ಹಾಸನ: ವಯಸ್ಸಾದ ತಂದೆತಾಯಿಗಳನ್ನು ಮಕ್ಕಳು ಸರಿಯಾಗಿ ನೋಡಿಕೊಳ್ಳದೇ ಅವರ ಬದುಕು ಅತಂತ್ರವಾಗುತ್ತಿರುವ ವಾಸ್ತವ ಪರಿಸ್ಥಿತಿಯನ್ನು ಬಾಡಿದ ಬದುಕು ನಾಟಕ ನಿರೂಪಿಸಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಹಾಸನ ಜಿಲ್ಲಾ ಘಟಕದ ಅಧ್ಯಕ್ಷರು ಈ.ಕೃಷ್ಣೇಗೌಡರು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಭವನ ಬೆಂಗಳೂರು ಶ್ರೀ ಶಾರದಾ ಕಲಾಸಂಘ ವಿಜಯನಗರ ಬಡಾವಣೆ, ಹಾಸನ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಸನ ಇವರ ಸಂಯುಕ್ತಾಶ್ರಯದಲ್ಲಿ 2022-23ನೇ ಸಾಲಿನ ವಿಶೇಷ ಘಟಕ ಯೋಜನೆಯಡಿ ಹಾಸನಾಂಬ ಕಲಾಕ್ಷೇತ್ರದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಸಾಹಿತಿ ಗೊರೂರು ಅನಂತರಾಜು ಅವರ ಸಂಗೀತ ನೃತ್ಯ ಸಂಗಮ ಕೃತಿಯನ್ನು ಲೋಕೋರ್ಪಣೆಗೊಳಿಸಿ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡರು ಮಾತನಾಡಿ, ನಾಟಕ ನಮಗೆ ಮನರಂಜನೆ ನೀಡುವುದಷ್ಟೇ ಅಲ್ಲಾ ಅವು ಸಮಾಜದ ಒಳಿತು ಕೆಡುಕಗಳನ್ನು ಅನಾವರಣಗೊಳಿಸಿ ಉತ್ತಮ ಬದುಕನ್ನು ರೂಪಿಸಿಕೊಳ್ಳಲು ಪ್ರೇರಕ. ಅನಂತರಾಜು ಜಿಲ್ಲೆಯ ನಟ ನಿರ್ದೇಶಕರು, ನೃತ್ಯ ಸಂಗೀತ ಚಿತ್ರ ಕಲಾವಿದರು, ನಾಟಕ ಪ್ರದರ್ಶನಗಳ ವಿಮರ್ಶೆಗಳನ್ನು ಪತ್ರಿಕೆಗಳಲ್ಲಿ ಬರೆಯುತ್ತಾ ಬಂದು ಅವುಗಳನ್ನೆಲ್ಲಾ ಪುಸ್ತಕವಾಗಿ ಪ್ರಕಟಿಸಿ ಕಲಾವಿದರನ್ನು ಬೆಳಕಿಗೆ ತರುತ್ತಿರುವುದು ಶ್ಲಾಘನೀಯ ಎಂದರು.
ಹಲೋ ಹಾಸನ್ ಪತ್ರಿಕೆಯ ಸಂಪಾದಕರು ರವಿ ನಾಕಲಗೊಡು ಮಾತನಾಡಿ, ಹೆಚ್.ಜಿ.ಗಂಗಾಧರ್ ಮತ್ತು ಗೊರೂರು ಅನಂತರಾಜು ಜೋಡಿ ಉತ್ತಮ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಾಟಕಗಳನ್ನು ಸಂಘಟಿಸಿ ಒಂದೇ ವೇದಿಕೆಯಲ್ಲಿ ಹಲವು ಕಲಾ ಪ್ರಕಾರಗಳ ಕಲಾವಿದರಿಗೆ ವೇದಿಕೆ ಕಲ್ಪಿಸಿರುವುದು ಸ್ವಾಗತಾರ್ಹ ಎಂದರು.
ಹಾಸ್ಯ ಸಾಹಿತಿ ಎಸ್.ಎಸ್.ಪಡಶೆಟ್ಟಿ, ಕವಿ ಎನ್.ಎಲ್.ಚನ್ನೇಗೌಡ, ಕಲಾವಿದರು ಎ.ಸಿ.ರಾಜು, ಯಲಗುಂದ ಶಾಂತಕುಮಾರ್, ನಾಗಮೋಹನ್, ಹೆಚ್.ಎಂ.ಪ್ರಭಾಕರ್, ರಮೇಶ್, ಹಾರ್ಮೋನಿಯಂ ದೇವರಾಜ್, ಶಿವನಂಜೇಗೌಡರು, ಚನ್ನರಾಯಪಟ್ಟಣ ಕುಮಾರ್ ಇದ್ದರು. ಜ್ಞಾನೇಶ್ ಎಂ.ಬಿ. ನಿರ್ಮಾಣದ ಅಂಗೈಲಿ ಅಕ್ಷರ ಮಕ್ಕಳ ಚಲನಚಿತ್ರ ಪ್ರದರ್ಶನದ ನಂತರ ಕಲಾವತಿ ಮಧುಸೂಧನ್‍ರಿಂದ ವೀಣಾವಾದನ, ಪುಟ್ಟಮ್ಮ ತಂಡದ ಸೋಬಾನೆ ಪದ ಯೋಗೇಂದ್ರ ದುದ್ದ ಜಾನಪದ ತತ್ವ ಪದ ಬೆನಕ ತಂಡದ ಕೋಲಾಟ, ಚನ್ನರಾಯಪಟ್ಟಣ ಶೈಲಜ ತಂಡದ ನೃತ್ಯ ರೂಪಕ, ಬಿಜಾಪುರ ಜಿಲ್ಲೆ ಚಡಚಣದ ಶಿವಣ್ಣಗೌಡ ಶಿವಗೊಂಡ ಮಹದೇವ ಬಿರದಾರ ಮತ್ತು ಸಂಗಪ್ಪ ಜಯಗೊಂಡರ ದೊಡ್ಡಾಟ ಮತ್ತು ಲಕ್ಷ್ಮಿದೇವಿ ಸಂಘದ ನಿಂಬವ್ವ ತಂಡದ ಗಾಯನ, ಎ.ಸಿ.ರಾಜು ತಂಡದ ರಂಗಗೀತೆಗಳು, ಶಾರದ ಕಲಾಸಂಘ ಹೆಚ್.ಜಿ.ಗಂಗಾಧರ್ ಸುಗಮ ಸಂಗೀತ, ನಂಜನಗೂಡು ಸೋಮರಾಜ್ ಭಕ್ತಿಗೀತೆ, ಎಸ್.ಎಸ್.ಪಡಶೆಟ್ಟಿರ ಹಾಸ್ಯ ರಸಾಯನ ರಂಜಿಸಿದವು. ಗ್ಯಾರಂಟಿ ರಾಮಣ್ಣ ತಂಡದ ಬಾಡಿದ ಬದುಕು ನಾಟಕ, ಕಟ್ಟಾಯ ಚಂದನ್ ತಂಡದ ಗೊರೂರು ಅನಂತರಾಜು ವಿರಚಿತ ತೋಳ ಬಂತು ತೋಳ ಸಾಮಾಜಿಕ ನಾಟಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿದವು. ಪಿ.ಲಂಕೇಶ್‍ರ ಪೊಲೀಸರಿದ್ದಾರೆ ನಾಟಕಕಾರ ಸಂಸರ ಬದುಕಿನ ಮೇಲೆ ಕ್ಷ ಕಿರಣ ಬೀರಿತು.
ಹೆಚ್.ಎಸ್.ಪ್ರತಿಮ ಕಾರ್ಯಕ್ರಮ ನಿರೂಪಿಸಿದರು. ಎ.ಸಿ.ರಾಜು ಪ್ರಾರ್ಥಿಸಿದರು. ಗೊರೂರು ಅನಂತರಾಜು ಸ್ವಾಗತಿಸಿದರು. ಹೆಚ್.ಜಿ.ಗಂಗಾಧರ್ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ