ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ಅತ್ಯಂತ ಜಾಗರೂಕತೆಯಿಂದ ಹೆಜ್ಜೆ ಇಡಬೇಕಾದ ಚುನಾವಣಾ ಕಾಲವಿದು. ಆದರೆ ತನಗೆ ಗೆಲುವು ಖಚಿತ ಅನ್ನುವ ಅತಿಯಾದ ಆತ್ಮವಿಶ್ವಾಸದಿಂದ ತಾನು ಮಾಡಿದ್ದು ಎಲ್ಲವೂ ಸರಿ ಅನ್ನುವ ಅಧಿಕಾರದ ಆಹಂಕಾರದಿಂದ ಮುಂದಿನ ಚುನಾವಣೆಯಲ್ಲಿ ಸ್ವಂತ ಬಲದಿಂದ ಅಧಿಕಾರ ಕಟ್ಟಬಲ್ಲೆ ಅನ್ನುವ ಹಗಲು ಕನಸು ಕಾಣುತ್ತಿರುವುದಂತೂ ಸತ್ಯ. ಆದರೆ ಇದು ಅಷ್ಟು ಸುಲಭದ ಮಾತಲ್ಲ ಅನ್ನುವುದು ಇತ್ತೀಚಿನ ಹಲವು ಸಮೀಕ್ಷೆಯಲ್ಲಿ ಕಂಡು ಬಂದ ಸತ್ಯವೂ ಹೌದು. ಹಾಗಾದರೆ ಆಡಳಿತಾರೂಢ ಬಿಜೆಪಿಗೆ ಈಗ ಬಂದಿರುವ ಆಡಳಿತಾತ್ಮಕ ವಿರೇೂಧಗಳೇನು? ಅನ್ನುವುದನ್ನು ಗಮನಿಸಿದಾಗ ಪ್ರತಿಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್ ನ ನಾಯಕತ್ವವಾಗಲಿ, ಅವರ ಸಾಧನೆಯಾಗಲಿ ಬಿಜೆಪಿಯ ಗೆಲುವಿಗೆ ಮುಳುವಲ್ಲ. ಬದಲಾಗಿ ಭಾರತೀಯ ಜನತಾಪಕ್ಷ ತಾನೇ ತೇೂಡಿಕೊಂಡಿರುವ ಪ್ರಮುಖ ಮೂರು ಹೊಂಡಗಳೇ ಅದರ ಗೆಲುವಿಗೆ ಅಡ್ಡ ಬರುವ ಕಂದಕಗಳು ಎಂದು ರಾಜ್ಯದ ಪ್ರಬುದ್ಧ ಮತದಾರ ಆಲೇೂಚಿಸಲು ಸುರು ಮಾಡಿದ್ದಾನೆ. ಹಾಗಾದರೆ ಈ ಮೂರು ಹೊಂಡಗಳೇನು ಅನ್ನುವುದನ್ನು ಆವಲೇೂಕಿಸಬೇಕಾಗಿದೆ.
1. ಧರ್ಮ ರಾಜಕೀಯದಿಂದ ಜಾತಿ ಓಲೈಕೆಯ ರಾಜಕೀಯದ ಹೊಂಡಕ್ಕೆ ಕೈ ಹಾಕಿರುವುದು. ಚುನಾವಣೆಯ ಕಾಲದಲ್ಲಿ ಮತದ ಲೆಕ್ಕಾಚಾರವನ್ನೆ ಪ್ರಧಾನ ಅಸ್ತ್ರವಾಗಿಟ್ಟುಕೊಂಡು ಪ್ರಬಲ ಜಾತಿಗಳ ಮೀಸಲಾತಿಗೆ ಕೈ ಹಾಕಿರುವುದು. ಇದು ಬಿಜೆಪಿಯ ಪಾಲಿಗೆ ಅತೀ ದೊಡ್ಡ ಹೊಡೆತ ತರುವ ನಿರ್ಧಾರ. ಕಳೆದ ಬಾರಿ ಕಾಂಗ್ರೆಸ್ ತನ್ನ ಮತ ಬ್ಯಾಂಕಿಗಾಗಿ ಲಿಂಗಾಯತ ಧರ್ಮ ಸೃಷ್ಟಿಗೆ ಕೈ ಹಾಕಿ ಸರಿಯಾದ ಪೆಟ್ಟು ತಿಂದಿರುವುದನ್ನು ಕಾಂಗ್ರೆಸ್ ಇಂದಿಗೂ ಮರೆತಿಲ್ಲ. ಈಗ ಅದೇ ತರದಲ್ಲಿ ಬಿಜೆಪಿ ಕೂಡಾ ಜಾತಿ ಮೀಸಲಾತಿಯ ಹೆಸರಿನಲ್ಲಿ 23ರ ಚುನಾವಣೆಯಲ್ಲಿ ಪೆಟ್ಟು ತಿಂದರೂ ಆಶ್ಚರ್ಯ ಪಡಬೇಕಾಗಿಲ್ಲ.
2. ಹೊಸ ಪಿಂಚಣಿಯ ನೌಕರರು ಮುಂದಿಟ್ಟಿರುವ ಹಳೆ ಪಿಂಚಣಿಯ ಕೂಗು. ರಾಜ್ಯದ ರಾಜಧಾನಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಸುಮಾರು ಲಕ್ಷದಷ್ಟು ರಾಜ್ಯ ಸರಕಾರದ ನೌಕರರು ಮುಷ್ಕರ ನಿರತರಾಗಿದ್ದಾಗ ರಾಜ್ಯದ ಸಚಿವರಾಗಲಿ ಮುಖ್ಯಮಂತ್ರಿಯಾಗಲಿ ಕರೆದು ಮಾತನಾಡುವ ಸೌಜನ್ಯವನ್ನೂ ತೇೂರಿಸಲಿಲ್ಲ ಅನ್ನುವುದು ಇಡಿ ರಾಜ್ಯ ಜನತೆಯಲ್ಲಿ ಬೇಸರ ತಂದಿರುವದಂತೂ ಸತ್ಯ. ಸುಮಾರು ಮೂವತ್ತು ವರುಷಗಳ ಕಾಲ ಸೇವೆ ಸಲ್ಲಿಸಿದ ನೌಕರರನಿಗೆ ನಿವೃತ್ತಿ ಕಾಲದಲ್ಲಿ ಕೇವಲ ಒಂದೆರಡು ಸಾವಿರ ಪಿಂಚಣಿ ಸಿಗುತ್ತದೆ ಅಂದರೆ ನಿವೃತ್ತ ನೌಕರರ ಸಂಧ್ಯಾಕಾಲದ ಪರಿಸ್ಥಿತಿ ಏನಾಗಬಹುದು ಅನ್ನುವುದರ ಬಗ್ಗೆ ಸಾಮಾನ್ಯ ಕಾಳಜಿ ಇಲ್ಲದ ಸರ್ಕಾರ ಅನ್ನುವ ಸಂದೇಶದ ಸುದ್ದಿ ಈ ಶೇೂಷಿತ ನೌಕರರ ಕುಟುಂಬ ಬಿಜೆಪಿ ವಿರುದ್ಧ ಚುನಾವಣಾ ಕಾಲದಲ್ಲಿ ಅಂಡರ್ ಕರೆಂಟ್ ತರದಲ್ಲಿ ಪ್ರಚಾರ ಪಡಿಸುವುದು ಗ್ಯಾರಂಟಿ. ಪ್ರತಿ ಜಿಲ್ಲೆಯಲ್ಲಿ ಸರಿ ಸುಮಾರು ಎರಡು ಮೂರು ಸಾವಿರ ಸಿಬ್ಬಂದಿಗಳು ಇದ್ದಾರೆ. ಅಂದರೆ ಇವರ ಕುಟುಂಬದ ಸರಿ ಸುಮಾರು 3 ರಿಂದ ನಾಲ್ಕು ಮಂದಿ ಸದಸ್ಯರು ಸೇರಿದರು ಅಂದರೆ ಸುಮಾರು ಹದಿನೈದು ಲಕ್ಷ ಮಂದಿ ಬಹು ಶೇೂಷಿತ ನೌಕರರ ಕುಟುಂಬದ ಸದಸ್ಯರೇ ಬಿಜೆಪಿ ಬಂಡವಾಳ ಶಾಹಿ ಧೇೂರಣಾ ನೀತಿಯನ್ನು ಜಾಹೀರುಗೊಳಿಸುತ್ತಾರೆ ಅನ್ನುವುದನ್ನು ಪಕ್ಷ ಮರೆಯುವಂತಿಲ್ಲ. ಎನ್.ಪಿ.ಎಸ್.ಎಷ್ಟು ಅಸಹ್ಯವಾದ ಅಮಾನವೀಯವಾದ ಪಿಂಚಣಿ ಅಂದರೆ ಸರ್ಕಾರವೇ ನೌಕರರ ಜೇಬಿಗೆ ಕೈ ಹಾಕಿ ಅವರ ದುಡಿಮೆಯ ಶೇ.10 ರಷ್ಟು ಹಣವನ್ನು ಖಾಸಗಿ ಕಂಪನಿಗಳ ಷೇರುಗಳ ಮೇಲೆ ಹೂಡಿ ಅಂದರೆ ಗ್ಯಾಬ್ಲಿಂಗ್ ರೀತಿಯಲ್ಲಿ ಹಣ ತೊಡಗಿಸಿ ಅದರಲ್ಲಿ ಬಂದ ಲಾಭವನ್ನು ನೌಕರರಿಗೆ ಪಿಂಚಣಿ ಯಾಗಿ ನೀಡುವುದು. ಈ ಕಂಪನಿಗಳು ಮುಳುಗಿ ಹೇೂದರೆ ನೌಕರರಿಗೆ ಬರಿಗೈಯೇ ಗತಿ. ಇದಾಗಲೇ ಕೆಲವು ದೇಶಗಳಲ್ಲಿ ಈ ಹಣ ಮುಳುಗಿ ಹೇೂಗಿ ನೌಕರರು ಬೀದಿಪಾಲಾಗಿರುವ ಉದಾಹರಣೆಗಳು ಇವೆ. ಅಂದರೆ ಇದು ಬಂಡವಾಳಶಾಹಿ ಧೇೂರಣೆಯ ಸರ್ಕಾರ ಮಾಡುವ ಕೆಲಸ. ಕಾಂಗ್ರೆಸ್ ಮತ್ತು ಜೆಡಿಎಸ್ ಇದನ್ನು ತಮ್ಮ ಪ್ರಣಾಳಿಕೆಯಲ್ಲಿ ಸೇರಿಸಿಕೊಂಡು ಬಿಜೆಪಿಯು ನೈತಿಕ ದಿವಾಳಿತನ ಜೊತೆಗೆ ಬಡ ನೌಕರರ ಗೋಳನ್ನು ಜನರ ಮನಸ್ಸಿಗೆ ತಲುಪಿಸುವಲ್ಲಿ ದೊಡ್ಡ ಮಟ್ಟದ ಪ್ರಯತ್ನ ಮಾಡಲು ಮುಂದೆ ಹೆಜ್ಜೆ ಇಟ್ಟು ನಿಂತಿರುವುದಂತೂ ಸತ್ಯ . ಇದರ ಜೊತೆಗೆ "ರಾಷ್ಟ್ರೀಯ ಹೊಸ ಶಿಕ್ಷಣ ನೀತಿ"ಯ ಅವಾಂತರ ರಾಜ್ಯದೊಳಗೆ ಎಷ್ಟಿದೆ ಅನ್ನುವುದನ್ನು ಜನ ಇದಾಗಲೇ ತಿಳಿದು ಕೊಂಡಿದ್ದಾರೆ.
3. ರಾಜ್ಯದ ಬಿಜೆಪಿಯ ನಾಯಕರು ಮಾತ್ರ ವಾಜಪೇಯಿ, ಅಡ್ವಾಣಿ, ಮೇೂದಿಯ ಟ್ರಂಪ್ ಕಾರ್ಡ್ ಹಿಡಿದು ಮತ ಕೇಳಲು ಮುಂದಾಗಿದ್ದಾರೆ. ಇದನ್ನು ಪ್ರತಿ ಬಾರಿ ನೇೂಡಿ ಜನ ಬೇಸರಗೊಂಡಿದ್ದಾರೆ. ನಿಮ್ಮ ಸಾಧನೆಗಳೇನು ಅನ್ನುವುದನ್ನು ಕೇಳಲು ಜನ ಸಾಲಾಗಿ ನಿಂತಿದ್ದಾರೆ! ಅಂತೂ ರಾಜ್ಯದ ಪ್ರಬುದ್ಧ ಮತದಾರ ಮುಂದಿನ ಶಾಸಕರ ಭವಿಷ್ಯ ಬರೆಯಲು ಕಾದು ನಿಂತಿರುವುದಂತೂ ಸತ್ಯ.
- ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ