ನೈತಿಕ ಮೌಲ್ಯಾಧಾರಿತ ಪುಸ್ತಕಗಳನ್ನಾಧರಿಸಿದ ಸ್ಪರ್ಧೆಗಳ ವಿಜೇತರಿಗೆ ಧರ್ಮಸ್ಥಳದಲ್ಲಿ ಪುರಸ್ಕಾರ ಸಮಾರಂಭ
ಉಜಿರೆ: ನಮ್ಮ ವ್ಯಕ್ತಿತ್ವ ವಿಕಸನ ಮತ್ತು ಬುದ್ಧಿವಂತಿಕೆಯು ಅನುವಂಶಿಕತೆ ಮತ್ತು ನಾವು ಬೆಳೆಯುವ ಪರಿಸರವನ್ನು ಅವಲಂಬಿಸಿದೆ ಎಂದು ಬೆಂಗಳೂರಿನ ಖ್ಯಾತ ಲೇಖಕ ಡಾ. ನಾ. ಸೋಮೇಶ್ವರ ಹೇಳಿದರು.
ಅವರು ಶನಿವಾರ ಧರ್ಮಸ್ಥಳದಲ್ಲಿ ಶಾಂತಿವನ ಟ್ರಸ್ಟ್ ಆಶ್ರಯದಲ್ಲಿ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯಡಿ ಆಯೋಜಿಸಿದ 28 ನೇ ವರ್ಷದ ನೈತಿಕ ಮೌಲ್ಯಾಧಾರಿತ ಪುಸ್ತಕಗಳನ್ನಾಧರಿಸಿದ ಸ್ಪರ್ಧೆಗಳ ವಿಜೇತರಿಗೆ ಪುರಸ್ಕಾರ ಸಮಾರಂಭದಲ್ಲಿ ಶುಭಾಶಂಸನೆ ಮಾಡಿ ಮಾತನಾಡಿದರು.
ಮನೆಯೇ ಮೊದಲ ಪಾಠಶಾಲೆ. ತಾಯಿಯೇ ಮೊದಲ ಗುರು.ಯಾರೂ ದಡ್ಡರಲ್ಲ. ಪ್ರತಿಯೊಬ್ಬರೂ ಮನೆ, ಶಾಲೆ ಮತ್ತು ಸಾಮಾಜಿಕ ಪರಿಸರದಲ್ಲಿ ಸಿಗುವ ಅವಕಾಶಗಳನ್ನು ಹೊಂದಿಕೊಂಡು ಅವರ ವ್ಯಕ್ತಿತ್ವ ಬೆಳವಣಿಗೆಯಾಗುತ್ತದೆ. ಮಕ್ಕಳು ಕಷ್ಟಪಟ್ಟು ಕಲಿಯಬಾರದು. ಇಷ್ಟಪಟ್ಟು ಕಲಿಯಬೇಕು. ಮನೆಯಲ್ಲಿ ತಾಯಿ-ತಂದೆ ಮಕ್ಕಳೊಂದಿಗೆ ಮುಕ್ತವಾಗಿ ಮಾತನಾಡಬೇಕು. ಅವರ ಭಾವನೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕು. ಮಕ್ಕಳೆದುರು ತಾಯಿ-ತಂದೆ ಜಗಳ ಮಾಡಬಾರದು. ಮಕ್ಕಳಲ್ಲಿ ಸದಾ ಧನಾತ್ಮಕ ಚಿಂತನೆಗಳನ್ನು ಮೂಡಿಸಬೇಕು. ಋಣಾತ್ಮಕ ಚಿಂತನೆಗೆ ಅವಕಾಶ ಕೊಡಬಾರದು.
ಮನೆ, ಶಾಲೆ ಮತ್ತು ಸಮಾಜದಲ್ಲಿ ಪೂರಕ ಹಾಗೂ ಪ್ರೇರಕ ವಾತಾವರಣ ದೊರಕಿದಲ್ಲಿ ಮಕ್ಕಳು ಉತ್ತಮ ಕಲಿಕೆ, ನೆನಪುಶಕ್ತಿ ಮತ್ತು ಯಶಸ್ಸಿನೊಂದಿಗೆ ಸುಸಂಸ್ಕೃತ ನಾಗರಿಕರಾಗಿ ರೂಪುಗೊಳ್ಳುತ್ತಾರೆ ಎಂದು ಅವರು ಅಭಿಪ್ರಾಯಪಟ್ಟರು.
ಸ್ಪರ್ಧೆಗಳಲ್ಲಿ ವಿಜೇತರಿಗೆ ಪುರಸ್ಕಾರ ವಿತರಿಸಿದ ರಾಜ್ಯ ಸರ್ಕಾರದ ಕರ್ನಾಟಕ ಪಠ್ಯ ಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕ ವೀರಣ್ಣ ಎಸ್. ಜತ್ತಿ ಮಾತನಾಡಿ, ಧರ್ಮಸ್ಥಳದ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯನ್ನು ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಬೇಕು ಎಂದು ಕೋರಿದರು. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ನೈತಿಕ ಶಿಕ್ಷಣವನ್ನೂ ಅಳವಡಿಸಿದೆ. ಈ ಬಗ್ಗೆ ಹೆಗ್ಗಡೆಯವರನ್ನು ಆಹ್ವಾನಿಸಿ ಹೆಚ್ಚಿನ ಮಾರ್ಗದರ್ಶನ ಪಡೆಯಲಾಗುವುದು ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಮಾನವೀಯ ಮೌಲ್ಯಗಳು ಶಾಶ್ವತವಾಗಿದ್ದು, ಪ್ರೀತಿ-ವಿಶ್ವಾಸ, ದಯೆ, ಅನುಕಂಪ, ಸೇವಾ ಕಳಕಳಿ, ಪರೋಪಕಾರ ಮೊದಲಾದ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ನೈತಿಕ ಪುಸ್ತಕಗಳನ್ನು ವಿದ್ಯಾರ್ಥಿಗಳು ಮಾತ್ರವಲ್ಲ, ಪೋಷಕರೂ ಓದಬೇಕು ಎಂದು ಅವರು ಸಲಹೆ ನೀಡಿದರು. ನೈತಿಕ ಶಿಕ್ಷಣದಲ್ಲಿ ಜಾತಿ ಮುಖ್ಯಅಲ್ಲ, ನೀತಿ ಮುಖ್ಯಎಂದು ಹೇಳಿದ ಅವರು ಬಾಲ್ಯದಲ್ಲಿ ಆಸಕ್ತಿಯಿಂದ ಕಲಿತ ವಿಷಯಗಳು ಸದಾ ನೆನಪಿರುತ್ತದೆಎಂದು ಹೇಳಿದರು.
ಯೋಗ ಮತ್ತು ನೈತಿಕ ಶಿಕ್ಷಣವನ್ನು ರಾಜ್ಯದಎಲ್ಲಾ ಜಿಲ್ಲೆಗಳಿಗೆ ವಿಸ್ತರಿಸುವ ಬಗ್ಗೆ ಮುಂದೆ ಪ್ರಯತ್ನಿಸಲಾಗುವುದು ಎಂದು ಹೆಗ್ಗಡೆಯವರು ತಿಳಿಸಿದರು.
ಸ್ಪರ್ಧೆಗಳಲ್ಲಿ ವಿಜೇತರ ಪರವಾಗಿ ಕಳಸದ ಪ್ರಣಮ್ಯ ಡೋಂಗ್ರೆ, ಪುತ್ತೂರಿನ ಭಾರತಿ ಪ್ರಾಥಮಿಕ ಶಾಲೆಯ ಸಿಂಚನಾ, ಶಿರಸಿಯ ಅರ್ಪಿತಾ ಹೆಗಡೆ, ಮಂಗಳೂರಿನ ಕೆನರಾ ಪ್ರೌಢಶಾಲೆಯ ನಮ್ರತಾ ನಾಯಕ್ ಮತ್ತು ಉಡುಪಿಯ ಬಾಲಕಿಯರ ಪ್ರೌಢಶಾಲೆಯ ಸಂಕೇತ ಮಾತನಾಡಿದರು.
ಹೇಮಾವತಿ ವೀ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್ ಮತ್ತು ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷ ಉಪಸ್ಥಿತರಿದ್ದರು. ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ನಿರ್ದೇಶಕ ಡಾ.ಶಶಿಕಾಂತ್ ಜೈನ್ ಸ್ವಾಗತಿಸಿದರು.
ಥಟ್‍ಅಂತ ಹೇಳಿ ಕಾರ್ಯಕ್ರಮ ನಡೆಸಿದ ಡಾ. ನಾ. ಸೋಮೇಶ್ವರ:
ಸಭೆಯಲ್ಲೆ ಥಟ್ ಅಂತ ಹೇಳಿ ಕಾರ್ಯಕ್ರಮ ನಡೆಸಿದ ಡಾ.ನಾ. ಸೋಮೇಶ್ವರ ಉತ್ತರ ನೀಡಿದವರಿಗೆ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ