ಏ. 22- ಭಾಸ್ಕರ ರೈ ಕುಕ್ಕುವಳ್ಳಿ ಅವರ 'ಏಕಾಂತದಿಂದ ಲೋಕಾಂತರಕೆ' ಕೃತಿ ಬಿಡುಗಡೆ

Upayuktha
0

ಮಂಗಳೂರು: ತುಳು-ಕನ್ನಡ ಲೇಖಕ, ಸಂಪಾದಕ ಮತ್ತು ಸಂಘಟಕ ಭಾಸ್ಕರ ರೈ ಕುಕ್ಕುವಳ್ಳಿ ಅವರ ಒಂದು ನೂರು ಬರಹಗಳ ಸಂಚಯ 'ಏಕಾಂತದಿಂದ ಲೋಕಾಂತರಕೆ' ಸಂಪರ್ಕ- ಸದಾಶಯಗಳ ಭಾವಯಾನ ಕೃತಿ ಏ. 22 ರ ಶನಿವಾರ ಸಂಜೆ 4 ಗಂಟೆಗೆ ಲೋಕಾರ್ಪಣೆಗೊಳ್ಳಲಿದೆ. ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ವತಿಯಿಂದ ನಗರದ ಉರ್ವಾ ಸ್ಟೋರ್ ಅಂಬೇಡ್ಕರ್ ಭವನದಲ್ಲಿ ಜರಗುವ 'ಸಾಂಸ್ಕೃತಿಕ ವೈಭವ' ಸಮಾರೋಪ ಸಮಾರಂಭದಲ್ಲಿ ಕೃತಿ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.


ನಾಡು - ನುಡಿ, ಸಂಸ್ಕೃತಿಗೆ ಸಂಬಂಧಿಸಿದ ವೈಚಾರಿಕ ಲೇಖನಗಳೊಂದಿಗೆ ಸಾಮಾಜಿಕ ಮತ್ತು ಸಾಮುದಾಯಿಕ ವಿದ್ಯಮಾನಗಳು, ಅಪರೂಪದ ವ್ಯಕ್ತಿ ಚಿತ್ರಣಗಳು ಹಾಗೂ ಲೇಖಕರು ದೇಶ - ವಿದೇಶಗಳನ್ನು ಸಂದರ್ಶಿಸಿದ ಪ್ರವಾಸಾನುಭವಗಳು ಸೇರಿದಂತೆ ವಿಭಿನ್ನ ವಿಷಯಗಳನ್ನು 100 ಯಾನಗಳಾಗಿ ವಿಂಗಡಿಸಿ ರಚಿಸಿರುವ ಈ ಕೃತಿಗೆ ಹಿರಿಯ ವಿದ್ವಾಂಸ, ಹಂಪಿ ಕನ್ನಡ ವಿ.ವಿ.ಯ ವಿಶ್ರಾಂತ ಕುಲಪತಿ ಡಾ.ಬಿ.ಎ.ವಿವೇಕ ರೈ ಮುನ್ನುಡಿ ಬರೆದಿದ್ದಾರೆ. ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ಅಬುಧಾಬಿ ಬೆನ್ನುಡಿ ನೀಡಿದ್ದಾರೆ. ಪ್ರಕಾಶಕರ ಪರವಾಗಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಆಶಯ ನುಡಿಗಳನ್ನಾಡಿದ್ದಾರೆ.


ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿ ಡಾ. ಎನ್. ವಿನಯ ಹೆಗ್ಡೆ ಅವರು ಸಮಾರಂಭವನ್ನು ಉದ್ಘಾಟಿಸಲಿದ್ದು, ಮುಂಬೈ ಉದ್ಯಮಿ ಸದಾಶಿವ ಶೆಟ್ಟಿ ಕನ್ಯಾನ ಗ್ರಂಥ ಲೋಕಾರ್ಪಣೆ ಮಾಡುವರು. ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಎ.ಸದಾನಂದ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಶುಭಾಶಂಸನೆ ಮಾಡುವರು.

ಅಬುಧಾಬಿ ಉದ್ಯಮಿ ಡಾ. ಬಿ.ಆರ್.ಶೆಟ್ಟಿ, ಎ.ಜೆ. ಸಮೂಹ ಸಂಸ್ಥೆಗಳ ಡಾ.ಎ.ಜೆ.ಶೆಟ್ಟಿ, ಆಳ್ವಾಸ್  ಶಿಕ್ಷಣ ಸಂಸ್ಥೆಗಳ ಡಾ.ಎಂ.ಮೋಹನ ಆಳ್ವ, ಎಮ್. ಆರ್. ಜಿ. ಗ್ರೂಪಿನ ಪ್ರಕಾಶ್ ಶೆಟ್ಟಿ, ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಗಳ ಸವಣೂರು ಸೀತಾರಾಮ ಶೆಟ್ಟಿ, ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ, ಸಿಟಿ ಆಸ್ಪತ್ರೆಯ ಡಾ. ಭಾಸ್ಕರ ಶೆಟ್ಟಿ ಮತ್ತಿತರ ಗಣ್ಯರು  ಅತಿಥಿಗಳಾಗಿರುವರು ಎಂದು ಪ್ರಕಟಣೆ ತಿಳಿಸಿದೆ.

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top