ಯುಗಾದಿ ಸಾಹಿತ್ಯೋತ್ಸವ ಉದ್ಘಾಟಿಸಿ ಸಾಹಿತಿ ಡಾ. ಪೆರ್ಲ ವಿಷಾದ
ಮಂಗಳೂರು: ಸಾಹಿತ್ಯ- ಸಂಸ್ಕೃತಿ ಆಧಾರಿತವಾದ ಚಿಂತನಶೀಲ ಬದುಕು ಹಿನ್ನೆಲೆಗೆ ಸರಿದು ಕೊಳ್ಳುಬಾಕತನದ ಅರ್ಥ ಸಂಸ್ಕೃತಿ ಜೀವನದಲ್ಲಿ ಮುನ್ನೆಲೆಗೆ ಬಂದಿರುವುದೇ ಸಾಮಾಜಿಕವಾದ ಹಲವು ರೋಗಗಳಿಗೆ ಕಾರಣ ಎಂದು ಕವಿ- ಸಾಹಿತಿ ಹಾಗೂ ಮಂಗಳೂರು ಆಕಾಶವಾಣಿಯ ನಿವೃತ್ತ ನಿರ್ದೇಶಕ ಡಾ. ವಸಂತಕುಮಾರ ಪೆರ್ಲ ಹೇಳಿದರು.
ಮಂಗಳೂರಿನ ಕನ್ನಡ ಬಳಗವು ಮಾರ್ಪಳ್ಳಿ ಪ್ರಕಾಶನ ಹಾಗೂ ಸುಬ್ರಹ್ಮಣ್ಯ ಸಭಾ ಇವುಗಳ ಆಶ್ರಯದಲ್ಲಿ ನಗರದ ಸುಬ್ರಹ್ಮಣ್ಯ ಸದನದಲ್ಲಿ ಏರ್ಪಡಿಸಿದ ಯುಗಾದಿ ಸಾಹಿತ್ಯೋತ್ಸವ ಉದ್ಘಾಟಿಸಿ ಅವರು ಮಾತಾಡುತ್ತಿದ್ದರು.
ನಮ್ಮ ಶ್ರೀಮಂತ ಪರಂಪರೆ ಮತ್ತು ಸಾಂಸ್ಕೃತಿಕ ಬದುಕನ್ನು ಹೊಸ ತಲೆಮಾರಿಗೆ ದಾಟಿಸುವ ಜವಾಬ್ದಾರಿ ನಮ್ಮ ಮೇಲಿದೆ. ಜ್ಞಾನ ಮತ್ತು ಬುದ್ಧಿಬಲ ಜೀವನದ ಮುನ್ನೆಲೆಯಲ್ಲಿ ಇರಬೇಕಲ್ಲದೆ ಅರ್ಥ ಸಂಸ್ಕೃತಿ ಮತ್ತು ಅದರ ಅನುಯಾಯಿಯಾದ ರಟ್ಟೆಬಲ ಸಮಾಜದಲ್ಲಿ ಮೆರೆಯುವಂತೆ ಆಗಬಾರದು ಎಂದು ಡಾ. ಪೆರ್ಲ ಈ ಸಂದರ್ಭದಲ್ಲಿ ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕನ್ನಡ ಬಳಗದ ಅಧ್ಯಕ್ಷ ಹಾಗೂ ವಿಮಾನ ನಿಲ್ದಾಣ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಂ. ಆರ್. ವಾಸುದೇವ ಅವರು ವಹಿಸಿದ್ದರು. ಹಬ್ಬ ಹರಿದಿನಗಳನ್ನು ಅರ್ಥಪೂರ್ಣವಾಗಿ ಆಚರಿಸುವ ವ್ಯವಸ್ಥೆ ನಮ್ಮಲ್ಲಿ ಬರಬೇಕು. ಸಾಹಿತ್ಯ ಸಂಸ್ಕೃತಿಗಳಿಗೆ ನಮ್ಮ ಪರ್ವದಿನಗಳೊಂದಿಗೆ ಉತ್ತಮ ಸಾಂಗತ್ಯವಿದೆ. ಯುಗಾದಿ ಅಂತಹ ಹಬ್ಬಗಳಲ್ಲಿ ಒಂದು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಸಾಹಿತ್ಯ ಪರಿಷತ್ ಪೂರ್ವಾಧ್ಯಕ್ಷ ಹರಿಕೃಷ್ಣ ಪುನರೂರು, ಲಯನ್ಸ್ ಜಿಲ್ಲಾ ಗವರ್ನರ್ ಕವಿತಾ ಶಾಸ್ತ್ರಿ ಮತ್ತು ಸುಬ್ರಹ್ಮಣ್ಯ ಸಭಾದ ಅಧ್ಯಕ್ಷ ಹರ್ಷಕುಮಾರ್ ಕೇದಿಗೆ ಭಾಗವಹಿಸಿದ್ದರು.
ಅನಂತರ ನಡೆದ ವಿಚಾರ ಸಂಕಿರಣದಲ್ಲಿ ಡಿಜಿಟಲ್ ಯುಗ ಮತ್ತು ಸಾಹಿತ್ಯ ಎಂಬ ವಿಷಯದ ಬಗ್ಗೆ ಉಡುಪಿಯ ಪ್ರಾಂಶುಪಾಲೆ ಅಭಿಲಾಷಾ ಎಸ್. ಹಾಗೂ ರಾಷ್ಟ್ರೀಯ ಚಿಂತನೆಯ ಸಾಹಿತ್ಯ ಎಂಬ ವಿಷಯದ ಬಗ್ಗೆ ಉಡುಪಿಯ ಉಪನ್ಯಾಸಕಿ ಡಾ. ಪ್ರಜ್ಞಾ ಮಾರ್ಪಳ್ಳಿ ಮಾತಾಡಿದರು. ಪುತ್ತೂರಿನ ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿ ಅಧ್ಯಕ್ಷತೆ ವಹಿಸಿದ್ದರು.
ಬಳಿಕ ಶ್ರೀಕೃಷ್ಣಯ್ಯ ಅನಂತಪುರ ಅವರ ಅಧ್ಯಕ್ಷತೆಯಲ್ಲಿ ಜರಗಿದ ಕವಿಗೋಷ್ಠಿಯಲ್ಲಿ ಕವಿಗಳಾದ ರಾಮ್ ಎಲ್ಲಂಗಳ, ಎನ್. ಸುಬ್ರಾಯ ಭಟ್, ಬೆಳ್ಳಾಲ ಗೋಪಿನಾಥ ರಾವ್, ಶಾಂತಾ ಪುತ್ತೂರು, ಡಾ. ಕಬ್ಬಿನಾಲೆ ಬಾಲಕೃಷ್ಣ ಭಾರದ್ವಾಜ್, ಡಾ. ವೀಣಾ ಎನ್. ಸುಳ್ಯ, ಶ್ಯಾಮಲಾ ರವಿರಾಜ್ ಕುಂಬಳೆ, ಕೊಳಚಪ್ಪೆ ಗೋವಿಂದ ಭಟ್, ಗೀತಾ ಪುತ್ತೂರು, ಜಯಾನಂದ ಪೆರಾಜೆ ಮತ್ತು ಜೀತ್ ಕುಮಾರ್ ರಾವ್ ಸ್ವರಚಿತ ಕವಿತೆಗಳನ್ನು ವಾಚಿಸಿದರು. ಸೌಜನ್ಯಾ ನಂದಳಿಕೆ ಸ್ವಾಗತಿಸಿದರು. ಸುಮನಾಕೃಷ್ಣ ಪ್ರಾರ್ಥನೆ ಹಾಡಿದರು. ಆಶಾ ಆರ್. ರಾವ್ ಯುಗಾದಿ ಗೀತೆಗಳನ್ನು ಹಾಡಿದರು. ಉಡುಪಿಯ ಉದಯಪ್ರಸಾದ್ ಎನ್. ಜೆ. ಕಾರ್ಯಕ್ರಮ ನಿರೂಪಿಸಿದರು. ಡಾ. ಎ.ಪಿ. ಕೃಷ್ಣ ವಂದನಾರ್ಪಣೆ ಮಾಡಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ