|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ರಂಗ ಪ್ರಯೋಗ: ರಂಜಿಸಿದ ಕಡವೆ ಬೇಟೆ ನಾಟಕ

ರಂಗ ಪ್ರಯೋಗ: ರಂಜಿಸಿದ ಕಡವೆ ಬೇಟೆ ನಾಟಕ



ಹಾಸನ: ಇಲ್ಲಿನ ಉಲಿವಾಲ ಸ್ಕೂಲ್ ಆಫ್ ಡ್ರಾಮ ವತಿಯಿಂದ ಶ್ರೀಮತಿ ರತಿ ಹೆಚ್.ಜಿ. ನಿರ್ದೇಶನದಲ್ಲಿ ಹಾಸನಾಂಬ ಕಲಾಕ್ಷೇತ್ರದಲ್ಲಿ ನಡೆದ ಕಡವೆ ಬೇಟೆ ನಾಟಕ ಯಶಸ್ವಿ ಪ್ರದರ್ಶನ ಕಂಡಿತು. ಸಾಮಾಜಿಕ ನಾಟಕಕ್ಕೆ ಒಂದು ಕಮರ್ಷಿಯಲ್ ಸಿನಿಮಾ ರೀತಿ ಮನರಂಜನಾ ಮಸಾಲೆಗಳನ್ನು ಬೆರಸಲಾಗಿತ್ತು. ಸಂಗೀತ, ಬೆಳಕು, ಮೈಕ್ ಸಫೋರ್ಟ್ ಹದವಾಗಿದ್ದು, ತನಿಯ ಚೆಲುವಿಯರ ಲವ್ ಸಾಂಗ್, ಜ್ಯೋತಿ ಮಮತಾರ ಡಾಬಾ ಡ್ಯಾನ್ಸ್ ರಸಿಕರಿಗೆ ರಸವತ್ತಾಗಿ, ಸದಾ ಕೊರಗುವ ಮನಗಳಿಗೆ ದುಃಖದ ದೃಶ್ಯಗಳು ಮೂಡಿ ಬಂದವು.


ಜಿಲ್ಲೆಯ ಕತೆಗಾರರಲ್ಲಿ ಮಲೆನಾಡಿನ ಜನಜೀವನದ ದಟ್ಟ ಅನುಭವವನ್ನು ತಮ್ಮ ಕಥೆಗಳಲ್ಲಿ ಕಟ್ಟಿಕೊಟ್ಟವರು ಹಾಡ್ಲಹಳ್ಳಿ ನಾಗರಾಜ್. ಜಿಂಗಾರೆ ಕಲ್ಲು ಹಾಡ್ಲಹಳ್ಳಿ ನಾಗರಾಜ್ ಅವರ ಮೂರು ಕಿರು ಕಾದಂಬರಿಗಳ ಸಂಕಲನದಲ್ಲಿನ ಒಂದು ಕಿರು ಕಾದಂಬರಿಯೇ ಕಡವೆ ಬೇಟೆ. ಇದನ್ನು ನಾಟಕಕ್ಕೆ ರೂಪಾಂತರಿಸಿ ಪ್ರದರ್ಶಿಸಲಾಯಿತು.


ನಾವು ಸಿನಿಮಾ, ವ್ಯಾಟ್ಸಪ್ ವಿಡಿಯೋಗಳಲ್ಲಿ ದಟ್ಟ ಅಡವಿಗಳಲ್ಲಿ ಹುಲಿ ಸಿಂಹಗಳು  ಕಡವೆಗಳನ್ನು ಬೇಟೆಯಾಡುವುದನ್ನು ನೋಡಿದ್ದೇವೆ.  ಕಡವೆ ಗುಂಪು ಅದೆಷ್ಟೇ ದೊಡ್ಡದಿರಲಿ ಹುಲಿಯೊಂದು ಅದೆಷ್ಟು ಧೈರ್ಯದಿಂದ ನೆಗೆದು ಹಾರಿ ಬೇಟೆ ಆಡಿ ಕಡವೆಯ ಕುತ್ತಿಗೆಯನ್ನು ಕಚ್ಚಿ ಹಿಡಿದರೆ ಮುಗಿಯಿತು, ಕಡವೆ ಎಷ್ಟೇ ಒದ್ದಾಡಿ ಹೋರಾಡಿದರೂ ಕಡವೆ ಸಾಯುವವರೆಗೂ ಬಿಡದ ಹುಲಿಯ ಬೇಟೆ ಮೃಗೀಯ ಬೇಟೆ. ನಾಟಕದಲ್ಲಿ ಕಾಮಾಂಧ ಕರಿಯ ಕುಡಿದ ಅಮಲಿನಲ್ಲಿ ತನಿಯನ ಹೆಂಡತಿ ಚೆಲುವಿ ಮೇಲೆ ಅತ್ಯಾಚಾರ ಎಸೆಗಿದ್ದು ಪೈಶಾಚಿಕ ಕೃತ್ಯವೇ ಸೈ! ಇಲ್ಲಿ ಕಡವೆ ಬೇಟೆ ಎಂದರೆ ಅಮಾಯಕ ಹೆಣ್ಣೋ ಅಥವಾ ಸತ್ತ ಮೂಕ ಪ್ರಾಣಿಯೋ ಎಂದರೆ ಎರಡೂ ಸರಿ. ಮಲೆನಾಡಿನ ದಟ್ಟ ಮರಗಿಡ ಕಾಡು ಬೆಟ್ಟಗುಡ್ಡ ವನ್ಯ ಜೀವಿ ಪರಿಸರದ ನಡುವೆ ಬದುಕುತ್ತಿರುವ ಮನುಷ್ಯ ಜೀವಿಗಳಾದ  ಜಯಣ್ಣ, ಕರಿಯ, ತನಿಯ, ಮಲ್ಲೇಶ ಮತ್ತು ಪಾಪಣ್ಣ ಎಂಬ ಪುರುಷ ಸಿಂಹರು ಗನ್ ಹಿಡಿದು ಕಡವೆ ಬೇಟೆಗೆ ಹೊರಡುವ ಅಡವಿ ಪಯಣದ ಕಥಾನಕಕ್ಕೆ ಕೀ ಬೋರ್ಡ್ ವೆಂಕಟೇಶ ಅವರು ಪ್ರಾಣಿ ಪಕ್ಷಿಗಳ ಸೌಂಡ್ ಒದಗಿಸಿ ಕಾಡಿನ ಸನ್ನಿವೇಶ ಸೃಷ್ಟಿಗೆ ಜೀವ ತುಂಬಿದರು. ಇಲ್ಲಿ ಪಾಪಣ್ಣನ ಪಾತ್ರದಾರಿ ಮಧು ನೋಡಲು ಪಾಪದವರಂತೆ ಕಂಡು ಅವರ ಫೇಸ್‍ಲುಕ್ ಭಯದ ಅಭಿನಯಕ್ಕೆ ಹೊಂದಿಕೆಯಾಗಿತ್ತು. ಶೂರ್ ಮೈಕ್‍ನಲ್ಲಿ ಇವರ ಹೂಸಿನ ಶಬ್ಧವೂ ಸ್ಫಷ್ಟವಾಗಿ ಕೇಳಿ ಬಂದು ಪ್ರೇಕ್ಷಕರು ನಕ್ಕರು. ಕರಿಯನ ಪಾತ್ರಕ್ಕೆ ಸ್ವರೂಪ್ ಥೇಟ್ ಸುಂದರ ಕೃಷ್ಣ ಅರಸ್‍ರಂತೆ ವಿಲನ್ ಅಗಿ ವಿಜೃಂಬಿಸಿದರು. ಅಸಲಿಗೆ ಆಳ್ತನದಲ್ಲಿ ಗೌಡ ಜಯಣ್ಣನೇ ಕೇಡಿ ಎಂದುಕೊಂಡರೇ ಕರಿಯ ಗುಳ್ಳೆನರಿಯಂತೆ ತನಿಯನ ಮನೆ ಬಾಗಿಲು ತಟ್ಟುತ್ತಾನೆ. ಮಲ್ಲೇಶ (ವೇದಮೂರ್ತಿ) ಮತ್ತು ಪಾಪಣ್ಣ ಕರಿಯನ ಪಾಪದ ಕೂಪದಲ್ಲಿ ತನಿಯನ ಖೂನಿ ಕೇಸಿಗೆ ಕೋರ್ಟ್ ಕಟೆಕಟೆ ಏರುವ ದುಸ್ಥಿತಿ ತಂದುಕೊಳ್ಳುತ್ತಾರೆ. ನಾಟಕದಲ್ಲಿ ರಂಜಿಸಿದ ಡಾಬಾ ನೃತ್ಯ ಇದಕ್ಕೆ ಸ.ವೆಂ. ಪೂರ್ಣಿಮಾ ಅವರ ಹಾಡು ಮತ್ತು ಅದರಾಚೆಗಿನ ಹೊಟ್ಟೆ ಪಾಡಿನ ಮಾರ್ಕೆಟಿನಲ್ಲಿ ಶೀಲದ ಮಾರಾಟ ಎಲ್ಲವೂ ನಾಟಕದಲ್ಲಿ ಹಾಸುಹೊಕ್ಕಾಗಿವೆ.


ಪ್ರೇಕ್ಷಕ ಗುಂಪಿನಲ್ಲಿ ನನ್ನ ಪಕ್ಕ ಕುಳಿತಿದ್ದ ನಿವೃತ್ತ ಸಬ್ ಇನ್ಸ್‍ಸ್ಪೆಕ್ಟರ್ ಶಿವನಂಜೇಗೌಡರು ಪಿಸುಮಾತಿನಲ್ಲಿ ಹೇಳಿದರು, "ಅನಂತು, ನಾನು ಹತ್ತು ವರ್ಷ ಆ ಏರಿಯದಲ್ಲೇ ಕೆಲಸ ಮಾಡಿದ್ದೇನೆ. ಅಲ್ಲಿ ಇಂತಹ ಅನೇಕ ಸನ್ನಿವೇಶಗಳು, ದೃಶ್ಯಗಳನ್ನು ಕಂಡಿದ್ದೇನೆ. ಕೇಸ್ ಫೈಲ್ ಮಾಡಿದ್ದೇನೆ. ಕೋರ್ಟು ಕಛೇರಿಗೆ ವಿಟ್ನೆಸ್ ಆಗಿ ತಿರುಗಿದ್ದೇನೆ". ಡಾಬಾ ಡ್ಯಾನ್ಸ್ ಎಂಜಾಯ್ ಮಾಡುವ ಲಾರಿ ಚಾಲಕರು (ಲೋಕೇಶ್ ಮತ್ತು ಪ್ರದೀಪ್) ಮಗು ಅತ್ತಾಗ ಹಾಡಿನ ಟ್ರ್ಯಾಕ್ ಬದಲಾಗಿ ಪಶ್ಚಾತ್ತಾಪದ ಮುಖಭಾವದಿ ಕಾಸು ಹಾಕಿ ನೇಪಥ್ಯಕ್ಕೆ ಸರಿಯುತ್ತಾರೆ. ಇವರ ಮೇಕಪ್ (ಪ್ರಸಾಧನ: ನಳಿನಿ) ಈ ಮೊದಲು ಪ್ರದೀಪ್ ಚೌಡಿಯಾಗಿ ಕಕ್ಕಸಿಗೆ ಕುಳಿತ ಪಾಪಣ್ಣನನ್ನು ಭಯಕ್ಕೆ ಸಿಲುಕಿಸಿ ತೆರೆಯ ಹಿಂದೆ ಸರಿಯುವಲ್ಲಿ ಕಾಂತಾರದ ಪ್ರಭಾವ ಗೋಚರಿಸಿತು. ತನಿಯನ ಪಾತ್ರ ನಿರ್ವಹಿಸಿದ ಪುನೀತ್ ಮಂಗಳೂರು ಶೈಲಿ ಭಾಷೆಯ ಅನುಕರಣೆಯಲ್ಲಿ ಅವರ ಮಾತು ಸ್ಫಷ್ಟವಾಗಿ ಕೇಳಿಬಂದು, ಅರೇ! ಕಾಲರ್ ಮೈಕ್ ಇಲ್ಲದೇ ಇಷ್ಟು ಕರಾರುವಕ್ಕಾಗಿ ಈ ಹಿಂದೆ ಯಾಕೆ ಮಾತು ಕೇಳಿ ಬರುತ್ತಿರಲಿಲ್ಲ? ಎಂಬುದಕ್ಕೆ ಕಡೆಯಲ್ಲಿ ನಿವೃತ್ತ ತಹಸೀಲ್ದಾರ್ ಎ.ವಿ.ರುದ್ರಪ್ಪಾಜಿರಾವ್ ಕಲಾಭವನ ಸೌಂಡ್‍ಸಿಸ್ಟಂ ಸರಿಪಡಿಸಲು ತಮ್ಮ ಕಾಲದಿಂದಲ್ಲು ನಡೆದ ಪ್ರಯತ್ನ ಸ್ಮರಿಸಿದರು. ಆ ದಿನಗಳಲ್ಲಿ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಇವರ ಸಾರಥ್ಯದಲ್ಲಿ ಪ್ರದರ್ಶಿತ ಕೃಷ್ಣಪ್ರಿಯ ಶಕುನಿ ನಾಟಕ ನನಗೆ ಮೆಚ್ಚುಗೆಯಾಗಿತ್ತು. ಅಂದು ಜಿಲ್ಲಾ ಮಟ್ಟದಲ್ಲಿ ತೀವ್ರ ಸ್ಫರ್ಧೆಯಲ್ಲಿ ಈ ನಾಟಕ ಪ್ರಥಮ ಬಹುಮಾನ ಗಳಿಸಿ ಮಂಡ್ಯದಲ್ಲಿ ನಡೆದ ರಾಜ್ಯಮಟ್ಟದ ಸ್ಫರ್ಧೆಗೆ ಗಿರೀಶ್ ಕಾರ್ನಾಡ್‍ರ ಅಂಜು ಮಲ್ಲಿಗೆ ನಾಟಕವನ್ನು ಆರಿಸಿಕೊಂಡರು. ಆದರೆ ಕೋಲಾರ ತಂಡ ಬೇಲೂರು ಕೃಷ್ಣಮೂರ್ತಿ ಅವರ  ಲಚ್ಚಿ ನಾಟಕಕ್ಕೆ ಪ್ರಥಮ ಬಹುಮಾನ ಗಳಿಸಿ ದಂಗು ಬಡಿಸಿತ್ತು. ಇರಲಿ, ಕಲಾ ಭವನದ ಸೌಂಡ್ ಸಿಸ್ಟಂ ಸರಿಯಾಗಲಿ. ಫಾರೆಸ್ಟರ್ ಕೆಂಚಪ್ಪ (ಕಿರಣ್) ಬಿಟ್ಟ ಸಿಗರೇಟ್ ಹೊಗೆ ಕಲಾಭವನದಲ್ಲೇ ಒಂದು ಸುತ್ತು ಹಾಕಿ ತಮ್ಮ ಮೂಗು ಸೇರಿತೆಂದು ಆಪಾದಿಸಿದ ಪ್ರೇಕ್ಷಕರೊಬ್ಬರು ಸಿಗರೇಟಿಗೆ ಬೆಂಕಿ ತಾಕಿಸದೇ ಸಿಗರೇಟ್ ಸೇದಿದಂತೆ ನಟಿಸಬೇಕಿತ್ತಂದು ಉಚಿತ ಸಲಹೆ ನೀಡಿದರು. ನಾಟಕದ ಬೇರೆಲ್ಲಾ ದೃಶ್ಯಗಳಿಗೆ ಪ್ರಾಪರ್ಟಿ ಅಳವಡಿಸಿ ಕಡವೆಯನ್ನು ಗುಂಡಿಯಿಂದ ಮೇಲೆತ್ತುವ ದೃಶ್ಯವನ್ನು ಕೈ ಸನ್ನೆಯಲ್ಲೆ ತೋರಿಸಿದ್ದೇಕೆ ಎಂದರು.

ನಾಟಕದ ಆರಂಭದಲ್ಲಿ ನಿರ್ದೇಶಕಿ ರತಿ ಹೆಚ್.ಜಿ. ಹುಚ್ಚಿಯಾದ ಕರಿಯನ ಹಂಡತಿ ಪಾತ್ರವನ್ನು ನಿಭಾಯಿಸಿದರು.  ಅಜ್ಜಿಯಾಗಿ ಪ್ರಿಯಾ ಮುಕುಂದ್ ಮೊಮ್ಮಗಳು ಸಂವೃಧ್ದಿಗೆ ನಾಟಕದ ಕಥೆಯನ್ನು ವಿಕ್ರಮಾದಿತ್ಯನಿಗೆ ಬೇತಾಳ ಕಥೆ ಹೇಳುವಂತೆ ಮುಂದೆ ದೃಶ್ಯ ರಂಗದಲ್ಲಿ ಮೂಡಿ ಬರುತ್ತದೆ. ಪ್ರಾರಂಭದಲ್ಲಿ ಕರಿಯನನ್ನು   ತಲೆ ಕೆಳಕ್ಕಾಗಿ  ನೇತು ಹಾಕಿ ನನ್ನನ್ನು ರಕ್ಷಿಸಿ ಎಂದು ಆತ ಬೇಡುವ ದೃಶ್ಯ ಕಡೆಯಲ್ಲಿ ರೀಪೀಟ್ ಆಗಿ ತನಿಯ ತನ್ನ ಮಚ್ಚಿನಿಂದ ಹಗ್ಗವನ್ನು ಕತ್ತರಿಸಿ ಕರಿಯನೆಂಬ ಮಿಕವನ್ನು ಗುಂಡಿಗೆ ಕೆಡವಿ ಜೀವ ತೆಗೆಯುವಲ್ಲಿಗೆ ಸೇಡು ಪ್ರಜ್ವಲಿಸುತ್ತದೆ. ಕೊಳಲು ಮತ್ತು ಗಾಯನದಲ್ಲಿ ಕಾರ್ತಿಕ್ ಭಾರದ್ವಾಜ್ ನಾಟಕಕ್ಕೆ ಜೀವಕಳೆ ತರುತ್ತಾರೆ. ಪ್ರದೀಪ್ ಅವರ ಬೆಳಕು ಕಪ್ಪು ಕಪ್ಪು ಮೋಡದಲ್ಲಿ ಕಗ್ಗತ್ತಲ ಬಾಳಿನಲ್ಲಿ ಮೂಡಿತ್ತೊಂದು ಆಶಾಕಿರಣ.


- ಗೊರೂರು ಅನಂತರಾಜು, ಹಾಸನ. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter




0 Comments

Post a Comment

Post a Comment (0)

Previous Post Next Post