ದಶಮಾನೋತ್ಸವ ಪ್ರಶಸ್ತಿ ಮತ್ತು ಯಕ್ಷಮಂಗಳ ಪ್ರಶಸ್ತಿ ಪ್ರದಾನ, ಮಂಗಳೂರು ವಿವಿ ಸಾಂಸ್ಕೃತಿಕ ನೀತಿ ಬಿಡುಗಡೆ
ಕೊಣಾಜೆ: ಮಂಗಳೂರು ವಿಶ್ವವಿದ್ಯಾಲಯದ ಡಾ.ಪಿ. ದಯಾನಂದ ಪೈ ಮತ್ತು ಪಿ. ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ದಶಮಾನೋತ್ಸವ ಪ್ರಶಸ್ತಿ ಮತ್ತು ಯಕ್ಷಮಂಗಳ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮಾ.18 ರಂದು ಶನಿವಾರ 10 ಗಂಟೆಗೆ ಮಂಗಳಾ ಸಭಾಂಗಣದಲ್ಲಿ ನಡೆಯಲಿದೆ.
ಎಡನೀರು ಮಠದ ಶ್ರೀ ಸಚ್ಛಿದಾನಂದ ಭಾರತಿ ಸ್ವಾಮಿಜಿ ಅವರ ಉಪಸ್ಥಿತಿಯಲ್ಲಿ ಡಾ.ಪಿ.ದಯಾನಂದ ಪೈಮತ್ತು ಸತೀಶ್ ಪೈ ಯಕ್ಷಗಾನ ಕೇಂದ್ರದ ಪ್ರಾಯೋಜಕರಾದ ಡಾ.ಪಿ.ದಯಾನಂದ ಪೈ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಮೋಹನ್ ಆಳ್ವ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಯಕ್ಷಗಾನ ವಿದ್ವಾಂಸ ಪ್ರೊ. ಎಂ.ಎಲ್. ಸಾಮಗ, ಪ್ರೊ.ಪಾದೇಕಲ್ಲು ವಿಷ್ಣು ಭಟ್ ಹಾಗೂ ಡಾ.ಗಣರಾಜ ಕುಂಬ್ಳೆ ಅವರು ಅಭಿನಂದನಾ ಭಾಷಣ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಯಕ್ಷಗಾನ ರಂಗಸ್ಥಳದ ಶಿಲಾನ್ಯಾಸ, ಯಕ್ಷಹಾಸ್ಯ ಹಾಗೂ ಲಾವಣ್ಯ ಲಕ್ಷ್ಮೀ ಮಂಥರೋಪ ಖ್ಯಾನ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ.
ಕೇಂದ್ರದ ದಶಮಾನೋತ್ಸವ ಪ್ರಶಸ್ತಿ ಪುರಸ್ಕೃತರು:
ಯಕ್ಷಗಾನ ಹಿಮ್ಮೇಳ-ಮುಮ್ಮೇಳ ಕಲಾವಿದರಾದ ಪುತ್ತಿಗೆ ರಘುರಾಮ ಹೊಳ್ಳ, ದಿನೇಶ ಅಮ್ಮಣ್ಣಾಯ, ಸುಬ್ರಹ್ಮಣ್ಯ ಧಾರೇಶ್ವರ, ಕುರಿಯ ಗಣಪತಿ ಭಟ್, ಪದ್ಯಾಣ ಶಂಕರ ನಾರಾಯಣ ಭಟ್, ಹರಿನಾರಾಯಣ ಬೈ ಪಡಿತ್ತಾಯ, ಅರುವ ಕೊರಗಪ್ಪ ಶೆಟ್ಟಿ, ಶಿವರಾಮ ಜೋಗಿ, ಕುಂಬ್ಳೆ ಶ್ರೀದರರಾವ್, ಆರ್ಗೋಡು ಮೋಹನ್‌ದಾಸ ಶೆಣೈ, ಪೇತ್ರಿ ಮಾಧವ ನಾಯ್ಕ, ಬಳ್ಕೂರು ಕೃಷ್ಣ ಯಾಜಿ, ಮುಖ್ಯಪ್ರಾಣ ಕಿನ್ನಿಗೋಳಿ, ಉಬರಡ್ಕ ಉಮೇಶ್ಶೆಟ್ಟಿ, ಪೂಕಳ ಲಕ್ಷ್ಮೀನಾರಾಯಣ ಭಟ್, ಡಾ.ಉಪ್ಪಂಗಳ ಶಂಕರ ನಾರಾಯಣ ಭಟ್, ಡಾ.ಚಂದ್ರಶೇಖರ ದಾಮ್ಲೆ ಅವರಿಗೆ ದಶಮಾನೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಯಕ್ಷಮಂಗಳ ಪ್ರಶಸ್ತಿ ಪುರಸ್ಕೃತರು:
ಡಾ.ಪಿ.ದಯಾನಂದ ಪೈ ಮತ್ತು ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ 2021- 22 ನೇ ಸಾಲಿನ ಯಕ್ಷಮಂಗಳ ಪ್ರಶಸ್ತಿಗೆ ಹಿರಿಯ ಕಲಾವಿದರಾದ ಪುಂಡರೀಕಾಕ್ಷ ಉಪಾಧ್ಯಾಯ ಹಾಗೂ ದಯಾನಂದ ನಾಗೂರು ಅವರು ಆಯ್ಕೆಯಾಗಿದ್ದಾರೆ. ಯಕ್ಷ ಮಂಗಳ ಕೃತಿ ಪ್ರಶಸ್ತಿಗೆ ಡಾ.ಡಿ.ಸದಾಶಿವ ಭಟ್ಟ ಅವರ ' ಶ್ರೀಕೃಷ್ಣಚರಿತ ' ಯಕ್ಷಗಾನ ಮಹಾಕಾವ್ಯ ಆಯ್ಕೆಯಾಗಿದ್ದು ಲೇಖಕರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭದ ಬಳಿಕ ಯಕ್ಷಮಂಗಳ ತಂಡದ ಹಿರಿಯ ಕಲಾವಿದರಿಂದ ʼಮಹಿಷವಧೆʼ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ. ಶ್ರೀಪತಿ ಕಲ್ಲೂರಾಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಂಗಳೂರು ವಿವಿ ಸಾಂಸ್ಕೃತಿಕ ನೀತಿ ಬಿಡುಗಡೆ:
ಮಂಗಳೂರು ವಿಶ್ವವಿದ್ಯಾನಿಲಯದ ಸಾಂಸ್ಕೃತಿಕ ನೀತಿ ಬಿಡುಗಡೆ ಕಾರ್ಯಕ್ರಮವು ನಡೆಯಲಿದ್ದು, ಮೂಡಬಿದಿರೆಯ ಆಳ್ವಾಸ್ ಪ್ರತಿಷ್ಠಾನದ ಡಾ.ಎಂ.ಮೋಹನ್ ಆಳ್ವ ಸಾಂಸ್ಕೃತಿಕ ನೀತಿ ಬಿಡುಗಡೆಗೊಳಿಸಲಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ