ಮಂಗಳೂರು: ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಮಾಧ್ಯಮದ ಕೊಡುಗೆ ಅಮೂಲ್ಯವಾದುದು. ಎಷ್ಟೋ ಬಾರಿ ಚುನಾವಣಾ ಅಕ್ರಮಗಳು ಬಯಲಿಗೆ ಬರಲು ಮಾಧ್ಯಮಗಳೇ ಕಾರಣ. ಆದರೂ ಭಾರತೀಯ ಚುನಾವಣಾ ಆಯೋಗ ಹಾಗಿರುವ ಲಕ್ಷ್ಮಣ ರೇಖೆಯನ್ನೂ ಪತ್ರಕರ್ತರೂ ಮೀರುವಂತಿಲ್ಲ ಎಂದು ದಕ್ಷಿಣ ಜಿಲ್ಲಾ ವಾರ್ತಾಧಿಕಾರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರವಿರಾಜ್ ಹೆಚ್ ಜಿ ಹೇಳಿದರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಪತ್ರಿಕೋದ್ಯಮ ವಿಭಾಗ, ಮಾಧ್ಯಮ ವೇದಿಕೆ, ಐಕ್ಯೂಎಸಿ ಸಹಯೋಗದೊಂದಿಗೆ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 'ಚುನಾವಣಾ ಸಂದರ್ಭದಲ್ಲಿ ಮಾಧ್ಯಮ ಸಂಸ್ಥೆಗಳ ಜವಾಬ್ದಾರಿಗಳುʼ ಎಂಬ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಮಾಧ್ಯಮ ಪ್ರಮಾಣೀಕರಣ ಮತ್ತು ಮೇಲ್ವಿಚಾರಣಾ ಸಮಿತಿ (ಎಂಸಿಎಂಸಿ) ಮತ್ತು ಮಾಧ್ಯಮ ಮೇಲ್ವಿಚಾರಣಾ ಕೋಶಗಳು (ಎಂಎಂಸಿ) ಚುನಾವಣೆಯ ಸಂದರ್ಭದಲ್ಲಿ ಸ್ಥಳೀಯ ಮಾಧ್ಯಮದಿಂದ ಹಿಡಿದು ಅಂತಾರಾಷ್ಟ್ರೀಯ ಮಾಧ್ಯಮದವರೆಗೆ, ಮುದ್ರಣ ಮಾಧ್ಯಮದಿಂದ ಸಾಮಾಜಿಕ ಮಾಧ್ಯಮದವರೆಗೆ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿರುತ್ತವೆ. ಜನರ ಹಾದಿತಪ್ಪಿಸುವ ಪಾವತಿ ಸುದ್ದಿ ಪ್ರಸಾರ ಮಾಡಿದರೆ ದಂಡದ ಜೊತೆಗೆ ಜೈಲುಶಿಕ್ಷೆ ವಿಧಿಸಲಾಗುತ್ತದೆ ಎಂದರು.
ಚುನಾವಣೆಗೆ 48 ಗಂಟೆಗಳಿರುವಾಗಿನಿಂದ ಯಾವುದೇ ಮತ ಬೇಡುವ ಜಾಹೀರಾತು, ವಿಶ್ಲೇಷಣೆಗಳಿಗೆ ಅವಕಾಶವಿಲ್ಲ. ಮತ ಎಣಿಕೆಯ ಸಂದರ್ಭದಲ್ಲಿಯೂ ಮಾನ್ಯತೆ ಪಡೆದ ಪತ್ರಕರ್ತರೂ ಮಾಧ್ಯಮ ಕೇಂದ್ರದಿಂದ ಮಾತ್ರ ಮಾಹಿತಿ ಸಂಗ್ರಹಿಸಬಹುದಾಗಿದೆ. ಇಷ್ಟಾದರೂ ಮತದಾನದ ಕುರಿತು ಜಾಗೃತಿ ಮೂಡಿಸುವಲ್ಲಿ ಮಾಧ್ಯಮದ ಪಾತ್ರ ದೊಡ್ಡದು. ಇದಕ್ಕಾಗಿಯೇ ಈ ಬಾರಿ ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಚುನಾವಣಾ ಕಾರ್ಯ ನಿರ್ವಹಿಸುತ್ತಿರುವ ಪತ್ರಕರ್ತರಿಗೆ ಅಂಚೆ ಮತದಾನ ಮಾಡುವ ಅವಕಾಶವನ್ನು ಆಯೋಗ ನೀಡಿದೆ ಎಂದು ಅವರು ಹೇಳಿದರು.
ಇದೇ ವೇಳೆ ಅವರು ಪತ್ರಿಕೋದ್ಯಮ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಪ್ರಾಂಶುಪಾಲೆ ಡಾ. ಅನಸೂಯ ರೈ, ಚುನಾವಣೆಯ ಕುರಿತು ಜಾಗೃತಿ ಮೂಡಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು. ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಡಾ. ಶಾನಿ ಕೆ ಆರ್, ಚುನಾವಣೆಯೆಂದ ದೊಡ್ಡ ಪ್ರಕ್ರಿಯೆಗೆ ಪತ್ರಕರ್ತರೂ ಸೇರಿದಂತೆ ನಾಗರೀಕರೆಲ್ಲರೂ ಸಹಕರಿಸುವುದು ಅತ್ಯಗತ್ಯ ಎಂದು ಅಭಿಪ್ರಾಯಪಟ್ಟರು.
ಪತ್ರಿಕೋದ್ಯಮ ವಿದ್ಯಾರ್ಥಿ ಅಕ್ಷಿತ್ ಕಾರ್ಯಕ್ರಮ ನಿರೂಪಿಸಿದರು. ಶೈನಿತಾ ಅತಿಥಿಗಳನ್ನು ಸ್ವಾಗತಿಸಿದರೆ, ವಿಧಿಶ್ರೀ ಧನ್ಯವಾದ ಸಮರ್ಪಿಸಿದರು. ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕರಾದ ಡಾ. ಸೌಮ್ಯ, ಗುರುಪ್ರಸಾದ್ ಟಿ ಎನ್, ಆಂಗ್ಲ ವಿಭಾಗದ ಶ್ರೀಪ್ರಜ್ಞಾ, ಪತ್ರಿಕೋದ್ಯಮ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ