ಮಂಗಳೂರು ಉತ್ತರ ಬಿಜೆಪಿ ಚುನಾವಣೆ ಕಾರ್ಯಾಲಯ ಉದ್ಘಾಟನೆ

Upayuktha
0

ಗ್ಯಾರಂಟಿ ಕಾರ್ಡ್ ತಗೊಂಡು ಬರುವಾಗ ಅದಕ್ಕೆ ಅನುದಾನ ಎಲ್ಲಿಂದ ತರ್ತೀರಿ ಎಂದು ಪ್ರಶ್ನಿಸಿ: ಡಾ. ಭರತ್ ವೈ. ಶೆಟ್ಟಿ 

ಸುರತ್ಕಲ್: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಾಲಯ ಉದ್ಘಾಟನೆ ಕಾರ್ಯಕ್ರಮ ರವಿವಾರ ಬೆಳಗ್ಗೆ ಕಾವೂರಿನ ಸೊಸೈಟಿ ಹಾಲ್ ನಲ್ಲಿ ಜರುಗಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು.

ಪ್ರಾಸ್ತಾವಿಕ ಮಾತಾನ್ನಾಡಿದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ ಅವರು, "ಕಳೆದ ಅವಧಿಯಲ್ಲಿ ಮಂಗಳೂರು ಉತ್ತರ ಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವ ಭರತ್ ವೈ. ಶೆಟ್ಟಿ ಅವರು ಬೂತ್ ಮಟ್ಟದಲ್ಲಿ ಕಾರ್ಯಕರ್ತರು ತಲೆ ಎತ್ತಿ ಮತ ಕೇಳುವಂತ ಸನ್ನಿವೇಶ ನಿರ್ಮಾಣ ಮಾಡಿದ್ದಾರೆ. ಅಭಿವೃದ್ಧಿ ಮತ್ತು ಹಿಂದುತ್ವ ಎರಡರಲ್ಲೂ ರಾಜಿ ಮಾಡಿಕೊಳ್ಳದೆ ಕ್ಷೇತ್ರ ವ್ಯಾಪ್ತಿಯಲ್ಲಿ ಜನಾನುರಾಗಿಯಾಗಿರುವ ಭರತ್ ಶೆಟ್ಟಿ ಅವರು ಈ ಬಾರಿಯೂ ಅತ್ಯಧಿಕ ಮತಗಳಲ್ಲಿ ಗೆಲುವು ದಾಖಲಿಸಲು ಕಾರ್ಯಕರ್ತರು ಅಹರ್ನಿಶಿ ಶ್ರಮಿಸಬೇಕು" ಎಂದರು.


ಮಾಜಿ ಮೇಯರ್ ಗಣೇಶ್ ಹೊಸಬೆಟ್ಟು ಮಾತನಾಡಿ, "ಅಧಿಕಾರದ ಎರಡು ವರ್ಷಗಳ ಅವಧಿಯಲ್ಲಿ ಕೊರೋನಾ ಮತ್ತು ನೆರೆ ಸಮಸ್ಯೆ ಇದ್ದರೂ ಇನ್ನುಳಿದ ಎರಡು ವರ್ಷಗಳಲ್ಲಿ ಕ್ಷೇತ್ರವನ್ನು ಮಾದರಿಯನ್ನಾಗಿ ಮಾಡಿದ್ದಾರೆ. ಅವರು ಮುಂದಿನ ದಿನಗಳಲ್ಲಿ 50,000ಕ್ಕೂ ಅಧಿಕ ಮತಗಳಿಂದ ಗೆಲುವು ದಾಖಲಿಸಿ ಮಂತ್ರಿಯಾಗಬೇಕು" ಎಂದರು.


ಬಳಿಕ ಮಾತಾಡಿದ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಡಾ. ಭರತ್ ಶೆಟ್ಟಿ ವೈ. ಅವರು, "ಮುಂದಿನ ದಿನಗಳಲ್ಲಿ ಭ್ರಷ್ಟಾಚಾರ ಎನ್ನುವ ಪದವನ್ನು ಸಂಪೂರ್ಣ ನಿರ್ಮೂಲನೆ ಮಾಡುವಂತ ನಾಯಕರು ಪಕ್ಷದಲ್ಲಿ ಬರಲಿದ್ದಾರೆ. ಯಾವುದೇ ಕೆಲಸವನ್ನು ಓರ್ವ ಶಾಸಕ ಮಾಡಿದ್ದಾನೆ ಎಂದು ಹೇಳಬಾರದು ಯಾಕೆಂದರೆ ಆ ಶಾಸಕನ ಹಿಂದೆ ಅದೆಷ್ಟೋ ಸಾಮಾನ್ಯ ಕಾರ್ಯಕರ್ತರ ಶ್ರಮ ಇರುತ್ತದೆ. ಕಳೆದ ಬಾರಿ ಚುನಾವಣೆ ಎದುರಿಸುವಾಗ ನಾನು ಆ ಕೆಲಸ ಮಾಡಿದ್ದೇನೆ ಈ ಕೆಲಸ ಮಾಡಿದ್ದೇನೆ ಎಂದು ಹೇಳುವ ಅವಕಾಶವಿರಲಿಲ್ಲ. ಆದರೆ ಈಗ ಕಾರ್ಯಕರ್ತರು ಮತ ಕೇಳಲು ಯಾವುದೇ ರೀತಿಯಲ್ಲಿ ಸಂಕೋಚ ಮುಜುಗರ ಪಡುವ ಅಗತ್ಯವಿಲ್ಲ. ಯಾಕೆಂದರೆ ಕ್ಷೇತ್ರದಲ್ಲಿ ಅಭಿವೃದ್ಧಿಯ ಕಾರ್ಯಗಳು ನಡೆದಿವೆ. ಕ್ಷೇತ್ರ ವ್ಯಾಪ್ತಿಯಲ್ಲಿ ಮಹಾನಗರ ಪಾಲಿಕೆಗೆ 22 ಸದಸ್ಯರಲ್ಲಿ 20 ಮಂದಿಯನ್ನು ಗೆಲ್ಲಿಸಿ ಕೊಟ್ಟಿದ್ದೇವೆ. ಗೆಲ್ಲುವುದು ನಿಶ್ಚಿತ ಆದರೆ ಪ್ರತಿಯೊಬ್ಬರನ್ನು ಚುನಾವಣೆ ಬೂತ್ ಗೆ ಕರೆದುಕೊಂಡು ಬಂದು ವೋಟ್ ಹಾಕಿಸುವ ಮಹತ್ತರ ಜವಾಬ್ದಾರಿಯನ್ನು ಕಾರ್ಯಕರ್ತರು ತೆಗೆದುಕೊಳ್ಳಬೇಕು. ಕೋವಿಡ್, ಲಾಕ್ ಡೌನ್, ನೆರೆ ಹೀಗೆ ಸಂಕಷ್ಟವಿದ್ದರೂ 2 ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಅಂದಾಜು 2500 ಕೋಟಿಗೂ ಅಧಿಕ ಮೊತ್ತದ ಅನುದಾನದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ರಾಜ್ಯದಲ್ಲಿ ಗೋಹತ್ಯೆ ಮಾಡುವವರ ಆಸ್ತಿ ಮುಟ್ಟುಗೋಲು ಹಾಕಿದ್ದು ಮೊಟ್ಟಮೊದಲು ನಮ್ಮ ಉತ್ತರ ಕ್ಷೇತ್ರದಲ್ಲಿ. ಕಾಂಗ್ರೆಸ್ ಮನೆ ಮನೆಗೆ ಭೇಟಿ ಕೊಟ್ಟು ಸಣ್ಣ ಸಣ್ಣ ಗ್ಯಾರಂಟಿ ಚೀಟಿಗಳನ್ನು ಕೊಡುತ್ತಿದೆ. ಇದಕ್ಕೆ ಬೇಕಾಗುವ ಸಾವಿರಾರು ಕೋಟಿ ಅನುದಾನ ಎಲ್ಲಿಂದ ತರ್ತೀರಿ ಎಂಬ ಪ್ರಶ್ನೆ ಜನರ ಮನಸ್ಸಲ್ಲಿ ಮೂಡಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು. ಸುಳ್ಳು ಭರವಸೆ ಕೊಟ್ಟು ಜನರ ಮನಸ್ಸು ಹಾಳು ಮಾಡುವುದರ ಕಡೆಗೆ ಗಮನ ಕೊಡಬೇಕು" ಎಂದು ಕರೆ ನೀಡಿದರು.


ವೇದಿಕೆಯಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಡಾ ಭರತ್ ವೈ.ಶೆಟ್ಟಿ, ಮಂಗಳೂರು ಉತ್ತರ ಮಂಡಲ ಅಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ, ಜಿಲ್ಲಾ ಮಾಧ್ಯಮ ಪ್ರಮುಖ್ ರಣ್‌ದೀಪ್ ಕಾಂಚನ್, ಪ್ರಧಾನ ಕಾರ್ಯದರ್ಶಿ ರಾಜೇಶ್ ಕೊಟ್ಟಾರಿ, ರಮೇಶ್, ವಿಶ್ವನಾಥ್ ಶೆಟ್ಟಿ, ಕಾರ್ಪೋರೇಟರ್ ಗಳಾದ ನಯನ ಕೋಟ್ಯಾನ್, ಕಿರಣ್ ಕೋಡಿಕಲ್, ಚುನಾವಣಾ ಪ್ರಭಾರಿ ಕೃಷ್ಣ ಶೆಟ್ಟಿ ಕಡಬ, ಮೇಯರ್ ಜಯಾನಂದ ಅಂಚನ್, ಶರತ್ ಶೆಟ್ಟಿ, ಪೂಜಾ ಪ್ರಶಾಂತ್ ಪೈ, ಪದವು ಉಮೇಶ್ ಶೆಣೈ, ಸಂದೀಪ್ ಪಚ್ಚನಾಡಿ, ಜಿಲ್ಲಾ ವಕ್ತಾರ ಜಗದೀಶ್ ಶೇಣವ, ಗಣೇಶ್ ಹೊಸಬೆಟ್ಟು, ಪ್ರಭಾ ಮಾಲಿನಿ, ಮಹೇಶ್ ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

 

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top