ಅನೈತಿಕ ಚಟುವಟಿಕೆಗಳ ನಿರ್ಮೂಲನೆಯಲ್ಲಿ ಜನರ ಸಹಕಾರ ಅಗತ್ಯ : ಶಿವಕುಮಾರ್

Upayuktha
0

 


 

ಉಜಿರೆ : ಮಾನವ ಕಳ್ಳ ಸಾಗಾಣಿಕೆ ಮತ್ತು ವೇಶ್ಯಾವಾಟಿಕೆಯ ವಿವರಗಳು ಗೊತ್ತಾದ ತಕ್ಷಣವೇ ಸಂಬಂಧಿಸಿದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಸಮಾಜಕ್ಕೆ ಮಾರಕವಾಗುವ ಇಂತಹ ಚಟುವಟಿಕೆಗಳ ನಿರ್ಮೂಲನೆಯಲ್ಲಿ ಈ ಬಗೆಯ ಜನಸಹಭಾಗಿತ್ವ ಮಹತ್ವದ ಪಾತ್ರವಹಿಸುತ್ತದೆ ಎಂದು ಎಂದು ಬೆಳ್ತಂಗಡಿ ಪೋಲಿಸ್ ಠಾಣೆಯ ವೃತ್ತ ನಿರೀಕ್ಷಕ ಶಿವಕುಮಾರ್ ಹೇಳಿದರು.


ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಸೆಮಿನಾರ್ ಹಾಲ್‍ನಲ್ಲಿ ಮನಃಶಾಸ್ತ್ರ ವಿಭಾಗವು ‘ಅನೈತಿಕ ಮಾನವ ಸಾಗಣೆ ಮತ್ತು ಮಾನವ ಕಳ್ಳಸಾಗಣೆ ತಡೆ ಕಾಯ್ದೆ’ ಕುರಿತು ಗುರುವಾರ ಆಯೋಜಿಸಿದ್ದ ಜಾಗೃತಿ ಕಾರ್ಯಾಗಾರದಲ್ಲಿ  ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.


ಕಠಿಣ ಕಾನೂನುಗಳನ್ನು ಜಾರಿಗೆ ತಂದರೂ ಇಂತಹ ಚಟುವಟಿಕೆಗಳಿಗೆ ಕಡಿವಾಣ ಬೀಳುತ್ತಿಲ್ಲ. ಸಾರ್ವಜನಿಕ ವಲಯಗಳಲ್ಲಿ ಇಂತಹ ಯಾವುದೇ ಚಟುವಟಿಕೆಗಳು ಕಂಡುಬಂದರೆ ತಕ್ಷಣ ಹತ್ತಿರದ ಪೋಲಿಸ್ ಠಾಣೆಗೆ ಮಾಹಿತಿಯನ್ನು ನೀಡಬೇಕು. ಈ ಬಗೆಯ ಮಾಹಿತಿ ನೀಡುವಿಕೆಯಿಂದ ಕಾನೂನು ಸುವ್ಯವಸ್ಥೆ ನೆಲೆಗೊಳಿಸುವ ಪೊಲೀಸರ ಕಾರ್ಯದಲ್ಲಿ ಜನರೂ ಸಹಕರಿಸಿದಂತಾಗುತ್ತದೆ ಎಂದು ಹೇಳಿದರು.


ಬಡತನ, ನಿರುದ್ಯೋಗದಂತಹ ಸಮಸ್ಯೆಗಳು ವೇಶ್ಯಾವಾಟಿಕೆ ಮತ್ತು ಮಾನವ ಕಳ್ಳಸಾಗಾಣಿಕೆಗೆ ಕಾರಣ. ಜಗತ್ತಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಗಳು ಎಷ್ಟೇ ಮುಂದುವರೆದಿದ್ದರೂ ಇಂತಹ ಅಮಾನವೀಯ ಪದ್ಧತಿಗಗಳು ಪರಿಪೂರ್ಣವಾಗಿ ನಿರ್ಮೂಲನೆಯಾಗದಿರುವುದು ದುರದೃಷ್ಟಕರ ಎಂದರು.


ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಬಂಟ್ವಾಳ ಪೋಲಿಸ್ ಠಾಣೆಯ ಉಪ ಪೋಲೀಸ್ ಅಧೀಕ್ಷಕರು ಪ್ರತಾಪ್ ಸಿಂಗ್ ಥಾರೋಟ್ ಮಾತನಾಡಿದರು. ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳ ಬಳಕೆಯ ವೇಳೆ ಯುವಜನತೆ ಬಹಳ ಎಚ್ಚರಿಕೆ ವಹಿಸಬೇಕು. ಇಂದಿನ ಯುವ ಜನತೆಯು ತಮ್ಮ ಜೀವನದಲ್ಲಿ  ಉತ್ತಮ ಗುಣಗಳನ್ನು ಅಳವಡಿಸಿಕೊಂಡರೆ ಸಮಾಜದಲ್ಲಿ ಉತ್ತಮ ನಾಗರಿಕರಾಗಬಹುದು ಎಂದು ಹೇಳಿದರು.


ಈ ಸಂದರ್ಭದಲ್ಲಿ ಬೆಳ್ತಂಗಡಿಯ ಶಿಶು ಕಲ್ಯಾಣ ಇಲಾಖೆಯ ನಂದನಾ ಮಹಿಳಾ ಮತ್ತು ಮಕ್ಕಳ ಸುರಕ್ಷತೆ ಕುರಿತಾದ ಕಾನೂನಿನ ಕುರಿತಾಗಿ ಮಾಹಿತಿ ನೀಡಿದರು.


ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಪೋಲಿಸ್ ಠಾಣೆ ಸಬ್ ಇನ್ಸ್‍ಪೆಕ್ಟರ್ ನಂದಕುಮಾರ್, ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕ್ಷೇಮಪಾಲನಾ ಅಧಿಕಾರಿ ಸೋಮಶೇಖರ್ ಶೆಟ್ಟಿ, ಸ್ನಾತಕೊತ್ತರ ಕೇಂದ್ರದ ಮನಃಶಾಸ್ತ್ರ ವಿಭಾಗದ ಮುಖ್ಯಸ್ಥೆ      ಡಾ. ವಂದನಾ ಜೈನ್ ಉಪಸ್ಥಿತರಿದ್ದರು.


ವಿದ್ಯಾರ್ಥಿನಿ ಸೌಮ್ಯಶ್ರೀ ಕೆ ನಿರೂಪಿಸಿ, ಸ್ವಾಗತಿಸಿದರು. ವಿದ್ಯಾರ್ಥಿನಿ ಕೌಸ್ತುಭ ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
To Top