ಕಾರ್ಕಳ: ಭೋಗದ ಆಸೆಯನ್ನು ಕಳೆದುಕೊಳ್ಳುವುದು, ವ್ಯಾಮೋಹದಿಂದ ಬಿಡುಗಡೆ ಹೊಂದುವುದು ಎಂಬುದನ್ನು ಮಾತಿನಲ್ಲಿ ಹೇಳಿದಂತೆ ಜೀವನದಲ್ಲಿ ಆಚರಣೆಗೆ ತರುವುದು ಕಷ್ಟ. ಇದನ್ನು ವಿವರವಾಗಿ ತಿಳಿಸುತ್ತಾ ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿಯೂ ತೀರ್ಥಂಕರರ ಮಟ್ಟಕ್ಕೆ ಏರಬಹುದು ಎಂಬುದನ್ನು ಮನೋಜ್ಞವಾಗಿ ವಿವರಿಸುವ ಪಂಪನ ಪರಮಾದ್ಭುತ ಕೃತಿಯೇ ಆದಿ ಪುರಾಣ ಎಂಬುದಾಗಿ ಮೈಸೂರು ಮುಕ್ತ ವಿ. ವಿ. ಯ ಪ್ರಾಧ್ಯಾಪಕಿ ಡಾ. ಜ್ಯೋತಿ ಶಂಕರ್ ತಿಳಿಸಿದರು.
ಕಾರ್ಕಳದ ಪೆರ್ವಾಜೆ ಪ್ರೌಢಶಾಲಾ ಸಭಾಂಗಣದಲ್ಲಿ ಕಾಂತಾವರ ಕನ್ನಡ ಸಂಘ ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕಾರ್ಕಳ ಸಮಿತಿಯ ಸಹಯೋಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯರಲ್ಲಿ ನಡೆದ ತಿಂಗಳ ಅರಿವು –ತಿಳಿವು ಕಾರ್ಯಕ್ರಮರಲ್ಲಿ ಅವರು 'ಪಂಪನ ಆದಿಪುರಾಣ- ನೀಲಾಜನೆಯ ನೃತ್ಯ ಪ್ರಸಂಗ' ಎಂಬ ವಿಷಯದ ಕುರಿತು ಮಾತನಾಡಿದರು.
ಅಪ್ಸರೆಯರ ಸಮೂಹಕ್ಕೇ ತಿಲಕಪ್ರಾಯದಂತಿದ್ದ ಅಪ್ರತಿಮ ಸುಂದರಿ, ದೇವನರ್ತಕಿ ನೀಲಾಂಜನೆಯ ನೃತ್ಯವನ್ನು ಆದಿನಾಥನ ಗೌರವಾರ್ಥ ಏರ್ಪಡಿಸಲಾಗಿದ್ದು ಎಲ್ಲರೂ ನೃತ್ಯವನ್ನು ಆಸ್ವಾದಿಸುತ್ತಿರುವಂತೆಯೇ ನೀಲಾಂಜನೆಯ ಆಯುಷ್ಯ ಮುಗಿದು ಆಕೆ ಕಣ್ಮರೆಯಾಗುತ್ತಾಳೆ. ಆದರೆ ಇದು ಇಂದ್ರನ ಗಮನಕ್ಕೆ ಬಂದು ಕ್ಷಣ ಮಾತ್ರದಲ್ಲಿ ಬದಲಿ ನೀಲಾಂಜನೆಯ ಸೃಷ್ಟಿಸಿ ನೃತ್ಯ ಮುಂದುವರೆಯುತ್ತದೆ. ಇದು ಯಾರ ಗಮನಕ್ಕೂ ಬರದಿದ್ದರೂ ಶುಭ್ರ ಸ್ಫಟಿಕ ಶುದ್ಧಾಂತರಂಗದ ಆದಿನಾಥನಿಗೆ ಗೊತ್ತಾಗುತ್ತದೆ. ಸಂಸಾರ ಅನಿತ್ಯ, ಬದುಕು ಕ್ಷಣಿಕ ಅನ್ನುವ ಸತ್ಯ ಆದಿನಾಥನ ಮನದಲ್ಲಿ ಬೇರನ್ನೂರಿದ ಪರಿಯನ್ನು ಪಂಪನು ತನ್ನ ಕೃತಿಯಲ್ಲಿ ಭಾವಪೂರ್ಣವಾಗಿ ವಿವರಿಸಿದ್ದಾನೆ. ಬದುಕಿನ ಕ್ಷಣಭಂಗುರತೆಯ ಬಗ್ಗೆ ಇಲ್ಲಿ ವಿವರಿಸಿರುವಂತೆ ಬದುಕನ್ನು ಸಾರ್ಥಕವಾಗಿ ಕಳೆಯಲು ಜೀವನಕ್ಕೆ ಏನೇನು ಬೇಕು ಅನ್ನುವುದನ್ನು ಕೂಡಾ ಪಂಪನು ಇಲ್ಲಿ ಎಳೆ ಎಳೆಯಾಗಿ ಈ ಕೃತಿಯಲ್ಲಿ ಬಿಡಿಸಿ ಹೇಳಿದ್ದು ಇದು ನಮ್ಮನ್ನು ಅನುಭಾವದೆಡೆಗೆ ಒಯ್ಯಬಲ್ಲುದು ಎಂದರು.
ಡಾ. ನಾ. ಮೊಗಸಾಲೆ, ಅ.ಭಾ.ಸಾ.ಪ. ಕಾರ್ಕಳ ಇದರ ಗೌರವಾಧ್ಯಕ್ಷರಾದ ನಿತ್ಯಾನಂದ ಪೈಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಾಲತಿ. ಜಿ. ಪೈ ಕಾರ್ಯಕ್ರಮ ನಿರೂಪಿಸಿದರು. ಮಿತ್ರಪ್ರಭಾ ಹೆಗ್ಡೆ ಸ್ವಾಗತಿಸಿ ಸದಾನಂದ ನಾರಾವಿ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ