ಹುತ್ತಗಳು ತೋಟಗಳಲ್ಲಿ ಅಂದರೆ ನೀರಿನ ತೇವಾಂಶವಿರುವ ಸ್ಥಳಗಳಲ್ಲಿ ಬೆಳೆದು ನಿಲ್ಲುತ್ತವೆ. ಇವು ಎಲ್ಲಾ ಕಾಲದಲ್ಲೂ ಬೆಳೆಯುವಂತವುಗಳಾಗಿದೆ. ಇರುವೆಯಂತೆ ಕಾಣುಡುವ ಗೆದ್ದಲು ಜಾತಿಯ ಹುಳುಗಳು ಇದನ್ನು ನಿರ್ಮಿಸುತ್ತವೆ. ಈ ಹುಳುಗಳು ಮರಣ ಹೊಂದಿದ ಸಸ್ಯಜನ್ಯ ವಸ್ತುಗಳನ್ನು ತನ್ನ ಆಹಾರವಾಗಿಸಿಕೊಂಡು ಬದುಕುತ್ತವೆ. 4000ಕ್ಕೂ ಮಿಕ್ಕಿದ ಗೆದ್ದಲು ಹುಳುಗಳ ಪ್ರಬೇಧವನ್ನು ಗುರುತಿಸಲಾಗಿದೆ. ಇವುಗಳೇ ಹುತ್ತ ಎಂಬ ಒಂದು ರೀತಿಯ ಮಣ್ಣಿನ ಗೋಪುರವನ್ನು ನಿರ್ಮಿಸುತ್ತವೆ. ಗೆದ್ದಲು ಹುಳುಗಳನ್ನು ಸಂಸ್ಕೃತದಲ್ಲಿ ಕಾಷ್ಟಹರಿಕ {ಒಣಮರ ಅಥವಾ ಕಟ್ಟಿಗೆ ತಿನ್ನುವ ಹುಳುಗಳು} ವೆಂದೂ, ಹುತ್ತವನ್ನು ವಲ್ಮೀಕವೆಂದೂ ಕರೆಯಲಾಗುತ್ತದೆ. ಗೆದ್ದಲುಗಳು ಸುಮಾರು 200 ದಶಗಳಷ್ಟು ಹಿಂದೆಯೇ ಉದ್ಭವಿಸಿದ್ದವು. ಗೆದ್ದಲುಗಳು ಸಾಮಾನ್ಯವಾಗಿ ಸಂಘ ಜೀವಿಗಳು. ಆಂಗ್ಲ ಭಾಷೆಯಲ್ಲಿ ಇವುಗಳನ್ನು ಟರ್ಮೈಟ್ಸ್ ಎಂದು ಕರೆಯಲಾಗುತ್ತದೆ. ಇದರ ಮತ್ತೊಂದು ಸಾಮಾನ್ಯ ಹೆಸರೆಂದರೆ ವೈಟ್ ಆಂಟ್ಸ್ ಅಥವಾ ಬಿಳಿ ಇರುವೆಗಳು. ಆದರೆ ಈ ಹೆಸರು ಗೆದ್ದಲುಗಳಿಗೆ ಅನ್ವಯವಾಗುವುದಿಲ್ಲ, ಯಾಕೆಂದರೆ ಇವುಗಳು ಮಾಸಲು ಬಿಳುಪಿನಿಂದ ಹಳದಿ ಕಂದು ಬಣ್ಣದ ವರೆಗೆ ಇರುವುದರಿಂದ ಇವುಗಳು ಇರುವೆ ಗುಂಪಿಗೆ ಸೇರುವುದಿಲ್ಲ. ಕೀಟಗಳ ಸಾಮಾನ್ಯ ವಿಕಾಸದಲ್ಲಿ ಗೆದ್ದಲುಗಳ ಸ್ಥಾನ ಇರುವೆಗಿಂತಲೂ ಪೂರ್ವದ್ದು. ಇದು ತಮ್ಮ ಜೀವನದ ಬೆಳವಣಿಗೆ ಹಂತದಲ್ಲಿ ಅಪೂರ್ಣ ರೂಪಾಂತರವುಳ್ಳ ಆದಿಕಾಲದ ಐಸಾಪ್ಟೆರಾ {ಸಮಪಕ್ಷೀಯ} ಗಣಕ್ಕೆ ಸೇರಿವೆ. ಗೆದ್ದಲಿನ ಹತ್ತಿರದ ಸಂಬಂಧಿ ಎಂದರೆ ಜಿರಳೆಗಳು.
ಪ್ರಬೇಧಗಳು:
ಗೆದ್ದಲು ಉಷ್ಣ ಹಾಗೂ ಸಮಶೀತೋಷ್ಣ ವಲಯದಲ್ಲಿ ಜೀವಿಸುವ ಕೀಟಗಳು. ಗೆದ್ದಲಿನ ಅನೇಕ ಪ್ರಬೇಧಗಳು ಉಷ್ಣವಲಯದ ಮಳೆ ಅಶ್ರಿತ ಅರಣ್ಯ ಪ್ರದೇಶಗಳಲ್ಲಿ ವ್ಯಾಪಿಸಿವೆ. ಏಷ್ಯಾ ಖಂಡದಲ್ಲೂ ಹೆಚ್ಚಿನ ಪ್ರಬೇಧಗಳನ್ನು ಗುರುತಿಸಲಾಗಿದೆ. ಈ ವರೆಗೆ 2600ಕ್ಕೂ ಹೆಚ್ಚಿನ ಗೆದ್ದಲು ಪ್ರಬೇಧಗಳನ್ನು ಗುರುತಿಸಲಾಗಿದ್ದು, ಇವುಗಳನ್ನು 6 ಕುಟುಂಬಗಳಾಗಿ ವಿಂಗಡಿಸಲಾಗಿದೆ.
1. ಮ್ಯಾಸ್ಟ್ರೋಟರ್ಮೈಟಿಡಿ
2. ಕ್ಯಾಲೋಟರ್ಮೈಟಿಡಿ
3. ಟರ್ಮೊಪ್ಸಿಡಿ
4. ಹೊಡೊಟರ್ಮೈಟಿಡಿ
5. ರೈನೋ ಟರ್ಮೈಟಿಡಿ
ಎಂಬ 5 ಗುಂಪುಗಳಾಗಿ ವಿಂಗಡಿಸಲಾಗಿದೆ.
ಆಹಾರ
ಗೆದ್ದಲುಗಳ ಆಅಹಾರ ಸೇವನೆಯಲ್ಲಿ ಎರಡು ವಿಧಗಳವೆ. ಕೆಲಸಗಾರ ಗೆದ್ದಲೇ ಗಿಡ ಮರಗಳ ತೊಗಟೆಯನ್ನು ಕೆರೆದು ತೆಗೆದು ಸ್ವತಃ ತಿನ್ನುವುದೇ ಅಲ್ಲದೆ ಗೂಡಿನಲ್ಲಿರುವ ಇತರ ಕೆಲಸಗಾರ ಗೆದ್ದಲಿಗೆ ಒದಗಿಸುತ್ತವೆ. ಇನ್ನೊಂದು ವಿಧವೆಂದರೆ, ಮರಿಹುಳು, ಅಪ್ಸರೆಗಳು, ಸೈನಿಕ ಗೆದ್ದಲು ಮತ್ತು ಸಂತಾನೋತ್ಪಾದಕರುಗಳಿಗೆ ಆಹಾರವನ್ನು ಸ್ವತಃ ದೊರಕಿಸಿಕೊಂಡು ತಿನ್ನುವ ಚೈತನ್ಯವಿರುವುದಿಲ್ಲ.
ಕೆಲಸಗಾರ ಗೆದ್ದಲು:
ಕೆಲಸಗಾರ ಗೆದ್ದಲು ಸಣ್ಣ 3- 5 ಮಿ.ಮೀ. ಉದ್ದ, 2- 3 ಮಿ.ಮೀ. ಅಗಲ, ಮಾಸಲು ಬಣ್ಣ ಕಂದು ಬಣ್ಣದ ತಲೆ ಸಂಯುಕ್ತ ಕಣ್ಣುಗಳಲ್ಲಿ, ಕುಡಿಮೀಸೆ ಮಣಿಯಂತೆ, ಸಸ್ಯಗಳನ್ನು ಕಚ್ಚಲು ಬಾಯಿ ಭಾಗಗಳು ಮಾರ್ಪಾಟಾಗಿವೆ. ವಸಾಹತುವಿನಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿರುತ್ತವೆ. ಇವುಗಳಿಗೆ ಕೆಲಸದೊಂದೇ ಚಿಂತೆ. ಸೈನಿಕಗೆದ್ದಲು ಗಾತ್ರದಲ್ಲಿ ಕೆಲಸಗಾರರಿಗೆ ಹೋಲಿಕೆ ಇದ್ದರೂ ತಲೆ ದಪ್ಪ, ಬಲಿಷ್ಠ ದವಡೆ ಹಲ್ಲುಗಳು ದೊಡ್ಡದಾಗಿ ಮೊನಚಾಗಿವೆ. ವಸಾಹತುವಿಗೆ ಯಾವುದಾದರೂ ಶತ್ರು ಪ್ರಾಣಿಗಳು ಪ್ರವೇಶಿಸಿದರೆ ತಕ್ಷಣ ಕುಡಿಮೀಸೆ ಮತ್ತು ತಲೆಯನ್ನು ಮೇಲಕ್ಕೆತ್ತಿ ಭಯಾನಕ ಭಂಗಿಯನ್ನು ತಾಳಿ ಗೂಡಿನೊಳಗೆ ಬರುವಂತಹ ಶತೃಗಳನ್ನು ತಮ್ಮ ದವಡೆ ಹಲ್ಲುಗಳಿಂದ ಕಚ್ಚಿ ಹಿಡಿಯುತ್ತವೆ. ನಾಸುಟಿ ಟರ್ಮೈಟಿಸಿ ಉಪಕುಟುಂಬದ ಗೆದ್ದಲಿನ ಪ್ರಬೇಧಗಳಲ್ಲಿ ಸೈನಿಕರಲ್ಲಿ ಕವಡೆ ಹಲ್ಲುಗಳಿಗೆ ಬದಲು ತಲೆಯ ತುದಿ ಮುಂದಕ್ಕೆ ಚಾಚಿರುವ ಕೊಳವೆಯಂತಹ ಮೂತಿಯಿಂದ ಒಂದು ಬಗೆಯ ತೀಕ್ಷ್ಣವಾದ ದ್ರವವನ್ನು ಹೊರಸೂಸಿ ಶತೃಗಳನ್ನು ಹಿಮ್ಮೆಟ್ಟಿಸುತ್ತವೆ.
ಸೈನಿಕ ಗೆದ್ದಲು:
ಸೈನಿಕ ಗೆದ್ದಲಿಗೆ ತಮ್ಮ ವಸಾಹತುವಿನ ಕಾವಲಿನದೊಂದೇ ಚಿಂತೆ. ಕೆಲಸಗಾರ ಗೆದ್ದಲು ಅತ್ಯಂತ ಶಿಸ್ತು ಮತ್ತು ಜವಾಬ್ದಾರಿಯಿಂದ ವಸಾಹತುವಿನ ಏಳಿಗೆಗಾಗಿ ದುಡಿಯುತ್ತವೆ. ಇವು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಅನೇಕ ಕೆಲಸಗಳನ್ನು ಮೊಟ್ಟೆ ಮರಿಗಳನ್ನು ವಿಶೇಷವಾದ ಗೂಡುಗಳಲ್ಲಿಟ್ಟು ಸಾಕುವುದು ರಾಜ, ರಾಣಿ ಮತ್ತು ಮರಿಗಳಿಗೆ ಆಹಾರವನ್ನು ತಿನ್ನಿಸುವುದು. ಗೂಡುಗಳ ನಿರ್ಮಾಣ, ರಿಪೇರಿ ಮತ್ತು ಸ್ವಚ್ಛತೆ ಗೂಡುಗಳಲ್ಲಿ ಸಹಜೀವಿ ಶಿಲೀಂದ್ರ ತೋಟಗಳನ್ನು ಬೆಳೆಸುವುದು. ಗೂಡಿನಿಂದ ಸುರಂಗಗಳನ್ನು ತೋಡಿ ಆಹಾರವನ್ನು ಗುರ್ತಿಸಿ ನಂತರ ಸಾಗಿಸುವುದು. ಸಾಮಾನ್ಯವಾಗಿ ಆಹಾರವನ್ನು ಸತತವಾಗಿ ಸಾಗಿಸುವ ಸಲುವಾಗಿ ತೆಳುವಾದ ಮಣ್ಣಿನ ಪೊರೆಯನ್ನು ಆಹಾರದ ಮೇಲೆ ಕಟ್ಟಿ ನಂತರ ಸಾಗಿಸುತ್ತವೆ. ಮಳೆಗಾಲ ಕಳೆದ ನಂತರ ಮರಗಳ ಮೇಲೆ, ಹುಲ್ಲಿನ ಮೇಲೆ, ಗಿಡಗಳಲ್ಲಿ, ತರಗೆಲೆ, ಸಗಣಿ ಮುಂತಾದ ಸಾವಯವ ವಸ್ತುಗಳ ಮೇಲೆ ಗೆದ್ದಲಿನಿಂದ ಕೂಡಿರುವ ಮಣ್ಣಿನ ಪೆÇರೆಯನ್ನು ನೋಡಬಹುದು.
ಗೂಡುಗಳನ್ನು ಕಟ್ಟುವಾಗ, ರಿಪೇರಿ ಮಾಡುವಾಗ ಆಹಾರವನ್ನು ಹುಡುಕಿ ಸಾಗಿಸುವಾಗ, ರೆಕ್ಕೆಹುಳು ಗೂಡಿನಿಂದ ಹೊರಗೆ ಬರುವಾಗ ಒಂದು ನಿರ್ದಿಷ್ಟ ಅಂತರದ ದೂರದಲ್ಲಿ ಸೈನಿಕರಂತೆ ಕಾವಲಿದ್ದು ಗೆದ್ದಲನ್ನು ಶತ್ರುಗಳಿಂದ ರಕ್ಷಿಸುತ್ತವೆ. ಗೂಡಿನ ಪ್ರತಿಭಾಗದಲ್ಲಿ ನಿಂತು ಪಹರೆ ತಿರುಗುತ್ತಾ ಶತ್ರುಗಳು ಗೂಡಿನೊಳಗೆ ನುಗ್ಗದಂತೆ ತಡೆಯುತ್ತವೆ.
ಅನೇಕ ವೈವಿಧ್ಯತೆಯನ್ನೊಳಗೊಂಡಿರುವ ಟರ್ಮೈಟಿಡಿ ಕುಟುಂಬದ ಮ್ಯಾಕ್ರೊಟರ್ಮೈಟಿನಿ ಮತ್ತು ನಾಸುಟಿ ಟರ್ಮೈಟಿನಿ ಉಪಕುಟುಂಬದ ಪ್ರಭೇದಗಳು ಅನೇಕ ವಿಶೇಷ ಬಗೆಯಲ್ಲಿ ತಮ್ಮದೇ ಆದ ವಿನ್ಯಾಸದಲ್ಲಿ ಗೂಡುಗಳನ್ನು ಕಟ್ಟುತ್ತವೆ. ಸಾಮಾನ್ಯವಾಗಿ ಅರಣ್ಯಪ್ರದೇಶಗಳಲ್ಲಿ ಬೃಹದಾಕಾರವಾಗಿ ಹುತ್ತಗಳನ್ನು ನಿರ್ಮಿಸುತ್ತವೆ. ಆಫ್ರಿಕಾ, ಆಸ್ಟ್ರೇಲಿಯ, ಉತ್ತರ ಅಮೆರಿಕಾ, ಭಾರತ ಪ್ರಾಂತ್ಯಗಳಲ್ಲಿ ಪ್ರವಾಸಿಗಳನ್ನು ವಿಶೇಷವಾಗಿ ಆಕರ್ಷಿಸುವಂತಹ ಹುತ್ತಗಳನ್ನು ಕಟ್ಟುತ್ತವೆ. ಗೂಡುಗಳ ಒಳಗೆ ಮತ್ತು ಹೊರಗೆ ಅತ್ಯುನ್ನತ ಮಟ್ಟದಲ್ಲಿ ಶಿಲ್ಪಕಲೆಯನ್ನು ಅಳವಡಿಸಿ ಹುತ್ತಗಳನ್ನು ನಿರ್ಮಿಸುತ್ತವೆ.
ಗೆದ್ದಲು ಹುತ್ತ:
ಮ್ಯಾಕ್ರೊಟರ್ಮೈಟಿನಿ ಉಪಕುಟುಂಬದಲ್ಲಿರುವ ಒಡೊಂಟೊಟರ್ಮಿಸ ಮಿಕ್ರೊಟರ್ಮಿಸ ಮತ್ತು ಮ್ಯಾಕ್ರೊಟರ್ಮಿಸ ಜಾತಿಯ ಗೆದ್ದಲಿನ ಪ್ರಬೇಧಗಳು ಗೂಡುಗಳಲ್ಲಿ ಶಿಲೀಂದ್ರ ತೋಟಗಳನ್ನು ಸಹಜೀವಿಗಳಾಗಿ ಬೆಳೆಸುತ್ತವೆ. ಗೆದ್ದಲಿನ ಹಿಕ್ಕೆಗಳನ್ನು ಗೂಡುಗಳಲ್ಲಿ ಸಂಗ್ರಹಿಸಿ ಅವುಗಳ ಮೇಲೆ ಶಿಲೀಂದ್ರ ತಂತುಜಾಲವನ್ನು ಬೆಳೆಸಿ ತಮ್ಮ ಲಾಲಾರಸದಿಂದ ಸ್ಪಂಜಿನಂತಹ ಮೆತ್ತನೆಯ ಶಿಲೀಂದ್ರ ತೋಟಗಳನ್ನು ನಿರ್ಮಿಸುತ್ತವೆ. ಶಿಲೀಂದ್ರ ತೋಟಗಳ ಮೇಲೆ ಬಿಳುಪಾದ ಶಿಲೀಂದ್ರ ಬೀಜಾಣು ಸೂಕ್ಷ್ಮಜೀವಿಗಳು ಬೆಳೆಯುತ್ತವೆ. ಇದನ್ನು ಗೆದ್ದಲು ಆಹಾರವಾಗಿ ಉಪಯೋಗಿಸುತ್ತದೆ.
ಈ ಸಹಜೀವಿ ಶಿಲೀಂದ್ರ ತೋಟಗಳಿಂದ ಗೆದ್ದಲು ಅನೇಕ ಅನುಕೂಲಗಳನ್ನು ಪಡೆಯುತ್ತದೆ.
ವಸಾಹತುವಿನ ಗೆದ್ದಲಿನ ಬೆಳೆವಣಿಗೆಗೆ ಬೇಕಾದ ಜೀವಸತ್ವಗಳು ಮತ್ತು ಪೋಷಕಾಂಶಗಳು ಶಿಲೀಂದ್ರ ತೋಟಗಳಲ್ಲಿರುವುದರಿಂದ ಮರಿಗಳ ಆಹಾರವಾಗಿ ಉಪಯೋಗಿಸುತ್ತವೆ. ಮೊಟ್ಟೆಗಳ ಕಾವಿಗೆ ಹಾಗೂ ಮರಿಗಳನ್ನು ಶಿಲೀಂದ್ರ ತೋಟದ ಸಣ್ಣ ಸಣ್ಣ ಗುಣಗಳಲ್ಲಿಟ್ಟು ಸಾಕಲು ಸಹಾಯಕವಾಗಿವೆ. ಶಿಲೀಂದ್ರ ತೋಟಗಳು ಸ್ಪಂಜಿನಂತಿರುವುದರಿಂದ ಗೂಡಿನಲ್ಲಿ ತೇವಾಂಶವನ್ನು ಹಿಡಿದಿಟ್ಟುಗೊಂಡಿದ್ದು ಹೆಚ್ಚಿನ ಸಂಖ್ಯೆಯ ಉಸಿರಾಟದಿಂದಾಗಿ ಇಂಗಾಲದ ಡೈ ಆಕ್ಸೈಡ್ ನಿರ್ಮಾಣಗೊಂಡು ವಸಾಹತುವಿಗೆ ಬೇಕಾಗಿರುವ ಒಂದು ನಿರ್ದಿಷ್ಟ ಉಷ್ಣಾಂಶ ಮತ್ತು ಶೈತ್ಯಾಂಶದ ಹವಾನಿಯಂತ್ರಣದ ವ್ಯವಸ್ಥೆಯಾಗುತ್ತದೆ.
ಕೆಲವು ಶಿಲೀಂದ್ರಗಳನ್ನು ಬೆಳೆಸದೇ ಇರುವ ಹುತ್ತಗಳನ್ನು ನಿರ್ಮಾಣ ಮಾಡುವ ಗೆದ್ದಲುಗಳು ಆಹಾರದ ಚೂರುಗಳನ್ನೇ ಗೂಡುಗಳಲ್ಲಿಟ್ಟು ಅನೇಕ ಅನುಕೂಲಗಳನ್ನು ಪಡೆಯುತ್ತವೆ. ನಾಸುಟಿಟರ್ಮೈಟಿನಿ ಉಪಕುಟುಂಬಕ್ಕೆ ಸೇರಿರುವ ಗೆದ್ದಲಿನ ಪ್ರಬೇಧಗಳೂ ಸಹ ಭೂಮಿಯೊಳಗೆ ಮತ್ತು ಮರಗಳ ಮೇಲೆ ವಿಶೇಷವಾದ ಗೂಡುಗಳನ್ನು ಕಟ್ಟುತ್ತವೆ. ಆಫ್ರಿಕಾದಲ್ಲಿ ಟ್ರೈನರ್ವಿ ಟರ್ಮಿಸ ಜಾತಿಯ ಪ್ರಬೇಧಗಳು ಸಣ್ಣ ಸಣ್ಣ ಹುತ್ತಗಳನ್ನು ನಿರ್ಮಿಸಿ ಗೂಡುಗಳಲ್ಲಿ ಹುಲ್ಲನ್ನು ಶೇಖರಿಸಿ ವಸಾಹತುವಿಗೆ ಬೇಕಾಗಿರುವ ಎಲ್ಲಾ ಅನುಕೂಲತೆಗಳನ್ನು ಪಡೆಯುತ್ತದೆ. ಭಾರತದಲ್ಲಿರುವ ನಾಸುಟಿಟರ್ಮಿಸ ಜಾತಿಯ ಪ್ರಬೇಧಗಳು ತಮ್ಮ ಹಿಕ್ಕೆಗಳನ್ನು ಸಂಗ್ರಹಿಸಿ ಲಾಲಾರಸವನ್ನು ಬೆರೆಸಿ ಎಲ್ಲಾ ಗೆದ್ದಲುಗಳಿಗೆ ಸ್ಥಳಾವಕಾಶವನ್ನು ಒದಗಿಸುವಂತಹ ಗೋಳಾಕಾರದ ಸಾಮಾನ್ಯ ಗಾತ್ರದ ಗೂಡುಗಳನ್ನು ಕಾಡುಮರಗಳ ಮೇಲೆ ಕಟ್ಟಿ ಕೊಳವೆಯಂತಹ ಸುರಂಗ ಮಾರ್ಗಗಳನ್ನು ಮಾಡಿ ಆಹಾರವನ್ನು ಸತತವಾಗಿ ಗೂಡಿಗೆ ಸಾಗಿಸುತ್ತವೆ.
ವಿಶ್ವದಲ್ಲಿ ವಿಸ್ತಾರವಾಗಿರುವ ಅನೇಕ ಗೆದ್ದಲಿನ ಜಾತಿಗಳಲ್ಲಿ ಭಾರತದ ಒಡೊಂಟೊ ಟರ್ಮಿಸ್, ಆಫ್ರಿಕಾದ ಮ್ಯಾಕ್ರೊಟರ್ಮಿಸ್, ಟ್ರೈನರ್ವಿಟರ್ಮಿಸ್, ಕ್ಯೂಬಿಟರ್ಮಿಸ್ ಮತ್ತು ಏಪಿಕೊಟರ್ಮಿಸ್, ಆಸ್ಟ್ರೇಲಿಯಾದ ಏಮಿಟರ್ಮಿಸ್ ನಾಸುಟಿ ಟರ್ಮಿಸ್ ಮತ್ತು ಕೋಪ್ಟೊ ಟರ್ಮಿಸ್ ಮತ್ತು ದಕ್ಷಿಣ ಅಮೆರಿಕಾದ ಅನೊಪ್ರೊಟರ್ಮಿಸ್ ಮತ್ತು ಸೈನಟರ್ಮಿಸ್ ಮುಖ್ಯವಾದವು.
-ಕಾರ್ತಿಕ್ ಕುಮಾರ್ ಕೆ.
ದುರ್ಗಾನಿಲಯ ಕಡೆಕಲ್ಲು
ಏತಡ್ಕ 671557
ಮೊ:+91-9778243146
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ