ಪುತ್ತೂರು ತಾಲೂಕು ಸ್ವೀಪ್‌ ಸಮಿತಿಯಿಂದ ಬೀದಿನಾಟಕದ ಮೂಲಕ ಮತದಾನ ಜಾಗೃತಿ

Upayuktha
0

ಚುನಾವಣೆ ಪ್ರಜಾಪ್ರಭುತ್ವದ ದೊಡ್ಡ ಹಬ್ಬ: ನವೀನ್‌ ಭಂಡಾರಿ

ಪುತ್ತೂರು: ಪ್ರಜಾಪ್ರಭುತ್ವದ ದೊಡ್ಡ ಹಬ್ಬ ಎನಿಸಿಕೊಂಡಿರುವ ಚುನಾವಣೆಯಲ್ಲಿ ಪ್ರತಿಯೊಬ್ಬ ಮತದಾರರು ಸಕ್ರಿಯವಾಗಿ ಭಾಗವಹಿಸಿ ಯಶಸ್ವಿಗೊಳಿಸಬೇಕು. ನಿರ್ಭೀತಯಿಂದ ಮತ ಚಲಾಯಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ನವೀನ್‌ ಭಂಡಾರಿ ಹೇಳಿದರು.


ಇಂದು (ಏ.18) ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸ್ವೀಪ್‌ ಸಮಿತಿ, ಪುತ್ತೂರು ತಾಲೂಕು ಸ್ವೀಪ್‌ ಸಮಿತಿ, ರೋಟರಿ ಪುತ್ತೂರು ಎಲೈಟ್‌ ಹಾಗೂ ರೋಟರಾಕ್ಟ್‌ ಕ್ಲಬ್‌ ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು, ಸಂಸಾರ ಜೋಡುಮಾರ್ಗ ಇವರ ಸಹಯೋಗದಲ್ಲಿ ಪುತ್ತೂರಿನಲ್ಲಿ ಹಮ್ಮಿಕೊಂಡಿದ್ದ ಮತದಾನ ಜಾಗೃತಿಗೆ ಬೀದಿ ನಾಟಕ ಪ್ರದರ್ಶನದಲ್ಲಿ ಅವರು ಭಾಗವಹಿಸಿ ಮಾತನಾಡಿದರು. 


ಪುತ್ತೂರು ತಾಲೂಕು ಆಡಳಿತ ಸೌಧದ ಮುಂಭಾಗ ಈ ಮತದಾನ ಜಾಗೃತಿ ಬೀದಿನಾಟಕ್ಕೆ ಸಹಾಯಕ ಚುನಾವಣಾಧಿಕಾರಿ ಹಾಗೂ ತಹಶೀಲ್ದಾರರಾದ ಶಿವಶಂಕರ್‌, ಎಸಿಎಫ್.ಅರಣ್ಯ ಇಲಾಖೆ ವಿ.ಪಿ. ಕಾರ್ಯಪ್ಪ ಅವರು ಬೀದಿನಾಟಕಕ್ಕೆ ಚಾಲನೆ ನೀಡಿದರು. ದಕಜಿಪಂ ಯೋಜನಾ ನಿರ್ದೇಶಕರಾದ ಜಯರಾಮ್‌, ಉಪತಹಶೀಲ್ದಾರ್‌ ಸುಲೋಚನಾ ಶುಭಹಾರೈಸಿದರು. ಉಸ್ತುವಾರಿಗಳಾಗಿ ರೋಟರಿ ಪುತ್ತೂರು ಎಲೈಟ್ ಅಧ್ಯಕ್ಷರಾದ ಡಾ.ಪೀಟರ್ ವಿಲ್ಸನ್‌ ಪ್ರಭಾಕರ್, ಕ್ಲಬ್ ಸರ್ವೀಸ್ ಡೈರೆಕ್ಟರ್  ಆಸ್ಕರ್ ಆನಂದ್, ಕೆಎಸ್‌ ಆರ್‌ ಟಿ ಸಿ ಬಸ್ಸು ನಿಲ್ದಾಣಾಧಿಕಾರಿ ಅಬ್ಬಾಸ್‌, ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿ ಉಪಸ್ಥಿತರಿದ್ದರು.


ನಾಲ್ಕು ಕಡೆಗಳಲ್ಲಿ ಪ್ರದರ್ಶನ

ʼಮತ ಮಾರಾಟಕ್ಕಲ್ಲʼ ಬೀದಿ ನಾಟಕವನ್ನು ತಾಲೂಕು ಆಡಳಿತ ಸೌಧದ ಮುಂಭಾಗ, ಪುತ್ತೂರು ಕೋಟಿ ಚೆನ್ನಯ ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣ, ಶ್ರೀ ಮಹಾಲಿಂಗೇಶ್ವರ ದೇಗುಲದ ಶಿವಾರ್ಪಣಂ ವೇದಿಕೆಯಲ್ಲಿ ಹಾಗೂ ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮತದಾನ ಜಾಗೃತಿ ಕುರಿತ ಬೀದಿ ನಾಟಕ ಹಾಗೂ ಪ್ರತಿಜ್ಞಾವಿಧಿ ನಡೆಸಲಾಯಿತು. ನೂರಾರು ಮಂದಿ ಈ ನಾಟಕವನ್ನು ವೀಕ್ಷಿಸಿದರು.


ನಾಟಕ ತಂಡ: ಬೀದಿ ನಾಟಕವನ್ನು ರಂಗ ನಿದೇರ್ಶಕ ಮೌನೇಶ ವಿಶ್ವಕರ್ಮ ರಚಿಸಿದ್ದು, ನಿರೂಪಕನಾಗಿಯೂ ಪಾತ್ರ ನಿರ್ವಹಿಸಿದ್ದಾರೆ. ಬಾಲು ನಾಯ್ಕ್, ಈಶ್ವರ್ ಬೆಡೇಕರ್, ಚಂದ್ರಮೌಳಿ, ಜಾನ್ಸನ್, ಸ್ವೀಡಲ್, ಹಾರ್ವಿನ್, ಪ್ರಕಾಶ ಕೆ., ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಾದ ಪ್ರಜ್ವಲ್‌ ಆರ್.ಸಿ., ದಿವ್ಯ ಎಂ., ವೀಣಾ ಕುಮಾರಿ ಎಸ್., ದೀಕ್ಷಿತಾ ಕೆ., ಪಲ್ಲವಿ ಬಿ.ರೈ, ರೇಷ್ಮಾ ವಿ., ಧನ್ಯ.ಕಲಾವಿದರಾಗಿ ಭಾಗವಹಿಸಿದ್ದರು. ಕ್ಲಬ್ ಸರ್ವೀಸ್ ಡೈರೆಕ್ಟರ್ ಆಸ್ಕರ್ ಆನಂದ್ ತಂಡದ ನೇತೃತ್ವ ವಹಿಸಿದ್ದರು. ಸೆಕ್ಟರ್ ಆಫೀಸರ್ ರಾಮ ಕೆ., ರಂಜಿತ್ ಮಥಾಯಸ್ ಉಪಸ್ಥಿತರಿದ್ದರು.


ನಾಟಕದಲ್ಲೇನಿದೆ!?

ʼಬಂತು ಬಂತು ಚುನಾವಣೆ ಮತ್ತೆ ಬಂತು ಚುನಾವಣೆʼ ಎನ್ನುತ್ತಾ ಆರಂಭವಾಗುವ ನಾಟಕ, ಮತದಾರರನ್ನು ಹಾದಿತಪ್ಪುವಂತೆ ಮಾಡುವ ಅಕ್ರಮ ಚಟುವಟಿಕೆಗಳ ಕುರಿತಾಗಿ ಸೂಕ್ಷ್ಮವಾಗಿ ಉಲ್ಲೇಖಿಸಲಾಗಿದ್ದು. ಚುನಾವಣಾ ಆಯೋಗ ಕೈಗೊಳ್ಳುವ ಕಾನೂನು ಕ್ರಮಗಳ ಕುರಿತಾಗಿ ವಿವರಿಸಲಾಗಿದೆ. ವ್ಯಕ್ತಿಯೊಬ್ಬ ಹಣ ಮತ್ತು ಹೆಂಡದ ಆಸೆ ತೋರಿಸಿ ಜನಸಾಮಾನ್ಯರನ್ನು ಮರುಳು ಮಾಡುವ, ತಾನು ಹೇಳಿದವರಿಗೆ ಓಟು ಹಾಕಬೇಕು ಎಂದು ಒತ್ತಾಯಿಸುವ ದೃಶ್ಯವನ್ನು ಪರಿಣಾಮಕಾರಿಯಾಗಿ ಇಲ್ಲಿ ತೋರಿಸಲಾಗಿದೆ. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸುವ ಸಮಾಜ ಸೇವಕರೊಬ್ಬರು ಮತದ ಶಕ್ತಿಯ ಬಗ್ಗೆ ವಿವರವಾಗಿ ತಿಳಿಸುವುದರ ಜೊತೆಗೆ ಹಾದಿ ತಪ್ಪುವ ಹಂತದಲ್ಲಿದ್ದ ಮತದಾರರನ್ನುಸರಿದಾರಿಯಲ್ಲಿ ಮುನ್ನಡೆಯಲು ಪ್ರೇರೇಪಿಸುವುದು ಈ ನಾಟಕದ ಮುಖ್ಯ ಕಥಾನಕ. ಜೊತೆಗೆ ಚುನಾವಣೆ ಹತ್ತಿರ ಬರುತ್ತಿರುವಂತೆ ಮತದಾರರ ಮನಸ್ಸನ್ನು ಕೆಡಿಸುವ ಆಮಿಷ, ಬೆದರಿಕೆ, ನಿರ್ಲಕ್ಷ್ಯ ಜೊತೆಗೆ ಕಿಡಿಗೇಡಿತನಕ್ಕೆ ಕುಮ್ಮಕ್ಕು ನಕಲಿ ಓಟು ಚಲಾಯಿಸುವ ದುಷ್ಟ ಬುದ್ಧಿಯನ್ನು ಈ ನಾಟಕದ ಎರಡನೇ ಹಂತದಲ್ಲಿ ಪ್ರಸ್ತುತ ಪಡಿಸಲಾಗಿದ್ದು ಚುನಾವಣಾ ಆಯೋಗ ಹಾಗೂ ಸ್ವೀಪ್‌ ಸಮಿತಿಯು ಜಾಗೃತ ಮತದಾರರ, ಅಧಿಕಾರಿಗಳ ಮುಖೇನ ಅಕ್ರಮ ಕೃತ್ಯಗಳ ಮೇಲೆ ಹದ್ದಿನ ಕಣ್ಣು ಇರಿಸಿದೆ ಎನ್ನುವ ಎಚ್ಚರಿಕೆಯನ್ನು ನಾಟಕದಲ್ಲಿ ಪರಿಣಾಮಕಾರಿಯಾಗಿ ಬಿಂಬಿಸಲಾಗಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top