ಬೆಂಗಳೂರು: ಅಡಿಕೆ ಎಲೆಚುಕ್ಕೆ ರೋಗ ಮೊದಲು 2017 ರಲ್ಲಿ ಕಂಡುಬಂದ ಕಳಸದ ಸುತ್ತಮುತ್ತ ಅಡಿಕೆ ತೋಟಗಳು ಸರ್ವನಾಶವಾಗಿವೆ. ನಂತರದ ವರ್ಷಗಳಲ್ಲಿ ಹರಡಿದ ತೀರ್ಥಹಳ್ಳಿ ಮುಂತಾದೆಡೆ ಪರಿಸ್ಥಿತಿ ಕೈಮೀರುತ್ತಿದೆ. ಪ್ರಕೃತಿಯ ಸಹಕಾರ ಸಿಗದಿದ್ದಲ್ಲಿ ರೋಗ ನಿಯಂತ್ರಣದ ಮಾನವ ಪ್ರಯತ್ನ ನಿರರ್ಥಕವಾಗುತ್ತಿರುವುದು ಫಾರ್ಮ್ ಟಿವಿಯ ವೈಜ್ಞಾನಿಕ ಅಧ್ಯಯನದಲ್ಲಿ ಕಂಡುಬಂದಿದೆ.
ಫಾರ್ಮ್ ಟಿವಿಯ ಪ್ರಧಾನ ಸಂಪಾದಕ ಡಾ. ವೆಂಕಟ್ರಮಣ ಹೆಗಡೆ ಮುಂದಾಳತ್ವದಲ್ಲಿ ದೇಶದ ಹೆಸರಾಂತ ಸಸ್ಯ ರೋಗಶಾಸ್ತ್ರಜ್ಞರಾದ ಡಾ. ವೇಣುಗೋಪಾಲ, ಡಾ. ಮಹಾಂತೇಶ ಪಾಟೀಲ, ಸಿಪಿಸಿಆರ್‌ಐನ ಡಾ. ವಿನಾಯಕ, ಸಿಸಿಆರ್‌ಐನ ಮಣ್ಣು ವಿಜ್ಞಾನಿ ಡಾ. ನಾಗರಾಜ, ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಡಾ. ರವಿಕುಮಾರ ಮತ್ತು ಇನ್ನೂ ಹಲವು ವಿಜ್ಞಾನಿಗಳನ್ನೊಳಗೊಂಡ ತಂಡ ರೋಗಪೀಡಿತ ಪ್ರದೇಶಗಳಲ್ಲಿ 3 ದಿನಗಳ ಅಧ್ಯಯನ ನಡೆಸಿತು.
ಈಗಾಗಲೇ ವಿಜ್ಞಾನಿಗಳು 4-5 ರೋಗಾಣು ಶಿಲೀಂಧ್ರಗಳನ್ನು ಗುರುತಿಸಿ, ಪ್ರತ್ಯೇಕಿಸಿ ಲಭ್ಯವಿರುವ ಅತ್ಯುತ್ತಮ ಶಿಲೀಂಧ್ರ ನಾಶಕಗಳನ್ನು ಪ್ರಯೋಗಿಸಿ ರೋಗ ನಿಯಂತ್ರಣಕ್ಕೆ ಪ್ರಯತ್ನಿಸಿದ್ದಾರೆ. ಹಲವು ರೈತರೂ ತಾವಾಗಿಯೇ ಅನೇಕ ಪ್ರಯೋಗ - ಪ್ರಯತ್ನ ಮಾಡಿದ್ದಾರೆ. ತೋಟಗಾರಿಕೆ ಇಲಾಖೆ ಔಷಧಗಳನ್ನು ಕೆಲವೆಡೆ ಕೆಲಮಟ್ಟಿಗೆ ಪೂರೈಸಿದೆ. ಆದರೆ ಪ್ರಕೃತಿಯ ಸಹಕಾರವಿಲ್ಲದೆ ಬಹುತೇಕ ಪ್ರಯತ್ನ ಗಳು ನೆಲಕಚ್ಚಿವೆ. ಸಾಂಪ್ರದಾಯಿಕ, ಸಾವಯವ ಮತ್ತು ಅತ್ಯುತ್ತಮ ಆರೋಗ್ಯದ ತೋಟಗಳು ಕೂಡ ರೋಗಕ್ಕೆ ತುತ್ತಾಗಿವೆ. ರೋಗ ಮತ್ತಷ್ಟು ಹೊಸ ಪ್ರದೇಶಗಳಿಗೆ ಗಾಳಿಯ ಮೂಲಕ ಹಬ್ಬುತ್ತಿದೆ. ಈ ತರ ಹತಾಶ ಪರಿಸ್ಥಿತಿಯ ದುರ್ಬಳಕೆ ಮಾಡಿಕೊಂಡು ಸಾವಯವ ಮತ್ತಿತರೆ ಹೆಸರಿನಲ್ಲಿ ಹಲವು ಖಾಸಗಿ ಕಂಪನಿ- ವ್ಯಕ್ತಿಗಳು ಡಾಕ್ಟರ್, ಕೇರ್, ಪ್ಲಾನೆಟ್, ಸರ್ಫ್, ಸಿಲ್ವರ್, ಕಾಪರ್ ಮುಂತಾದ ವಿವಿಧ ಉತ್ಪನ್ನಗಳನ್ನು ಯಾವುದೇ ವೈಜ್ಞಾನಿಕ ಅಧ್ಯಯನವಿಲ್ಲದೇ ಮಾರಾಟಮಾಡುತ್ತಿದ್ದಾರೆ.
ಅವ್ಯಾವುದೂ ಕೆಲಸ ಮಾಡಿಲ್ಲ. ಮರಸಣಿಗೆಯ ರೈತರೊಬ್ಬರದು 2021ರಲ್ಲಿ 60 ಕ್ವಿಂಟಾಲ್ ಅಡಿಕೆ ಆಗಿದ್ದರೆ, ಈ ವರ್ಷ 5 ಕ್ವಿಂಟಾಲ್. 2017ರಲ್ಲಿ ಮೊದಲು ರೋಗ ಆರಂಭವಾದ ಪ್ರದೇಶಗಳಲ್ಲಿ ಸಾವಿರಾರು ಎಕರೆ ಅಡಿಕೆ ತೋಟಗಳು ನಿರ್ನಾಮವಾಗಿವೆ. ಅವರೆಲ್ಲ ಸರ್ಕಾರದಿಂದ ಪುನರ್ವಸತಿ-ಪರಿಹಾರ ಮತ್ತು ಪರ್ಯಾಯ ಬೆಳೆ ಯೋಜನೆಗಳಿಗೆ ಎದುರು ನೋಡುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ರೋಗ ಹರಡದಂತೆ ಮತ್ತು ಬರದಂತೆ ತಡೆಯುವ ಯಾವುದೇ ಮಾರ್ಗ -ಔಷಧಗಳಿಲ್ಲ. ಸರ್ಕಾರ - ಮಂತ್ರಿಗಳು ಏನೇ ಹೇಳಿಕೆ ಕೊಟ್ಟಿದ್ದರೂ ಸೂಕ್ತ ಸಂಶೋಧನೆಯನ್ನು ಕೈಗೊಳ್ಳುವ ಸಾಮರ್ಥ್ಯ-ಕಳಕಳಿ ಇರುವ ಸಂಸ್ಥೆ-ವಿಜ್ಞಾನಿಗಳಿಗೆ ನಯಾಪೈಸೆ ಹಣಕಾಸಿನ ನೆರವು ಇದುವರೆಗೆ ದೊರೆತಿಲ್ಲ.
ಈಗ 1 ಲಕ್ಷ ಎಕರೆಯಲ್ಲಿರುವ ರೋಗ ಮುಂದಿನ ಸಪ್ಟೆಂಬರದಲ್ಲಿ ಇನ್ನಷ್ಟು ಲಕ್ಷ ಎಕರೆ ಪ್ರದೇಶಕ್ಕೆ ಪ್ರಸಾರವಾದಲ್ಲಿ ಯಾವ ಆಶ್ಚರ್ಯವಿಲ್ಲ. ಇಷ್ಟಾದರೂ ಬೆಳೆಗಾರರ ಸಂಸ್ಥೆಗಳು ಕೂಡ ಯಾವುದೇ ಗಂಭೀರ ಪ್ರಯತ್ನ ಮಾಡಿಲ್ಲ. ರಸಾಯನಿಕ ಸಿಂಪಡನೆ, ಸರ್ಕಾರ, ವಿಜ್ಞಾನಿಗಳ ವಿರುದ್ಧ ಮಾತನಾಡುವ ಬೊಗಳೆ ದಾಸರುಗಳು ಕೂಡ ರೋಗಪೀಡಿತ ಪ್ರದೇಶಗಳಲ್ಲಿ ರೋಗ ನಿಯಂತ್ರಣದ ನಿಟ್ಟಿನಲ್ಲಿ ಕೆಲಸ ಮಾಡಿದ ಯಾವುದೇ ಕುರುಹು ಅಧ್ಯಯನ ತಂಡಕ್ಕೆ ಕಾಣಲಿಲ್ಲ. ಫಾರ್ಮ್ ಟಿವಿ ಸದ್ಯದಲ್ಲೇ ಈ ವೈಜ್ಞಾನಿಕ ವಸ್ತುಸ್ಥಿತಿ ಅಧ್ಯಯನದ ವಿವರ ವರದಿಯನ್ನು ಸಂಬಧಿತ ಎಲ್ಲರಿಗೂ ಸಲ್ಲಿಸಲಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ