ಉಡುಪಿ: ಕೋವಿಡ್-19 ನಾಲ್ಕನೇ ಅಲೆಯ ತೀವ್ರತೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಫೆಬ್ರವರಿ 1 ರಂದು ಸಾರ್ವಜನಿಕರಿಗೆ ಜಿಲ್ಲೆಯ ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ಮತ್ತು ಪದವಿ ವಿದ್ಯಾರ್ಥಿಗಳಿಗೆ ಪದವಿ ಕಾಲೇಜುಗಳಲ್ಲಿ ಕೋವಿಶೀಲ್ಡ್ ಲಸಿಕಾ ಮೇಳವನ್ನು ಆಯೋಜಿಸಲಾಗಿದೆ.
ಕೋವಿಶೀಲ್ಡ್ ಪ್ರಥಮ ಡೋಸ್ ಲಸಿಕೆ ಪಡೆದು 84 ದಿನಗಳು ಮೀರಿದವರು 2 ನೇ ಡೋಸ್ ಕೋವಿಶೀಲ್ಡ್ ಲಸಿಕೆಯನ್ನು ಪಡೆಯಬಹುದಾಗಿದೆ. 18 ವರ್ಷ ಮೇಲ್ಪಟ್ಟವರಲ್ಲಿ 2ನೇ ಡೋಸ್ ಕೋವಿಶೀಲ್ಡ್ ಲಸಿಕೆ ಪಡೆದು 26 ವಾರ (6 ತಿಂಗಳು) ಪೂರೈಸಿದವರಿಗೆ ಕೋವಿಡ್ ಮುನ್ನೆಚ್ಚರಿಕೆ ಲಸಿಕಾ ಡೋಸ್ (ಬೂಸ್ಟರ್ ಡೋಸ್) ನೀಡಲಾಗುವುದು.
ಸಾರ್ವಜನಿಕರು ಹತ್ತಿರದ ಸರಕಾರಿ ಆಸ್ಪತ್ರೆಯನ್ನು ಸಂಪರ್ಕಿಸಿ, ಲಸಿಕಾಕರಣವನ್ನು ಖಚಿತಪಡಿಸಿಕೊಂಡು ಲಸಿಕೆ ಪಡೆಯುವಂತೆ ಹಾಗೂ ಪದವಿ ವಿದ್ಯಾರ್ಥಿಗಳು ಕಾಲೇಜು ಮುಖ್ಯಸ್ಥರನ್ನು ಸಂಪರ್ಕಿಸಿ, ಲಸಿಕಾ ಶಿಬಿರವನ್ನು ಖಚಿತಪಡಿಸಿಕೊಂಡು ಲಸಿಕೆ ಪಡೆಯಬಹುದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.