ಮಂಗಳೂರು : ಪ್ರಸ್ತುತ ಸಮಾಜದಲ್ಲಿ ಮಕ್ಕಳ ದಾರಿ ತಪ್ಪಿಸುವ ಹಲವು ವಿಷಯಗಳಿರುವುದರಿಂದ ಕಾಲೇಜಿಗೆ ಹೋಗುವ ಮಕ್ಕಳ ಮೇಲೆ ಕಣ್ಣಿಟ್ಟು ಅವರು ಸರಿದಾರಿಯಲ್ಲಿ ಸಾಗುತ್ತಿದ್ದಾರೆ ಎಂದು ಖಚಿತಪಡಿಸಿಕೊಳ್ಳುವುದು ಹೆತ್ತವರ ಕರ್ತವ್ಯ, ಎಂದು ವಿಶ್ವವಿದ್ಯಾನಿಲಯ ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ನಿರ್ಗಮಿತ ಕಾರ್ಯಾಧ್ಯಕ್ಷ ಎಮ್. ಪುರುಷೋತ್ತಮ ಭಟ್ ಅಭಿಪ್ರಾಯಪಟ್ಟರು.
ಶನಿವಾರ ನಡೆದ ಕಾಲೇಜಿನ ಶಿಕ್ಷಕ ರಕ್ಷಕ ಸಂಘದ 2022-23 ನೇ ವರ್ಷದ ಸಾಲಿಗೆ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು ತಿಳಿ ಹೇಳುವ ವೈದ್ಯರುಗಳೇ ಡ್ರಗ್ಸ್ ದಂಧೆಗೆ ಇಳಿದಿರುವಾಗ, ಮೊಬೈಲ್ ನಮ್ಮನ್ನು ಆವರಿಸಿಕೊಂಡಿರುವಾಗ ಒಳ್ಳೆಯ ವಿಷಯಗಳನ್ನು ಆರಿಸಿಕೊಳ್ಳುವುದು ಅತ್ಯಂತ ಅಗತ್ಯ, ಎಂದರು. ವಿಶ್ವವಿದ್ಯಾನಿಲಯ ಕಾಲೇಜಿನ ಕಲಿಕಾ ವಾತಾವರಣವನ್ನು ಮುಕ್ತಕಂಠದಿಂದ ಶ್ಲಾಘಿಸಿದ ಅವರು, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಕಾಲೇಜು ಸಹಕಾರಿಯಾಗಿದೆ, ಎಂದರು.
ಶಿಕ್ಷಕರು ಮತ್ತು ರಕ್ಷಕರ ನಡುವಿನ ಸಂವಾದದಲ್ಲಿ ಪೋಷಕರು/ರಕ್ಷಕರು ವಿದ್ಯಾರ್ಥಿಗಳ ಮೊಬೈಲ್ ಬಳಕೆಯ ಬಗ್ಗೆ ಆತಂಕ ವ್ಯಕ್ತಪಡಿಸಿದರಲ್ಲದೆ, ವಿದ್ಯಾರ್ಥಿಗಳು ಕಾಲೇಜಿನಲ್ಲಿರುವ ಉತ್ತಮ ಗ್ರಂಥಾಲಯವನ್ನು ಕಡ್ಡಾಯವಾಗಿ ಬಳಸುವಂತೆ ಮಾಡಿ ಎಂದು ಕೇಳಿಕೊಂಡರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಡಾ. ಅನಸೂಯರೈ ಪ್ರತಿಕ್ರಿಯಿಸಿ, ಸೋಷಿಯಲ್ ಮೀಡಿಯಾ ಯುಗದಲ್ಲಿ ವಿದ್ಯಾರ್ಥಿಗಳನ್ನು ನಿಯಂತ್ರಿಸುವುದು ಕಷ್ಟ. ಕಾಲೇಜಿನಲ್ಲಿ ಮೊಬೈಲ್ ನಿಷೇಧವಿದ್ದರೂ ಹೊಸ ಶಿಕ್ಷಣಪದ್ಧತಿಯಲ್ಲಿ ಕೆಲವೊಮ್ಮೆ ಮೊಬೈಲ್ ತರಲು ಅವಕಾಶ ನೀಡಬೇಕಾಗಿದೆ. ಆದರೂ ಮೊಬೈಲ್ ಚಟವಾಗದಂತೆ ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುವುದು, ಎಂದು ಭರವಸೆ ನೀಡಿದರು.
ಇದೇ ವೇಳೆ ಅವರು ಕಾಲೇಜಿನ ಬೆಳವಣಿಗೆಗೆ ಸಹಕಾರ ನೀಡಿದ ಸಂಘದ ನಿರ್ಗಮಿತ ಪದಾಧಿಕಾರಿಗಳಿಗೆ ಧನ್ಯವಾದ ಸಮರ್ಪಿಸಿದರು.
ಚುನಾವಣೆ
ಇದೇ ವೇಳೆ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಸಂಸ್ಕೃತ ವಿಭಾಗ ಮುಖ್ಯಸ್ಥ ಡಾ. ಕುಮಾರ ಸುಬ್ರಹ್ಮಣ್ಯ ಭಟ್ ನಡೆಸಿಕೊಟ್ಟರು. ನೂತನ ಕಾರ್ಯಾಧ್ಯಕ್ಷರಾಗಿ (ರಕ್ಷಕರಕಡೆಯಿಂದ) ಮೈತ್ರೇಯಿಡಿ ಸರ್ವಾನುಮತದಿಂದ ಆಯ್ಕೆಯಾದರು. ಶನಿವಾರ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ನಡೆದ ಶಿಕ್ಷಕರಕ್ಷಕ ಸಂಘದ ವಾರ್ಷಿಕ ಮಹಾಸಭೆಯ ವೇಳೆ ನಡೆದ ನೂತನ ಪದಾಧಿಕಾರಿಗಳ ಆಯ್ಕೆಯಲ್ಲಿ ಉಪಾಧ್ಯಕ್ಷರುಗಳಾಗಿ ಉಷಾಎಸ್, ಸುರೇಶ್ ಆಚಾರ್ಯ ಹಾಗೂ ಜ್ಯೋತಿ ಕೃಷ್ಣಾನಂದ ಉಪಾಧ್ಯಕ್ಷರುಗಳಾಗಿ ಆಯ್ಕೆಯಾದರು. ಸದಾಶಿವ ಎಸ್. ಕೆ, ರಾಘವೇಂದ್ರರಾವ್, ಅಶೋಕ್ ಕುಮಾರ್, ಲೋಕೇಶ್ವರಿ, ಎಸ್. ಎನ್ ಗಂಗಾಧರ, ಮೊಹಮ್ಮದ್ ಸಾಮನ್ಯ ಸದಸ್ಯರುಗಳಾಗಿ ಆಯ್ಕೆಯಾದರು.
ಸಂಘದ ಉಪಾಧ್ಯಕ್ಷರಾದ (ಶಿಕ್ಷಕರವತಿಯಿಂದ) ಡಾ. ಉಷಾ ಕೆ ಎಂ, ಡಾ. ಲತಾ ಎ ಪಂಡಿತ್, ಡಾ. ಸುಧಾ ಎನ್ ವೈದ್ಯ, ರಕ್ಷಕರವತಿಯಿಂದ ಉಪಾಧ್ಯಕ್ಷೆ ಅನುಪಮಾ ಅನಂತಮೂರ್ತಿ, ಸುರೇಶ್ ಆಚಾರ್ಯ, ಉಷಾ, ಸಹಕಾರ್ಯದರ್ಶಿ ಎಡ್ವರ್ಡ್ ಲೋಬೋ ಸೇರಿದಂತೆ ಸದಸ್ಯರು ಭಾಗವಹಿಸಿದ್ದರು. ಶಿಕ್ಷಕ – ರಕ್ಷಕ ಸಂಘದ ಪದ ನಿಮಿತ್ತ ಸದಸ್ಯ ಡಾ. ಹರೀಶ್ ಎ ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯದರ್ಶಿ ಭೌತಶಾಸ್ತ್ರ ವಿಭಾಗದ ಅರುಣಾಕುಮಾರಿ ವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿ ಗಣಿತಶಾಸ್ತ್ರ ವಿಭಾಗದ ಡಾ. ಇಂದಿರಾ ಜೆ ಲೆಕ್ಕ ಪತ್ರ ಮಂಡಿಸಿದರು. ಪದ ನಿಮಿತ್ತ ಸದಸ್ಯೆ ಗಣಕಶಾಸ್ತ್ರ ವಿಭಾಗದ ಡಾ. ಭಾರತಿಪಿಲಾರ್ ಕಾರ್ಯಕ್ರಮ ನಿರೂಪಿಸಿದರು. ಪದ ನಿಮಿತ್ತ ಸದಸ್ಯ ಡಾ. ಸುರೇಶ್ ಧನ್ಯವಾದ ಸಮರ್ಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ