ಫೆ.14- ವಿಶ್ವ ಪ್ರೇಮಿಗಳ ದಿನ: ಪ್ರೇಮವೆಂಬುದು ಸದಾನುರಾಗ, ಸದಾನುರಕ್ತಿ

Upayuktha
0

ಫೆಬ್ರವರಿ 14ರಂದು ಪ್ರತಿವರ್ಷ ಆವರ್ತನಗೊಳ್ಳುವ ವಿಶ್ವ ಪ್ರೇಮಿಗಳ ದಿನಾಚರಣೆ. ನಮ್ಮ ನೆಲದ ರೂಢಿ, ಪರಂಪರೆಗಳ ಪ್ರಕಾರ ಪ್ರೇಮವೆಂಬುದು ವರ್ಷಕ್ಕೆ ಒಂದು ದಿನ ಮಾತ್ರ ಸೀಮಿತಗೊಳ್ಳುವಂತಹ ಇಂಧನವಲ್ಲ. ಅದು ನಿರಂತರ ಪೊರೆಯಲು ಸದಾ ಸನ್ನದ್ಧವಾಗಿರುವ ಸಮೃದ್ಧ ಜೀವಧಾತು. ಭಾರತೀಯತೆಯಲ್ಲಿ ಪ್ರೇಮವೇ ಬೇರೆ, ಪ್ರೀತಿಯೇ ಬೇರೆ. ಪ್ರೀತಿಯಲ್ಲೂ ಅದರ ರೀತಿಯಲ್ಲೂ ಸೂಕ್ಷ್ಮ ತೆರನಾದ ವ್ಯತ್ಯಾಸ. ನಮ್ಮಲ್ಲಿ ಪ್ರೇಮವೆಂಬುದು ನಂಬಿಕೆ ಮತ್ತು ದೃಢವಿಶ್ವಾಸದ ಪ್ರತೀಕ.


ಅದು ಒಂದಿರುಳ ಒಡನಾಟವಲ್ಲ. ಅದು ಒಂದೆರಡು ಮಾಸಗಳ ಸಹಜೀವನವೂ ಅಲ್ಲ. ಅದು ಪ್ರಲೋಭನೆಗೆ ಒಳಪಡಿಸುವ ಮಾಯಾಮೃಗವೂ ಅಲ್ಲ. ಪ್ರೇಮವೆಂಬುದು ಉಂಡು ಎಸೆವ ಬಾಳೆ ಎಲೆಯಲ್ಲ. ಅದು ನಿರತವೂ ಪರಸ್ಪರರ ಧ್ಯಾನ ಮತ್ತು ಹಿತ ಬಯಸುವಿಕೆ. ಅದೊಂದು ಅನವರತ ಬೆಸುಗೆ. ಅದೊಂದು ಸದಾನುರಕ್ತಿ.


ಪ್ರೇಮವೆಂದರೆ ಅದೊಂದು ಸ್ಥಾಯಿಭಾವ. ಎಲ್ಲ ಸಂಕಟಗಳನ್ನೂ, ಅಪಮಾನಗಳನ್ನೂ ಸಹಿಸಿಯೂ ಸ್ಥಿರವಾಗಿರುತ್ತದೆ. ಅದರಲ್ಲಿ ಮಿಂದೆದ್ದ ಮೇಲೆ ವ್ಯಕ್ತಿತ್ವವೇ ಲಯವಾಗಿ ಹೋಗುತ್ತದೆ. ಆದರೆ ಅದರ ಬಗೆಗೆ ಪ್ರೇಮಿಗಳಿಗೆ ನಿಗಾ ಇರುವುದಿಲ್ಲ. ಪ್ರೇಮಿಯೆಂಬ ನಗವಿರುವಾಗ ಉಳಿದ ಉಸಾಬರಿ ಅವರಿಗೇಕೆ ಬೇಕು? ತನ್ನ ಇನಿಯನ ಸಾಂಗತ್ಯವೇ, ರಹವೇ ಅವರಿಗೆ ಸರ್ವಸ್ವ.  


ಪ್ರೀತಿ, ಪ್ರೇಮಗಳನ್ನು ಬದುಕಿನ ಸಿರಿತನ ಎಂದು ಸರಳವಾಗಿ ಸಮೀಕರಿಸಿರುವ ಚಿತ್ರಗೀತೆಯೊಂದು ಇದೆಯಲ್ಲ. ಸಮರ್ಪಣೆಯಲ್ಲೇ ಸಂತೋಷ ಕಾಣುವಿಕೆ; ಕಾಯುವಿಕೆಯಲ್ಲೇ ಸಾರ್ಥಕ್ಯ ಅನುಭವಿಸುವಿಕೆ ಪ್ರೇಮಿಗಳ ಪಾಗಲ್‌ಪನ್ ಎಂದು ಪರಿಭಾವಿಸಲ್ಪಟ್ಟಿದೆ. ಆದರೂ "ಪ್ಯಾರ್‌ ಕಿಯಾ ತೋ ಢರ್ ‌ನಾ ಕ್ಯಾ" ಎಂದು ಜಮಾನಾ, ಜಮಾನಾಗಳಿಂದಲೂ ಅವರು ನೇರ, ದಿಟ್ಟ, ನಿರಂತರವಾಗಿದ್ದಾರೆ. ಪ್ರೀತಿ ಮಾಡಬಾರದು, ಮಾಡಿದರೆ ಜಗಕೆ ಹೆದರಬಾರದು ಎಂಬ ಷರಾ ಬರೆದಿದ್ದಾರೆ.   


ಪ್ರೇಮ ಮಧುರಾಕ್ಷರ, ಪ್ರೇಮ ಅಜರಾಮರ ಎಂದು ಪಲುಕಿದವರು ಕವಿ ಕಣಗಾಲ್ ಪ್ರಭಾಕರ ಶಾಸ್ತ್ರಿಗಳು. ಈ ಮಾತು; ಪ್ರೀತಿಗೆ ರಂಗು ಚೆಲ್ಲುತ್ತಲೇ ಇದೆ! ಪ್ರೇಮವೆಂಬುದು ಭಾವಸ್ಫುರಣ, ಮನದೆ ತಲ್ಲಣ, ರಸರೋಮಾಂಚನ ಎಂದು ನನ್ನ ಕವಿತೆಯೊಂದರಲ್ಲಿ ಅದನ್ನು ಹಿಡಿದಿಟ್ಟಿದ್ದೇನೆ. 


ನೈಜ ಪ್ರೇಮವೆಂಬುದು ಆಕ್ರಮಣ ಅಥವಾ ಪ್ರತ್ಯಾಕ್ರಮಣವಲ್ಲ. ಅದು ಅರಿವಿನ ಪರಿಧಿಗಳ ವಿಸ್ತಾರ. ಅದು ರಿಯಾಯಿತಿ ಮಾರಾಟದ ಸರಕಲ್ಲ. ಹಾಗಾಗಿ ಅದು ಯಾವುದೇ ಷರತ್ತೂ ಅನ್ವಯಿಸದ ಸಂಪೂರ್ಣ ಸಮರ್ಪಣೆ. ಅದು ಒಂದರೊಳಗಿನ್ನೊಂದು ಲೀನ; ತಲ್ಲೀನ ಭಾವ. ಅದು ಸೃಷ್ಟಿ-ಸ್ಥಿತಿ-ಲಯಕ್ಕೆ ಕಾರಣವಾಗಬಲ್ಲ ಧ್ಯಾನಸ್ಥ ಮನಸ್ಥಿತಿ. 


ಪ್ರೇಮವೆಂಬುದು ಸ್ಥಾಯಿಭಾವ; ದಿಟ. ಅದು ಅಂತೆಯೇ ಆ ಕ್ಷಣದ ಸತ್ಯವೂ ಹೌದು.‌  ಅದೊಂದು ಭ್ರಮೆಯ ಪೊರೆ ಎಂಬ ಭಾವ ಮೂಡಿಸುವುದೂ ಉಂಟು. ಅಂಕದ ಪರದೆ ಜಾರಿದ ಮೇಲೆ ಪ್ರೇಮವಿನ್ನೆಲ್ಲಿ? ಶೂನ್ಯವೊಂದು ಸೃಷ್ಟಿಯಾಗಿ ಮನಸ್ಸು ಗಲಿಬಿಲಿಗೊಳ್ಳುತ್ತದೆ. ಒಡಲಲ್ಲಿರುವ ಕ್ರಿಯಾಶಕ್ತಿ ಒಂದಿನಿತೂ ಉಳಿಯದೆ ಲಯವಾಗಿ ಬಿಡುತ್ತದೆ. ಬದುಕು ಮೂರಾಬಟ್ಟೆಯಾಗುತ್ತದೆ. ಮಂದಮಾರುತ ಬಯಸಿದಾಗ ಬದುಕು ಬಿರುಗಾಳಿಯ ಬೀಸಿಗೆ ಒಡ್ಡಿಕೊಳ್ಳುವಂತಾಗುತ್ತದೆ. ಮನಸ್ಸಿಗೆ ಕೆಂಡದ ಮಳೆ ಸುರಿದು ಧಗಧಗಿಸಿದಂತಾಗುತ್ತದೆ. ಪ್ರೇಮ ಸಂಕಲನ ಚಿಹ್ನೆಯಷ್ಟೇ ಎಂದು ಭಾವಿಸಿ ಆರಾಮವಾಗಿದ್ದ ಮನಸ್ಸು, ಅದು ವ್ಯವಕಲನವೂ ಸಹ ಎಂಬ ಅರಿವಾದೊಡನೆ ವಿಹ್ವಲಗೊಳ್ಳುತ್ತದೆ.


ತಮ್ಮದು ಅಮರಪ್ರೇಮವೆಂದು ಪರಿಭಾವಿಸಿ ಲೆಕ್ಕದ ನಂಟನ್ನು ಕಳಚಿಕೊಂಡು, ಮಳೆಗರೆದ ಹನಿಹನಿಗೆ ಭೂತಾಯಿ ಬರೆವಳೆ ಲೆಕ್ಕ ಎಂದು ಮರಸುತ್ತಿ ಯುಗಳ ಹಾಡಿದ್ದ ಪ್ರೇಮಿಗಳು ವ್ಯಾಕುಲಗೊಳ್ಳುತ್ತಾರೆ. ಪ್ರೀತಿಯ ಕನಸು ಕರಗಿ, ಹೃದಯ ಭಾರವಾಗಿ ನಾನೊಂದು ತೀರ, ನೀನೊಂದು ತೀರ ಎಂದು ನೊಂದು ದೂರವಾಗಬೇಕಾದ ಅನಿವಾರ್ಯ. ಪ್ರೇಮವೆಂಬುದು ಚೈತ್ರದ ಚಿಗುರಲ್ಲ, ಅದು ಕೊನರುವ ಹಸಿರಲ್ಲ; ಕರಗದ ಕೊರಗು ಎಂಬ ಅರಿವಾಗುತ್ತದೆ. ಬೆಂಕಿಯೊಡನೆ ಸರಸವಾಡಿದೆನೇ, ಬಲ್ಲೆನೆಂಬ ಬಿಂಕ ತೋರಿದೆನೆ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಹವಣಿಕೆಯಲ್ಲಿರುವಾಗಲೇ, ಅದು ಪ್ರಪಾತಕ್ಕೆ ನೂಕಿರುತ್ತದೆ. ಸಫಲ ಪ್ರೇಮವೆಂಬುದು ಕುಳಿರ್ಗಾಳಿ‌. ವಿಫಲ ಪ್ರೇಮ; ಅದೊಂದು ಸುಂಟರಗಾಳಿ. ಅದು "ಪಾತಾಳಕ್ಕೆ ಸೆಳೆದೊಯ್ಯುವ ಚಕ್ರತೀರ್ಥ" ಪ್ರೇಮದಲ್ಲಿ ಬೀಳು ಹೆಚ್ಚು ಎಂದುಕೊಂಡಿರುವಾಗಲೇ ತಾನು ಸತ್ತ ಭೂತ; ವರ್ತಮಾನವಲ್ಲ ಎಂದು ಮನವರಿಕೆ ಮಾಡಿಕೊಟ್ಟಿರುತ್ತದೆ.


ಪ್ರೇಮವೆಂಬುದು "ತನುಮನ ಮಿಲನ ಅನುಸಂಧಾನ." ಆದರೆ ಮನಸಿನ ಪಾತ್ರವಿಲ್ಲದೆ ತುಟಿಗೆ ತುಟಿ, ಕಟಿಗೆ ಕಟಿ ಮಾತ್ರ ಬೆರೆತಾಗ ಅದು 'ಕೇಳಿ'ಯಷ್ಟೇ. ಅದು ಕೊಡುವ ಕ್ರಿಯೆಯೋ, ಕೊಳುವ ಪರಿಯೋ ಎಂಬುದು ಜಿಜ್ಞಾಸೆ.


ಪ್ರೀತಿ-ಪ್ರೇಮ ಎಂಬುದು ನಿಡುಗಾಲದ ಬಂಧ. ಅದು ಆ ಕ್ಷಣದ ಸತ್ಯವೆಂದಷ್ಟೇ ಆಗಬಾರದು. ಅದು ಅನುಗಾಲದ ಸಂಬಂಧವಾಗಿರಬೇಕು. ಪ್ರೇಮವು ಅಡಿಗೆ ಚುಚ್ಚಿದ ಮುಳ್ಳಾಗಬಾರದು. ಹಾಗಾಗಿ ಭಾವುಕ ಮನಸ್ಥಿತಿ ಉಳ್ಳವರು ಮುನ್ನೆಚ್ಚರಿಕೆಯಿಂದ ಇರಬೇಕು.


ಅಕ್ಕಮಹಾದೇವಿ- ಚೆನ್ನಮಲ್ಲಿಕಾರ್ಜುನ ಹಾಗೂ ಮೀರಾಬಾಯಿ-ಕನ್ಹಯ್ಯ;

ಇವರ ನಡುವಿನ ಸಂಬಂಧ ಎಂತಹುದು ಎಂದು ಕೇಳುವವರಿದ್ದಾರೆ. ಅದು ರಾಸಲೀಲೆಯಲ್ಲ. ದೈವೀಕ ನಾದಲೀಲೆ. ಬದುಕಿನ ಸಂಕಷ್ಟಗಳನ್ನು ಪ್ರಖರ ಬೆಳಕಾಗಿಸುವಂತಹುದೂ ಪ್ರೇಮವೇ; ಮಸುಕಾಗಿಸುವುದೂ ಪ್ರೇಮವೇ.


ಪ್ರೇಮವು ಜಗತ್ತನ್ನು ಸುಂದರವಾಗಿಸುವ ಚೈತನ್ಯದಾಯಿ. ಅದು ಪರಸ್ಪರರಲ್ಲಿ ಬೆರೆತುಹೋಗುವಿಕೆ. ಕವಿ ಪುತಿನ ಹೇಳಿದಂತೆ:

ಒಲಿವಾ ಮುನ್ನ ನನ್ನೊಳು ನಾ, ನಿನ್ನೊಳು ನೀ. ಒಲಿದಾ ಮೇಲೆ ನಿನ್ನೊಳು ನಾ, ನನ್ನೊಳು ನೀ."  


-ಕೆ. ರಾಜಕುಮಾರ್


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top