|| ಆಗತಾದಿ ತ್ರಿಕಾಲಜ್ಞಂ ಆಗಮಾರ್ಥವಿಶಾರದಂ | ತ್ಯಾಗಭೋಗ ಸಮಾಯುಕ್ತಂ ಭಾಗಣ್ಣಾರ್ಯ ಗುರುಂಭಜೇ ||
ಹರಿದಾಸರ ತೊಟ್ಟಿಲು ಎಂದೇ ಪ್ರಸಿದ್ಧಿ ರಾಯಚೂರಿನ ಸುತ್ತಮುತ್ತಲಿನ ಸ್ಥಳ. ಕಾರಣ ಹರಿದಾಸರ ಹೆಜ್ಜೆನಾದ, ಗೆಜ್ಜೆನಾದ ತುಂಬಿದ ಸ್ಥಳ. ಹರಿಭಕ್ತಿಯ ನೆಲೆಬೀಡು. ಹರಿದಾಸರ ಓಡಾಟದ, ಭಗವಂತನೊಡನೆ ಒಡನಾಟದ ತಪೋಭೂಮಿ. ದಾಸತ್ವದ ಪ್ರತಿರೂಪ ವಿಜಯದಾಸರು. ಅಂತಹ ಮಹಾಮಹಿಮರಾದ ವಿಜಯದಾಸರ ಪ್ರಮುಖ ಹಾಗೂ ಅತ್ಯಂತ ಪ್ರೀತಿಯ ಶಿಷ್ಯರು ತ್ರಿಕಾಲಜ್ಞಾನಿಗಳಾದ ಗೋಪಾಲದಾಸರು.
ಹರಿದಾಸ ಸಾಹಿತ್ಯ ಪರಂಪರೆಯ ಅಪರೋಕ್ಷ ಜ್ಞಾನಿಗಳಲ್ಲಿ, ಹರಿದಾಸ ಚತುಷ್ಟಯರಲ್ಲಿ ಒಬ್ಬರಾದ ಗೋಪಾಲದಾಸರು. 'ಭಕ್ತಿಯಲ್ಲಿ ಭಾಗಣ್ಣ' ಎಂದೇ ಹೆಸರುವಾಸಿ.
ಶ್ರೀ ಗೋಪಾಲದಾಸರು ಕ್ರಿ.ಶ. 1721 ರಲ್ಲಿ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಮೊಸರುಕಲ್ಲು ಗ್ರಾಮದಲ್ಲಿ ಮುರಾರಿರಾಯರು-ವೆಂಕಮ್ಮ ದಂಪತಿಯಲ್ಲಿ ಜನಿಸಿದರು. ಹರಿತಸ ಗೋತ್ರ. ದಾಸರ ಚರಿತ್ರೆಗೆ ಅವರ ತಮ್ಮ ರಂಗದಾಸರು ಮಾಡಿದ 84 ನುಡಿಗಳ ದೇವರನಾಮವು ಮತ್ತು ದಾಸರ ಅನೇಕ ಪದ-ಸುಳಾದಿಗಳು ಪ್ರಮಾಣವಾಗಿರುವುವು.
ನಾಲ್ವರು ಅಣ್ಣ ತಮ್ಮಂದಿರಲ್ಲಿ ದಾಸರೇ ದೊಡ್ಡವರು. ದಾಸರ ಮೊದಲ ಹೆಸರು ಭಾಗಣ್ಣ. ತಂದೆ ಮುರಾರಿಯ ಮರಣಾನಂತರ ಇದ್ದ ಆಸ್ತಿಯೆಲ್ಲ ಕರಗುತ್ತಾ ಬಂತು. ನಾಲ್ಕು ಗಂಡು ಮಕ್ಕಳ ತಾಯಿ ಎನ್ನುವ ಹೊಟ್ಟೆಯುರಿಯೂ ಸೇರಿತ್ತು. ಮನೆ ಬಿಟ್ಟು ಹೊರ ಬರುವ ಪರಿಸ್ಥಿತಿ, ತಾಯಿ ವೆಂಕಮ್ಮ ನಾಲ್ಕು ಪುಟ್ಟ ಮಕ್ಕಳೊಡನೆ ಸಂಕಾಪುರದಲ್ಲಿ ಬಂದು ನೆಲಸಿದಳು. ಮನೆಮನೆ ತಿರುಗಿ ತಿರಿದು ಹಾಗೂ ಹೀಗೂ ಏಳು ವರ್ಷಗಳನ್ನು ಕಳೆದಳು. ಅನಂತರ ಉತ್ತನೂರಿಗೆ ಬಂದು, ಅಲ್ಲಿದ್ದ ಒಂದು ಪಾಳುಗುಡಿಯಲ್ಲಿ ಮಕ್ಕಳೊಂದಿಗೆ ನಿಂತಳು. ಮನೆಮನೆಗೆ ತಿರುಗಿ ಮಕ್ಕಳನ್ನು ಸಾಕುತ್ತಾ ಜೀವಿಸಬೇಕಾಯಿತು. ಪಾಳುಗುಡಿಯೂ ಗಟ್ಟಿಮುಟ್ಟಾಗಿರಲಿಲ್ಲ. ಹಾಳು ಮಣ್ಣು, ಧೂಳು, ಹುಳಹುಪ್ಪಟೆಗಳ ಆವಾಸವಾಗಿತ್ತು. ಮಕ್ಕಳಿಗೆ ಮಾನಮುಚ್ಚಲು ಬಟ್ಟೆಯಿಲ್ಲ, ಹೊಟ್ಟೆ ತುಂಬ ಊಟವೇ ಇಲ್ಲ. ಜೋಳದ ಭಕ್ರಿಯ ಜೊತೆಗೆ ಅಕ್ಕಿಯ ಅನ್ನವನ್ನು ಕಂಡ ದಿನವೇ ಮಕ್ಕಳಿಗೆ ಹಬ್ಬದ ದಿನವಾಗಿತ್ತು.
ಈಕೆ ದಾರಿದ್ಯ್ರವನ್ನು ನೋಡಲಾರದೆ ಯಾವನೋ ಪುಣ್ಯಾತ್ಮನು ಆಕೆಗೊಂದು ಸೀಳು ಗದ್ದೆಯನ್ನು ಕೊಟ್ಟನು. ಪಕ್ಕದ ಗದ್ದೆಯ ರೈತನು ಉಚಿತವಾಗಿ ಆ ಗದ್ದೆಯಲ್ಲಿ ಭತ್ತವನ್ನು ಬೆಳೆಸಿದನು. ಆದರೆ ಕುಲಕರಣಿಗೆ ವೆಂಕಮ್ಮನ ಇಷ್ಟು ಭಾಗ್ಯವೇ ಸಹನೆಯಾಗಲಿಲ್ಲ. ವೆಂಕಮ್ಮನು ತನ್ನ ಮನೆಯಲ್ಲಿ ಬಿಟ್ಟಿಚಾಕರಿ ಮಾಡದಿದ್ದ ಕಾರಣ, ಗದ್ದೆಯನ್ನು ಕೊಯ್ಯುವ ಕಾಲಕ್ಕೆ ಸರಿಯಾಗಿ ಸರ್ಕಾರೀ ಕೆರೆಯ ನೀರನ್ನು ಉಪಯೋಗಿಸಿಕೊಂಡಳೆಂದು ಆ ದೀನಳ ಮೇಲೆ ಅಪವಾದ ಹಾಕಿದನು. ಗದ್ದೆಯ ಭತ್ತವನ್ನು ಆ ಅಪರಾಧಕ್ಕೆ ದಂಡವೆಂದು ತನ್ನ ಮನೆಗೆ ಸಾಗಿಸಿದನು. ದೀನಳಾಗಿ ಕುಲಕರಣಿಯ ಕಾಲಿಗೆ ಬಿದ್ದು 'ಅರ್ಧವಾದರೂ ಕೊಡಪ್ಪಾ' ಎಂದು ಮೊರೆ ಇಟ್ಟಳು. ಆ ಪಾಪಿಯು ಅವಳನ್ನು ಕಾಲಿನಿಂದ ಒದ್ದು, ಹೆಚ್ಚು ಗದ್ದಲ ಮಾಡಿದರೆ ಗುಡಿಯಿಂದ ಓಡಿಸುವೆನೆಂದು ಹೆದರಿಸಿದನು. ಇದನ್ನು ನೋಡುತ್ತಿದ್ದ ಭಾಗಣ್ಣನಿಗೆ ಕಣ್ಣಿನಿಂದ ದಳದಳನೆ ನೀರುದುರಿತು. ಬಾಲಕನಾದುದರಿಂದ ಕುಲಕರಣಿಯ ಸಂಗಡ ಮಾತನಾಡುವ ಧೈರ್ಯ ಬರಲಿಲ್ಲ. ತಾಯಿಯನ್ನೇ ಕುರಿತು. “ಅಮ್ಮಾ, ನಮಗಾಗಿ ನಿನಗಿಂಥ ಕಷ್ಟವಾಯಿತು! ಕುಲಕರಣಿಯೇ ಉಂಡು ಬದುಕಲಿ! ಆದರೆ ನಮ್ಮಂಥಾ ಮಕ್ಕಳು ಅವನಿಗಾಗಬೇಡ! ಆ ಹಾಳು ಕೆರೆಗೆ ನೀರೂ ಬರಬೇಡ!' ಎಂದು ಶಪಿಸಿದನು. ಆ ಬಾಲಕನ ಶಾಪವು ಅಕ್ಷರಶಃ ಸತ್ಯವಾಯಿತು. ಕಾಲಾಂತರದಲ್ಲಿ ಕುಲಕರಣಿಯ ವಂಶವು ದೌಹಿತ್ರರಿಂದ ಬೆಳೆಯಬೇಕಾಯಿತು. ಆ ಕೆರೆಯಲ್ಲಿ ಇಂದಿಗೂ ಏನು ಮಾಡಿದರೂ ನೀರು ನಿಲ್ಲುವುದಿಲ್ಲ. ಅದಕ್ಕೆ ಸಜ್ಜನರ ಶಾಪಕ್ಕೆ ಗುರಿಯಾಗಬಾರದು.
ವೆಂಕಮ್ಮ ಆ ಗ್ರಾಮದ ಉಪಾಧ್ಯಾಯರ ಬಳಿ ತನ್ನ ನಾಲ್ವರು ಮಕ್ಕಳಿಗೂ ವಿದ್ಯಾಭ್ಯಾಸ ಮಾಡಿಸಿದಳು. ಸಂಕಾಪುರದ ಶ್ಯಾನುಭೋಗ ಗುಂಡಪ್ಪನವರು ತಮ್ಮ ಮಗನ ಜೊತೆಯಲ್ಲಿ ಭಾಗಣ್ಣನಿಗೂ ಧರ್ಮೋಪನಯನ ಮಾಡಿ, ಅಗ್ನಿ ಕಾರ್ಯಾಚರಣೆ ಮತ್ತು ಇತರ ಮಂತ್ರಗಳನ್ನೆಲ್ಲ ಕಲಿಸಿದರು. ಭಾಗಣ್ಣನಂತೂ ನೋಡುವುದಕ್ಕೆ ಪೆದ್ದನಂತೆಯೇ ಕಾಣುತ್ತಿದ್ದ. ಆದರೆ ಮೌನಿಯಾಗಿ, ಧ್ಯಾನಪರವಶನಾಗುತ್ತಿದ್ದ. ಅನಂತರ ಆತ ಸಂಕಾಪುರವನ್ನು ಬಿಟ್ಟು ತಾಯಿ, ತಮ್ಮಂದಿರೊಂದಿಗೆ ಉತ್ತನೂರಿಗೆ ಬಂದರು. ಸಂಧ್ಯಾವಂದನ, ಅಗ್ನಿಕಾರ್ಯ ಮೊದಲಾದ ಮಂತ್ರಗಳೆಲ್ಲ ಅರ್ಥವತ್ತಾಗಿ ಪಾಠವಾದುವು. ಒಮ್ಮೆ ಕೇಳಿದ ಪಾಠವನ್ನು ಏಕಸಂಧಿಗ್ರಾಹಿಯಾಗಿ ಒಡನೆಯೇ ಒಪ್ಪಿಸುತ್ತಿದ್ದುದರಿಂದ ವಿದ್ಯಾಗುರುಗಳಿಗೆ ಭಾಗಣ್ಣನಲ್ಲಿ ವಿಶೇಷ ಪ್ರೀತಿಯುಂಟಾಯಿತು. ಇತರರಿಗೆ ಎಂಟು ಹತ್ತು ವರ್ಷಗಳಲ್ಲಾಗುವ ಪಾಠವು ಭಾಗಣ್ಣನಿಗೆ ಒಂದೆರಡು ವರ್ಷಗಳಲ್ಲೇ ಆಯಿತು. ಭಾಗಣ್ಣನಂತೆಯೇ ಮಿಕ್ಕ ಮೂವರೂ ಕ್ರಮವಾಗಿ ವಿದ್ಯಾವಂತರಾದರು.
ಮಕ್ಕಳ ವಿದ್ಯಾ, ಬುದ್ಧಿ ಪ್ರೌಢಿಮೆಗಳನ್ನು ನೋಡಿ ತಾಯಿ ವೆಂಕಮ್ಮನ ದುಃಖಗಳು ಕಡಿಮೆಯಾದುವು. ಭಾಗಣ್ಣನು ತನ್ನ ಸಕಲ ಅರಿಷ್ಟಗಳೂ ಪರಿಹಾರವಾಗಿ ಇಷ್ಟಾರ್ಥ ಪ್ರಾಪ್ತಿಯಾಗಬೇಕಾದರೆ "ನ ಗಾಯಿತ್ರಾ ಪರಂ ನಂತ್ರಂ| ನ ಮಾತುಃ ಪರದೇವತಾ|" ಎಂಬಂತೆ ಗಾಯಿತ್ರೀ ಪುರಶ್ಚರಣೆ ಮಾಡಬೇಕೆಂದು ನಿಶ್ಚಯಿಸಿದನು. ಮಗನ ಸಂಕಲ್ಪಕ್ಕೆ ನೆರವಾದಳು, ಸುಮುಹೂರ್ತದಲ್ಲಿ ಭಾಗಣ್ಣನ ತಪಸ್ಸಿಗಾರಂಭವಾಯಿತು. ಸಂಕಾಪುರದ ಬಳಿಯ ಬಾವಿಯಲ್ಲಿ ಪ್ರಾತಃಕಾಲ ಸ್ನಾನ ಮಾಡುವುದು, ಪಕ್ಕದಲ್ಲಿದ್ದ ವಟವೃಕ್ಷದ ಬುಡದಲ್ಲಿ ಕುಳಿತು ಗಾಯಿತ್ರಿ ಮಂತ್ರ ಜಪ ಮಾಡುವುದು. ಈ ರೀತಿ ಎರಡು ವರ್ಷ ಕಾಲ ಮೌನವ್ರತದಿಂದ ಭಾಗಣ್ಣನು ತಪಸ್ಸು ಮಾಡಿದಾಗ ಕೆಲಮಂದಿ ದುಷ್ಟ ಜನರು ಭಾಗಣ್ಣನು ಮೂಗು ಹಿಡಿದು ಮೌನದಿಂದ ಕೂಡುವುದನ್ನು ನೋಡಿ, ಮಾತನಾಡಿಸಿ ವ್ರತಭಂಗ ಮಾಡಬೇಕೆಂದು ಪರಿಪರಿಯ ತೊಂದರೆಗಳನ್ನಿತ್ತರು. ಬಾಯಿಗೆ ಬಂದಂತೆ ವೆಂಕಮ್ಮನನ್ನು ಪರಿಹಾಸ್ಯವನ್ನು ಮಾಡಿದರು. ದಾಯಾದನೊಬ್ಬನು ನಾ ಕಾಣದ ಭಾಗಣ್ಣನೇ ಇವನು? ಈಗ ಮಾತನಾಡಿಸಿಬಿಡುವೆನೆಂದು ಬಾಲಕನ ಮೇಲೆ ಕುದಿಯುವ ನೀರನ್ನು ಸುರಿದನು. ಏನಾದರೂ ಭಾಗಣ್ಣನು ಚಲಿಸಲಿಲ್ಲ. ಬಿಸಿನೀರು ಸುರಿದವನಿಗೇ ಬೊಬ್ಬೆಗಳಾಗಿ ಗುಣವಾಗುವುದೇ ದುಸ್ತರವಾಯಿತು. ಇದನ್ನು ಕಂಡ ಇತರ ಜನರು ಅವನ ತಂಟೆಗೆ ಹೋಗಬಾರದೆಂದು ತಟಸ್ಥರಾದರು.
ವೇದಮಾತೆಯಾದರೂ ಬಾಲಕನನ್ನು ಎಷ್ಟು ಕಾಲ ಪರೀಕ್ಷಿಸುವುದೆಂದು ಪ್ರಸನ್ನಳಾದಳು. ಭಾಗಣ್ಣನ ನಾಲಿಗೆಯ ಮೇಲೆ ಬೀಜಾಕ್ಷರಗಳನ್ನು ಬರೆದು ಅನುಗ್ರಹಿಸಿ ಅದೃಶ್ಯಳಾದಳು. ಅಂದಿನಿಂದಲೇ ಭಾಗಣ್ಣನು ವರಕವಿಯಾದನು. ಯಾರನ್ನು ನೋಡಿದರೂ ಅವರ ಮೂರು ಜನ್ಮದ ವೃತ್ತಾಂತವನ್ನು ತಿಳಿಯುವ ಮಹಾಜ್ಞಾನವು ಭಾಗಣ್ಣನಿಗೆ ಲಭ್ಯವಾಯಿತು. ಇದೇ ಕಾಲದಲ್ಲಿ ಗದ್ವಾಲಿಯ ವಿದ್ವತ್ಸಭೆಗೆ ಬಂದು ಸನ್ಮಾನಿತನಾದ ತ್ರಿಲಿಂಗದೇಶದ ಕವೀಶ್ವರನೊಬ್ಬನು ಐಜಿಗೆ ಬಂದು ತನ್ನ ವಿದ್ಯಾಪ್ರದರ್ಶನ ಮಾಡಿದನು. ಕವಿಯ ಪಾಂಡಿತ್ಯಕ್ಕೆ ಮೆಚ್ಚಿನ ಜನರು ಆತನಿಗೆ ಯೋಗ್ಯ ಸಂಭಾವನೆ ಮಾಡಬೇಕೆಂದು ಪ್ರಯತ್ನಿಸಿದರು. ಕವಿಯು ತನಗೆ ಸಂಭಾವನೆ ಮಾತ್ರ ಸಾಲದು; ಆ ಪ್ರಾಂತದ ವಿದ್ವಜ್ಜನರು ಜಯಪತ್ರಿಕೆಯನ್ನು ಬರೆದು ಕೊಡಬೇಕೆಂದು ಕೇಳಿದನು. ಆಗ ಭಾಗಣ್ಣನಲ್ಲಿಗೆ ಕರೆದೊಯ್ದಾಗ, ಆ ಕವಿಯು ಕವಿತ್ವ ಸ್ಪರ್ಧೆಯಲ್ಲಿ ಭಾಗಣ್ಣನ ಮುಂದೆ ನಿಲ್ಲದೇಹೋದನು. ಇನ್ನು ಮುಂದೆ ನರಸ್ತುತಿಮಾಡಿ ಸರಸ್ವತಿಯನ್ನು ವಿಕ್ರಯಿಸಬೇಡ, ನಿನ್ನ ಕವಿತ್ವವು ಭಗವಂತನನ್ನು ಕೊಂಡಾಡುವುದಕ್ಕೆ ಮೀಸಲಾಗಲಿ. ಅದರಿಂದ ನಿನ್ನ ಕವಿತ್ವ ಪಾವನವಾಗಲಿ ಎಂದು ಬುದ್ಧಿ ಹೇಳಿ ಕಳಿಸಿದರು.
ಭಾಗಣ್ಣನ ಒಂದೊಂದು ಚರಿತ್ರೆಯನ್ನು ಕೇಳಿ ಅತ್ಯಂತ ಕುತೂಹಲದಿಂದ ಗದ್ವಾಲದ ರಾಜಾರಾಮ ಭೂಪಾಲನಿಗೆ ಇವರನ್ನು ನೋಡುವ ಹಂಬಲ ಹೆಚ್ಚಾಯಿತು. ರಾಮಭೂಪಾಲನು ಪರಿಶುದ್ಧನಾಗಿ ಅತ್ಯಂತ ಭಯಭಕ್ತಿಯಿಂದ ಬ್ರಹ್ಮಚಾರಿಯಿದ್ದ ಗುಡಿಗೆ ಬಂದು ನಮಸ್ಕರಿಸಿದನು. ಪರಸ್ಪರರ ಕುಶಲ ಪ್ರಶ್ನೆ ಆಯಿತು. ಭೂಪಾಲನು-ತಮ್ಮಂಥಾ ಸತ್ಪುರುಷರಿಂದ ನನ್ನ ರಾಷ್ಟ್ರ ಪಾವನವಾಯಿತು ಎಂದು ಧನ್ಯವಾದಗಳನ್ನರ್ಪಿಸಿದನು. ಭಾಗಣ್ಣನು ಮಹಾಪ್ರಭೋ ನಿನ್ನಂಥಾ ಧರ್ಮಪ್ರಭುವಿನ ರಾಜ್ಯದಲ್ಲಿ ನನ್ನಂಥಾ ಬ್ರಹಾಚಾರಿಗಳನೇಕರಾದಾರು ಎಂದು ನುಡಿದನು. ಭಾಗಣ್ಣನ ಅನೇಕ ಧಾರ್ಮಿಕ ವಾಕ್ಯಗಳಿಂದ ಮಹಾರಾಜನಿಗೆ ಪರಮಾನಂದವಾಯಿತು. ಆಗಲೇ, ತನ್ನ ಕಾಣಿಕೆಯೆಂದು ಕೆಲವು ಭೂಮಿಗಳನ್ನೂ, ಅಶ್ವಸಹಿತವಾದ ಇತರ ಗುರುಮರ್ಯಾದೆಗಳನ್ನು ಬ್ರಹ್ಮಚಾರಿಗೆ ನೀಡಿ ಗೌರವಿಸಿದರು. ಶ್ರೀಗೋಪಾಲದಾಸರಿಗೆ ನೀಡಿದ ಭೂಮಿ ಕಾಣಿಕೆಗಳು ಈಗಲೂ ದಾಸರ ವಂಶೀಕರ ಅನುಭವದಲ್ಲಿವೆ.
ಎರಡು ವರ್ಷಗಳ ನಂತರ ಅವನ ಸಾಧನೆ ಕೊನೆಗೊಂಡು, ಜನರಿಗೆ ಭವಿಷ್ಯ ಹೇಳಬಲ್ಲೆನೆಂಬ ಆತ್ಮವಿಶ್ವಾಸ ಅವನಲ್ಲಿ ಮೂಡಿತು. ತಿರುಪತಿ ತಿಮ್ಮಪ್ಪನಲ್ಲಿ ಅಪಾರ ಪ್ರೀತಿಯಿದ್ದ ಅವರು 'ವೆಂಕಟಕೃಷ್ಣ' ಎಂಬ ಅಂಕಿತದಿಂದ ಪದಗಳನ್ನು ರಚಿಸಿ ಹಾಡುತ್ತಿದ್ದರು.
ಅನುಕೂಲ ಕಾಲದಲ್ಲೇ ಕಾಶೀಯಾತ್ರೆ ಮಾಡುವ ಅಭಿಲಾಷೆ ಭಾಗಣ್ಣನಿಗಾಗಿ ಅಲ್ಲಿಗೂ ಹೋಗಿ ತನ್ನ ಅದೃಷ್ಟ ವಿದ್ಯಾಬಲದಿಂದ ಪ್ರಖ್ಯಾತನಾದನು. ಆ ಸಮಯದಲ್ಲೇ ಭಾಗಣ್ಣನಿಗೆ ವಿಜಯದಾಸರ ದರ್ಶನವಾಯಿತು. ವಿಜಯದಾಸರು ಆಗಲೇ ಪುರಂದರದಾಸರ ಅನುಗ್ರಹದಿಂದ ಹರಿದಾಸರಾಗಿ ದೈವಾನುಗ್ರಹಕ್ಕೆ ಪಾತ್ರರಾಗಿದ್ದರು. ಅನೇಕರು ಅವರನ್ನು ಹಿಂಬಾಲಿಸಿದ್ದರೂ ಭಾಗಣ್ಣನ ಮೇಲೆ ಮೊದಲು ಅವರ ವಿಶೇಷ ಕೃಪೆಯಾಯಿತು. ವೆಂಕಟೇಶನ ಭಕ್ತರೂ ಹಾಗೂ ಪುರಂದದಾಸರ ಶಿಷ್ಯರೂ ಆಗಿದ್ದ ವಿಜಯದಾಸರು ಭಾಗಣ್ಣನಿಗೆ 'ಗೋಪಾಲವಿಠಲ' ಎಂಬ ಅಂಕಿತವನ್ನು ನೀಡಿದರು. ಭಾಗಣ್ಣ ಅಂದಿನಿಂದ ಗೋಪಾಲದಾಸನೆಂಬ ಹೆಸರಿಗೆ ಪಾತ್ರನಾದನು.
ಆದವಾನಿಯಲ್ಲಿ ಶ್ರೀ ವ್ಯಾಸರಾಯರಿಂದ ಪ್ರತಿಷ್ಠಿತವಾದ ಮಂಗರಾಯ 'ಪ್ರಾಣದೇವರ' ಸನ್ನಿಧಿಯಲ್ಲಿಯೇ ಅಂಕಿತ ಪ್ರದಾನವಾಯಿತೆಂದು ಪ್ರತೀತಿ. ಸಾಮಾನ್ಯವಾಗಿ ಗುರುಗಳು ತಮ್ಮ ಶಿಷ್ಯನಿಗೆ ಅಂಕಿತವನ್ನು ಕೊಡುವಾಗ ಅಂಕಿತ ಪದವೊಂದನ್ನು ಮಾಡುತ್ತಾರೆ. ಅದು ಹೊಸ ಶಿಷ್ಯನ ಅಂಕಿತದಿಂದ ಪ್ರಾರಂಭವಾಗಿ ಗುರುಗಳ ಅಂಕಿತದೊಂದಿಗೆ ಕೊನೆಗೊಳ್ಳುತ್ತದೆ. ಗೋಪಾಲದಾಸರಿಗೆ ಸಂಬಂಧಿಸಿದ ಈ ದಾಸ ದೀಕ್ಷಾಪದವು ಇಂತಿದೆ:
ಗೋಪಾಲವಿಠಲ ನಿನ್ನ ಪೂಜೆಮಾಡುವೆನು
ಕಾಪಾಡೆ ಈ ಮಾತನು
ಅಪಾರ ಜನುಮದಲಿಡಿವನಮ್ಯಾಲೆ
ನೀ ಪ್ರೀತಿಯನು ಮಾಡಿ ನಿಜದಾಸರೊಳಿಡು
ಅಂಕಿತವ ನಾನಿತ್ತೆ ನಿನ್ನ ಪ್ರೇರಣೆಯಿಂದ
ಕಿಂಕರಗೆ ಲೌಕಿಕದ ಡೊಂಕು ನಡತೆಯು ಬಿಡಿಸಿ
ಮಂಕು ಜನುಮ ಜನುಮದಲಿದ್ದ
ಪಂಕವಾರವ ತೊಲಗಿಸಿ
ಶಂಕೆ ಪುಟ್ಟದಂತೆ ಕಾವ್ಯಗಳ ಪೇಳಿದದು
ಸಂಕಟಗಳಟ್ಟಿ ದಾರಿಗೆ ವೆಂಕಟಕೃಷ್ಣನು ನೀನೆ
ವಿಜಯವಿಠಲಯೆಂದು
ಅಂಕುರವು ಪಲ್ಲೈಸಿ ಫಲಪ್ರಾಪ್ತಿಯಾಗೆಲೋ
'ಗೋಪಾಲವಿಠಲ' ಎಂಬ ಅಂಕಿತದಲ್ಲಿ ಸಾವಿರಾರು ಪದಪದ್ಯ, ಸುಳಾದಿಗಳನ್ನು ರಚಿಸಿದರು. ಮುಂದೆ ಕಾಲಕ್ರಮದಲ್ಲಿ ಗೋಪಾಲದಾಸರು, ತಮ್ಮ ತಮ್ಮಂದಿರಿಗೆ ಕ್ರಮವಾಗಿ ವರದ ಗೋಪಾಲವಿಠಲ, ಗುರು ಗೋಪಾಲವಿಠಲ, ತಂದೆ ಗೋಪಾಲವಿಠಲ ಎಂಬ ಅಂಕಿತಗಳನ್ನು ಅನುಗ್ರಹಿಸಿದರು. ಕಡೆಯವನಾದ ರಂಗಪ್ಪನ ವಿನಾ ಮಿಕ್ಕ ಈರ್ವರೂ ಗೋಪಾಲದಾಸರಂತೆಯೇ ಮಹಾ ಅಪರೋಕ್ಷ ಜ್ಞಾನಿಗಳೆನಿಸಿದರು. ಅನಂತರ ಗೋಪಾಲದಾಸರು ತಮ್ಮ ಗುರುಗಳಾದ ವಿಜಯದಾಸರ ಅಪ್ಪಣೆ ಪಡೆದು ಶಿಷ್ಯ ಪರಿವಾರ ಸಮೇತರಾಗಿ ಉಡುಪಿಯ ಕೃಷ್ಣನ ದರ್ಶನಕ್ಕೆ ಹೊರಟರು. ದಾರಿಯಲ್ಲಿ ಮಂಡಗದ್ದೆಯ ಭೀಮ ಎಂಬ ದರೋಡೆಕೋರನನ್ನು ಸನ್ಮಾರ್ಗಕ್ಕೆ ತಂದರು.
ಒಂದು ಸಲ ಒಬ್ಬ ಹೆಣ್ಣುಮಗಳು ಆಗತಾನೆ ಕರೆದುಕೊಂಡ ಆಕಳ ಹಾಲನ್ನು ತೆಗೆದುಕೊಂಡು ದಾಸರ ಮನೆಗೆ ಬರುತ್ತಾಳೆ. ಆಕೆ ದಾಸರ ದರುಶನ ಮಾಡಿ ವೆಂಕಟರಮಣಸ್ವಾಮಿಗೆ ಈ ಹಾಲನ್ನು ಸಮರ್ಪಣೆ ಮಾಡಬೇಕು ಎನ್ನುವ ಮಹದಾಸೆಯಿಂದ ಬರುತ್ತಾಳೆ. ಬಹಳ ಭಕ್ತಿಯಿಂದ ಬಂದ ಆಕೆಗೆ, ದಾಸರು ಮನೆಯಲ್ಲಿ ಇಲ್ಲ ಊರ ಹೊರಗಡೆ ತೊರೆಯ ಬಳಿ ಇದ್ದಾರೆ ಎಂಬ ವಿಷಯ ಅವರ ತಾಯಿಯಿಂದ ತಿಳಿಯುತ್ತದೆ. ದಾಸರಿದ್ದ ಸ್ಥಳಕ್ಕೆ ಆ ಹೆಣ್ಣುಮಗಳು ಬರುತ್ತಾಳೆ. ಪೂಜೆಯ ಸಮಯದಲ್ಲಿ ಈ ಗೋವಿನ ಹಾಲನ್ನು ವೆಂಕಟೇಶ್ವರನಿಗೆ ಸಮರ್ಪಣೆ ಮಾಡಿ ಎಂದು ದಾಸರ ಮುಂದೆ ಆ ಹಾಲಿನ ಪಾತ್ರೆಯಿಡುತ್ತಾಳೆ. ಕೆಲವು ನಿಮಿಷ ಪಾತ್ರೆಯನ್ನು ಕೈಯಲ್ಲಿ ತೆಗೆದುಕೊಂಡ ದಾಸರು, ಭಗವಂತನ ಸ್ಮರಿಸುತ್ತಾ ಅಷ್ಟು ಹಾಲನ್ನು ತಾವು ಕುಳಿತ ಉಸುಕಿನಲ್ಲಿ ಸುರುವಿ, ಆ ಪಾತ್ರೆಯನ್ನು ತೊಳೆದು ಶ್ರೀನಿವಾಸನಿಗೆ ಸಮರ್ಪಣೆ ಆಯಿತು ಎನ್ನುತ್ತಾರೆ. ದಾಸರು ನೇವೇದ್ಯ ಮಾಡಬೇಕಾದ ಹಾಲನ್ನು ನೆಲಕ್ಕೆ ಸುರುವಿದ್ದು ಕಂಡು ಮನಸಿಗೆ ಕಸಿವಿಸಿ ಆಗಿ ಬಹಳವೇ ನೊಂದುಕೊಳ್ಳುತ್ತಾಳೆ. ಅವಳ ಕಣ್ಣೀರು ಕಂಡ ದಾಸರು ಯಾಕವ್ವಾ ಕಣ್ಣೀರು ಹಾಕ್ತಿದ್ದೀ? ಹೇಳು ಅಂದಾಗ, ಆಕೆ- ದಾಸರೇ, ನಾನು ಬಹು ಭಕ್ತಿಯಿಂದ ಈ ಹಾಲನ್ನು ನಿಮ್ಮ ಕೈಯ್ಯಿಂದ ಸ್ವಾಮಿಗೆ ಅರ್ಪಣೆಯಾಗಲಿ ಎಂದು ತಂದಿದ್ದೆ. ತಾವು ನೋಡಿದರೆ ಈ ಮರಳಿನಲ್ಲಿ ಅದನ್ನು ಹಾಕಿಬಿಟ್ಟಿರಿ. ನಿಜಕ್ಕೂ ಅದನ್ನು ನೋಡಿ ನನ್ನಂಥ ಪಾಪಿಷ್ಟಳು ಯಾರೂ ಇಲ್ಲ ಅನಿಸಿತು ಎನ್ನುತ್ತಾಳೆ. ತಕ್ಷಣ ದಾಸರು- ತಾಯಿ, ಭಜನೆ ಮುಗಿಯಲು ಇನ್ನು ಬಹಳ ಸಮಯ ಬೇಕು. ನೀನು ತಂದ ಬಿಸಿ ಬಿಸಿಯಾದ ನೊರೆ ಹಾಲು ಇವಾಗಲೇ ಸ್ವಾಮಿಗೆ ಅರ್ಪಣೆ ಮಾಡಬೇಕೆನಿಸಿತು. ಹಾಗಾಗಿ ಅರ್ಪಿಸಿದೆ. ನೊಂದು ಕೊಳ್ಳಬೇಡ. ರಾತ್ರಿ ಭಜನೆ ಸಮಯಕ್ಕೆ ಬಾ ಎಂದು ಹೇಳಿ ಕಳಿಸುವರು. ಆದರೂ ಆಕೆಗೆ ಮನಸ್ಸಿನಲ್ಲಿ ಕೊರೆಯುತ್ತಲೇ ಇತ್ತು. ಸರಿಯಾದ ಸಮಯಕ್ಕೆ ಭಜನೆಗೆ ಉತ್ತನೂರಿನ ವೆಂಕಟರಮಣನ ಗುಡಿಗೆ ಬಂದಳು. ಶ್ರೀನಿವಾಸನಿಗೆ ಮಂಗಳಾರತಿ ಮಾಡುವ ಮುಂಚೆ ಶ್ರೀ ಗೋಪಾಲದಾಸರು ಆ ಹೆಣ್ಣು ಮಗಳನ್ನು ಕರೆದು ಗರ್ಭಗುಡಿಯ ಹೊಸ್ತಿಲ ಮುಂದೆ ಕುಳಿತುಕೊಳ್ಳಲು ಹೇಳಿ, ಸ್ವಾಮಿಯನ್ನು ಕಣ್ತುಂಬ ನೋಡು ಅಂತ ಹೇಳಿದರು.
ಪರಮಾಶ್ಚರ್ಯ! ಶ್ರೀನಿವಾಸನ ಮುಖವನ್ನು ನೋಡುತ್ತಾ ನಿಂತ ಆ ಹೆಣ್ಣು ಮಗಳಿಗೆ ದೇವರ ಮುಖದಿಂದ ನೊರೆಹಾಲು ಸೋರುವದನ್ನು ಕಂಡು ದಿಗ್ರಾಂತಳಾದಳು. ಅಷ್ಟೇ ಆನಂದಭರಿತಳಾದಳು. ದಾಸರ ಬಗ್ಗೆ ತಪ್ಪು ತಿಳಿದುದಕ್ಕಾಗಿ ಸ್ವಾಮಿಯ ಬಳಿ ತನ್ನ ತಪ್ಪನ್ನು ಕ್ಷಮಿಸೆಂದು ಬೇಡಿಕೊಂಡಳು. ಅಪರೋಕ್ಷ ಜ್ಞಾನಿಗಳ ಚರ್ಯೆಯೇ ಹೀಗೆ. ಯಾವತ್ತೂ ಪರೀಕ್ಷಿಸಲು ಮುಂದಾಗಬಾರದು.
ಗೋಪಾಲದಾಸರ ಶಿಷ್ಯವೃಂದರಲ್ಲಿ ಪ್ರಮುಖರಾದವರು ಐಜಿಸ್ವಾಮಿಗಳೆಂದು ಪ್ರಸಿದ್ಧರಾಗಿರುವ ವ್ಯಾಸತತ್ವಜ್ಞರು, ಜಗನ್ನಾಥದಾಸರು, ಹೆಳವನಕಟ್ಟೆ ಗಿರಿಯಮ್ಮ. ದಾಸರ ತಮ್ಮಂದಿರೂ ಅಪರೋಕ್ಷ ಜ್ಞಾನಿಗಳೂ ಆದ ಸೀನಪ್ಪದಾಸರು ಹಾಗೂ ದಾಸಪ್ಪದಾಸರು. ಇವರೆಲ್ಲರೂ ವಿಜಯದಾಸರ ಮೂಲಕ ಗೋಪಾಲದಾಸರ ಅನುಗ್ರಹಕ್ಕೆ ಪಾತ್ರರಾದವರು. ಹೆಳವನಕಟ್ಟೆ ಗಿರಿಯಮ್ಮನಿಗೆ ಗೋಪಾಲದಾಸರು ಅವಳಿಟ್ಟ ರಂಗೋಲಿಯಲ್ಲೇ ಕೃಷ್ಣನ ಮೂರ್ತಿಯನ್ನು ಸಾಕ್ಷಾತ್ಕರಿಸಿಕೊಟ್ಟರೆಂಬ ಮಾತಿದೆ. ವಾಸುದೇವವಿಠಲಾಂಕಿತರಾದ ವ್ಯಾಸ ತತ್ತ್ವ ಜ್ಞರು ಗೋಪಾಲದಾಸರಿಂದ ಅತ್ಯಂತ ಪ್ರಭಾವಿತರಾಗಿದ್ದರು. ಅವರ ಒಂದು ಮಾತಿನಂತೆ ಮಂತ್ರಾಲಯದ ಭುವನೇಂದ್ರ ಸ್ವಾಮಿಗಳಿಂದ ಸನ್ಯಾಸ ಸ್ವೀಕಾರಮಾಡಿ, ಪುನಃ ಗೋಪಾಲದಾಸರ ಬಳಿಗೇ ಬಂದು 'ವಾಸುದೇವವಿಠಲ' ಎಂಬ ಅಂಕಿತದಲ್ಲಿ ಪದಗಳನ್ನು ರಚಿಸತೊಡಗಿದರು. ಬಳಿಕ ಗೋಪಾಲದಾಸರು, ವ್ಯಾಸ ತತ್ವಜ್ಞರು ಇಬ್ಬರೂ ತುಂಗಭದ್ರಾತೀರದ ವೇಣೀಸೋಮಪುರದಲ್ಲಿ ವಾಸಿಸುತ್ತಿದ್ದರು. ಭಗವದಾರಾಧನೆಯಲ್ಲಿ ತಲ್ಲೀನರಾಗಿ ಇಬ್ಬರೂ ಅನೇಕ ಪದ ಸುಳಾದಿಗಳನ್ನು ರಚಿಸಿದ್ದಾರೆ.
ರಾಘವೇಂದ್ರಸ್ವಾಮಿಗಳು ಪ್ರಹ್ಲಾದರಾಗಿದ್ದಾಗ ಅವರ ತಮ್ಮನಾದ ಸಹ್ಲಾದರಾಗಿ ಜನಿಸಿದ್ದಈಗಿನ ಜಗನ್ನಾಥದಾಸರಿಗೆ ಗೋಪಾಲದಾಸರೇ ಆಯುಷ್ಯವನ್ನು ದಾನ ಮಾಡಿದ ಮಹಾನುಭಾವರು. ವಿಜಯದಾಸರನ್ನು ನಿಂದಿಸಿದ ಫಲವಾಗಿ, ಉದರಶೂಲೆ ಪ್ರಾಪ್ತವಾಗಿ ಬಳಲುತ್ತಿದ್ದ ಜಗನ್ನಾಥದಾಸರು ರಾಯರಲ್ಲಿ ಮೊರೆಯಿಟ್ಟು ಪ್ರಾರ್ಥಿಸಿದಾಗ ವಿಜಯದಾಸರಲ್ಲಿಗೆ ತೆರಳು ಎಂದು ರಾಯರೇ ಹೇಳಿದಾಗ, ಅನ್ಯಥಾ ಶರಣಂ ನಾಸ್ತಿ ಎಂದು ವಿಜಯದಾಸ ಪ್ರಭುಗಳ ಕಾಲಿಗೆ ಬಿದ್ದರು. ಆಗ ಶ್ರೀನಿವಾಸನ (ಜಗನ್ನಾಥದಾಸರು) ಸ್ವರೂಪವನ್ನುತಿಳಿದಿದ್ದ ವಿಜಯದಾಸರು ಕನಿಕರದಿಂದ ಎಬ್ಬಿಸಿ, ನನ್ನ ಶಿಷ್ಯ ಗೋಪಾಲ ಮಾತ್ರ ನಿನ್ನ ಸಮಸ್ಯೆಯನ್ನು ಪರಿಹರಿಸಲು ಸಾಧ್ಯ ಎಂದು ಹೇಳಿ ಕಳಿಸಿದರು. ಮಹಾನ್ ಪಂಡಿತರಾಗಿದ್ದ ಶ್ರೀನಿವಾಸನು ಬಲು ದೀನರಾಗಿ ಗೋಪಾಲದಾಸರನ್ನು ಹುಡುಕಿಕೊಂಡು ಬಂದಾಗ, ಅಪರೋಕ್ಷ ಜ್ಞಾನಿಗಳಾಗಿದ್ದ ಗೋಪಾಲದಾಸರಿಗೆ ಕ್ಷಣ ಮಾತ್ರದಲ್ಲಿ ಎಲ್ಲ ವೃತ್ತಾಂತವೂ ತಿಳಿಯಿತು. ಗೋಪಾಲದಾಸರು ಅತ್ಯಂತ ಪ್ರೀತಿಯಿಂದ ಗುರುಗಳಾಜ್ಞೆ ಪಾಲಿಸಿದರು.
ಗುರುಗಳು ಆಯುಷ್ಯವನ್ನು ದಾನ ಮಾಡು ಎನ್ನುವುದೆಂದರೇನು? ಗುರುಗಳ ಆಜ್ಞೆಯಂತೆ ಶಿಷ್ಯರಾದ ಗೋಪಾಲದಾಸರು ತಮ್ಮ ನಲವತ್ತು ವರುಷ ಆಯಸ್ಸನ್ನು ಜಗನ್ನಾಥದಾಸರಿಗೆನೀಡುವುದೆಂದರೇನು? ಇವೆಲ್ಲ ಹುಲುಮಾನವರಿಂದ ಸಾಧ್ಯವಾ? ಭಗವತ್ಸಂಕಲ್ಪದಿಂದ ಭೂಮಿಯ ಮೇಲೆ ನಮ್ಮಂತಹ ಪಾಮರರನ್ನು ಉದ್ಧರಿಸಲು ಬಂದ ದೇವತೆಗಳಿಂದ ಮಾತ್ರವೇ ಸಾಧ್ಯ.
ಧನ್ವಂತರಿ ದೇವರನ್ನು ನೆನೆದು, ಎನ್ನ ಬಿನ್ನಪ ಕೇಳೋ ಧನ್ವಂತ್ರಿ ದಯಮಾಡೋ ಸಣ್ಣವನು ಇವ ಕೇವಲ ಎನ್ನುತ್ತಾ ಜೊತೆಗೆ 'ಎನ್ನ ಮಾತಲ್ಲವಿದು ಎನ್ನ ಹಿರಿಯರ ಮಾತು' ಎಂದು ಭಗವಂತನಲ್ಲಿ ಹೇಳುತ್ತಾ, ದೇವರನ್ನು ಸಾಕ್ಷಾತ್ಕರಿಸಿಕೊಂಡು ಜೋಳದ ಭಕ್ಕರಿಯಲ್ಲಿ ನಲವತ್ತು ವರುಷ ಆಯಸ್ಸನ್ನು ಹಾಕಿ, ಜಗನ್ನಾಥದಾಸರಿಗೆ ವಾಸಿಯಾಗದಿದ್ದ ಉದರಶೂಲೆ ನಿವಾರಣೆ ಮಾಡಿ ನಲವತ್ತು ವರುಷ ಆಯುರ್ದಾನ ಮಾಡಿದ ತ್ರಿಕಾಲ ಜ್ಞಾನಿಗಳು ಗೋಪಾಲದಾಸರು.
(ಜನವರಿ 15, ಭಾನುವಾರ ದಾಸರ ಆರಾಧನೆಯ ಪ್ರಯುಕ್ತ ಲೇಖನ)
- ಡಾ. ವಿದ್ಯಾಶ್ರೀ ಕುಲಕರ್ಣಿ ಮಾನವಿ
ಕನ್ನಡ ಅಧ್ಯಾಪಕಿ, ಪೂರ್ಣಪ್ರಮತಿ ಬೆಂಗಳೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ