರ, ಹೆಸರು, ಅನ್ನ ಕೊಟ್ಟಿದೆ. ಹೀಗಿರುವಾಗ ಪರಿಸ್ಥಿತಿ ತಕ್ಕಂತೆ ಮೇಳವನ್ನು ಬಿಟ್ಟಿದ್ದೇನೆ. ಯಕ್ಷಗಾನವನ್ನು ಬಿಡುವುದಿಲ್ಲ, ಬಿಡುವುದಕ್ಕೆ ಆಗುವುದಿಲ್ಲ."


ನವರಾತ್ರಿ ಕಾರ್ಯಕ್ರಮದಲ್ಲಿ ಚಾಂತಾರು ಮಹಿಷಮರ್ದಿನಿ ಗದ್ದುಗೆ ದೇವಸ್ಥಾನದಲ್ಲಿ ಅಭಿನಂದಸಿದ್ದಾರೆ. 1 ವರ್ಷ ಮಂದಾರ್ತಿ  ಮೇಳದಲ್ಲಿ, 5 ವರ್ಷ ಸಾಲಿಗ್ರಾಮ ಮೇಳದಲ್ಲಿ, 1ವರ್ಷ ಸೌಕೂರು ಮೇಳದಲ್ಲಿ ತಿರುಗಾಟವನ್ನು ಮಾಡಿದ್ದಾರೆ. ಪುಸ್ತಕ ಓದುವುದು, ಬೇರೆಯವರ ವೇಷವನ್ನು ನೋಡುವುದು ಇವರ ಹವ್ಯಾಸಗಳು.


ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.


-ಶ್ರವಣ್ ಕಾರಂತ್ ಕೆ

ಫೋಟೋ- ವಿಜಯ ಕುಮಾರ್, ಸುಮಂತ್ ಫೋಟೋಗ್ರಾಫಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Advt Slider:
To Top