ನನ್ನ ಮೇಲೆ ನಿನಗೆ ಅದೇನು ಸೆಳೆತವೋ ನಾ ಕಾಣೆ. ಯಾಕಿಷ್ಟು ನನ್ನ ಬೆಂಬಿಡದೆ ಕಾಡುವೆ. ನಾನು ಅದೆಷ್ಟು ಬೇಡವೆಂದರೂ ಕೂಡ ನೀನು ನನ್ನ ಯಾತಕ್ಕಾಗಿ ಹಿಂಬಾಲಿಸುವೆ. ಎಲ್ಲಾ ಕಡೆಗಳಲ್ಲೂ ನನ್ನೊಂದಿಗೆ ನೀನು ಕೂಡ ಹಾಜರಿರುವೆ.
ಚಿಕ್ಕವಳಿರುವಾಗ ಅಷ್ಟೊಂದು ನಿನ್ನ ಒಡನಾಟ ಇರದಿದ್ದರೂ ಕೂಡ ನಾನು ಬೆಳೆಯುತ್ತಾ ಹೋದಂತೆ ನೀನು ನನಗೆ ಹತ್ತಿರವಾಗಲು ಪ್ರಯತ್ನಿಸಿದೆ. ನನಗಂತೂ ನಿನ್ನಿಂದ ತಪ್ಪಿಸಿಕೊಳ್ಳುವುದರಲ್ಲೇ ಸಾಕಾಗಿ ಹೋಗುತಲಿತ್ತು. ನನ್ನೆಲ್ಲಾ ಆಟದಲ್ಲೂ-ಪಾಠದಲ್ಲೂ ಕೂಡ ನೀನು ನನ್ನ ಹಿಂದೆಯೇ ಇರುತಲಿದ್ದೆ. ಮನೆಯವರೆಲ್ಲರಿಗೂ ಈ ನಿನ್ನ ಉಪಟಳದಿಂದ ಸಾಕು- ಸಾಕಾಗಿ ಹೋಗುತಲಿತ್ತು. ನಿನ್ನಿಂದಾಗಿ ತಪ್ಪೇ ಮಾಡದ ನಾನು ಕೂಡ ಸುಖಾ ಸುತಃಮ್ಮನೆ ಬೈಗುಳ ತಿನ್ನುತಲಿದ್ದೆ. ಆಗೆಲ್ಲಾ ನಿನ್ನ ಮೇಲೆ ಕೆಟ್ಟ ಕೋಪ ಬರುತಲಿತ್ತು. ಯಾರೇನೇ ಹೇಳಿದರೂ ಸಹ ನೀನು ಮತ್ತಷ್ಟು ನನಗೆ ಹತ್ತಿರವಾಗಲು ಪ್ರಯತ್ನಿಸುತ್ತಿದ್ದೆ.
ಎಲ್ಲರಿಗೂ ಇದ್ದ ಒಂದು ದೊಡ್ಡ ಚಿಂತೆ ಏನೆಂದರೆ ನನ್ನಿಂದ ನಿನ್ನನ್ನು ಆದಷ್ಟು ಬೇಗ ದೂರವಾಗಿಸುವುದು. ಅದಕ್ಕಾಗಿ ಅನೇಕ ಪ್ರಯೋಗಗಳನ್ನು ಮಾಡಿ, ಫಲಿತಾಂಶ ಶೂನ್ಯ ಎಂದಾದಾಗ ಸೋತು ಸುಸ್ತಾಗುತಲಿದ್ದರು.
ಏನೋ ಒಂದು ರೀತಿಯಲ್ಲಿ ಜನುಮದ ನಂಟಿನಂತೆ ನಮ್ಮಿಬ್ಬರ ಸಂಬಂಧ. ನಾನು ಮನೆಯಲ್ಲಿದ್ದಾಗ ಅಥವಾ ಕಾಲೇಜಿನಲ್ಲಿ ಇದ್ದಾಗ, ಸ್ನೇಹಿತರೊಂದಿಗೆ ಎಲ್ಲಾದರೂ ತೆರಳಿದಾಗ ಕೂಡ ನೀನು ನನ್ನನ್ನು ಬಿಡುತ್ತಿರಲಿಲ್ಲ. ನಿನ್ನ ಬರುವಿಕೆಯು ಯಾವಾಗ ಎಂದು ಊಹಿಸಲು ನನ್ನಿಂದ ಸಾಧ್ಯವಾಗುತ್ತಿರಲಿಲ್ಲ. ಏಕೆಂದರೆ ನೀನು ಇದ್ದಕ್ಕಿದ್ದಂತೆ ಒಕ್ಕರಿಸಿಕೊಳ್ಳುತ್ತಿದ್ದೆ.
ಪರೀಕ್ಷಾ ಸಮಯಗಳಲ್ಲಿ ಮನಸಿಟ್ಟು ಓದಲೂ ಆಗುತ್ತಿರಲಿಲ್ಲ. ಆ ದಿನಗಳಲ್ಲಿ ನನ್ನ ಅಮ್ಮ ಪಟ್ಟ ಪಾಡುಗಳನ್ನು ನೆನಪಿಸಿಕೊಂಡರೆ ಈಗಲೂ ಅಯ್ಯೋ ಎಂದೆನಿಸುತ್ತದೆ. ನಿನ್ನಿಂದ ನನಗಾಗುತಲಿದ್ದ ತೊಂದರೆಗಳನ್ನು ನಿವಾರಿಸಲು ಅವಳು ನಡೆಸಿದ ಪ್ರಯತ್ನಗಳು ಒಂದೆರಡಲ್ಲ.
ಕಾಲೇಜಿನಲ್ಲಿ ಅಧ್ಯಾಪಕರುಗಳು ಕೂಡ ನಿನ್ನಿಂದಾಗಿ ನನಗಾಗುತ್ತಲಿದ್ದ ತೊಂದರೆಗಳನ್ನು ಕಂಡು ಹೈರಣಾಗಿ ಹೋಗಿದ್ದರು. ಪಾಠ ಕೇಳುವುದರಲ್ಲಿ ಏಕಾಗ್ರತೆಯಿಂದ ಮಗ್ನಳಾಗಿರುವಾಗ ನಿನ್ನ ಉಪಟಳಗಳು ಶುರುವಾಗುತಲಿತ್ತು. ನಿನ್ನೊಂದಿಗೆ ಅದೆಷ್ಟು ಹೋರಾಡಲು ಪ್ರಯತ್ನಿಸಿದರೂ ಕೊನೆಗೆ ನೀನೆ ಮೇಲುಗೈ ಸಾದಿಸುತ್ತಿದ್ದೆ. ಸ್ನೇಹಿತರೆಲ್ಲರಿಗೂ ನಿನ್ನ ಹಾಗೂ ನನ್ನ ಸಂಬಂಧದ ಬಗೆಗೆ ಬಹಳ ಚೆನ್ನಾಗಿಯೇ ಅರಿವಿತ್ತು. ನೀನು ಹೆಚ್ಚು ಕಾಟ ಕೊಟ್ಟರೆ ಕೊನೆಗೆ ತಡೆಯಲಾರದೆ ರಜೆ ಹಾಕಿ ಮನೆಯಲ್ಲಿಯೇ ಕುಳಿತುಬಿಡುತ್ತಿದ್ದೆ. ಅಂತಹ ಸಂದರ್ಭಗಳಲ್ಲಿ ಸ್ನೇಹಿತರು ದಿನಕ್ಕೆ ನಾಲ್ಕಾರು ಬಾರಿಯಾದರೂ ಕರೆ ಮಾಡಿ ವಿಚಾರಿಸಿಕೊಳ್ಳುತಿದ್ದರು.
ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಯ ಸಮಯದಲ್ಲಿ ಪರೀಕ್ಷೆ ಪ್ರಾರಂಭಗೊಂಡ ದಿನದಿಂದ ಕೊನೆಯ ದಿನದವರೆಗೂ ಕೂಡ ನೀನು ಜೊತೆಗೇ ಇದ್ದೆ ಎಂಬುದನ್ನು ನೆನಪಿಸಿಕೊಂಡರೆ ಈಗಲೂ ನಗು ಬರುತ್ತದೆ. ಹಾಗೆಯೇ ನಿನ್ನಿಂದಾಗಿಯೇ ಪರೀಕ್ಷೆಗಳಲ್ಲಿ ಅಂಕಗಳೂ ಕಡಿಮೆ ಬಂದಿರುವುದನ್ನು ನೆನಪಿಸಿಕೊಂಡರೆ ನಿನ್ನ ಮೇಲೆ ಹುಸಿಕೋಪವು ಬರುತ್ತದೆ.
ಅಲ್ಲಾ...!! ಇಷ್ಟೆಲ್ಲಾ ನಿನ್ನ ಬಗ್ಗೆ ಗುಣಗಾನ ಮಾಡಿದ ಮೇಲೆ ನೀನ್ಯಾರೆಂದು ಹೇಳದಿದ್ದರೆ ತಪ್ಪಾಗುವುದು ಅಲ್ವಾ. ಇಷ್ಟು ಹೊತ್ತು ಹೇಳಿದ್ದು ಇನ್ಯಾರ ಬಗೆಗೂ ಅಲ್ಲಾ, ನನ್ನನ್ನು ಬಿಡದೆ ಪ್ರತಿದಿನವೂ ಕಾಡುವ ಜ್ವರದ ಬಗೆಗೆ. ಎಲ್ಲರಿಗೂ ಅಪರೂಪಕ್ಕೊಮ್ಮೆ ಜ್ವರ ಬರುವುದು ಸಹಜ. ಆದರೆ ನನಗೆ ವಾರದ ಏಳು ದಿನಗಳಲ್ಲಿ ನೀನಿಲ್ಲದ ದಿನವು ಎರಡೋ ಅಥವಾ ಮೂರು ದಿನಗಳೋ ಏನೋ. ಉಳಿದಂತೆ ಎಲ್ಲಾ ದಿನಗಳಲ್ಲಿ ಕೂಡ ನಿನ್ನ ಉಪಟಳ ಇದ್ದಿದ್ದೇ. ಮಾತ್ರೆ, ಮದ್ದು ತಿಂದು ಸಾಕಾಗಿ, ಮಾತ್ರೆಗಳ ಮೇಲೆ ಜಿಗುಪ್ಸೆ ಬಂದು ಹೋಗಿದೆ. ನಿನ್ನಿಂದಾಗಿ ನಾನು ಪಟ್ಟ ಪಾಡು ಅಷ್ಟಿಷ್ಟಲ್ಲ. ಇಷ್ಟೆಲ್ಲಾ ಕಾಟ ಕೊಟ್ಟ ಮೇಲೂ ನಿನಗೆ ಬಿಟ್ಟು ಹೋಗಲು ಮನಸಾದಂತೆ ಕಾಣುತಲಿಲ್ಲ. ಯಾರ ಮೇಲೂ ಇಲ್ಲದ ವಿಶೇಷ ಪ್ರೀತಿ ನನ್ನ ಮೇಲೆ ನಿನಗ್ಯಾಕೋ ನಾ ಕಾಣೆ. ಇನ್ನಾದರೂ ನೀನು ನನ್ನಿಂದ ದೂರ ಸರಿಯುವೆಯೇನೋ ಎಂದು ಕಾದು ನೋಡಬೇಕಾಗಿದೆ.
✍️ ಪ್ರಸಾದಿನಿ ಕೆ ತಿಂಗಳಾಡಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ