ಮಂಗಳೂರು: ಕರಾವಳಿ ಕರ್ನಾಟಕದ ಮತದಾರರು ಅತ್ಯಂತ ಪ್ರಬುದ್ಧರು. ಸಂಪೂರ್ಣ ಬಹುಮತ ಪಡೆದು ಸರಕಾರ ರಚಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಬಿಜೆಪಿಗೆ ಸಂಪೂರ್ಣ ಬೆಂಬಲ ನೀಡಿ ಆಯ್ಕೆ ಮಾಡುತ್ತಾರೆ ಎಂಬ ಭರವಸೆ ನನಗಿದೆ ಎಂದು ಬಿಜೆಪಿ ರಾಜ್ಯ ವಕ್ತಾರರು ಹಾಗೂ ಮಂಗಳೂರು ವಿಭಾಗ ಮಾಧ್ಯಮ ಕೇಂದ್ರದ ಸಂಚಾಲಕರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ಹೇಳಿದರು.
ಸ್ಥಳೀಯ ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಸಂದರ್ಶಕರ ಹಲವು ಪ್ರಶ್ನೆಗಳಿಗೆ ಉತ್ತರಿಸುತ್ತಲೇ ಪಕ್ಷದ ಸಾಧನೆ, ಕಾರ್ಯನಿರ್ವಹಣೆ, ಟಿಕೆಟ್ ಹಂಚಿಕೆಯ ವೇಳೆ ಕೆಲವಡೆ ಉಂಟಾಗಿರುವ ತಾತ್ಕಾಲಿಕ ಗೊಂದಲಗಳ ಬಗ್ಗೆ ಉತ್ತರಿಸಿದರು.
ಹೊಸಮುಖಗಳಿಗೆ ಆದ್ಯತೆ ನೀಡಿ ಪಕ್ಷವನ್ನು ಮತ್ತೊಂದು ಎತ್ತರಕ್ಕೆ ಬೆಳೆಸುವ ಬಿಜೆಪಿ ವರಿಷ್ಠರ ಆಶಯಗಳನ್ನು ಸಮರ್ಥಿಸಿಕೊಂಡ ಅವರು, ಡಬಲ್ ಎಂಜಿನ್ ಸರಕಾರದ ಸಾಧನೆಗಳನ್ನು ಉಲ್ಲೇಖಿಸಿದರು.
ಸುಳ್ಯ, ಪುತ್ತೂರು ಮತ್ತು ಕಾರ್ಕಳದಲ್ಲಿ ಆರಂಭಿಕ ಗೊಂದಲಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತ, ಎಲ್ಲ ಕಡೆಗಳಲ್ಲೂ ಸೂಕ್ತ ಕಾರ್ಯತಂತ್ರಗಳೊಂದಿಗೆ ಪಕ್ಷದ ಅಧಿಕೃತ ಅಭ್ಯರ್ಥಿಗಳೇ ಗೆದ್ದು ಬರುವಂತೆ ಮಾಡಲಾಗುವುದು ಎಂದರು.
ಜಗದೀಶ್ ಶೆಟ್ಟರ್ ಅವರಂತಹ ಹಿರಿಯ ನಾಯಕರು ದುಡುಕಿ ನಿರ್ಧಾರ ತೆಗೆದುಕೊಳ್ಳಬಾರದಿತ್ತು. ಅವರು ಪಕ್ಷ ತೊರೆದು ಕಾಂಗ್ರೆಸ್ ಸೇರಿದ ಹಿನ್ನೆಲೆಯಲ್ಲಿ ಸರಿಯಾದ ಕಾರ್ಯತಂತ್ರವನ್ನು ಅನುಸರಿಸಿ, ಅಲ್ಲಿ ಪಕ್ಷದ ಗೆಲುವನ್ನು ಖಾತ್ರಿಪಡಿಸಲಾಗುವುದು ಎಂದು ಕ್ಯಾಪ್ಟನ್ ಕಾರ್ಣಿಕ್ ನುಡಿದರು.
ಹೊಸಮುಖಗಳನ್ನು ಪರಿಚಯಿಸುವ ಪ್ರಯತ್ನವೆಂದರೆ ಹಳೆಯ ನಾಯಕರನ್ನು ಬದಿಗೆ ಸರಿಸುತ್ತೇವೆ ಎಂದಲ್ಲ. ಹಳೆಬೇರು- ಹೊಸಚಿಗುರು ಎರಡನ್ನೂ ಸರಿದೂಗಿಸಿಕೊಂಡು ಪಕ್ಷವನ್ನು ಮತ್ತೊಂದು ಹಂತಕ್ಕೆ ಬೆಳೆಸುವುದು ಗುರಿ. ಆ ದಿಕ್ಕಿನಲ್ಲಿ ವರಿಷ್ಠರು ಮತ್ತು ಕಾರ್ಯಕರ್ತರೆಲ್ಲರೂ ಸೇರಿ ಕೆಲಸ ಮಾಡುತ್ತೇವೆ.
-ಕ್ಯಾಪ್ಟನ್ ಗಣೇಶ್ ಕಾರ್ಣಿಕ್
ಪುತ್ತೂರಿನಲ್ಲಿ ಪ್ರಸ್ತುತ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಅರುಣ್ ಪುತ್ತಿಲ ಅವರು ಎಲ್ಲಿಯೂ ತಾವು ಬಿಜೆಪಿ ವಿರೋಧಿ ಎಂದು ಹೇಳಿಲ್ಲ. ಸಹಜವಾಗಿಯೇ ಪಕ್ಷದ ಟಿಕೆಟ್‌ನ ಆಕಾಂಕ್ಷೆಯಲ್ಲಿದ್ದ ಅವರು ಒಂದಷ್ಟು ನೊಂದಿದ್ದು, ಸ್ವತಂತ್ರವಾಗಿ ಸ್ಪರ್ಧಿಸುವ ಚಿಂತನೆ ನಡೆಸಿದ್ದಾರೆ. ನಾಮಪತ್ರ ಹಿಂತೆಗೆದುಕೊಳ್ಳುವ ದಿನದ ವರೆಗೂ ಕಾದು ನೋಡೋಣ. ನಮಗೆ ಭರವಸೆ ಇದೆ.
-ಕ್ಯಾಪ್ಟನ್ ಗಣೇಶ್ ಕಾರ್ಣಿಕ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ