ಆಳ್ವಾಸ್ ಕಾಲೇಜಿನಲ್ಲಿ ನಿವೃತ್ತ ಸೇನಾಧಿಕಾರಿ ಮೇಜರ್ ಜನರಲ್ ಜಿ.ಡಿ. ಭಕ್ಷಿ
ಮಿಜಾರು (ಮೂಡುಬಿದಿರೆ): ‘ತ್ಯಾಗ, ಬದ್ಧತೆಯಿಂದ ದೇಶದ ಭದ್ರತೆ ಸಾಧ್ಯ’ ಎಂದು ನಿವೃತ್ತ ಸೇನಾಧಿಕಾರಿ ಮೇಜರ್ ಜನರಲ್ ಜಿ.ಡಿ. ಭಕ್ಷಿ ಹೇಳಿದರು.
ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನಲ್ಲಿ ಸೋಮವಾರ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ‘ರೋಸ್ಟ್ರಂ - ದಿ ಸ್ಪೀಕರ್ಸ್ ಕ್ಲಬ್’ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸದಲ್ಲಿ ‘ದೇಶದ ಭದ್ರತೆ- ದೇಶಪ್ರೇಮ ಮತ್ತು ರಾಷ್ಟ್ರೀಯತೆ’ ಕುರಿತು ಅವರು ಮಾತನಾಡಿದರು.
‘ಭದ್ರತೆ ಎಂದರೆ ಸೇನೆ ನಡೆಸುವ ಕಾರ್ಯಾಚರಣೆ ಮಾತ್ರವಲ್ಲ, ಅದು ಹಲವಾರು ಆಯಾಮಗಳನ್ನು ಒಳಗೊಂಡಿರುತ್ತದೆ. ಬಾಹ್ಯ ದಾಳಿಯಷ್ಟೇ ಆಂತರಿಕ ರಕ್ಷಣೆಯೂ ಮುಖ್ಯ’ ಎಂದು ಬಾಂಗ್ಲ ವಿಮೋಚನೆ, ಕಾರ್ಗಿಲ್ ಮತ್ತಿತರ ಯುದ್ಧಗಳಲ್ಲಿ ಪಾಲ್ಗೊಂಡಿದ್ದ ಭಕ್ಷಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ದೇಶದ ರಕ್ಷಣೆಯು ಪ್ರಾಯೋಗಿಕ ಹೋರಾಟ. ಯುದ್ಧಭೂಮಿಗೆ ಇಳಿದ ಬಳಿಕ ಕೊಲ್ಲು ಅಥವಾ ಸಾವು ಅಂತಿಮವೇ ಹೊರತು, ಅರ್ಧದಿಂದ ವಾಪಸ್ ಬರುವ ಮಾತಿಲ್ಲ ಎಂದರು.
ದೇಶದ ಭದ್ರತೆಗೆ ನಗರಗಳಲ್ಲಿ ಸೇನೆ ನಿಯೋಜಿಸುವ ಬದಲಾಗಿ ನಾಗರಿಕರೇ ಸೇನಾನಿಗಳಂತೆ ದೇಶದ ಐಕ್ಯತೆಗೆ ಕಟಿಬದ್ಧರಾಗಬೇಕು. ದೇಶಪ್ರೇಮದಿಂದ ಸ್ಪಂದಿಸಬೇಕು. ಚಾಣಕ್ಯ ಹೇಳಿದಂತೆ, ದೇಶದ ಭದ್ರತೆಗೆ ಸೇನೆಗಿಂತಲೂ ಆರ್ಥಿಕತೆ ಬಹುಮುಖ್ಯ. ಆರ್ಥಿಕತೆ ಭದ್ರವಾಗಿದ್ದರೆ, ಸುಸಜ್ಜಿತ ಸೇನೆ ಹೊಂದಲು ಸಾಧ್ಯ ಎಂದರು.
ಸುಸಜ್ಜಿತ ಸೇನೆಗೆ ತಂತ್ರಜ್ಞಾನ, ವಿಜ್ಞಾನವೂ ಬೇಕು. ಇದಕ್ಕೆ ಅಗತ್ಯ ಅನುದಾನ ಅಗತ್ಯ ಎಂದ ಅವರು, ಚೀನಾ ಅತಿಹೆಚ್ಚಿನ ಅನುದಾನವನ್ನು ರಕ್ಷಣೆಗೆ ನೀಡುತ್ತಿದೆ ಎಂದು ಅಂಕಿಅಂಶ ನೀಡಿದರು. ಚೀನಾ ಹಾಗೂ ಪಾಕಿಸ್ತಾನ ಜೊತೆಗೂಡಿ ದಾಳಿ ನಡೆಸಿದರೂ ಹಿಮ್ಮೆಟ್ಟಿಸುವ ಸಾಮರ್ಥ್ಯವನ್ನು ಭಾರತ ಹೊಂದಿದೆ. ಭಾರತವು ಪ್ರಬಲ ಆರ್ಥಿಕ ಶಕ್ತಿಯಾಗುತ್ತಿದ್ದರೆ, ಇತರ ರಾಷ್ಟ್ರಗಳಿಗೆ ಆತಂಕ ಸೃಷ್ಟಿಸುತ್ತಿದ್ದ ಪಾಕಿಸ್ತಾನವು ಇಂದು ಅರಾಜಕತೆಗೆ ಸಿಲುಕಿದೆ ಎಂದರು. ಸದ್ಯ ಚೀನಾ ಭಾರತದ ಪ್ರಬಲ ಎದುರಾಳಿ. ಆದರೆ, ಜಗತ್ತು ಇಂದು ಒಂದೆಡೆ ಧ್ರುವೀಕರಣಗೊಂಡಿಲ್ಲ. ಬಹುಧ್ರುವೀಕರಣ ಹೊಂದುತ್ತಿದೆ. ಹೀಗಾಗಿ, ಶತ್ರುವಿನ ಶತ್ರು ನಮಗೆ ಮಿತ್ರನಾಗುತ್ತಾನೆ ಎಂದರು. 1979ರ ವಿಯೆಟ್ಲಾಂ ಯುದ್ಧ ಸೋತ ನಂತರ ಚೀನಾ ಸೈನಿಕರು ಬೇರೆ ಯುದ್ಧ ಮಾಡಿಲ್ಲ. ಚೀನಾವು ತೈಲಕ್ಕಾಗಿ ಇತರ ದೇಶಗಳನ್ನು ಅವಲಂಬಿಸಬೇಕಾಗಿದೆ. ಚೀನಾದ ಜಲಮಾರ್ಗವು ಭಾರತವನ್ನು ಬಳಸಿ ಹೋಗಬೇಕಾಗಿದೆ. ಇಂತಹ ಅಂಶಗಳಿಂದಾಗಿ ಚೀನಾದಿಂದ ಭಾರತವು ಬಲಿಷ್ಠವಾಗಿದೆ ಎಂದು ಬಣ್ಣಿಸಿದರು.
ರಾಷ್ಟ್ರೀಯ ಏಕತೆ ಮೂಡದಿದ್ದರೆ, ರಕ್ಷಣೆ ಕ್ಷೀಣವಾಗುತ್ತದೆ ಎಂಬುದನ್ನು ದೇಶದ ಇತಿಹಾಸದಿಂದ ಅರಿಯಬಹುದು. ಭಾರತವು ಹಿಂದೆ ಚಿನ್ನದ ಹಕ್ಕಿಯಾಗಿತ್ತು. ಈ ಚಿನ್ನವನ್ನು ವಿದೇಶಿ ದಾಳಿಕೋರರರು ಲೂಟಿ ಮಾಡಿದರು. 16ನೇ ಶತಮಾನದಲ್ಲಿ ಅಂದಿನ ರಾಜರು ಭಾರತದ ರಕ್ಷಣೆ ಮಾಡಿರುವುದು ಮಾತ್ರವಲ್ಲ, ವಿದೇಶದ ಮೇಲೆ ದಂಡೆತ್ತಿಯೂ ಹೋಗಿ ಸಾಮ್ರಾಜ್ಯ ವಿಸ್ತರಿಸಿದ್ದರು. ನಾವು ‘ಅಹಿಂಸಾ ಪರಮೋಧರ್ಮ’ ಎನ್ನುತ್ತೇವೆ. ಆದರೆ, ‘ಧರ್ಮ ರಕ್ಷಣೆಗೆ ಹಿಂಸೆಯೂ ಸಹ್ಯ’ ಎಂದು ಬ್ರಿಟೀಷರು ಸಾಮ್ರಾಜ್ಯ ವಿಸ್ತರಿಸಿದರು. ದೀಪದಿಂದ ಮಾತ್ರ ದೀಪ ಬೆಳಗಲು ಸಾಧ್ಯ. ಬೆಳಗುವ ಕಿಚ್ಚು ನಮ್ಮಲ್ಲಿ ಬರಬೇಕು ಎಂದರು.
ಉತ್ತರ ಭಾರತವು ಸತತ ದಾಳಿಗೆ ಒಳಗಾಗಿದ್ದರೆ, ದೇಶದ ಸಂಸ್ಕೃತಿಯನ್ನು ಉಳಿಸಿದ ಕೀರ್ತಿ ದಕ್ಷಿಣ ಭಾರತಕ್ಕೆ ಸಲ್ಲುತ್ತದೆ. ಭಾರತೀಯ ಸೇನೆಯು ಹೆಚ್ಚು ಸ್ವಾವಲಂಬಿಯಾಗುತ್ತಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರತೆಯ ಪರಿಕಲ್ಪನೆಯೂ ಹೌದು. ಭಾರತವನ್ನು ಟೀಕಿಸಿಕೊಂಡು, ವಿದೇಶದಲ್ಲಿ ಹೋಗಿ ನೆಲಸುವ ಕನಸು ಕಾಣುವವರು ಈಗಲೇ ದೇಶ ಬಿಡುವುದು ಉತ್ತಮ ಎಂದು ಖಡಕ್ ಎಚ್ಚರಿಕೆ ನೀಡಿದರು.
‘1971ರ ಬಾಂಗ್ಲ ವಿಮೋಚನೆ ಸಂದರ್ಭದಲ್ಲಿ ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆಯು ಉತ್ಕೃಷ್ಟ. ಅಂದು ಕೇವಲ 30 ದಿನಗಳಲ್ಲಿ ನಾವು ಪಾಕಿಸ್ತಾನವನ್ನು ಎರಡು ಮಾಡಿದ್ದೆವು. ನೀವು (ಯುವಜನತೆ) ಪಾಕಿಸ್ತಾನವನ್ನು ನಾಲ್ಕು ಮಾಡಬೇಕು’ ಎಂದು ತಮ್ಮ ಕನಸು ತೆರೆದಿಟ್ಟರು. ಯುದ್ಧ ಕೇವಲ ಸೇನೆಗೆ ಸೀಮಿತಗೊಂಡಿಲ್ಲ. ಅದು ಭೌತಿಕ, ಬೌದ್ಧಿಕ, ತಂತ್ರಜ್ಞಾನ, ಆರ್ಥಿಕ ಮತ್ತಿತರ ಆಯಾಮಗಳನ್ನು ಒಳಗೊಂಡಿದೆ. ಕೋವಿಡ್ ಸಂದರ್ಭಗಳನ್ನು ನೋಡಿದರೆ, ಚೀನಾವು ಜೈವಿಕ ಯುದ್ಧ ನಡೆಸಲೂ ಹಿಂಜರಿಯುವುದಿಲ್ಲ ಎಂದು ದೂರಿದರು. ದೇಶದ ರಕ್ಷಣೆಗೆ ಸುಸಜ್ಜಿತ ಸೇನೆಯಷ್ಟೇ ಪ್ರಬಲ ವಿರೋಧ ಪಕ್ಷವೂ ಬೇಕು. ಪ್ರಜಾತಂತ್ರ ಭದ್ರವಾಗಿದ್ದರೆ ಮಾತ್ರ ದೇಶ ಬೆಳೆಯಲು ಸಾಧ್ಯ. ವಿಭಜಕ ರಾಜಕಾರಣವು ದೇಶಕ್ಕೆ ಅಪಾಯ. ದೇಶದ ಏಕತೆಯು ರಾಜಕೀಯೇತರ ಆಗಿರಬೇಕು ಎಂದರು.
ಅಗ್ನಿವೀರ್ ಯೋಜನೆಯಲ್ಲಿ ಸೇವಾವಧಿಯನ್ನು ಏಳು ವರ್ಷಕ್ಕೆ ವಿಸ್ತರಿಸಿ, ಸೇವೆ ಸಲ್ಲಿಸಿದ ಅಗ್ನಿವೀರರಲ್ಲಿ ಶೇ 50ರಷ್ಟು ಮಂದಿಯನ್ನು ಖಾಯಂ ಮಾಡಬೇಕು . ಪಿಂಚಣಿ ಹೊರೆ ತಪ್ಪಿಸುವ ಉದ್ದೇಶಿತ ಯೋಜನೆಯು ಸೇನೆಯ ಸಮಗ್ರತೆಗೆ ಧಕ್ಕೆಯಾಗಬಾರದು ಎಂದರು. ಬಳಿಕ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ ಅವರು, ಆಳ್ವಾಸ್ ವಿದ್ಯಾರ್ಥಿಗಳ ಶಿಸ್ತು, ದೇಶದ ಕುರಿತ ಅರಿವು, ಆಸಕ್ತಿ, ಶಿಸ್ತನ್ನು ಕೊಂಡಾಡಿದರು.
ನಿವೃತ್ತ ನ್ಯಾಯಮೂರ್ತಿ ಕೃಷ್ಣ ಭಟ್, ಭಕ್ಷಿ ಅವರ ಪತ್ನಿ ಸುನಿತಾ ಭಕ್ಷಿ, ಕರ್ನಲ್ ಅಶೋಕ ಕಿಣಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಇದ್ದರು. ಪ್ರತೀಕ್ಷಾ ಜೈನ್ ನಿರೂಪಿಸಿ, ಶ್ರೇಯಾ ಪೊನ್ನಪ್ಪ ಪರಿಚಯಿಸಿ, ಶಾಲಿನಿ ಹೆಗ್ಡೆ ವಂದಿಸಿದರು.
ದೇಶಪ್ರೇಮಕ್ಕೆ ಆಳ್ವಾಸ್ ಮಾದರಿ
ದೇಶದ ಭದ್ರತೆಗೆ ಕೇವಲ ಸೈನಿಕರು ಹೋರಾಡಿದರೆ ಸಾಲದು. ದೇಶದೊಳಗಿನ ಸಮಾಜ ವಿರೋಧಿ ಚಟುವಟಿಕೆಗಳ ವಿರುದ್ಧ ನಾಗರಿಕರೂ ಸೈನಿಕರಂತೆ ಹೋರಾಡಬೇಕು ಎಂದು ಜಿ.ಡಿ. ಭಕ್ಷಿ ಕಿವಿಮಾತು ಹೇಳಿದರು.
‘ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಕೆಲವು ವಿದ್ಯಾರ್ಥಿಗಳು ರಾಷ್ಟ್ರಧ್ವಜ ಹಾರಿಸಲು ನಿರಾಕರಿಸಿದಾಗ, ನಾವು ಹೋಗಿ ಧ್ವಜ ಹಾರಿಸಿದ್ದೆವು. ಆದರೆ, ಆಳ್ವಾಸ್ ಕಾಲೇಜಿನಲ್ಲಿ ದೇಶವೇ ಹೆಮ್ಮೆ ಪಡುವಂತೆ ಗಣರಾಜ್ಯೋತ್ಸವ, ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಗುತ್ತಿರುವುದು ಶ್ಲಾಘನಿಯ ಎಂದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ