|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕ್ಷಯ ರೋಗ- ಎಚ್ಚರ ಅಗತ್ಯ, ಭಯ ಬೇಡ

ಕ್ಷಯ ರೋಗ- ಎಚ್ಚರ ಅಗತ್ಯ, ಭಯ ಬೇಡ

ಮಾರ್ಚ್ 24- ವಿಶ್ವ ಕ್ಷಯ ರೋಗ ದಿನ ಪ್ರಯುಕ್ತ ವಿಶೇಷ ಲೇಖನಸಾವಿರಾರು ವರ್ಷಗಳ ನಂತರವೂ, ಅಷ್ಟೇಕೆ ಸಾಂಕ್ರಾಮಿಕ ರೋಗಕಾರಕವನ್ನು ಅನ್ವೇಷಿಸಿ 140 ವರ್ಷಗಳ ನಂತರವೂ ಟಿಬಿ ವಿಶ್ವದ ಮಾರಕ ಸಾಂಕ್ರಾಮಿಕ ಕೊಲೆಗಾರರಲ್ಲಿ ಒಬ್ಬನಾಗಿ ಉಳಿದಿದೆ ಎಂದರೆ ಇದು ಸಮುದಾಯದ ಅನಾದರತೆಗೆ ಹಿಡಿದ ಕೈಗನ್ನಡಿಯೇ ಸರಿ. ಹಿಂದಿನ ಕಾಲದಿಂದಲೂ ಈ ರೋಗಕ್ಕೆ ಜನರು ಹೆದರುತ್ತಾರೆ, ಇದರ ಬಗ್ಗೆ ಅನೇಕ ಮೂಢನಂಬಿಕೆಗಳೂ ಇದೆ. ಆದರೆ, ಈ ರೋಗದಷ್ಟು ಬೇರಾವ ರೋಗವೂ ಅನಾದರಕ್ಕೆ ಒಳಗಾಗಿಲ್ಲ. ತಡೆಗಟ್ಟಬಹುದಾದ ಮತ್ತು ಗುಣಪಡಿಸಬಹುದಾದ ರೋಗವಾದ ಟಿಬಿಯು ದೇಶದ ಆರೋಗ್ಯ, ಸಾಮಾಜಿಕ ಹಾಗೂ ಮುಖ್ಯವಾಗಿ ಆರ್ಥಿಕ ಪ್ರಗತಿಯ ಮೇಲೆ ದೀರ್ಘಾವಧಿ ವ್ಯತಿರಿಕ್ತ ಪರಿಣಾಮ ಬೀರಬಲ್ಲ ಸಾಂಕ್ರಾಮಿಕ ರೋಗದ ಬಗೆಗಿನ ಅಲಕ್ಷ್ಯ ಹಾಗೂ ಅನಾದರ ಸಲ್ಲವೇ ಸಲ್ಲ.


ಆತಂಕದ ಮೂಲ:

ಜಗತ್ತಿನಾದ್ಯಂತ 10 ಮಿಲಿಯನ್ ಪ್ರಕರಣಗಳಲ್ಲಿ ಇದು ಸುಮಾರು 2.6 ಮಿಲಿಯನ್ ಪ್ರಕರಣಗಳು ಭಾರತದಲ್ಲಿಯೇ ಇದೆ. ಅರ್ಥಾತ್ ವಿಶ್ವದ ಕ್ಷಯರೋಗ ಪ್ರಕರಣಗಳಲ್ಲಿ ಭಾರತವು ನಾಲ್ಕನೇ ಒಂದು ಭಾಗಕ್ಕಿಂತ ಹೆಚ್ಚಿನದಾಗಿದೆ. ಇದೀಗ ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ ಪ್ರತಿ ಒಂದು ಕೋಟಿ ಜನಸಂಖ್ಯೆಯಲ್ಲಿ 27 ಲಕ್ಷ ಜನರಿಗೆ ಕ್ಷಯ ರೋಗ ಇದೆ. ಭಾರತದಲ್ಲಂತೂ ಪ್ರತಿ ಒಂದು ಕೋಟಿ ಜನರಿಗೆ 40 ಲಕ್ಷ ಜನರಿಗೆ ಕ್ಷಯ ರೋಗ ಲಕ್ಷಣಗಳಿವೆ. ಈ ಸೋಂಕು ತಗುಲಿದ ವ್ಯಕ್ತಿಯು ಒಂದು ವರ್ಷದಲ್ಲಿ ಹತ್ತು ಜನರಿಗೆ ಸೋಂಕು ತಗುಲಿಸಬಹುದು.


ಕ್ಷಯವು ವಂಶಾನುಗತ ರೋಗವಲ್ಲ, ಇದು ಸೋಂಕುರೋಗ. ಯಾವುದೇ ವ್ಯಕ್ತಿಗೂ ಕ್ಷಯ ಬರಬಹುದು. ಕಫದಲ್ಲಿ ಬ್ಯಾಕ್ಟಿರಿಯಾ ಇರುವ ರೋಗಿಗಳು ಕೆಮ್ಮಿದಾಗ, ಉಗುಳಿದಾಗ ಅಥವಾ ಸೀನಿದಾಗ ತುಂತುರು ಹನಿಗಳ ಮೂಲಕ ಈ ಕ್ರಿಮಿಗಳು ಗಾಳಿಯನ್ನು ಸೇರಿಕೊಂಡು ಉಸಿರಿನ ಮೂಲಕ ಇತರರಿಗೆ ಹರಡುತ್ತದೆ. ಮೂಲಭೂತ ಸರಳ ಕೆಮ್ಮು ಶಿಷ್ಟಾಚಾರಗಳನ್ನು ಅನುಸರಿಸುವುದು ಅಗತ್ಯವೆಂದು ಜನರು ಪರಿಗಣಿಸದಿರುವುದು ಆತಂಕಕ್ಕೆ ಕಾರಣವಾಗಿದೆ. ಯಾವ ವ್ಯಕ್ತಿಯಲ್ಲಿ ರೋಗನಿರೋಧಕ ಶಕ್ತಿಯು ಕಡಿಮೆ ಇದೆಯೋ ಅವರಿಗೆ ಈ ರೋಗ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಕ್ಷಯ ರೋಗವು ಸಾಮಾನ್ಯವಾಗಿ ಶ್ವಾಸಕೋಶಕ್ಕೆ ಬರುತ್ತದೆ. ದೇಹದ ಇತರ ಭಾಗಗಳಾದ ಮೆದುಳು, ಮೂಳೆ, ಗರ್ಭನಾಳ ಮತ್ತು ಚರ್ಮಕ್ಕೂ ಈ ರೋಗ ತಗಲಬಹುದು. ದೇಶದಲ್ಲಿ ಲಕ್ಷಾಂತರ ಜನರ ಹಾಗೂ ಕುಟುಂಬಗಳ ಆರೋಗ್ಯ ಹಾಗೂ ಆರ್ಥಿಕ ಪ್ರಗತಿಗೆ ಮಾರಕವಾದ ಮತ್ತು ಸಾವಿರಾರು ವರ್ಷಗಳಿಂದ ಹಿಡಿತ ಸಾಧಿಸಿರುವ ರೋಗವನ್ನು ಕಡೆಗಣನೆ ಮಾಡುವಂತಿಲ್ಲ.


ವಿಶ್ವ ಟಿಬಿ ದಿನ:

ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸಾಂಕ್ರಾಮಿಕ ರೋಗದ ಮೂಲ ಮೈಕೋಬ್ಯಾಕ್ಟೀರಿಯಂ ಟ್ಯುಬರ್ಕ್ಯುಲೋಸಿಸ್ ಎಂಬ ಬ್ಯಾಕ್ಟೀರಿಯಾ ಎಂದು 1882ರ ಮಾರ್ಚ್ 24ರಂದು ಡಾ. ರಾಬರ್ಟ್ ಕಾಕ್ ಎಂಬವರು ಪತ್ತೆ ಹಚ್ಚಿದ್ದರು. ಕಾಕ್ ಅವರ ಸಂಶೋಧನೆಯು ರೋಗ ಪತ್ತೆ ಹಚ್ಚಲು ಮತ್ತು ಗುಣಪಡಿಸಲು ದಾರಿ ತೆರೆಯಿತು. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಜಾಗೃತಿಗಾಗಿ ವಿಶ್ವ ಟಿ.ಬಿ.ದಿನವನ್ನು ಆಚರಿಸಲಾಗುತ್ತಿದೆ. ಪ್ರತಿ ವರ್ಷ ಕ್ಷಯ ರೋಗದ ವಿನಾಶಕಾರಿ ಆರೋಗ್ಯ, ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮತ್ತು ಜಾಗತಿಕ ಟಿಬಿ ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸುವ ಪ್ರಯತ್ನಗಳನ್ನು ಹೆಚ್ಚಿಸಲು ಮಾರ್ಚ್ 24ರಂದು ವಿಶ್ವ ಕ್ಷಯ (ಟಿಬಿ) ದಿನವನ್ನು ಆಚರಿಸಲಾಗುತ್ತದೆ.


ಕ್ಷಯ ರೋಗ ಎಂದರೇನು?

ಕ್ಷಯ ರೋಗ ಅಥವಾ ಟ್ಯುಬರ್ ಕ್ಯುಲೋಸಿಸ್ ಎಂದು ಕರೆಸಿಕೊಳ್ಳುವ ಈ ಮಾರಕ ರೋಗವು ಮನುಷ್ಯರು ಮಾತ್ರವಲ್ಲದೆ ಪ್ರಾಣಿಗಳಲ್ಲಿಯೂ ಕಾಣಿಸಿಕೊಳ್ಳುತ್ತದೆ. ಇವತ್ತಿನ ದಿನಗಳಲ್ಲಿ ಕೊರೋನಾ ವೈರಸ್  ಎಷ್ಟು ಮಾರಕವಾಗಿದೆಯೋ ಹಾಗೆಯೇ ಹಿಂದೆ ಕ್ಷಯ ರೋಗ ಹೆಚ್ಚು ಅಪಾಯಕಾರಿಯಾಗಿ ಪರಿಣಮಿಸಿತ್ತು. ಆದರೆ ಇದು ವೈರಸ್‌ನಿಂದ ಉಂಟಾಗುವ ಕಾಯಿಲೆಯಲ್ಲ. ಮೈಕೊ ಬ್ಯಾಕ್ಟಿರೀಯಾ ಟ್ಯುಬರ್ ಕ್ಯುಲೋಸಿಸ್ ಎಂಬ ಬ್ಯಾಕ್ಟಿರೀಯಾದಿಂದ ಉಂಟಾಗುತ್ತದೆ. ಈ ಬ್ಯಾಕ್ಟಿರೀಯಾಗಳು ದೇಹದೊಳಗೆ ಸೇರಿಕೊಂಡು ಶ್ವಾಸಕೋಶಗಳಿಗೆ ಹಾನಿ ಮಾಡುತ್ತವೆ. 


ಕ್ಷಯ ರೋಗವು ಒಂದು ಸಾಂಕ್ರಾಮಿಕ ರೋಗವಾಗಿದ್ದು, ಇದು ಒಬ್ಬರಿಂದ ಇನ್ನೊಬ್ಬರಿಗೆ ಸುಲಭವಾಗಿ ಹರಡುತ್ತದೆ. ರೋಗಿ ಕೆಮ್ಮಿದಾಗ ಕಫದಲ್ಲಿರುವ ರೋಗಾಣುಗಳೊಂದಿಗೆ ಇದು ಇನ್ನೊಬ್ಬರಿಗೆ ಹರಡುತ್ತದೆ. ಕ್ಷಯ ರೋಗವಿರುವ ವ್ಯಕ್ತಿಯಿಂದ ಒಂದು ವರ್ಷದಲ್ಲಿ ಕಡಿಮೆಯೆಂದರೆ 10 ಜನರಿಗೆ ಸೋಂಕು ತಗುಲಬಹುದು. 


ಇದನ್ನೂ ಓದಿ: ಕ್ಷಯರೋಗ ಅಕ್ಷಯವಾಗದಿರಲಿ


ಕ್ಷಯ ರೋಗಗಳ ಲಕ್ಷಣಗಳು:

ಕ್ಷಯ ರೋಗವನ್ನು ಕೆಲವು ರೋಗಲಕ್ಷಣಗಳ ಮೂಲಕ ಕಂಡುಹಿಡಿಯಬಹುದು ಮತ್ತು ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡುವ ಮೂಲಕ ಗುಣಪಡಿಸಬಹುದು. ಜ್ವರ, ಹಸಿವು ನಷ್ಟ ಮತ್ತು ತೂಕದ ನಷ್ಟವು ಕ್ಷಯ ರೋಗದ ಪ್ರಮುಖ ಲಕ್ಷಣವಾಗಿದೆ. ಕೆಮ್ಮು, ಕಫದಲ್ಲಿ ರಕ್ತ, ಅಶಕ್ತತೆ ಕಾಣಿಸಿಕೊಳ್ಳುತ್ತದೆ. ಸಂಜೆಯ ವೇಳೆ ಮಾತ್ರ ಕಾಣಿಸಿಕೊಳ್ಳುವ ಅತಿಯಾದ ಜ್ವರ, ರಾತ್ರಿ ಬೆವರುವಿಕೆ ಮತ್ತು ಎದೆ ನೋವು ಕಂಡು ಬರುತ್ತದೆ. 


ಕೆಲವರು ಈ ಲಕ್ಷಣಗಳನ್ನು ನಿರ್ಲಕ್ಷಿಸುತ್ತಾರೆ. ಮುಖ್ಯವಾಗಿ ಈಗಿನ ವಾತಾವರಣ ಬದಲಾವಣೆಯಿಂದಾಗಿ ಕೆಮ್ಮು ಸಾಮಾನ್ಯ ಎಂದು ನಿರ್ಲಕ್ಷಿಸುತ್ತಾರೆ. ಇದರಿಂದಾಗಿ ಶ್ವಾಸಕೋಶದ ಸೋಂಕು ದೇಹದ ಇತರ ಭಾಗಗಳಿಗೂ ಹರಡಲು ಸಮಯ ನೀಡಿದಂತಾಗುತ್ತದೆ. ಕೆಲವೊಮ್ಮೆ ಒಳಗೆ ಸೋಂಕು ಇದ್ದರೂ ಕೆಮ್ಮು ಕಡಿಮೆಯಾದಂತೆ ಭಾಸವಾಗಬಹುದು, ವೈದ್ಯರನ್ನು ಭೇಟಿಯಾಗುವ ಅಗತ್ಯವಿಲ್ಲವೆಂದು ಸುಮ್ಮನಾಗಿಬಿಡುತ್ತಾರೆ. ಈ ನಿರ್ಲಕ್ಷ ಜೀವಕ್ಕೇ ಕುತ್ತು ತರಬಹುದು.


ರೋಗಪ್ರಸರಣ ಹೇಗೆ?

ಶ್ವಾಸಕೋಶದ ಕ್ಷಯದಿಂದ ನರಳುವ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ, ಉಗುಳಿದಾಗ ಹೊರಬರುವ ಸೂಕ್ಷ್ಮ ದ್ರವ ತುಂತುರುಗಳ ಮೂಲಕ ಸೂಕ್ಷ್ಮ ಜೀವಿಗಳು ಇನ್ನೊಬ್ಬನ ದೇಹಕ್ಕೆ ಸೇರಿ ಆರೋಗ್ಯವಂತ ವ್ಯಕ್ತಿಗೆ ಸೋಂಕು ತಗಲುತ್ತದೆ. ಮಕ್ಕಳಲ್ಲಿ , ಮದ್ಯವ್ಯಸನಿಗಳಿಗೆ, ಏಡ್ಸ್‌ ಸೋಂಕು ಇರುವ ವ್ಯಕ್ತಿಗಳಲ್ಲಿ, ಮಧುಮೇಹ ರೋಗ ಇರುವವರಿಗೆ ಈ ರೋಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಬಡತನ, ಅಪೌಷ್ಟಿಕತೆ, ಕಾಯಿಲೆ ಬಗ್ಗೆ ಅಜ್ಞಾನ, ಪರಿಸರ ಮಾಲಿನ್ಯ, ವಿವೇಚನೆ ಇಲ್ಲದೆ ಎಲ್ಲೆಂದರಲ್ಲಿ ಉಗುಳುವ, ಸೀನುವ, ಕೆಮ್ಮುವ ಅಭ್ಯಾಸ, ಕಾಯಿಲೆಯನ್ನು ಒಪ್ಪಿಕೊಳ್ಳದಿರುವುದು,ಜೀವನ ಶೈಲಿ, ಕೈಗಾರಿಕೀಕರಣ, ಗಣಿಗಾರಿಕೆ, ಬೀಡಿ ಸಿಗರೇಟು ಸೇವನೆ ಕೂಡ ಕ್ಷಯ ರೋಗಕ್ಕೆ ಪ್ರಮುಖ ಕಾರಣಗಳಾಗಿವೆ.


ಕ್ಷಯರೋಗಕ್ಕೆ ಚಿಕಿತ್ಸೆ:

ಮಕ್ಕಳಿಗೆ ಹಾಕಲಾಗುವ ಬಿ.ಸಿ.ಜಿ ಕ್ಷಯರೋಗ ತಡೆಗಟ್ಟಲು ಸಹಕಾರಿ. ಚಿಕಿತ್ಸೆಗೆ ಸ್ಪಂದಿಸದ ಕೆಮ್ಮು ಅಥವಾ ಜ್ವರದ ಬಗ್ಗೆ ಅನಾದರತೆ ಬೇಡ. ಸಂಶಯ ಬಂದಾಗ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಂಡರಾಯಿತು. ಎಲ್ಲೆಂದರಲ್ಲಿ ಉಗಿಯುವುದು ರೋಗ ಹರಡುವಿಕೆಗೆ ಕಾರಣ. ಕೊಟ್ಟ ಔಷಧಿಯನ್ನು ಕ್ರಮಬದ್ಧವಾಗಿ ಸೇವಿಸಿದರೆ ಟಿ.ಬಿ ರೋಗ ಮಾಯವಾಗುತ್ತದೆ. ಮದ್ಯ, ಸಿಗರೇಟುಗಳಿಂದ ದೂರವಿದ್ದು ಪೂರಕ ಪೌಷ್ಟಿಕ ಆಹಾರ ಸೇವಿಸಿದರೆ ಉತ್ತಮ.

ಟಿಬಿ ಎಲ್ಲ ಸೋಂಕುಗಳಂತಲ್ಲ, ಚಿಕಿತ್ಸೆಗೆ ದೀರ್ಘಕಾಲ ಹಿಡಿಯುತ್ತದೆ. ಔಷಧಿಗಳನ್ನು ತಪ್ಪದೆ ದಿನಾಲೂ ಸೇವಿಸಬೇಕು. ಕನಿಷ್ಠ 6 ತಿಂಗಳು ಟಿ.ಬಿ. ಮಾತ್ರೆಗಳನ್ನು ಚಾಚೂ ತಪ್ಪದೆ ತೆಗೆದುಕೊಳ್ಳಬೇಕು. ರೋಗಿ 6 ತಿಂಗಳ ಚಿಕಿತ್ಸೆ ಸರಿಯಾಗಿ ತೆಗೆದುಕೊಳ್ಳದಿದ್ದರೆ ಕ್ಷಯರೋಗ ಮತ್ತೆ ಮರುಕಳಿಸಬಹುದು ಹಾಗೂ ಔಷಧ ನಿರೋಧಕ ಟಿ.ಬಿ ಯಾಗಿಯೂ ಪರಿವರ್ತನೆಗೊಳ್ಳಬಹುದು.


ಹೌದು! ನಾವು ಟಿಬಿಯನ್ನು ಕೊನೆಗೊಳಿಸಬಹುದು- ಇದು ವಿಶ್ವ ಟಿಬಿ ದಿನ- 2023 ದ ಘೋಷವಾಕ್ಯ. ರೋಗದ ಬಗೆಗಿನ ಅಜ್ಞಾನ, ಔಷಧಿ ಸೇವನೆಯಲ್ಲಿ ಅಶಿಸ್ತು, ಕಂಡಲ್ಲಿ ಉಗುಳುವ ಅಭ್ಯಾಸ ಮುಂತಾದ ಕಾರಣಗಳಿಂದಾಗಿ ರೋಗನಿಯಂತ್ರಣ ಕಷ್ಟಸಾಧ್ಯವಾಗಿದೆ. ಕೆಮ್ಮುವಾಗ ಕೈಗಳಿಂದ ಅಥವಾ ಕರವಸ್ತ್ರಗಳಿಂದ ಮುಚ್ಚಿಕೊಳ್ಳಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು, ಕೆಮ್ಮುವುದು, ಕಫ ಹೊರಗೆ ಹಾಕುವುದು ಸಲ್ಲವೇ ಸಲ್ಲ. ಕೈಗಳನ್ನು ಸ್ವಚ್ಚವಾಗಿ ತೊಳೆದು ಊಟ ತಿಂಡಿ ಮಾಡುವುದನ್ನು ರೂಡಿಸಿಕೊಳ್ಳಬೇಕು. ವೈಯುಕ್ತಿಕ ಉದಾಸೀನತೆ, ಅನಾದರಣೆಯು ಸಾಮಾಜಿಕ ಸ್ವಾಸ್ಥ್ಯ ಹಾಗೂ ಆರ್ಥಿಕತೆಯ ಮೇಲೆ ದೊಡ್ಡ ಹೊಡೆತವನ್ನೇ ನೀಡುತ್ತದೆ. 2025ಕ್ಕೆ ಭಾರತವನ್ನು ಕ್ಷಯರೋಗ ಮುಕ್ತ ಮಾಡುವ ಸರಕಾರದ ಗುರಿ, ನಮ್ಮೆಲ್ಲರ ಆದ್ಯ ಗುರಿಯಾಗಿರಲಿ. ನಾವೆಲ್ಲಾ ಜಾಗೃತರಾಗಿ ಕ್ಷಯರೋಗ ಸೋಂಕು ತಡೆಗಟ್ಟುವಲ್ಲಿ ಕೈಜೋಡಿಸೋಣ. ಸ್ವಚ್ಚ, ಸ್ವಸ್ಥ ಭಾರತ ನಮ್ಮದಾಗಲಿ.- ಡಾ.ಗೋಪಾಲಕೃಷ್ಣ,

ಮುಖ್ಯ ವೈದ್ಯಾಧಿಕಾರಿ

ಬೆನಕ ಆಸ್ಪತ್ರೆ, ಉಜಿರೆ

0 Comments

Post a Comment

Post a Comment (0)

Previous Post Next Post