ನಂದಿನಿ-ಅಮುಲ್ ವಿಲೀನದ ಪ್ರಸ್ತಾಪವೇ ಇಲ್ಲ, ಸ್ಪರ್ಧೆಯೂ ಇಲ್ಲ: ದಕ ಜಿಲ್ಲಾ ಹಾಲು ಒಕ್ಕೂಟ ಅಧ್ಯಕ್ಷರ ಸ್ಪಷ್ಟನೆ

Upayuktha
0

ಮಂಗಳೂರು: ನಂದಿನಿ ಮತ್ತು ಅಮುಲ್ ವಿಲೀನದ ಪ್ರಸ್ತಾಪವೇ ಇಲ್ಲ. ನಂದಿನಿ ಬ್ರಾಂಡ್ ಕರ್ನಾಟಕದ ಅಸ್ಮಿತೆ. ಅಮುಲ್‌ ಗುಜರಾತ್‌ನ ಅಸ್ಮಿತೆ. ಎರಡರ ನಡುವೆ ಯಾವುದೇ ಸ್ಪರ್ಧೆಯೂ ಇಲ್ಲ. ಪರಸ್ಪರ ಸಹಕಾರದೊಂದಿಗೆ ಜತೆಜತೆಯಾಗಿ ಬೆಳೆಯುವುದೇ ಉದ್ದೇಶ ಎಂದು ದ.ಕ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ಪಿ. ಸುಚರಿತ ಶೆಟ್ಟಿ ಹೇಳಿದರು.


ಅಮುಲ್ ಜತೆ ವಿಲೀನ ಎಂಬ ಮಾತೇ ಇಲ್ಲ. ಆ ಬಗ್ಗೆ ಕೇಂದ್ರ ಗೃಹ ಮತ್ತು ಸಹಕಾರ ಖಾತೆ ಸಚಿವ ಅಮಿತ್ ಶಾ ಅವರು ಎಲ್ಲೂ ಪ್ರಸ್ತಾಪ ಮಾಡಿಲ್ಲ. ಜತೆ ಜತೆಯಾಗಿ ಬೆಳೆಯಿರಿ ಎಂಬುದಷ್ಟೇ ವ್ಯಾವಹಾರಿಕ ನೆಲೆಯ ಸಹಕಾರದ ಉದ್ದೇಶ ಎಂದು ಅವರು ಸ್ಪಷ್ಟಪಡಿಸಿದರು.


ಕಳೆದ ಎರಡು ದಿನಗಳಿಂದ ನಂದಿನಿ-ಅಮುಲ್ ವಿಚಾರವಾಗಿ ವಿರೋಧ ಪಕ್ಷಗಳು ಗದ್ದಲವೆಬ್ಬಿಸುತ್ತಿರುವುದನ್ನು ಖಂಡಿಸಿದ ಅವರು, ಪ್ರತಿಪಕ್ಷಗಳು ರಾಜಕೀಯ ಲಾಭದ ಉದ್ದೇಶದಿಂದ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.


ಅಮುಲ್ ಬಿಜೆಪಿ ಬ್ರಾಂಡ್, ನಂದಿನಿ ಕಾಂಗ್ರೆಸ್ ಬ್ರಾಂಡ್ ಎಂಬುದು ಕಾಂಗ್ರೆಸ್‌ನವರ ವ್ಯಾಖ್ಯಾನ. ಆದರೆ ವಾಸ್ತವ ಅದಲ್ಲ. ಅಮುಲ್ ಬ್ರಾಂಡ್ ಬಿಜೆಪಿಯದ್ದೂ ಅಲ್ಲ, ನಂದಿನಿ ಕಾಂಗ್ರೆಸ್‌ನದ್ದೂ ಅಲ್ಲ. ಅವರೆಡೂ ಸಹಕಾರ ಸಂಸ್ಥೆಗಳು, ಸಹಕಾರ ತತ್ವದಡಿಯಲ್ಲಿ ಬೆಳೆದು ಬಂದ ಸಂಸ್ಥೆಗಳು. ಪ್ರಸ್ತುತ ಅವೆರಡೂ ವ್ಯಾವಹಾರಿಕವಾಗಿ ಸಹಕಾರ ಹೊಂದುವುದು ಕೂಡ ಅದೇ ತತ್ವದ ಅಡಿಯಲ್ಲಿ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಬಿಜೆಪಿ ಜಿಲ್ಲಾ ವಕ್ತಾರ ಜಗದೀಶ್‌ ಶೇಣವ ತಿಳಿಸಿದರು.


ಗುಜರಾತ್‌ನಲ್ಲಿ ಅಮುಲ್ ಆರಂಭವಾಗಿದ್ದು 1946ರಲ್ಲಿ . ಡಾ.ವರ್ಗೀಸ್ ಕುರಿಯನ್ ಅಮುಲ್ ಯಶಸ್ಸಿನ ಹಿಂದಿನ ಪ್ರಮುಖ ವ್ಯಕ್ತಿ. ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಕೆಎಎಂಫ್ ಕರ್ನಾಟಕದ ಅಸ್ಮಿತೆಯಾಗಿ ಬೆಳೆದು ಬಂದ ಸಂಸ್ಥೆ. ನಂದಿನಿ ಕೂಡ ಕರ್ನಾಟಕಕ್ಕೆ ಸೀಮಿತವಾಗಿಲ್ಲ. ರಾಜ್ಯದ ಹೊರಗೆಯೂ ಇತರ ಹಲವು ರಾಜ್ಯಗಳಲ್ಲಿ ನಂದಿನಿಯ ವ್ಯವಹಾರ ವಿಸ್ತರಿಸಿದೆ.


ಸಹಕಾರ ಸಂಸ್ಥೆಗಳ ನಡುವೆ ಸ್ಪರ್ಧೆ ಇಲ್ಲ. ನಂದಿನಿಯಂತೆಯೇ ಅಮುಲ್ ಕೂಡ ದೇಶದ ಹಲವು ರಾಜ್ಯಗಳಲ್ಲಿ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಪ್ರಸ್ತುತ ಸನ್ನಿವೇಶದಲ್ಲಿ ಗ್ರಾಹಕರು ಆನ್‌ಲೈನ್ ಮೂಲಕ ಅಮುಲ್‌ನ ಕೆಲವು ಉತ್ಪನ್ನಗಳನ್ನು ಖರೀದಿಸುತ್ತಿದ್ದಾರೆ. ಅದು ಗ್ರಾಹಕರ ಆಯ್ಕೆ. ಅಲ್ಲದೆ, ಒಂದು ರಾಜ್ಯದವರು ಉತ್ಪನ್ನಗಳನ್ನು ಮತ್ತೊಂದು ಕಡೆ ಮಾರುವಂತಿಲ್ಲ ಎಂದು ಹೇಳುವಂತಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.


ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ರವಿಶಂಕರ್ ಮಿಜಾರು, ರತನ್ ರಮೇಶ್ ಪೂಜಾರಿ, ಸಂಜಯ ಪ್ರಭು ಮುಂತಾದವರಿದ್ದರು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top