ಮೂರ್ಖರ ದಿನದ ಮೋಜಿನ ಇತಿಹಾಸ...!

Upayuktha
0

 

ಪ್ರಿಲ್ ತಿಂಗಳ 1ನೇ ತಾರೀಖನ್ನು ಏಪ್ರಿಲ್ ಫೂಲ್‍ ಡೇ ಅರ್ಥಾತ್ ಮೂರ್ಖರ ದಿನಾಚರಣೆ ಎಂದು ಕರೆಯಲಾಗಿದೆ. ವಿಶ್ವದ ಬಹುತೇಕ ಭಾಗಗಳಲ್ಲಿ ಒಬ್ಬರನ್ನೊಬ್ಬರು ಗೇಲಿ ಕುಚೋದ್ಯದ ಮೂಲಕ ತಮಾಷೆ ಮಾಡಿ ಮೂರ್ಖರನ್ನಾಗಿ ಮಾಡಿ ನಗುವುದು, ನಗಿಸುವುದು ಪೂರ್ವದಿಂದಲೂ ನಡೆದು ಬಂದಿದೆ.ಏಪ್ರಿಲ್ 1ರಂದು ಮೂರ್ಖರನ್ನಾಗಿಸುವ ರೂಢಿಗೆ ಹಲವಾರು ಕಥೆಗಳಿವೆ. ಏಪ್ರಿಲ್ 1ರಂದು ಮೂರ್ಖರನ್ನಾಗಿಸುವ ಈ ಪದ್ಧತಿ ರೋಮನ್‍ರಿಂದ ನಡೆದು ಬಂದಿದೆ. ಬಹಳ ವರ್ಷಗಳ ಹಿಂದೆ ರೋಮನ್ನರ ಹೊಸ ವರ್ಷ ಆರಂಭವಾಗುತ್ತಿದ್ದುದು ಮಾರ್ಚ್ 1ರಿಂದ. ನಂತರ ಬಂದ ರೋಮನ್‍ ಚಕ್ರವರ್ತಿ ಅವರೆಗಿನ ರೂಢಿಯ ದಿನವನ್ನು ಬದಲಾಯಿಸಿ ಏಪ್ರಿಲ್ ತಿಂಗಳ ಮೊದಲ ದಿನವನ್ನು ವರ್ಷದ ಮೊದಲ ದಿನವೆಂದು ಪರಿಗಣಿಸಿ ಆಚರಿಸುವಂತೆ ಆಜ್ಞೆ ಮಾಡಿದ. ಪ್ರಜೆಗಳಿಗಿದು ಸರಿ ಕಾಣಲಿಲ್ಲ. ಪರಿಣಾಮ ಅವರು ಚಕ್ರವರ್ತಿಯನ್ನು ಮೂರ್ಖನೆಂದು ಪರಿಗಣಿಸಿದರು. ಆ ಕಾರಣವಾಗಿ ರೋಮನ್‍ನಲ್ಲಿ ಏಪ್ರಿಲ್ ತಿಂಗಳ ಮೊದಲ ದಿನವು ಮೂರ್ಖರ ದಿನವೆಂದು ಪರಿಗಣಿಸಲ್ಟಟ್ಟು ಆಚರಣೆಗೆ ಮೊದಲಾಯಿತು. ರೋಮನ್‍ರು ಅದನ್ನು ಮೊದಲಿಗೆ ಒಂದು ಹಬ್ಬದ ರೂಪದಲ್ಲಿ ಆಚರಿಸುತ್ತಿದ್ದರು. ಆಗದು ಆ ದೇಶಕ್ಕೆ ಮಾತ್ರ ಸೀಮಿತವಾಗಿತ್ತು. ಅನಂತರ ಅದು ಇತರ ದೇಶಗಳಿಗೂ ಹಬ್ಬಿತು.


ಫ್ರಾನ್ಸ್ ದೇಶದಲ್ಲಿ ನೂತನ ವರ್ಷವು ಏಪ್ರಿಲ್ 1ರಂದು ಆರಂಭವಾಗುತ್ತಿತ್ತು. ಕ್ರಿ.ಶ.1584ರಲ್ಲಿ ಫ್ರಾನ್ಸ್ ದೇಶದಲ್ಲಿ ಜಗತ್ತಿನ ಮೊಟ್ಟ ಮೊದಲ ಕ್ಯಾಲೆಂಡರ್ ಅಸ್ತಿತ್ವಕ್ಕೆ ಬಂತು. ಕ್ಯಾಲೆಂಡರಿನಲ್ಲಿ ಏಪ್ರಿಲ್ 1ರ ಬದಲಾಗಿ ಜನವರಿ 1 ಹೊಸ ವರ್ಷದ ಪ್ರಾರಂಭ ದಿನವಾಯಿತು. ಇದನ್ನು ಫ್ರಾನ್ಸಿನ ಕೆಲವು ರೂಢಿವಾಡಿಗಳು ವಿರೋಧಿಸಿದರು. ಇವರನ್ನು ಸುಧಾರಣಾವಾದಿಗಳು ಮೂರ್ಖರೆಂದು ಜರಿದು ಏಪ್ರಿಲ್ 1ರಂದು ಮೂರ್ಖರ ದಿನವನ್ನು ಆಚರಿಸತೊಡಗಿದರು.


ಕ್ರಿ.ಶ.1550 ರಿಂದ 1574ರವರೆಗೆ ಫ್ರಾನ್ಸ್‍ನ್ನು ಆಳಿದ 1ನೇ ಚಾಲ್ರ್ಸ್ ವರ್ಷಾರಂಭವನ್ನು ಎಪ್ರಿಲ್ 1ಕ್ಕೆ ಬದಲಾಗಿ ಜನವರಿ 1ರಿಂದ ಆಗಬೇಕೆಂದು ಆದೇಶ ಹೊರಡಿಸಿದ. ಏಪ್ರಿಲ್ 1ರಂದು ನಡೆಸುತ್ತಿದ್ದ ಪರಂಪರಾಗತ ರೀತಿ ರಿವಾಜುಗಳು ಜನವರಿ 1ರಂದು ನಡೆಯಬೇಕೆಂದು ಆದೇಶದಲ್ಲಿ ತಿಳಿಸಿದ. ಏಪ್ರಿಲ್ 1ರಂದು ಮುಗ್ಧರನ್ನು ಹುಡುಕಿ ಏಪ್ರಿಲ್ ಮೀನು ಎಂದು ಕರೆದು ಗೇಲಿ ಮಾಡುವ ಈ ಚಟುವಟಿಕೆಯನ್ನು ಮೀನಿನ ಬೇಟೆ ಎಂದು ಕರೆಯಲಾಯಿತು. ಫ್ರಾನ್ಸ್ ದೇಶದಲ್ಲಿ ಏಪ್ರಿಲ್ ತಿಂಗಳಲ್ಲಿ ದೊರಕುವ ಮೀನುಗಳು ಮರಿಗಳಾಗಿದ್ದು ಸುಲಭವಾಗಿ ಬಲೆಗೆ ಸಿಕ್ಕಿ ಬೀಳುತ್ತವೆಯಂತೆ.! ಹೀಗೆಯೇ ಮುಗ್ಧರು ಸಲೀಸಾಗಿ ಕುಚೋದ್ಯಗಾರರ ಜಾಲಕ್ಕೆ ಸಿಕ್ಕಿ ಬೀಳುವುದರಿಂದ ಅವರನ್ನು ಏಪ್ರಿಲ್ ಮೀನು ಎಂದು ಕರೆದು ಗೇಲಿ ಮಾಡುತ್ತಿದ್ದರಂತೆ.!


ಈ ಏಪ್ರಿಲ್ ಫೂಲ್‍ನ್ನು ಸ್ಕಾಟ್ಲೆಂಡಿನಲ್ಲಿ ಏಪ್ರಿಲ್‍ ಗೋಕ್‍ ಎಂದು, ಫ್ರಾನ್ಸ್‌ನಲ್ಲಿ ರಾಜರ್ ದಿ ಅಪಿರಲ್‍ ಎಂದೂ ಜರ್ಮನಿಯಲ್ಲಿ ನಾರ್‍ ಎಂದುಕರೆಯಲಾಗಿದೆ. ಸ್ಜಾಟ್ಲೆಂಡಿನಲ್ಲಿ ಕೋಗಿಲೆಗಳನ್ನು ದಡ್ಡ ಪಕ್ಷಿ ಎಂದು ತಿಳಿಯಲಾಗುತ್ತಿದ್ದು ಏಪ್ರಿಲ್ 1ರಂದು ಹುಂಬರನ್ನು ತಮಾಷೆ ಮಾಡಲು ಎಲೈ ಕೋಗಿಲೆ ಕೋಳಿಯ ಬಾಯಲ್ಲಿ ಹಲ್ಲು ತೋರಿಸು, ಚೌಕಾಕಾರದ ವೃತ್ತ ರಚಿಸು ಎಂದು ಚುಡಾಯಿಸುವಂತೆ.!


ಕ್ರಿ.ಶ.1761ರ ಮುಂಚಿನ ಕ್ಯಾಲೆಂಡರ್ ಪ್ರಕಾರ ಯುರೋಪಿನಲ್ಲಿ ಏಪ್ರಿಲ್ 1 ಸಂವತ್ಸರದ ಆರಂಭ ದಿನವಾಗಿ ಬಳಕೆಯಾಗುತ್ತಿತ್ತು. ನಂತರ 18ನೇ ಶತಮಾನದಲ್ಲಿ ಹೊಸ ಕ್ಯಾಲೆಂಡರ್‍ ರೂಪುಗೊಂಡು ಏಪ್ರಿಲ್ 1ರ ಬದಲುಜನವರಿ 1 ಸಂವತ್ಸರದ ಆರಂಭದ ದಿನವಾಗಿ ಮಾರ್ಪಾಡಾಯಿತು. ಈ ಬದಲಾವಣೆಗೆ ಕೆಲವು ಸನಾತನಿಯರು, ಸಂಪ್ರದಾಯಸ್ಥರು ಮೂಢರು, ವಿವೇಕ ಶೂನ್ಯರೆಂದು ಜರಿದು ಅವರುಗಳನ್ನು ಫೂಲ್ಸ್‍ಗಳೆಂದು ಕರೆದು ಗೇಲಿ ಮಾಡುತ್ತಾ ಏಪ್ರಿಲ್ ಫೂಲ್ ಪ್ರಾರಂಭಿಸಿದರು.


ಕ್ರೈಸ್ತಮತದ ಕಥೆಯಂತೆ ನೋವಾ ಅನ್ನುಆರ್ಕ್‍ದಿಂದ ಬಿಡುಗಡೆ ಮಾಡಿರುವುದು ಹಿಬ್ರೂ ಕ್ಯಾಲೆಂಡರ್ ಪ್ರಕಾರ ಏಪ್ರಿಲ್ 1ನೇ ತಾರೀಖಿನಂದೇ. ಈ ಸಂದರ್ಭದಲ್ಲಿ ಎಲ್ಲರೂ ಜೋಕ್ಸ್ ಮಾಡುತ್ತಾ ಪರಿಹಾಸ್ಯದಿಂದ ಒಬ್ಬರಿಗೊಬ್ಬರು ಮೂರ್ಖರನ್ನಾಗಿ ಮಾಡಿಕೊಂಡುಕಾಲ ಕಳೆದಂತೆ ಅದೇ ಏಪ್ರಿಲ್ ಫೂಲ್‍ ಆಗಿದೆ ಎಂದು ಹೇಳಲಾಗಿದೆ.


ಪ್ರಪಂಚದ ಹಲವಡೆ ಮಾರ್ಚ್ 21 ಮತ್ತು 22ರಂದು ಹಗಲು ರಾತ್ರಿಗಳ ಪ್ರಮಾಣವು ಸಮನಾಗಿದ್ದು ಆಗಿನಿಂದ ಏಪ್ರಿಲ್ 1ರಂದು ಮೋಜು ಮಜಾದ ಉತ್ಸವವೊಂದು ಆಚರಿಸಲಾಗುತ್ತಿತ್ತು. ಈ ಉತ್ಸವದಲ್ಲಿ ನಗುವ ನಗಿಸುವ ಕ್ರಿಯೆಗೆ ಪ್ರಾಧಾನ್ಯ. ಬಹುಶ: ಈ ಉತ್ಸವವೂ ಮೂರ್ಖರ ದಿನಾಚರಣೆಗೆ ಪ್ರೇರಕ ಎನ್ನಲಾಗಿದೆ.ಕ್ರಿ.ಶ.18ನೇ ಶತಮಾನದಲ್ಲಿ ಇಂಗ್ಲೆಂಡಿನಲ್ಲಿ ಮೂರ್ಖರ ದಿನಾಚರಣೆ ದೇಶಾದ್ಯಂತ ವ್ಯಾಪಿಸಿ ಮುಗ್ಧರು ಮಾತ್ರವಲ್ಲದೆ ಸದ್ಗಹಸ್ಥರನ್ನೂ ಪೇಚಾಟಕ್ಕೆ ಸಿಲುಕಿಸಿ ಮೋಜು ಮಜಾ ಉಡಾಯಿಸುವ ಹಿಂಸಾರತಿಯ ರೂಪವನ್ನು ತಾಳಿತು. ಆಗ ಅನೇಕ ಪ್ರಾಜ್ಞರು ಇತರರನ್ನು ಗೇಲಿ ಮಾಡಿ ನಗುವುದಕ್ಕಿಂತ ನಮ್ಮನ್ನು ನಾವು  ಹಾಸ್ಯ ಮಾಡಿಕೊಂಡು ನಗೆ ಉಕ್ಕಿಸುವುದು ಉತ್ತಮ ಎಂದು ಪ್ರತಿಪಾದಿಸಿದರು. 


ಮೂರ್ಖರ ದಿನಾಚರಣೆಯು ಬ್ರಿಟಿಷರೊಂದಿಗೆ ಭಾರತಕ್ಕೂ ಕಾಲಿಟ್ಟಿತು. ಭಾರತದಲ್ಲಿ ಹೋಳಿ ಹಬ್ಬದ ಅಂಗವಾಗಿ ಆಚರಿಸಲಾಗುವ ರೀತಿ ರಿವಾಜುಗಳೇ ಮೂರ್ಖರ ದಿನಾಚರಣೆಗೆ ಪ್ರೇರಣೆ ಎನ್ನಲಾಗಿದೆ. ಇಂದಿಗೂ ಭಾರತದಲ್ಲಿ ಹಾಸ್ಯ ಸಂಘಗಳ ಆಶ್ರಯದಲ್ಲಿ ಮೂರ್ಖರ ದಿನಾಚರಣೆ ನೆಡೆಯುತ್ತಿದೆ. ಈ ದಿನದಂದು ಹಾಸ್ಯ ಚಟಾಕಿಗಳನ್ನು ಹಾರಿಸುವುದು, ಹಾಸ್ಯ ಕವಿಗೋಷ್ಠಿ ಏರ್ಪಡಿಸುವುದು, ಹಾಸ್ಯ ಪ್ರಹಸನಗಳನ್ನು ಪ್ರದರ್ಶಿಸುವ ಕಾರ್ಯಕ್ರಮಗಳು ನಡೆಯುತ್ತವೆ.


ತುಮಕೂರಿನ ಗೌಡನ ಕಟ್ಟೆ ತಿಮ್ಮಯ್ಯನವರು ಪ್ರತಿ ವರ್ಷ ಏಪ್ರಿಲ್ 1ರಂದು ಮೂರ್ಖರ ದಿನಾಚರಣೆಯನ್ನು ವಿಶೇಷವಾಗಿ ಏರ್ಪಡಿಸುತ್ತಿದ್ದರು.  ಹೊರಗಿನಿಂದ ಹಾಸ್ಯ ಸಾಹಿತಿಗಳನ್ನು ಕರೆಸಿ ಅವರಿಂದ ಹಾಸ್ಯ ಸಂಜೆ ಕಾರ್ಯಕ್ರಮ ನಡೆಯುತ್ತಿತ್ತು.ಅಂದು ಬೆಳಿಗ್ಗೆ ನಗರದ ಬೀದಿಗಳಲ್ಲಿ ಕತ್ತೆಯನ್ನು ಅಲಂಕರಿಸಿ ಮೆರವಣಿಗೆ ಮಾಡಿ ಜನರನ್ನು ಆಕರ್ಷಿಸಲಾಗುತ್ತಿತ್ತು. ಕಲಾ ಭವನ ತುಂಬಿರುತ್ತಿತ್ತು. ನಾನು (ಗೊರೂರುಅನಂತರಾಜು) ಮತ್ತು ಸಾಹಿತಿ ಮಿತ್ರರು ಕೋ.ಲ.ರಂಗನಾಥರಾವ್‍ ಒಂದು ವರ್ಷಇಲ್ಲಿ ಭಾಗವಹಿಸಿ ಸನ್ಮಾನಿತರಾಗಿದ್ದು ಹಳೆಯ ನೆನಪು. ಇದೇ ನೆನಪಿನಲ್ಲಿ ಸದ್ಯ ಈ ವರ್ಷ ಕರ್ನಾಟಕ ರಾಜ್ಯ ಬರಹಗಾರ ಸಂಘ, ಹೂವಿನ ಹಡಗಲಿ ಗೂಗಲ್ ಮೀಟ್‍ನಲ್ಲಿ ಹಾಸ್ಯ ಹನಿಗವನ ಗೋಷ್ಠಿ ಏರ್ಪಡಿಸಿದೆ. 


ಏಪ್ರಿಲ್ ಫೋಲ್ಸ್‍ಗೆ ಸಂಬಂಧಿಸಿದಂತೆ ಒಂದು ಜೋಕ್: ಒಂದು ಸಲ ಪ್ರೆಂಚ್ ವನಿತೆ ಏಪ್ರಿಲ್ 1ರಂದು ಮನೆಯೊಂದರಲ್ಲಿ ಒಡವೆಗಳನ್ನು ಕಳ್ಳತನ ಮಾಡಿದಳು. ಆಕೆಯನ್ನು ಬಂಧಿಸಿ ನ್ಯಾಯಾಲಯದಲ್ಲಿ ಹಾಜರುಪಡಿಸಿದಾಗ ಆಕೆ ಏಪ್ರಿಲ್ 1ರ ಸಂದರ್ಭವಾಗಿ ಮನೆಯವನರನು ಫೂಲ್ ಮಾಡಲು ಕೇವಲ ತಮಾಷೆಗಾಗಿ ಈ ಕಳ್ಳತನ ಮಾಡಿದೆ ಅಷ್ಟೇ ಎಂದು ಮುಗಳ್ನಕ್ಕಳಂತೆ.!ಹಾಸ್ಯ ಪ್ರಿಯರಾದ ನ್ಯಾಯಾಧೀಶರುಕೂಡ ನಗುತ್ತಾ ತಮಾಷೆಗಾಗಿ ಮಾಡಿದ ಈ ಕಳ್ಳತನಕ್ಕೆ ಶಿಕ್ಷೆ ಏನೆಂದರೆ ಬರುವ ಏಪ್ರಿಲ್ 1ನೇ ತಾರೀಖಿನವರೆಗೆ ಜೈಲಿನಲ್ಲಿದು ತಮಾಷೆಯಾಗಿ ನಗುನಗುತ್ತಾ ಕಾಲ ಕಳಿ ಎಂದು ತೀರ್ಪು ನೀಡಿದರಂತೆ.!


-ಗೊರೂರು ಅನಂತರಾಜು, ಹಾಸನ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top