ಎಂದಿನಂತೆ ಮಾಮೂಲು ಸಮಯಕ್ಕೆ ಮಲಗಿಯಾಗಿತ್ತು. ವಿಶೇಷವೇನೂ ಹಗಲು ನಡೆದಿರಲಿಲ್ಲ. ಅದೇ ಊಟ, ಅದೇ ತಿಂಡಿ, ಅದೇ ಮಾತುಕತೆ. ಆದರೆ ಅಂದಿನ ರಾತ್ರಿಯ ಅನುಭವವಿದೆಯಲ್ಲಾ ಈಗಲೂ ಮೈ ನಡುಗಿಸುತ್ತದೆ. ಗಂಟೆ ರಾತ್ರಿ ಎರಡಾಗಿತ್ತು. ಇದ್ದಕ್ಕಿದ್ದಂತೆ ನನಗೆ ಎಚ್ಚರವಾಯಿತು. ಕುತ್ತಿಗೆಯನ್ನು ಯಾರೋ ಜೋರಾಗಿ ಅಮುಕಿದಂತೆ ಭಾಸವಾಗತೊಡಗಿತು. ಉಸಿರಾಟ ನಿಧಾನವಾಗುತ್ತಿರುವ ಅನುಭವವಾಗತೊಡಗಿತು. ನನ್ನ ಗಂಟಲಿನಿಂದ ಬರುತ್ತಿದ್ದ ಗೊಗ್ಗರು ಸ್ವರಕ್ಕೆ ಪತಿ ಎಚ್ಚರಗೊಂಡರು. ನನ್ನ ಆ ಕ್ಷಣದ ಪರಿಸ್ಥಿತಿ ನೋಡಿ ಕಂಗಾಲಾದರೂ ಏನೋ ಮಾತ್ರೆ ಕೊಟ್ಟು ಮಂಚಕ್ಕೆ ಒರಗಿಸಿ ಕುಳ್ಳಿರಿಸಿದರು. ಸ್ವಲ್ಪವೇ ನೀರು ಕುಡಿಸಿ ಬೆನ್ನು ತಿಕ್ಕಿ ಸಮಾಧಾನ ಪಡಿಸಿದರು. ಉಸಿರಾಟ ನಿಧಾನಕ್ಕೆ ಸರಿಯಾಗುತ್ತಲೂ ಹಾಗೇ ಮಲಗಿದೆ. ಅಲ್ಲಿಗೆ ನಿದ್ದೆ ಬಂದು ಬಿಟ್ಡಿತು.
ಮರುದಿನ ಬೆಳಗಾದರೂ ಏಳಬೇಕೆನಿಸಲಿಲ್ಲ. ಕಣ್ಣು ಬಿಟ್ಟರೆ ಇವರು ಪಕ್ಕದಲ್ಲೇ ಕುಳಿತು ನನ್ನ ಪರಿಸ್ಥಿತಿ ಅವಲೋಕಿಸುತ್ತಿದ್ದರು. ಏಳೋಣವೆಂದು ಹೊರಟರೆ ತಲೆ ಚಕ್ಕರ್ ಬಂದಂತಾಗಿ ಅಲ್ಲೇ ಮಲಗಿಬಿಟ್ಟೆ. ಇವತ್ತು ಸುಮ್ಮನೆ ಮಲಗು, ನಾಳೆಗೆ ಎಲ್ಲಾ ಸರಿಯಾಗುತ್ತದೆ ಎಂದು ಧೈರ್ಯ ತುಂಬಿ ತಮ್ಮ ಮುಂದಿನ ಕೆಲಸಕ್ಕೆ ಹೋದರು.
ಮಧ್ಯಾಹ್ನದವರೆಗೂ ಅದೇ ಹ್ಯಾಂಗೋವರ್. ಸಂಜೆಯ ಹೊತ್ತಿಗೆ ಎಲ್ಲಾ ಸರಿಯಾದಂತೆನಿಸಿ ಮೆಲ್ಲನೆ ಎದ್ದು ಹೊರಗೆ ಬಂದರೆ ಅಪ್ಪ, ಮಗ ನನ್ನನ್ನು ನೋಡಿ ನಗುತ್ತಿದ್ದರು. ಅಲ್ಲ ಮಾರಾಯ್ತಿ! ನಿನ್ನೆ ನನ್ನ ಕೈಕಾಲು ಬೀಳಿಸಿಬಿಟ್ಟೆಯಲ್ಲಾ, ಎಂತ ಆದದ್ದು ನಿನಗೆ? ಅಂಬ್ಯುಲೆನ್ಸ್ ಗೆ ಕಾಲ್ ಮಾಡುವುದಾ ಎಂದು ಯೋಚನೆ ಬಂತು. ಅಷ್ಟರಲ್ಲಿ ನಿನ್ನೆಯ ಕಡುಬಿನದ್ದೇ ಕರಾಮತ್ತು ಎಂದು ಅರಿವಾಯಿತು. ಅಲ್ಲಾ ಮಾರಾಯ್ತಿ, ಕಡುಬು ಹಾಳಾಗುತ್ತದೆ ಅಂತ ಮೂರು ಹೊತ್ತು ಅದನ್ನೇ ತಿಂದರೆ ನಿನಗೆ ಗ್ಯಾಸೂ ಆದೀತು, ಅದರ ಅಜ್ಜನೂ ಬಂದೀತು...ಎಂದು ಹೇಳುತ್ತಿದ್ದರೆ ನನಗೇನೂ ಅರ್ಥವಾಗಲಿಲ್ಲ. ಆಚೆಕರೆ ಬೊಳುವ ಹಲಸಿನ ಕಾಯಿ ಬೆಳೆದಿದೆಯಂತೆ, ತರುವುದಾ, ಅಮ್ಮ? ಮಗ ಅಷ್ಟು ಹೇಳುತ್ತಲೇ ನನ್ನ ಮುಖ ಅರಳುತ್ತಿರುವುದು ನೋಡಿ ಅಪ್ಪ-ಮಗ ಮುಖಮುಖ ನೋಡಿದರು. ಬೇಕೆಂದು ನಾನು ತಲೆಯಾಡಿಸುತ್ತಲೇ ಇಬ್ಬರೂ ನಗತೊಡಗಿದರು. ಯಾಕೆಂದು ಅರ್ಥವಾಗದೆ ನಾನು ಮಿಕಮಿಕ ನೋಡತೊಡಗಿದೆ.
ವಿಷಯ ಏನೆಂದು ನಿಧಾನಕ್ಕೆ ಅರ್ಥವಾಗತೊಡಗಿತು. ಎರಡು ದಿನ ಮೊದಲು ಬೀಸಿ ಬೀಸಿ ಬಂದ ಗಾಳಿ, ಮಳೆಗೆ ಬೊಕ್ಕೆ ಹಲಸಿನ ಮರದ ಗೆಲ್ಲು ಬಿದ್ದು ಬೆಳೆದ ಹಲಸಿನಕಾಯಿಗಳು ಧರೆಗುರುಳಿದ್ದವು. ರುಚಿಯಾದ ಹಲಸಿನ ಹಣ್ಣು. ಹಾಳು ಮಾಡಲು ಮನಸ್ಸಾಗಿರಲಿಲ್ಲ. ಎರಡು ದಿನದಿಂದ ಹಲಸಿನಕಾಯಿ ದೋಸೆ, ಪಲ್ಯ, ಸಾಂಬಾರು, ಬೋಳು ಕೊದಿಲು, ಮತ್ತೆ ನಿನ್ನೆ ಬೆಳಗ್ಗೆಗೆ ಹಲಸಿನ ಕಡುಬು, ಮಧ್ಯಾಹ್ನಕ್ಕೆ ಹಲಸಿನ ಹಣ್ಣಿನ ಪಾಯಸ...ಅದೂ ಗೇರು ಬೀಜ ಜಾಸ್ತಿ ಹಾಕಿ. ಹೀಗೆ, ತನು ಮನವೆಲ್ಲಾ ಹಲಸಿನ ಸದ್ಬಳಕೆಯ ಖುಷಿಯಲ್ಲಿ ಮೀಯುತ್ತಿತ್ತು. ಇಷ್ಟೆಲ್ಲಾ ಮಾಡಿಯೂ ಮಿಕ್ಕಿರುವ ಹಲಸಿನ ಹಣ್ಣಿನ ನಾಳಿನ ಮೆನುವನ್ನು ಪ್ಲಾನ್ ಮಾಡುತ್ತಾ ಮಲಗಿದ ನನಗೆ ಮಧ್ಯ ರಾತ್ರಿ ಉಸಿರಾಟದ ಸಮಸ್ಯೆ ಕಾಡಲಾರಂಭಿಸಿದಾಗ ಮನೆಯವರ ಕೈಕಾಲು ಬೀಳದೆ ಇನ್ನೇನಾದೀತು?!?
ಆ ಕ್ಷಣಕ್ಕೆ ಇದು ನನ್ನ ಕೊನೆಯ ಕ್ಷಣಗಳು ಅನ್ನಿಸದೆ ಇರಲಿಲ್ಲ. ನಿಧಾನಕ್ಕೆ ಕಣ್ಣುಗಳೆಲ್ಲಾ ಮಂಜಾಗುತ್ತಾ ನನ್ನ ಪಕ್ಕದಲ್ಲೇ ಇದ್ದ ಇವರು ಮಸುಕು ಮಸುಕಾಗಿ ಕಾಣ ತೊಡಗಿದರು. ಹೋ.. ಮುಗಿಯಿತು, ಮರಣ ಇಷ್ಟು ಸುಲಭವೇ ಅನಿಸತೊಡಗಿತು. ಅಷ್ಟರಲ್ಲಿ ಇವರಿಗೆ ಗ್ಯಾಸ್ಟಿಕ್ ಸಮಸ್ಯೆ ಅನಿಸಿರಬೇಕು. ಹಲಸಿನ ಹಣ್ಣಿನ ಪ್ರಭಾವ ಇಷ್ಟು ಗಾಢವಾಗಿದ್ದೀತು ಎಂದು ಅಂದು ಅರ್ಥವಾಯಿತು. ಅಂದಿನಿಂದ, ಕಡುಬು ಮಾಡಿದಾಗ ಒಂದು ತುಂಡು ರುಚಿ ನೋಡುವುದಕ್ಕಷ್ಟೇ ಸೀಮಿತ ಮಾಡಿಕೊಂಡಿರುವೆ.
- ಅಶ್ವಿನಿಮೂರ್ತಿ ಅಯ್ಯನಕಟ್ಟೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ