ಬೆಂಗಳೂರು: 'ಪ್ರತಿ ವರ್ಷ ಬಿಸಿಗಾಳಿ ಹಾಗೂ ಕ್ಷಾಮಗಳಿಂದ ಜಗತ್ತಿನಾದ್ಯಂತ ಕಳೆದುಕೊಳ್ಳುತ್ತಿರುವ ಬೆಳೆಯ ಬೆಲೆ 82,150 ಕೋಟಿ ರೂಪಾಯಿಗಳಿಗಿಂತ ಅಧಿಕ. ಕೊಲಂಬಿಯಾದ ಭೂಮಿ ಸಂಸ್ಥೆ ಅಂದರೆ 'ಅರ್ಥ್ ಇನ್ಸ್ಟಿಟ್ಯೂಟ್' ವರದಿಯ ಪ್ರಕಾರ ಇತ್ತೀಚಿನ ಹವಾಮಾನ ವೈಪರೀತ್ಯಗಳಿಂದ ಈ ನಷ್ಟ ದುಪ್ಪಟ್ಟಾಗುವ ಸಾಧ್ಯತೆಗಳಿವೆ. ಈ ಸಂದರ್ಭದಲ್ಲಿ ರೈತರಿಗೆ ಸುಲಭ ದರದಲ್ಲಿ ನೆರವಾಗುವಂತೆ ಒಳ ಆವರಣಗಳ ನಿಯಂತ್ರಿತ ಕೃಷಿಗೆ ನೆರವಾಗುವ ತಂತ್ರಜ್ಞಾನವನ್ನು ನಾವು ಗಣನೀಯ ಪ್ರಮಾಣದಲ್ಲಿ ಪರಿಷ್ಕರಿಸಬೇಕು ಮತ್ತು ಆವಿಷ್ಕರಿಸಬೇಕು. ಈ ನಿಟ್ಟಿನಲ್ಲಿ 'ಎಚ್.ವಿ.ಎಸಿ' ಅಂದರೆ 'ಹೀಟಿಂಗ್ (ಶಾಖ), ವೆಂಟಿಲೇಟಿಂಗ್ (ಗವಾಕ್ಷ) ಹಾಗೂ ಏರ್ ಕಂಡಿಶನಿಂಗ್ (ಹವಾನಿಯಂತ್ರಣ)'ಗಳ ಸುಧಾರಣೆ ಕುರಿತ ಸಂಶೋಧನೆಗಳು ಅಧಿಕ ಪ್ರಮಾಣದಲ್ಲಿ ನಡೆಯಬೇಕು', ಎಂದು ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಶೈಕ್ಷಣಿಕ ವಿಭಾಗದ ಮುಖ್ಯಸ್ಥ ಡಾ. ವಿ. ಶ್ರೀಧರ್ ನುಡಿದರು.
ಅವರು ಬೆಂಗಳೂರಿನ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನೂತನವಾಗಿ ಬ್ಲೂಸ್ಟಾರ್ ಕಂಪನಿಯ ಪ್ರಾಯೋಜಕತ್ವದಲ್ಲಿ ಸ್ಥಾಪಿಸಿರುವ 'ಎಚ್.ವಿ.ಎಸಿ ಔನ್ನತ್ಯ ಕೇಂದ್ರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. 'ನಮ್ಮ ಸಂಶೋಧನೆಗಳು ಹಾಗೂ ಆವಿಷ್ಕಾರಗಳು ನಗರದ ಇಕ್ಕಟ್ಟಾದ ಪ್ರದೇಶಗಳಲ್ಲೂ ಹವಾನಿಯಂತ್ರಿತ ಕೃಷಿ ಚಟುವಟಿಕೆಗಳನ್ನು ನಡೆಸುವಂತೆ ಸವಲತ್ತುಗಳನ್ನು ಒದಗಿಸುವಂತಿರಬೇಕು. ಇದರಿಂದ ಮಣ್ಣಿನ ಸವಕಳಿ ಹಾಗೂ ಹವಾಮಾನ ವೈಪರೀತ್ಯದ ಪರಿಣಾಮವನ್ನು ತಗ್ಗಿಸಬಹುದು', ಎಂದು ಅವರು ತಿಳಿಸಿದರು.
ಬ್ಲೂಸ್ಟಾರ್ ಸಂಸ್ಥೆಯ ವ್ಯವಸ್ಥಾಪಕ ನಿರ್ವಾಹಕ ಮೈಖೇಲ್ ಆಂಗ್ರೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಅವರು ಮಾತನಾಡುತ್ತ, 'ಹೀಟಿಂಗ್, ವೆಂಟಿಲೇಟಿಂಗ್ ಹಾಗೂ ಏರ್ ಕಂಡಿಶನಿಂಗ್ ತಂತ್ರಜ್ಞಾನ ಈಗ ಸಾಕಷ್ಟು ಸುಧಾರಿಸಿದೆ ಹಾಗೂ ಸುಧಾರಿಸುತ್ತಿದೆ. ಇದರಿಂದ ಪ್ರತಿ ವಾಣಿಜ್ಯ ಸಂಕೀರ್ಣಗಳಲ್ಲಿ ಗುಣಮಟ್ಟದ ಗಾಳಿ ಲಭಿಸುವಂತೆ ಮಾಡಲು ಸಾಧ್ಯವಾಗುತ್ತದೆ. ಹೊರಗಿನ ಹೊಚ್ಚ ಹೊಸ ಗಾಳಿಯನ್ನು ನಿಯಂತ್ರಿತ ವ್ಯವಸ್ಥೆಯಲ್ಲಿ ಒಳತರಲಾಗುತ್ತದೆ. ಇದು ಕೆಲಸ ಮಾಡುವ ಉದ್ಯೋಗಿಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಈ ನಿಟ್ಟಿನಲ್ಲಿ ಸಂಶೋಧನೆಗಳು ಹೆಚ್ಚು ನಡೆಯಬೇಕು ಹಾಗೂ ಹೊಸ ಆವಿಷ್ಕಾರಗಳು ಪರಿಸರಸ್ನೇಹಿ ಆಗಿರಬೇಕು ಎಂಬ ಉದ್ದೇಶದಿಂದಲೇ ಈಗ ಕೈಗಾರಿಕೆಗಳು ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಜತೆ ಕೈಜೋಡಿಸುತ್ತಿವೆ', ಎಂದರು.
ಪ್ರಾರಂಭದಲ್ಲಿ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಅಂತರಾಷ್ಟ್ರೀಯ ತಂತ್ರಜ್ಞಾನದ ವಿನಿಮಯ ವಿಭಾಗದ ಮುಖ್ಯಸ್ಥ ಡಾ. ಜೆ. ಸುಧೀರ್ ರೆಡ್ಡಿ ಸ್ವಾಗತಿಸಿದರು. ನಿಟ್ಟೆ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ರೋಹಿತ್ ಪೂಂಜ, ಬ್ಲೂಸ್ಟಾರ್ ಸಂಸ್ಥೆಯ ಸಂಜೀವ್ ರಸ್ತೋಗಿ, ಜೊಸ್ಸನ್ ಅಕ್ಕಾರ, ಪಳನಿ ಇ, ದೀಪಕ್ ಕೆ.ಪಿ ಹಾಗೂ ಸಂಸ್ಥೆಯ ನೂರಾರು ವಿದ್ಯಾರ್ಥಿಗಳು ಹಾಗೂ ಶಿಕ್ಷಕ ಸಿಬ್ಬಂದಿ ಉಪಸ್ಥಿತರಿದ್ದರು. ಕೊನೆಯಲ್ಲಿ ಸಂಸ್ಥೆಯ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಎನ್. ಕಪಿಲನ್ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ