ಜನವರಿ 23 ಇಂದು ವಿಶ್ವ ಕೈಬರಹ ದಿನ. ಇದು ನನ್ನ ಕೈ ಬರಹ. ಬರಿಯೋದು ಬಿಟ್ಟು ಸುಮಾರು ವರ್ಷಗಳಾದವು ಆದರೂ ಕನ್ನಡ ಬೆರಳು ತುದಿಯಲ್ಲೇ ಇದೆ. ಪೆನ್ನು ಹಿಡಿದಿದ್ದೆ ತಡ ಪಟ ಪಟ ಅಂತ ಕನ್ನಡ ಲಿಪಿಗಳು ಮೂಡಿ ಬಿಡುತ್ತೆ. ಆದ್ರೆ ಮೊಬೈಲ್, ಲ್ಯಾಪ್ಟಾಪ್ ಬಂದಾದ್ಮೇಲೆ ಬರಿಯೋದೆ ಕಡಿಮೆ ಆಗಿದೆ. ಈಗೆಲ್ಲ ಬರೀ ಟೈಪಿಂಗ್. ಪೆನ್ ಹಿಡಿಯೋ ಕೈ ಬರೀ ಬೆರಳು ಒತ್ತುವದರಲ್ಲೇ ಅಕ್ಷರ ಮೂಡಿಸುವಂತಾಗಿದೆ. ಆದ್ರೆ ಬರೆದ ಅಕ್ಷರಕ್ಕೆ ಇರುವ ತಾಕತ್ತು, ಕಿಮ್ಮತ್ತು ಟೈಪ್ ಮಾಡಿದ ಅಕ್ಷರದಲ್ಲಿ ಇಲ್ಲ.
ಇವತ್ತಿನ ಇಂಟರ್ನೆಟ್ ಯುಗದಲ್ಲಿ ಪತ್ರ ವ್ಯವಹಾರವನ್ನು ಎಲ್ಲರೂ ಮರೆತಿದ್ದಾರೆ. ನಮ್ಮ ಬಾಲ್ಯದ ದಿನಗಳಲ್ಲಿ ಸಂಬಂಧಿಗಳಿಗೆ ಪತ್ರ ಬರೆದು ಉತ್ತರಕ್ಕಾಗಿ ಪೋಸ್ಟಮನ್ ದಾರಿ ಕಾಯುತ್ತಿದ್ದೆವು. ನಮ್ಮ ಮನೆ ಕಡೆ ಪೋಸ್ಟಮನ್ ಬರುತ್ತಿದ್ದಾನೆಂದರೆ ಅದೇನೋ ಸಡಗರ. ಯಾವುದೇ ಪತ್ರ ಕೊಟ್ಟರೂ ಸರಿ, ಅದನ್ನು ಓದಿ ಮುಗಿಸುವವರೆಗೆ ಸಮಾಧಾನವೇ ಆಗುತ್ತಿರಲಿಲ್ಲ. ಕೈಗೆ ಸೇರಿದ ಪತ್ರ ಓದಿದಾಗ ನಮ್ಮ ದೂರದ ಸಂಬಂಧಿಗಳು ನಮ್ಮೊಂದಿಗೆ ಮಾತನಾಡುತ್ತಿದ್ದಾರೇನೋ ಎಂಬ ಭಾವನೆ ಮೂಡುತ್ತಲಿತ್ತು. ಮತ್ತೆ ಅದಕ್ಕೆ ಪ್ರತಿಯಾಗಿ ನಾವು ಉತ್ತರ ಬರೆದು ಪೋಸ್ಟ್ ಮಾಡಿ ಬಿಡ್ತಿದ್ವಿ. ಆದ್ರೆ ಈಗ ಕಾಲ ತುಂಬಾ ಬದಲಾಗಿದೆ ಕೈಯಲ್ಲೇ ಮೊಬೈಲ್ ಇದ್ರು ಯಾರು ಯಾರೊಡನೆ ಮಾತಾಡೋವಷ್ಟು ಆಸಕ್ತಿ, ಸಮಯ ಯಾರ ಬಳಿಯೂ ಇಲ್ಲ.
ತಂತ್ರಜ್ಞಾನದಲ್ಲಿ ಏನೇ ಬದಲಾವಣೆಗಳಾದರೂ ಕೈಬರಹವನ್ನು ನಿಲ್ಲಿಸಬಾರದು ಅಲ್ವಾ. ಏಕೆಂದರೆ ಅದು ನಮ್ಮನ್ನು ಹಲವು ಒತ್ತಡಗಳಿಂದ ದೂರವಿರಿಸಿ ಮನಸ್ಸಿಗೆ ಶಾಂತಿ, ನೆಮ್ಮದಿ ನೀಡುತ್ತದೆ.
ಏಕಾಂತದಲ್ಲಿ ಕುಳಿತು ಪೆನ್ನು, ಕಾಗದ ಹಿಡಿದು ಇಷ್ಟ ಪಟ್ಟ ಜೀವಕ್ಕೆ, ಅದೆಷ್ಟೋ ವಿಷಗಳನ್ನ ಹೇಳಲಾಗದೆ ಮನಸಲ್ಲೇ ಬಚ್ಚಿಟ್ಟ ಭಾವನೆಗಳನ್ನು ಅಕ್ಷರ ರೂಪದಲ್ಲಿ ಹೊರ ಹಾಕುವ ಆ ದಿನಗಳು ಅದೆಷ್ಟು ಚಂದ ಅಲ್ವಾ. ಎಷ್ಟು ಬರೆದರೂ ಇನ್ನು ಬರೆಯಬೇಕು ಎನ್ನುವ ಬಯಕೆ, ಎಷ್ಟು ಹೇಳುದರೂ ಇನ್ನಷ್ಟು ಹೇಳಬೇಕು ಎನ್ನುವ ತವಕ. ಅದೇ ರೀತಿ ನಾವು ಇಷ್ಟ ಪಡುವ ಜೀವ ಇದನ್ನು ಓದಿ ನಮ್ಮ ಪ್ರಿಯನ್ನು ಅರ್ಥಮಾಡಿಕೊಂಡು ಅದಕ್ಕೆ ಪ್ರತಿಯುತ್ತರವಾಗಿ ನಮಗೂ ಒಂದು ಪತ್ರ ಬರೆಯಲಿ ಅಂತ ಕಾದು ಕುಂತ ದಿನ ಅದೆಷ್ಟು ಮಧುರ.
ಆದರೆ ಈಗ ಅಲ್ಲಿ ಇಲ್ಲಿ ಸಿಕ್ಕ ಸಂದೇಶಗಳನ್ನು ರವಾನಿಸುವದರಲ್ಲಿ ಎಲ್ರಿಗೂ ಅದೆಲ್ಲಿಲ್ಲದ ಖುಷಿ. ಸ್ವಂತಿಕೆ ಅನ್ನುವದೇ ಮರೆಮಾಚಿದೆ. ಬೆಳಿಗ್ಗೆ ಎದ್ದು ಗುಡ್ ಮಾರ್ನಿಂಗ್ ಇಂದ ಹಿಡಿದು ಗುಡ್ ನೈಟ್ ವರೆಗೂ ಎಲ್ಲಾ ರೆಡಿ ಮೇಡ್ ಸಂದೇಶಗಳೇ. ಅದರಲ್ಲಿ ಪ್ರೀತಿಯೂ ಇಲ್ಲ, ಅಕ್ಕರೆಯೂ ಇಲ್ಲ.
ಶಾಶ್ವತವಾಗಿ ನಮ್ಮ ಜೀವನದುದ್ದಕ್ಕೂ ದಾಖಲೆಗಳಾಗಿ ಉಳಿಯುವ ಪತ್ರಗಳಿಗೆ ಸರಿಸಾಟಿ ಯಾವುದು ಇಲ್ಲಾ. ಕೈಯಿಂದ ಬರೆದ ಅಕ್ಷರದಲ್ಲಿ ಅಡಗಿರುವ ಪ್ರೀತಿ, ಕಾಳಜಿ ಟೈಪ್ ಮಾಡಿ ರವಾನಿಸಿದ ಸಂದೇಶಗಳಲ್ಲಿ ಸಿಗುವುದಿಲ್ಲ.
-ಸರಸ್ವತಿ ವಿಶ್ವನಾಥ್ ಪಾಟೀಲ್
ಕಾರಟಗಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ