ಬದಿಯಡ್ಕದಲ್ಲಿ ಡಾ| ಶೇಣಿ ಗೋಪಾಲಕೃಷ್ಣ ಭಟ್ `ಸಂಸ್ಕೃತಿ' ಯಕ್ಷಗಾನ ತಾಳಮದ್ದಳೆ ಉದ್ಘಾಟನೆ
ಬದಿಯಡ್ಕ: ಸರಕಾರದ ಹಂಗಿಲ್ಲದ ಶಾಲೆಗಳಲ್ಲಿ ಮಾತ್ರ ಇಂದು ಭಾರತೀಯತೆಯ ಶಿಕ್ಷಣ ಲಭಿಸುತ್ತಿದೆ. ನಮ್ಮ ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ತಿಳಿಯಪಡಿಸುವಲ್ಲಿ ಯಕ್ಷಗಾನ ಕಲೆಯಿದೆ. ದಕ್ಷಿಣೋತ್ತರ ಕನ್ನಡ ಜಿಲ್ಲೆಯ ತಿಟ್ಟಿನ ಬೇಧವಿಲ್ಲದೆ ಸರ್ವತ್ರ ಅಂಗೀಕಾರವಾದಂತಹ ಕುರಿಯ ವಿಠಲ ಶಾಸ್ತ್ರಿಗಳ ಬಗ್ಗೆ ಕಾಸರಗೋಡು ಜಿಲ್ಲೆ ಹೆಮ್ಮೆ ಪಡಬೇಕಾಗಿದೆ. ಭರತನಾಟ್ಯ, ಕಥಕ್ಕಳಿ, ಕಥಕ್ ಮೊದಲಾದ ಅನ್ಯ ನಾಟ್ಯಪ್ರಕಾರಗಳನ್ನು ಅಧ್ಯಯನ ಮಾಡಿ ಯಕ್ಷಗಾನಕ್ಕೆ ಅನುಯೋಗ್ಯವಾಗುವಂತೆ ಮಾಡಿದ ದೊಡ್ಡ ಚಿಂತಕ ವಿಠಲಶಾಸ್ತ್ರಿಗಳು. ಶೇಣಿಯಂತಹ ಮಹಾನ್ ಕಲಾವಿದರಿಗೆ ಗೆಜ್ಜೆ ಕಟ್ಟಿದ ಕೀರ್ತಿ ಅವರಿಗಿದೆ ಎಂದು ಪ್ರಸಿದ್ಧ ಯಕ್ಷಗಾನ ಕಲಾವಿದ ಉಜಿರೆ ಅಶೋಕ ಭಟ್ ಹೇಳಿದರು.
ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಆಶ್ರಯದಲ್ಲಿ ಶೇಣಿ ಜಂಗಮ ಟ್ರಸ್ಟ್ (ರಿ.) ಕಾಸರಗೋಡು, ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಉಜಿರೆ ಇವರಿಂದ ರಜತ ಪರ್ವ ಸರಣಿ ಡಾ| ಶೇಣಿ ಗೋಪಾಲಕೃಷ್ಣ ಭಟ್ ಸಂಸ್ಕೃತಿ ಯಕ್ಷಗಾನ ತಾಳಮದ್ದಳೆಯ ಉದ್ಘಾಟನಾ ಸಂದರ್ಭದಲ್ಲಿ ಅವರು ಮಾತನಾಡಿದರು. ಯಕ್ಷಗಾನ ತಾಳಮದ್ದಳೆಯ ಮೂಲಕ ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಅತ್ಯುತ್ಕೃಷ್ಟಕ್ಕೆ ಕೊಂಡೊಯ್ದ ಅಪೂರ್ವ ಕಲಾವಿದ ಶೇಣಿ ಗೋಪಾಲಕೃಷ್ಣ ಭಟ್ ಆಗಿದ್ದಾರೆ. ಕುರಿಯ ವಿಠಲ ಶಾಸ್ತ್ರಿ ಪ್ರತಿಷ್ಠಾನದ ಮೂಲಕ ಕಳೆದ 25 ವರ್ಷಗಳಿಂದ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬಂದಿದ್ದೇವೆ ಎಂದರು.
ಆನೆಮಜಲು ರಾಧಾಕೃಷ್ಣ ಭಟ್ ದೀಪಬೆಳಗಿಸಿ ಉದ್ಘಾಟಿಸಿ ಶುಭಕೋರಿದರು. ಶಾಲಾ ಸಂಚಾಲಕ ಜಯಪ್ರಕಾಶ ಪಜಿಲ, ಕಾರ್ಯದರ್ಶಿ ರಾಜಗೋಪಾಲ ಚುಳ್ಳಿಕ್ಕಾನ, ಶೇಣಿ ವೇಣುಗೋಪಾಲ ಭಟ್, ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಜೊತೆಗಿದ್ದರು. ನಂತರ ಹರಿದರ್ಶನ ಯಕ್ಷಗಾನ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಸುಬ್ರಾಯ ಸಂಪಾಜೆ, ಉದಯ ಕಂಬಾರು, ಅಂಬೆಮೂಲೆ ಶಿವಶಂಕರ ಭಟ್, ಮುಮ್ಮೇಳದಲ್ಲಿ ಸರ್ಪಂಗಳ ಈಶ್ವರ ಭಟ್, ಉಜಿರೆ ಅಶೋಕ ಭಟ್, ಶೇಣಿ ವೇಣುಗೋಪಾಲ ಭಟ್ ತಮ್ಮ ಪಾತ್ರಕ್ಕೆ ಜೀವತುಂಬಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ