ಹಾಸನ: ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನಹಡಗಲಿ ಹಾಗೂ ಹಾಸನ ಜಿಲ್ಲಾ ಘಟಕದ ಸಹಯೋಗದೊಂದಿಗೆ ಏರ್ಪಡಿಸಿದ್ದ ರಾಜ್ಯಮಟ್ಟದ ಹಾಸ್ಯ ಹನಿಗವನ ಗೋಷ್ಠಿ ನಗೆಯ ಹೊನಲು ಹರಿಸಿತು. ಏಪ್ರಿಲ್ 1ರ ಮೂರ್ಖರ ದಿನಾಚರಣೆ ಅಂಗವಾಗಿ ನಡೆದ ಗೂಗಲ್ ಮೀಟ್ ಹಾಸ್ಯ ಸಂಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕವಿ ಗೊರೂರು ಅನಂತರಾಜು ತಾವು ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟ ದಿನಗಳನ್ನು ಸ್ಮರಿಸುತ್ತಾ ತಾವು ಮತ್ತು ಹಾಸ್ಯ ಸಾಹಿತಿ ಕೋ.ಲ.ರಂಗನಾಥರಾವ್ ಶಾಲಾ ಕಾಲೇಜುಗಳಲ್ಲಿ ರೋಟರಿ ಲಯನ್ಸ್ ಕ್ಲಬ್‍ಗಳಲ್ಲಿ ನೂರಾರು ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟಿದ್ದು, ತುಮಕೂರಿನ ಗೌಡನ ಕಟ್ಟೆ ತಿಮ್ಮಯ್ಯನವರು ಏಪ್ರಿಲ್ 1ರಂದು ಮೂರ್ಖರ ದಿನಾಚರಣೆ ನಡೆಸುತ್ತಿದ್ದರು. ನಾವಿಬ್ಬರು ಮೂರ್ಖರು ಒಮ್ಮೆ ಭಾಗವಹಿಸಿ ಸನ್ಮಾನಕ್ಕೆ ತಲೆ ಬಾಗಿದ್ದವು ಎಂದರು. ಅವರ ಒಂದು ಚುಟುಕು ಹೀಗೆ..
ಯಾರಿಗೂ ತಲೆಬಾಗುವುದಿಲ್ಲ ಎನ್ನುತ್ತಿದ್ದರು
ನಮ್ಮ ಬಂಡಾಯ ಕವಿ ಭಾರ್ಗವರು
ತಿಮ್ಮಯ್ಯನವರು ಮೂರ್ಖರು ದಿನದಂದು
ಕರೆದು ಸನ್ಮಾನಿಸಿ ತಲೆ ಬಾಗಿಸಿದರು
ಹಾ.ತಿ.ಜಯಪ್ರಕಾಶ್ ಅವರು ಮಡದಿಯನ್ನು ಹೂವಿನ ಹಡಗಲ್ಲಿ ಕರೆದೊಯ್ಯುತ್ತೇನೆ ಎಂದು ಎಂತಹ ಹಡಗು ಹತ್ತಿಸಿದ್ದಾರೆ ನೋಡಿ
ಪ್ರೀತಿ ಪ್ರೇಮದ ಆ ದಿನಗಳಲ್ಲಿ
ಆಕೆಯನ್ನು ಹೂವಿನ ಹಡಗಲ್ಲಿ
ಕರೆದೊಯ್ಯುತ್ತೇನೆ ಅಂದೆ
ಮದುವೆಯಾದ ಮೇಲೆ
ಹೂವಿನ ಹಡಗಲಿಗೆ ಕರೆದೊಯ್ದು ಬಂದೆ
ಬಹುಶ: ಕವಿಗಳು ತಮ್ಮ ಮಡದಿಯನ್ನು ಹೂವಿನ ಹಡಗಲಿಯಲ್ಲಿ ರಾಜ್ಯಾಧ್ಯಕ್ಷರು ಕಳೆದ ವರ್ಷ ನಡೆಸಿದ ರಾಜ್ಯಮಟ್ಟದ ಕವಿಗೋಷ್ಠಿಗೆ ಕರೆದೊಯ್ದಿರಬಹುದೇ..?ಅನುಮಾನ ನನಗೆ. ಇನ್ನೂ ಹೂವಿನ ಹಡಗಲಿಯ ಶೋಭಾ ಮಲ್ಕಿ ಒಡೆಯರ್ ಅವರ ಬೆನಕ ಕನಕಗಳ ಪ್ರಾಸಬದ್ದತೆ...
ನೀನೊಲಿಯಲು ಫಲ ಪುಷ್ಪಗಳು ಯಾಕೆಂದೇ?
ಗರಿಕೆಯೊಂದೇ ಸಾಕೆಂದ ಬೆನಕ
ನನ್ನಾಕೆ ಒಲಿಯಲು ತೆರಲೇಬೇಕು ದುಬಾರಿಯ ಕನಕ
ಮೋಹನ್ ಕಳಾಸಪುರ ಅಡಿಕೆ ತೋಟ ಕಳೆದುಕೊಂಡಿದ್ದು ಬರೇ ಒಂದು ಕಣ್ಣೋಟಕ್ಕೆ ಖರೆಯೇ..?
ಅವಳು ಅವನತ್ತ ಬೀರಿದ್ದು ಒಂದೇ ಒಂದು ನೋಟ
ಅವನು ಮಾರಿದ್ದು ಮೂರು ಎಕರೆ ಅಡಿಕೆ ತೋಟ
ಬಳ್ಳಾರಿಯ ಕೆ.ಬಿ.ಪವನ್‍ಕುಮಾರ್‍ಗೆ ಅರಿವಿಲ್ಲ. ಪಾಪ ಮಡದಿಗೆ ಕೂಗುವ ಕುಕ್ಕರ್ ಸಿಕ್ಕಿಲ್ಲ..
ಕೇಳ್ರಪ್ಪೋ ಇದು 2023
ಕುಕ್ಕರು ಕೂಗಲ್ಲ ಸೀರೆಗೆ ಉಳಿವಿಲ್ಲ
ನಮಗೆ ಅರಿವಿಲ್ಲ ಅವ್ರಿಗೆ ಗತಿ ಇಲ್ಲ
ರಾಜಣ್ಣ ರಾಶಿ ನೌಕರರಿಗೆ ನಿದ್ರಾ ಕೇಂದ್ರ ತರೆಯುವುದಾಗಿ ಹೇಳಿ ಮಲಗಿದ್ದವರನ್ನು ತಟ್ಟಿ ಎಬ್ಬಿಸಿದರು.
ಸರ್ಕಾರಿ ನೌಕರರಿಗೆ ಒತ್ತಡದ ಕಾರಣ
ನಾಲ್ಕೇ ಕಾಸು ಮಾಡುವೆ
ಆಫೀಸಿನಲ್ಲಿ ಮಲಗಲು ಮತ್ತನೆ ಹಾಸಿಗೆ
ಸಾವಿರಾರು ನಿದ್ರಾ ಕೇಂದ್ರ ತೆರೆಯುವೆ
ರಾಜೇಶ್ವರಿ ಹಲ್ಲೇನಹಳ್ಳಿ ಡಾಬು ತರಲು ಷರಟಿನ್ನು ಇಸ್ತ್ರೀ ಮಾಡಿದರು. ಜೇಬು ಖಾಲಿ ಒಡವೆ ದುಬಾರಿ.
ನನ್ನ ಕೈಗೆ ನಿಲುಕದ ಬಂಗಾರದ ದರದಲ್ಲಿ
ಹೇಗೆ ಮಾಡಿಸಲಿ ಡಾಬು
ನನ್ನದೋ ಇಸ್ತ್ರೀ ಮಾಡಿಸಿದ ಜೇಬು
ಅರಸೀಕೆರೆ ಪರಮೇಶ್ ಅವರಿಗೆ ಅಜ್ಜನೊಡನೆ ಮಜ್ಜಿಗೆ ಕುಡಿಯುವ ಆಸೆ ಆದರೇ..?
ಅಜ್ಜನೊಡನೆ ಕುಳಿತು ಊಟ ಮಾಡಲು ಆಸೆ
ಆದರೆ ಮಜ್ಜಿಗೆ ಕುಡಿಯುವಾಗ ಈಜಾಡುತ್ತೆ ಅವರ ಮೀಸೆ..!
ಶಿರಸಿಯ ಉಷಾ ಗಂಗಾಧರ ದೈವಜ್ಞ ಅವರ ಪದ್ಯದಲ್ಲಿ ಪದ್ದಿ ಮಾಡಿದ ಎಡವಟ್ಟು ಎಂತಹದ್ದು.?
ಪದ್ದಿ ಮೆಟ್ರಿಕ್ ಪಾಸಾಗಿದ್ದಳು
ಖಾಲಿ ಹುದ್ದೆಯ ಪ್ರಕಟಣೆ ನೋಡಿದಳು
ಅರ್ಜಿಯನ್ನು ಭರ್ತಿ ಮಾಡತೊಡಗಿದಳು
ಭಾವಚಿತ್ರವಿದ್ದಲ್ಲಿ ಭಾವನ ಛಾಯಚಿತ್ರ ಅಂಟಿಸಿದ್ದಳು..!
ಗದಗದ ಸೌಭಾಗ್ಯ ಅರೇರ ಅವರು ಮಗು ಎತ್ತಿಕೊಳ್ಳಲು ಹೋದರೆ ಅದು ಮುಖ ತಿರುಗಿಸಿಕೊಳ್ಳಬೇಕೆ..?
ನನ್ನ ನೋಡಿ ನಕ್ಕಿತ್ತು
ಹತ್ತಿರ ಹೋದಾಗ ಬಿಕ್ಕಿ ಬಿಕ್ಕಿ ಅತ್ತಿತ್ತು
ಬಾ ಎಂದು ಕರೆದಾಗ ಮುಖ ನೋಡಿತು
ಹಡೆದವ್ವ ಅಲ್ಲ ಎಂದು ಮುಖ ತಿರುಗಿಸಿಕೊಂಡಿತ್ತು
ಶ್ರೀಮತಿ ಡಿ.ಕೆ.ಹೂಗಾರರ ಬಿನಾಳರಿಗೆ ಸಿಕ್ಕಿದೆಯಂತೆ ಹೀಗೊಂದು ಮುನ್ಸೂಚನೆ..?
ಮಳೆ ಬರುವಾಗ ಗುಡುಗು ಮಿಂಚುಗಳ ಮುನ್ಸೂಚನೆ
ಹೆಂಡತಿ ಬರುವಾಗ ಪಾತ್ರೆಗಳ ಶಬ್ಧದ ಮುನ್ಸೂಚನೆ..!
ಕೊಡಗಿನ ಗೋಣಿಕೊಪ್ಪಲು ವಿ.ಟಿ.ಶ್ರೀನಿವಾಸ್ ಅವರಿಗೆ ಆ ಕಹಿ ನೆನಪು ಮಾಸಿಲ್ಲ
ನಾವು ಜನಮಾನಸದಲ್ಲಿ ಒಮ್ಮ್ಮೆಗೆ ಮಿಂಚಲು
ಚಿತ್ರ ನಟರಾಗಬೇಕೆಂದೇನು ಇಲ್ಲ
ಐದು ರೂಪಾಯಿ ಮೊಟ್ಟೆಯೊಂದೆ ಸಾಕು
ಕಾರಿಗೆ ಎಸೆಯಲು ತಾಕತ್ತು ಬೇಕು
ಹಾಸ್ಯ ಮಾಸಪತ್ರಿಕೆಯ ಸಂಪಾದಕರು ಎಸ್.ಎಸ್.ಪಡಶೆಟ್ಟಿ ಹಾಸ್ಯರಸದ ಪತ್ರ ಓದಿದರೇ ಚಿತ್ರ ನಟ ಕುಡಿತಾಯಣ ನಾಟಕದ ಕರ್ತೃ ಮೈಸೂರು ರಮಾನಂದ್ ಕುಡುಕರ ಜೋಕ್ ಹೇಳಿದರು. ಕರ್ನಾಟಕ ರಾಜ್ಯ ಬರಹಗಾರರ ಸಂಘದ ಉಪಾದ್ಯಕ್ಷರು ಕೆ.ಬಾರಾವಲಿ ಬಾವಿಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಕ.ರಾ.ಬ.ಸಂಘ ಕಟ್ಟಾಯ ಹೋಬಳಿ ಘಟಕದ ಅಧ್ಯಕ್ಷ ಸುಂದರೇಶ್ ಉಡುವೇರೆ ಮುಂದಿನ ದಿನಗಳಲ್ಲಿ ರಾಜ್ಯಮಟ್ಟದ ಸಾಹಿತ್ಯ ಕಾರ್ಯಕ್ರಮ ಏರ್ಪಡಿಸುವುದಾಗಿ ಉತ್ಸುಕತೆ ತೋರಿದರು.ರಾಜ್ಯಾದ್ಯಂತ ಮೂವತ್ತಕ್ಕೂ ಹೆಚ್ಚು ಕವಿ/ಕವಯತ್ರಿಯರು ಹನಿಗವಿತೆಗಳನ್ನು ವಾಚಿಸಿದರು. ಹಾಸ್ಯ ಸಾಹಿತಿ ಕೋ.ಲ.ರಂಗನಾಥರಾವ್ ಇದ್ದರು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಹಾಸನ ಜಿಲ್ಲಾದ್ಯಕ್ಷರು ಈ.ಕೃಷ್ಣೇಗೌಡರು ಜಿಲ್ಲಾ ಸರ್ಕಾರಿ ನೌಕರರ ಸಂಘದಿಂದ ಹಾಸ್ಯ ಸಂಜೆ ಕಾರ್ಯಕ್ರಮ ಏರ್ಪಡಿಸುವುದಾಗಿ ತಿಳಿಸಿದರು. ಶ್ರೀಮತಿ ಕಲಾಶ್ರೀ ಹಾದಿಮನಿ, ಅಧ್ಯಕ್ಷರು, ಕ.ರಾ.ಬ.ಸಂಘ, ಗದಗ ಪ್ರಾರ್ಥಿಸಿದರು. .ನಾಗೇಂದ್ರಪ್ಪ ಸಿ.ಹೆಚ್. ಉಪಾಧ್ಯಕ್ಷರುಕ.ರಾ.ಬ.ಸಂಘ, ಶಿವಮೊಗ್ಗ ಸ್ವಾಗತಿಸಿದರು. ರಾಜ್ಯಾಧಕ್ಷರು ಮಧು ನಾಯ್ಕ್ ಲಂಬಾಣಿ ವಂದಿಸಿದರು.
-ಗೊರೂರು ಅನಂತರಾಜು, ಅಧ್ಯಕ್ಷರು,
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ