ದಾ. ನ. ಉಮಾಣ್ಣ ಅವರ ದೇವರ ಬೇಸಾಯ ಕವನ ಸಂಕಲನ ಬಿಡುಗಡೆ
ಮಂಗಳೂರು: ಕಾವ್ಯವು ದೈವೀಕ ನೆಲೆಯ ಒಂದು ಅಭಿವ್ಯಕ್ತಿ. ಕವಿ ತನ್ನ ಕಾವ್ಯದಲ್ಲಿ ಸತ್ಯವನ್ನಲ್ಲದೆ ಬೇರೇನನ್ನೂ ಹೇಳುವುದಿಲ್ಲ. ಕಾವ್ಯ ಬರೆಯುವ ಸಂದರ್ಭದಲ್ಲಿ ಆತ ದೇಶ ಕಾಲ ಪಂಥ ಪಂಗಡ ಧರ್ಮ ಮತ ಜಾತಿ ಇಂತಹ ಯಾವ ಕಟ್ಟುಪಾಡುಗಳಿಲ್ಲದೆ ವಿಶ್ವಾತ್ಮಕ ಪ್ರಜ್ಞೆಯಿಂದ ಕಾವ್ಯ ರಚಿಸುತ್ತಾನೆ. ಹಾಗಾಗಿಯೇ ಕಾವ್ಯವು ಸದಾ ಜೀವಂತಿಕೆ ಯನ್ನು ಮತ್ತು ಆಕರ್ಷಣೆಯನ್ನು ಉಳಿಸಿಕೊಂಡು ಬಂದಿದೆ ಎಂದು ಪ್ರಸಿದ್ಧ ಕವಿ - ಸಾಹಿತಿ ಹಾಗೂ ಮಂಗಳೂರು ಆಕಾಶವಾಣಿಯ ನಿವೃತ್ತ ನಿರ್ದೇಶಕ ಡಾ. ವಸಂತಕುಮಾರ ಪೆರ್ಲ ಅವರು ಹೇಳಿದರು.
ಕವಿ ದಾ. ನ. ಉಮಾಣ್ಣ ಅವರ ದೇವರ ಬೇಸಾಯ ಕವನ ಸಂಕಲನವನ್ನು ಮಂಗಳೂರಿನ ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಬಿಡುಗಡೆಗೊಳಿಸಿ ಅವರು ಮಾತಾಡುತ್ತಿದ್ದರು.
ಸಾಮಾಜಿಕವಾದ ಎಲ್ಲ ರೋಗಗಳಿಗೆ ಕಾವ್ಯವು ಔಷಧವಾಗಿದೆ. ಯಾವುದು ಒಳಿತು ಯಾವುದು ಕೆಡುಕು ಎಂಬುದನ್ನು ಕಪ್ಪು - ಬಿಳುಪಿನ ರೀತಿಯಲ್ಲಿ ಚಿತ್ರಿಸುವ ಕಾವ್ಯವು ಮಾನವತೆಗೆ ಸದಾ ಬೆಳಕಿನ ಹಾದಿಯನ್ನು ತೋರಿಸುತ್ತ ಬಂದಿದೆ. ಕವಿ ದಾ. ನ. ಉಮಾಣ್ಣ ಅವರು ಬದುಕಿನಲ್ಲಿ ಕಷ್ಟ ಸಂಕಟಗಳನ್ನು ಅನುಭವಿಸಿದರೂ ಅವರ ಕಾವ್ಯವು ಕಲ್ಮಷದಿಂದ ಕೂಡಿರದೆ ವಿಧಾಯಕ ನೆಲೆಯಿಂದ ಜೀವಪ್ರೀತಿಯನ್ನು ತುಂಬಿಕೊಂಡಿದೆ ಎಂದು ಡಾ. ಪೆರ್ಲ ಅವರು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಲೇಖಕ ಸದಾನಂದ ನಾರಾವಿ ಅವರು ವಹಿಸಿದ್ದರು. ಉಮಾಣ್ಣ ಅವರ ಕವನಗಳು ರಾಗ ತಾಳ ಮತ್ತು ಶ್ರುತಿಬದ್ಧವಾಗಿದ್ದು ಹಾಡುವುದಕ್ಕೆ ಯೋಗ್ಯವಾಗಿವೆ. ಹೃದಯದಿಂದ ಮೂಡಿ ಬಂದ ಅಭಿವ್ಯಕ್ತಿಯಂತೆ ತೋರುತ್ತದೆ ಎಂದು ಹೇಳಿದರು
ಲೇಖಕ ಹಾಗೂ ಪ್ರಾಧ್ಯಾಪಕ ರಘು ಇಡ್ಕಿದು ಕೃತಿ ಪರಿಚಯ ಮಾಡಿದರು. ಉಮಾಣ್ಣ ಅವರ ಕವನಗಳು ಭಕ್ತಿ ಮತ್ತು ಭಾವಗಳಿಂದ ತುಂಬಿಕೊಂಡಿದ್ದು ಹಾಡುವುದಕ್ಕೆ ಯೋಗ್ಯವಾಗಿವೆ. ದೇವರ ಬೇಸಾಯ ಎಂಬ ಸಾಂಕೇತಿಕ ಶೀರ್ಷಿಕೆಯಿಂದ ಕವನ ಸಂಕಲನ ಅರ್ಥಪೂರ್ಣವಾಗಿ ಮೂಡಿ ಬಂದಿದೆ ಎಂದರು.
ತಾನು ಕವಿತೆಗಳನ್ನು ಬರೆಯಲು ಸಾಧ್ಯವಾದ ಸಂದರ್ಭವನ್ನು ಉಮಾಣ್ಣ ವಿವರಿಸಿದರು. ಪರಿಸರದ ಶಾಲಾ ಮಕ್ಕಳು ಮತ್ತು ಭಜನಾ ತಂಡಗಳು ಹೇಗೆ ತನ್ನ ಬರವಣಿಗೆಯನ್ನು ಪ್ರಭಾವಿಸಿದರು ಎಂದು ತಿಳಿಸಿದರು.
ಕೃತಿ ಪ್ರಕಾಶಕರಾದ ಕಲ್ಲೂರು ನಾಗೇಶ ಪ್ರಾಸ್ತಾವಿಕವಾಗಿ ಮಾತಾಡಿ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಕವಿ ಎನ್. ಸುಬ್ರಾಯ ಭಟ್ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ