ಕರಾವಳಿಯ ಅದ್ಭುತ ಸಾಂಪ್ರದಾಯಿಕ ಕಲೆಗಳಲ್ಲಿ ಒಂದಾಗಿರುವ ಯಕ್ಷಗಾನ ನೋಡುಗರಿಗೆ ಒಂದು ವಿಶಿಷ್ಟ ಅನುಭವ ನೀಡುತ್ತದೆ. ವಿಭಿನ್ನವಾದ ವಿಶೇಷ ವೇಷ-ಭೂಷಣ, ಚೆಂಡೆ, ಮದ್ದಳೆ, ತಾಳ, ಲಯಬದ್ಧವಾದ ಹಾಡುಗಾರಿಕೆ, ನೃತ್ಯ, ಮೈನವಿರೇಳಿಸುವ ಸಂಭಾಷಣೆಯೊಂದಿಗೆ ಸಮ್ಮಿಳಿತಗೊಂಡಿರುವ ಯಕ್ಷಗಾನ ಒಂದು ಸ್ವತಂತ್ರವಾದ ಶಾಸ್ತ್ರೀಯ ಕಲೆ. ಪುರಾಣಗಳ ಕಥೆಗಳನ್ನು ಎಳೆ ಎಳೆಯಾಗಿ ತನ್ನದೇ ಭಾಷಾ ಸಾಹಿತ್ಯದಲ್ಲಿ ಬೆಸೆದು ಆಡುವ ಪರಿ ಎಂತವರನ್ನಾದರೂ ಮೋಡಿ ಮಾಡದೆ ಇರಲಾರದು. ರಂಗಸ್ಥಳ ಮತ್ತು ಅದರ ಸುತ್ತ ಜಗಮಗಿಸುವ ಬೆಳಕಿನ ಹಿಂದೆ ಕುಳಿತಿರುವ ಹಿಮ್ಮೇಳ, ಮುಂಭಾಗದಲ್ಲಿ ಆರ್ಭಟಿಸುವ ಯಕ್ಷ ವೇಷಧಾರಿಗಳು. ನೋಡುತ್ತಾ ಕುಳಿತರೆ ಸಮಯ ಸರಿಯುವುದೇ ತಿಳಿಯುವುದಿಲ್ಲ. ಅದರಲ್ಲೂ ಕಥೆಗಳ ಮೂಲಕವೇ ಸಮಾಜಮುಖಿ ಚಿಂತನೆಗಳನ್ನು ಬಿತ್ತುತ್ತಾ ತಿಳಿವಳಿಕೆಯನ್ನು ಹೆಚ್ಚಿಸುವ ಮಾಧ್ಯಮವಾಗಿ ಇಂದು ದೇಶದೆಲ್ಲೆಡೆ ಪ್ರಚಾರಗೊಂಡು ತನ್ನದೇ ಹಿರಿಮೆಯ ಮೂಲಕ ಕನ್ನಡದ ಜಾನಪದ ಲೋಕದ ಜನಪ್ರಿಯ ಕಲೆ ಎಂಬ ಹೆಗ್ಗಳಿಕೆಯೊಂದಿಗೆ ಮುಂದೆ ಸಾಗುತ್ತಿದೆ ಈ ರಮ್ಯಾದ್ಭುತ ಕಲೆ.
ಮನರಂಜನೆ ಜತೆಗೆ ವಿವೇಚನೆಗೆ ಹಚ್ಚುವ ಯಕ್ಷಗಾನ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡವರು ಸುಳ್ಯದ ಸೌಮ್ಯ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ನೆಲ್ಲೂರು ಕೆಮ್ರಾಜೆ ಗ್ರಾಮದ ಎರ್ಮೆಟ್ಟಿ ನಿವಾಸಿಗಳಾದ ಚಂದ್ರಶೇಖರ. ಪಿ ಹಾಗೂ ಸುಂದರಿ ದಂಪತಿಯ ಪುತ್ರಿ.
ತಾನು ಏಳನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಾಗ ಯಕ್ಷಗಾನ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪೈಲಾರು ಎಂಬಲ್ಲಿ ಮೊದಲ ಯಕ್ಷಗಾನ ರಂಗಪ್ರವೇಶವನ್ನು ಮಾಡಿದರು. ಸುಳ್ಯದ ಹಾಸ್ಯ ಕಲಾವಿದರಾದ ಸುಂದರ ಇಂದ್ರಾಜೆಯವರ ಬಳಿ, ಪ್ರೆನ್ಸ್ ಕ್ಲಬ್ ಪೈಲಾರಿನಲ್ಲಿ ಯಕ್ಷಗಾನವನ್ನು ಅಭ್ಯಸಿಸುತ್ತಿದ್ಧಾರೆ. ಗುಬ್ಬಚ್ಚಿ ಗಾಯಸ್ ಸಂಸ್ಥೆ ಕುಕ್ಕುಜಡ್ಕದಲ್ಲಿ ಮಧು ಹಾಗೂ ರಮೇಶ್ ಮೆಟ್ಟಿನಡ್ಕ ಇವರ ಬಳಿ ಜಾನಪದ ನೃತ್ಯ ಅಭ್ಯಾಸವನ್ನು ಮಾಡುತ್ತಿರುವರು. ಸುಮಾರು ಹದಿನೈದು ವರುಷಗಳಿಂದ ಐವತ್ತಿಕ್ಕಿಂತಲೂ ಹೆಚ್ಚು ವೇದಿಕೆಗಳಲ್ಲಿ ಯಕ್ಷಗಾನ ಹಾಗೂ ಜಾನಪದ ನೃತ್ಯದ ಛಾಪನ್ನು ಮೂಡಿಸಿರುವವರು. ಗಂಡುಕಲೆಯೆಂದೇ ಪ್ರಸಿದ್ಧವಾದ ಯಕ್ಷಗಾನದಲ್ಲಿ ಮುಂದೆ ಇನ್ನಷ್ಟು ಹೆಚ್ಚಿನ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕು ಎಂಬುದು ಇವರ ಬಯಕೆಯಾಗಿದೆ.
ತನ್ನ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪೈಲಾರು, ಪ್ರೌಢ ಶಿಕ್ಷಣವನ್ನು ಸರಕಾರಿ ಪ್ರೌಢ ಶಾಲೆ ಎಲಿಮಲೆಯಲ್ಲಿ ಪಡೆದು, ಪದವಿ ಪೂರ್ವ ಶಿಕ್ಷಣವನ್ನು ಜೂನಿಯರ್ ಕಾಲೇಜು ಸುಳ್ಯದಲ್ಲಿ ಪೂರೈಸಿ ಪ್ರಸ್ತುತ ಪುತ್ತೂರಿನ ವಿವೇಕಾನಂದ ಕಾಲೇಜ್ ನಲ್ಲಿ ಅಂತಿಮ ವರ್ಷದ ಪದವಿ ವ್ಯಾಸಂಗವನ್ನು ಮಾಡುತ್ತಿರುವರು.
ಶಿಲ್ಪಾ ಜಯಾನಂದ್
ಪತ್ರಿಕೋದ್ಯಮ ವಿಭಾಗ
ವಿವೇಕಾನಂದ(ಸ್ವಾಯತ್ತ) ಕಾಲೇಜು, ಪುತ್ತೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ