ನನ್ನ ಊರು ಹಳೇಬೀಡು. ವಿಶ್ವ ಪ್ರಸಿದ್ಧ ಹೊಯ್ಸಳರು ಮೆರೆದ ನೆಲೆವೀಡು. ಬಾಲ್ಯದ ದಿನಗಳಲ್ಲಿ ಶಾಲೆಗಳಲ್ಲಿ ಭಾಷಣ ಮಾಡಲು, ಪ್ರಬಂಧ ಬರೆಯಲು, ಚರ್ಚಾ ಸ್ಫರ್ಧೆಯಲ್ಲಿ ಪಾಲ್ಗೊಳ್ಳಲು ಗುರುಗಳಾದ ಜಿ.ಮಹೇಶ್ವರಪ್ಪ ಅವರು ನೀಡಿದ ಪ್ರೋತ್ಸಾಹವೇ ನಾನೊಬ್ಬ ಶಿಕ್ಷಕಿಯಾಗಿ ನನ್ನ ವಿದ್ಯಾರ್ಥಿಗಳಿಗೆ ಅದೇ ಪ್ರೋತ್ಸಾಹವನ್ನು ನೀಡಲು ಸದಾ ಪ್ರೇರೇಪಿಸುತ್ತದೆ. ಈ ಪ್ರೇರಣೆಯೇ ವಿದ್ಯಾರ್ಥಿಗಳನ್ನು ಲೇಖಕರನ್ನಾಗಿ, ಸಾಹಿತಿಗಳನ್ನಾಗಿ ಚಿಂತಕರನ್ನಾಗಿ ರೂಪಿಸುತ್ತದೆ... ಹೀಗೆ ತಮ್ಮ ಚೊಚ್ಚಲು ಕೃತಿ ಭಾವದೊಲದ ಬೆಳೆಗಳು ಪುಸ್ತಕದಲ್ಲಿ ಬರೆಯುವ ಮಮತ ಪ್ರಭು ಅವರು When once the itch of literature comes over a man nothing can cure it but scratching of a pen.. ಮಾತು ಸತ್ಯ. ಬರೆಯುವವರಿಗೆಲ್ಲಾ ಇಂಥದೊಂದು ತುರಿಕೆ ಇದ್ದೇ ಇರುತ್ತದೆ. ಹಾಗಾಗಿಯೇ ನಾನು ಕೂಡ ಬರೆಯುತ್ತಿರುತ್ತೇನೆ.. ಬರಹದ ಪಯಣದಲ್ಲಿ ಪರಿಸರ ಕಾಳಜಿಯನ್ನು ಮನದಲ್ಲಿರಿಸಿ ಹಸಿರು ಭೂಮಿ ಪ್ರತಿಷ್ಠಾನದ ಒಡನಾಟದಲ್ಲಿ ಇವರ ಬರಹಗಳು ಪ್ರಕೃತಿ ಪ್ರೇಮದಲ್ಲೇ ಒಂದಿಷ್ಟು ಅರಳಿ ನಳನಳಿಸಿವೆ.
ಕನಸುಗಳೆಂದರೆ ನಾವು ನಿದ್ರೆಯಲ್ಲಿದ್ದಾಗ ಈಡೇರದ ಬಯಕೆಗಳು ಸುಪ್ತ ಮನಸ್ಸಿನಿಂದ ಜಾಗೃತವಾಗಿ ಪ್ರಕಟಗೊಳ್ಳುತ್ತವೆ. ಯಾವುದು ನಮ್ಮನ್ನು ನಿದ್ರಿಸಲು ಬಿಡುವುದಿಲ್ಲವೋ ಅದೇ ಕನಸು ಎಂದಿದ್ದಾರೆ ಅಬ್ದುಲ್ ಕಲಾಂ. ನಿದ್ರೆ ಬಳ್ಳಿಯ ಮೇಲೆ ಅರಳಿರುವ ಕುಸುಮಗಳೇ ಕನಸುಗಳು ಎಂದು ಇನಾಂದಾರ್ ಸುಂದರ ರೂಪಕ ಬಳಸಿದ್ದಾರೆ. ಹರೆಯದಲ್ಲಿದ್ದಾಗ ಕಣ್ಣು ಬಿಟ್ಟುಕೊಂಡೇ ಕಾಣವುದು ಹಗಲು ಕನಸು. ರಾತ್ರಿ ನಮ್ಮ ನಿಯಂತ್ರಣಕ್ಕೆ ಸಿಗದೆ ನಿಜದಂತೆಯೇ ಅನುಭವಿಸಿಬಿಡುವ ಕನಸುಗಳಿವೆ. ಕೆಲವೊಮ್ಮೆ ಕಾಣುವ ಕನಸೊಂದನ್ನು ಗುರಿಯಾಗಿ ಪರಿವರ್ತಿಸಿಕೊಂಡು ಸಾಧಿಸುವವರು ಇದ್ದಾರೆ. ಹಾಸನದ ಕಟ್ಟಿನಕೆರೆ ಮಾರ್ಕೆಟಿನಲ್ಲಿ ಹೂ ಬುಟ್ಟಿಗಳನ್ನು ಜೋಡಿಸಿಕೊಂಡು ಮೊಳ ಹಾಕುತ್ತಾ ನಿಲ್ಲುವ ಅಮ್ಮಂದಿರ, ರಾತ್ರಿ ಒಂಬತ್ತಾದರೂ ಹತ್ತು ರೂ.ಗೆ ಆರು ಕಟ್ಟು ಬಾರಣ್ಣ ಅಂತ ಮೆಂತೆ ಸೊಪ್ಪಿನ ಕಟ್ಟು ತೋರಿಸುತ್ತಾ ತನ್ನ ಮುಂದೆ ಹಾದು ಹೋಗುವವರಿಗೆಲ್ಲಾ ಕರೆಯುವ ಸೋದರಿಯರ ಕನಸಗಳ ಬಗ್ಗೆ ವಿಶೇಷ ಕುತೂಹಲದಿಂದ ಮಾತನಾಡಿಸಿ ಲೇಖನ ಸ್ವರೂಪ ನೀಡಿದ್ದಾರೆ.
ಕೆಲವು ದಿನಗಳ ಹಿಂದೆ ಪ್ರಕೃತಿ ಮಾನವ ಕುಲವನ್ನು ಕದನಕ್ಕೆ ಕರೆದಿತ್ತು ತೊಡೆತಟ್ಟಿ. ಕಣ್ಣಿಗೆ ಕಾಣದ ಅತೀ ಸಣ್ಣ ಜೀವಿಯು ವಿಜ್ಞಾನ ತಂತ್ರಜ್ಞಾನದ ಬುಡವನ್ನೇ ಅಲ್ಲಾಡಿಸಿತ್ತು. ನೋಡು ನೋಡುತ್ತಿದ್ದಂತೆಯೇ ತಿರುಗುತ್ತಿದ್ದ ಭೂಮಿ ನಿಂತಂತಾಗಿತ್ತು. ವಾಹನಗಳು ಚಕ್ರ ಮುರಿದು ನಿಂತರೆ ಕಾರ್ಖಾನೆಗಳು ಕಾಲುಕಟ್ಟಿ ನಿಂತವು.. ಹೀಗೆ ಕರೋನ ಸಾಂದರ್ಭಿಕ ಲೇಖನವನ್ನು ಸ್ವಾರಸ್ಯಕರವಾಗಿ ಪ್ರಾರಂಭಿಸಿ ಆದರೆ ಒಂದು ಮಾತ್ರ ನಿರಂತರ ಕಾರ್ಯೋನ್ಮುಖವಾಗಿತ್ತು. ದೇಶದ ಕಾರ್ಖಾನೆಗಳೇ ಉತ್ಪಾದನೆಯನ್ನು ಮರೆತು ನಿದ್ದೆ ಮಾಡುತ್ತಿದ್ದರೆ ಈ ಕಾರ್ಖಾನೆ ಮಾತ್ರ ಮೈ ಕೊಡವಿ ದುಡಿಯಲು ನಿಂತಿತ್ತು. ಹೇಳಬಲ್ಲಿರಾ ಕಾರ್ಖಾನೆ ಯಾವುದೆಂದು? ಹೀಗೆ ಪ್ರಶ್ನೆ ಹಾಕಿ ದುಡಿದರೂ ಲಾಭ ತರದ ಕಾರ್ಖಾನೆಯೆಂದರೆ ಅದು ಅಡಿಗೆ ಮನೆ ಎಂದು ಕೊರೊನಾದಲ್ಲೂ ನಿಲ್ಲದೆ ಹೊಟ್ಟೆ ತುಂಬಿಸಿದ ಅಡಿಗೆ ಮನೆ ಭಂಗವನ್ನು ಕಾರ್ಖಾನೆಗೆ ಹೋಲಿಸಿ ಮುಂದೆ ಸಾಗುತ್ತಾರೆ.
ಲೇಖನ ಬರೆಯಲು ದಿನನಿತ್ಯ ಕಾಣುವ ಪರಿಸರ ಘಟನೆಗಳು ನಮ್ಮ ಲೇಖನಿಗೆ ಹೇಗೆ ವಸ್ತು ವಿಷಯಗಳಾಗುತ್ತವೆ. ಅರೇ! ಒಂದು ಸಣ್ಣ ವಿಷಯವೂ ಲೇಖಕಿಯ ವಿಶಿಷ್ಠ ನಿರೂಪಣಾ ಶೈಲಿಯಲ್ಲಿ ಹೇಗೆ ಓದಿಸಿಕೊಳ್ಳುತ್ತದೆ. ಹೌದು ಒಮ್ಮೆ ಲೇಖನಿ ನಿಮ್ಮ ಹಿಡಿತಕ್ಕೆ ಸಿಕ್ಕರೆ ಎಂತಹದೇ ವಿಷಯವನ್ನು ನವನವ್ಯ ಬರೆಯಬಹುದು. ಎಂಬುದಕ್ಕೆ ಈ ಲೇಖನವೊಂದು ಉದಾಹರಣೆ. ಜೊತೆ ಓದು ಅಧ್ಯಯನ ಮತ್ತು ಬರೆಯುವ ಉತ್ಸಹವೂ ಪ್ರಮುಖವೇ.
ಒಮ್ಮೆ ಸಹೋದರನ ಹೊಲದಲ್ಲಿ ರಾಗಿ ಬಿತ್ತುತ್ತಿರುವ ಚಿತ್ರವನ್ನು ವಾಟ್ಸಪ್‍ನಲ್ಲಿ ನೋಡಿದೆ. ಬಿತ್ತುವ ಮೊದಲು ಅಣಿಯಾಗಿದ್ದ ಹೊಲದ ಚಿತ್ರವೊಂದಿತ್ತು. ಕಪ್ಪು ಮಣ್ಣಿನ ಮೇಲೆ ಬೆಳಗಿನ ಸೂರ್ಯ ರಶ್ಮಿಗಳ ಸಿಂಚನ. ನಾಲ್ಕದದ ಮಳೆಗೆ ಮಿಂಚುತ್ತಿದ್ದ ಇಬ್ಬನಿಯ ಆನಂದ ಬಾಷ್ಪ! ಮೂಕ ವಿಸ್ಮಿತಳಾದೆ. ಮನಸೇಕೋ ಮಣ್ಣಿಗೆ ಅಂಟಿಕೊಂಡಿರುವಂತೆ ಭಾಸ. ಈಗ್ಗೆ ಐದಾರು ತಿಂಗಳ ಹಿಂದೆ ಅದೇ ಮಣ್ಣು ಮಳೆಯ ಒಡನಾಟ ಇಲ್ಲದೆ ಜೀವ ಹೀನವಾಗಿ ಚೈತನ್ಯ ಹೀನವಾಗಿ ಮಲಗಿತ್ತು. ನಾಲ್ಕು ಹದದ ಮಳೆಗೆ ಅದರ ಬಣ್ಣವೇನು? ಅದರ ನಗೆಯೇನು? ಒಲುಮೆಯೇನು? ಬಿನ್ನಾಣವೇನು? ಕಾತರವೇನು? ಇದು ಯಾರ ಯಾರ ನಡುವಿನ ಪ್ರೇಮವೆಂದು ತಿಳಿಯುವ ಕುತೂಹಲವಾಯಿತು. ನೀರನ್ನು ಗಂಗೆ ಎಂದು ಮಳೆಯನ್ನು ಮಳೆರಾಯನೆಂದು ಕರೆದು ಪುರುಷನನ್ನಾಗಿ ಹೆಣ್ಣೆಂದರೆ ಧರಿತ್ರಿಯೇ ತಾನೇ? ಹಾಗಾದರೆ ಮಳೆ ಮತ್ತು ಮಣ್ಣಿನ ಸಂಗಮವೇ ಸೌಂದರ್ಯವೇ ಇರಬೇಕು? ಮಣ್ಣಿನಿಂದಲೇ ಸಕಲವನ್ನು ಪಡೆದು ಸಿರಿವಂತರಾಗಿರುವ ನಾವು ಮಣ್ಣನ್ನು ಅಸಡ್ಡೆಯಾಗಿ ಕಾಣುವುದಕ್ಕೆ ಒಂದೆರಡು ಉದಾಹರಣೆಗಳು. ಸಕಾಲಕ್ಕೆ ಉಪಾಯ ಯೋಚಿಸಿದವನನ್ನು ‘ನಿನ್ನ ಬುದ್ಧಿ ಏನ್ ಮಣ್ ತಿಂತಿತ್ತ.. ನಿನ್ ತಲೆಲಿ ಏನ್ ಮಣ್ಣು ತುಂಬಿಕೊಂಡಿದ್ಯಾ..ಅಲ್ಲೇನ್ ಸಿಗುತ್ತೆ ನಿಮಗೆ ಬರೀ ಮಣ್ಣು ಎಲ್ಲ ಮುಗ್ದೋಯ್ತು ಮಣ್ಣು ತಿನ್ನು..
ಮೇಲ್ನೋಟಕ್ಕೆ ಮಣ್ಣಿನ ಬಗೆಗಿನ ಉಡಾಫೆ ಮಾತುಗಳೆಂದು ಭಾವಿಸುವ ಮಂದಿಗೆ ಈ ವಾಕ್ಯಗಳ ಒಳಾರ್ಥಗಳಲ್ಲಿ ಗೌಪ್ಯವಾಗಿ ಮಣ್ಣಿನ ಮಹತ್ವ ತಿಳಿಸಲು ಬಳಸಿಕೊಳ್ಳುತ್ತಾರೆ. ಮಣ್ಣನ್ನು ಮಣ್ಣಾಗಿಯೇ ಪ್ರೀತಿಸುವ ಆದ್ರ್ರತೆ ನಮ್ಮ ಹೃದಯಗಳಿಗೆ ಇಲ್ಲವಾಗಿದೆ. ಮಣ್ಣನ್ನು ಕೆಸರಾಗಿ, ಧೂಳಾಗಿ, ಕಸವಾಗಿ ಕಂಡು ತುಚ್ಛ ಭಾವ ಭಾವಿಸುವ ನಾವು ಮಣ್ಣಿಂದ ಮರ, ಮರದಿಂದ ಉಸಿರು, ಮಣ್ಣಿಂದ ಅನ್ನ ಎಲ್ಲವನ್ನೂ ಪಡೆಯುತ್ತೇವೆ. ಆದರೆ ಅದನ್ನು ಅದರ ಸರ್ವರೂಪದಲ್ಲಿಯೂ ಪ್ರೀತಿಸುವುದನ್ನು ಮಾತ್ರ ಕಲಿಯಲಿಲ್ಲ.. ಹೀಗೆ ಲೇಖನದಲ್ಲಿ ಪರಿಸರ ಕಾಳಜಿ ತೋರುತ್ತಾರೆ.
ಆಗೆಲ್ಲಾ ಮನೆಗೆ ಹಿತ್ತಲಿರುತಿತ್ತು ಈಗ ಮನಸಿಗಿರಬಾರದೇ.. ಎಂಬ ಲೇಖನದಲ್ಲಿ ಅಜ್ಜಿ ಮನೆಯ ಹಿತ್ತಲು ಯಾವಾಗಲೂ ನನ್ನ ಮನದಲ್ಲಿ ನೆಲೆ ನಿಂತ ಹೂ ಗಿಡ ಎಂದು ಹಿತ್ಲು ವಿಷಯ ವರ್ಣಿಸುತ್ತ ನಮ್ಮ ಚಿತ್ತ ಅತ್ತ ಹರಿಯುವಂತೆ ಮಾಡುತ್ತಾರೆ. ಹೌದು ನಮ್ಮ ಗೊರೂರಿನ ಮನೆಯ ಹಿಂದೆಯೂ ಹಿತ್ಲು ಇತ್ತು. 80 ಅಡಿ ಉದ್ದ 20 ಅಡಿ ಅಗಲದ ನಿವೇಶನದಲ್ಲಿ ಅರ್ಧ ಭಾಗ ಹಿತ್ತಲಿಗೆ ಜಾಗ ಬಿಟ್ಟಿ ಕಟ್ಟಿದ್ದರು ನಮ್ಮ ತಂದೆ. ಹಿತ್ತಿಲಿನ ಈಶಾನ್ಯ ಮೂಲೆಯಲ್ಲಿ ಒಂದು ತೆರೆದ ಪಾಯಿಖಾನೆ ಗುಂಡಿ. ಬಾಲ್ಯದ ದಿನಗಳಲ್ಲಿ ಕಂಡಿದ್ದು. ಅಂದರೆ 50 ವರ್ಷಗಳ ಹಿಂದಿನದು. ಮನೆ ತಗ್ಗಿನಲ್ಲಿ ಹಿತ್ತಿಲು ಎತ್ತರದಲ್ಲಿತ್ತು. ಹಿತ್ತಿಲಿನ ಹಿಂಭಾಗವು ಎತ್ತರದ ಪ್ರದೇಶವೇ ಆಗಿತ್ತು. ಮಳೆಗಾಲದಲ್ಲಿ ಮೇಲಿನಿಂದ ನೀರು ಹರಿದು ಗುಂಡಿ ತುಂಬಿ ಹಿತ್ತಲಿಗೆಲ್ಲಾ ಹರಿದು ಬಹಳ ಪಜೀತಿ ಅನುಭವಿಸಿದ ದಿನಗಳನ್ನು ವರ್ಣಿಸಿದರೆ ಊಟ ಸೇರುವುದಿಲ್ಲ. ಹಿಂದೊಮ್ಮೆ ಪ್ರಜಾವಾಣಿ ದೀಪಾವಳಿ ಕಥಾ ಸ್ಫರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಮೊಗಳ್ಳಿ ಗಣೇಶ ಅವರ ಬುಗುರಿ ಕಥೆಯಲ್ಲಿ (ಇದು ನಾಟಕ ರೂಪಾಂತರವಾಗಿ ಮಹದೇವ ಹಡಪದ ಅವರ ನಿರ್ದೇಶನದಲ್ಲಿ ಹಾಸನದಲ್ಲಿ ಪ್ರದರ್ಶಿತವಾಗಿ ಅಗ ನಾನು ಬರೆದ ರಂಗ ಪ್ರಯೋಗದ ನನ್ನ ವಿಮರ್ಶೆ ಕೃತಿ ರಂಗಸಿರಿ ಕಥಾ ಐಸಿರಿಯಲ್ಲಿದೆ.)
ತೆರೆದ ಪಾಯಿಖಾನೆ ಗುಂಡಿಗೆ ಚೆಲ್ವನ ಬುಗುರಿ ಬಿದ್ದಿದೆ. ಇದೇ ಪಾಯಿಖಾನೆಗೆ ಹಂದಿ ಮರಿಯೊಂದು ಬಂದು ಬೀಳುತ್ತದೆ. ಬಾಲಕ ಚೆಲ್ವನಾದರೂ ಬುಗುರಿಯನ್ನು ಹೊರ ತೆಗೆಯುವುದು ಹೇಗೆಂದು ಚಿಂತಿಸಿ ಪರಿತಪಿಸಿದರೆ ಆ ಹಂದಿಯನ್ನು ಹೊರ ತೆಗೆದು ತೊಳೆದು ತಿನ್ನುವ ಹುನ್ನಾರ ಅವರಪ್ಪ ಚಿಕ್ಕಣ್ಣ ಮತ್ತು ಹತಾರಿಯದು. ತೆರೆದ ಗುಂಡಿ ಇಡೀ ಕಥೆಯ ಕೇಂದ್ರಬಿಂದುವಾಗಿ ಅದರ ಸುತ್ತಲೇ ಬುಗುರಿಯಂತೆ ತಿರುಗುವುದೆ ತಮಾಷೆ. ಬುಗುರಿ ಕತೆಗಾರರ ಬಾಲ್ಯದ ಕಥೆಯಂತೆ ನಿರೂಪಿತವಾಗಿ ಆ ಕಾಲಘಟ್ಟದ ಚಿತ್ರಣ ನೀಡುತ್ತದೆ. ಅಂತೆಯೇ ನಮ್ಮ ಹಿತ್ತಿಲಿನ ತೆರೆದ ಪಾಯಿಖಾನೆ ಗುಂಡಿಗೆ ಹಂದಿಯೊಂದು ಬಿದ್ದು ಹೊರಳಾಡಿ ಆಮೇಲೆ ಅದಾಗೇ ಎದ್ದು ಹೋಗಿದ್ದು ಇನ್ನೂ ನನಗೆ ನೆನಪಿದೆ. ನಮ್ಮ ಹಿತ್ತಲಿನ ಅನೇಕ ಪ್ರಸಂಗಗಳು ಮೇಡಂ ಅವರ ಈ ಲೇಖನ ಓದುವಾಗ ಅಚಾನಕಾಗಿ ನೆನಪಾದವು. ಅರೇ ನಮ್ಮ ಮನೆಯ ಪರಿಸರದ ಅನೇಕ ಸಣ್ಣ ಸಣ್ಣ ವಿಷಯಗಳೂ ಪ್ರಬಂಧ ರಚನೆಗೆ ವಿಷಯವಾಗಬಹುದಲ್ಲ ಎನಿಸುತ್ತದೆ. ಆದರೆ ಬರೆಯುವ ಶೈಲಿ ಕರಗತವಾಗಬೇಕಷ್ಟೇ.
ಇನ್ನೂ ಇವರ ನೆನಪಿನಂಗಳದಲ್ಲಿ ಜಾತ್ರೆ ಹಕ್ಕಿ ಓದುವಾಗಲೂ ನಮ್ಮೂರ ಮಾರಿ ಹಬ್ಬ, ವರ್ಷಕ್ಕೊಮ್ಮೆ ನಡೆಯುವ ಶ್ರೀ ಯೋಗನರಸಿಂಹಸ್ವಾಮಿ ಜಾತ್ರೆ ಇವು ನೆನಪಾದವು. ಮೇಡಂ ನೆನಪಿನಂಗಳದಲ್ಲಿ ಜಾತ್ರೆ ಹಕ್ಕಿ ಹಾರಿ ಬಂತು ಕೂತಿತ್ತು. ಮಾರ್ಚಿ ಬಂತೆಂದರೆ ಜಾತ್ರೆಗಳ ಕಾರುಬಾರು ಶುರು. ಒಂದೊಂದೂರಿಗೂ ಒಂದೊಂದು ಶಕ್ತಿ ದೇವತೆ. ಗುಡಿಯ ಒಳಗೆ ಮೂಲ ಮೂರ್ತಿಯಾಗಿದ್ದ ಉತ್ಸವಮೂರ್ತಿ ಊರು ಸುತ್ತುವ ಭಾಗ್ಯ ಗ್ರಾಮದೇವತೆಗಳದ್ದು. ಹಳೇಬೀಡಿನ ಕರಿಯಮ್ಮದೇವಿ ಜಾತ್ರೆ ನನ್ನ ಬಾಲ್ಯದ ರಂಗೋಲಿಯಲ್ಲಿ ಒಂದು ಬಣ್ಣ.. ಆಗೆಲ್ಲ ಜಾತ್ರೆಗೆ ಮನೆಯ ಹೆಣ್ಣುಮಕ್ಕಳು ಕಡ್ಡಾಯವಾಗಿ ಬರಬೇಕಿತ್ತು ಎಂದು ಜಾನಪದ ಜಾತ್ರೆ ಕಥೆ ಹೇಳಿದ್ದಾರೆ.
ಕೃತಿಯಲ್ಲಿನ ಬರಹಗಳು ಪ್ರಬಂಧಗಳು ಹೌದು ಲೇಖನವು ಸರಿಯೇ. ಇವರ ಹಳೇಬೀಡಿನ ವಿದ್ಯಾರ್ಥಿ ಜೀವನದ ಗೆಳತಿ ಚಿತ್ರ ಕಲಾವಿದೆ ಆಶಾರಾಣಿ ವೈ.ಬಿ. ಮದುವೆಯಾಗಿ ಬೆಳಗಾವಿ ಜಿಲ್ಲೆಯ ರಾಯಭಾಗದಲ್ಲಿ ಮತ್ತೋರ್ವ ಪ್ರಸಿದ್ದಿ ಭಾವಚಿತ್ರ ರಚನೆಗೆ ಹೆಸರಾಗಿರುವ ಬಾಬುರಾವ್ ನಡೋಣಿಯವರನ್ನು ಮದುವೆಯಾಗಿ ಅಲ್ಲಿ ನೆಲೆಸಿದ್ದು ಶಾಲೆಯ ಸಹದ್ಯೋಗಿ ಶಿಕ್ಷಕಿ ಶ್ರೀಮತಿ ಅಶ್ವಿನಿ ಅವರು ಯಾರೊಂದಿಗೆ ಪೋನ್‍ನಲ್ಲಿ ಮಾತನಾಡುತ್ತಿರಲು ಅವರು ಆಶಾರಾಣಿಯಾಗಿ ಸಂಪರ್ಕಕ್ಕೆ ಸಿಕ್ಕಿ ಆ ದಂಪತಿಗಳ ಚಿತ್ರಕಲೆ ಬಗ್ಗೆ ಲೇಖನಿಸಿದ್ದಾರೆ. ವೈ.ಬಿ.ಆಶಾರಾಣಿಯವರು ಹಾಸನದಲ್ಲಿ ಬಹಳ ದಿನಗಳ ಹಿಂದೆ ತಮ್ಮ ಕಲಾಕೃತಿಗಳ ಪ್ರದರ್ಶನ ಏರ್ಪಡಿಸಿ ನಾನು ವೀಕ್ಷಿಸಿ ರಾಜ್ಯದ ಪತ್ರಿಕೆಗಳಿಗೆ ಬರೆದಿದ್ದೆ. ನನ್ನ ಪ್ರಕೃತಿ ವಿಕೃತಿ ಕಲಾಕೃತಿ ಎಂಬ ಚಿತ್ರ ಕಲಾವಿದರ ಪರಿಚಯ ಕೃತಿಯಲ್ಲಿ ಆ ಲೇಖನವಿದೆ. ಇನ್ನೂ ಕೃತಿಯ ಕಡೆಯ ಲೇಖನ ಡಿ.ಎಸ್.ನಾಗಭೂಷಣ ಕುರಿತ್ತಾಗಿದ್ದು ಜನತಾ ಮಾಧ್ಯಮ ಪತ್ರಿಕೆಯ ಸಂಪಾದಕರು ಆರ್.ಪಿ. ವೆಂಕಟೇಶ ಮೂರ್ತಿಯವರ ಮುಖೇನ ನಾಗಭೂಷಣ ಪರಿಚಯವಾಗಿ ಇವನ್ನು ತಾವು ಕಂಡುಕೊಂಡಂತೆಯೇ ಪರಿಚಯಿಸುತ್ತಾರೆ.
ನಾಗಭೂಷಣ ಸರ್ ಹಾಸನ ಆಕಾಶವಾಣಿಯಲ್ಲಿ ಕಾರ್ಯ ನಿರ್ವಹಿಸುವಾಗ ನಾನು (ಗೊರೂರು ಅನಂತರಾಜು) ಬಿ.ಗ್ರೇಡ್ ನಟನಾಗಿ ಆಯ್ಕೆಯಾಗಿದ್ದೆ. ಇವರ ನಿರ್ದೇಶನದಲ್ಲಿ ಎರಡು ರೇಡಿಯೋ ನಾಟಕಗಳಲ್ಲಿ ಅಭಿನಯಿಸಿದ್ದೆ. ಅದರಲ್ಲಿ ಒಂದು ನಾಟಕ ಎಚ್.ಬಿ.ಜ್ವಾಲನಯ್ಯನವರ ಐಗೂರು ಪಾಳೆಯಗಾರ ಕೃಷ್ಣಪ್ಪನಾಯಕ. ಇದರಲ್ಲಿ ನಾನು ಬ್ರಿಟಿಷ್ ಅಧಿಕಾರಿ. ಒಂದು ದಿನ ಪೂರ್ತಿ ಬೆಳಿಗ್ಗೆಯಿಂದ ಸಂಜೆಯವರೆಗೂ ಬೆಂಡೆತ್ತಿ ನಮ್ಮನ್ನು ತಿದ್ದಿ ತೀಡಿ ರೇಡಿಯೋದಲ್ಲಿ ಪ್ರಸಾರ ಮಾಡಿದ್ದರು. ಒಂದು ತೆಳು ಹಾಳೆಯಲ್ಲಿ ಟೈಪ್ಡ್ ಸ್ಕ್ರೀಪ್ಟ್ ಕೊಟ್ಟಿದ್ದರು. ಆದರೆ ಆ ನಾಟಕ ಮತ್ತೆ ಎಲ್ಲೂ ರಂಗದ ಮೇಲೆ ಬರಲಿಲ್ಲ. ಪುಸ್ತಕವಾಗಿಯೂ ಹೊರಬರಲಿಲ್ಲ. ಜನತಾ ಮಾಧ್ಯಮ ಸಂಪಾದಕರು ನಾಗಭೂಷಣ ಅವರ ಪರಿಚಯ ಹೇಳುವಾಗ ಖಂಡಿತವಾದಿ, ಸಮಾಜವಾದಿ, ಲೋಹಿಯಾವಾದಿ, ಪರಿಸರವಾದಿ, ಗಾಂಧೀ ಕಥನ ಪುಸ್ತಕದ ಕರ್ತೃ ಎಂದು ಹೇಳಿದರು. ನಾಗಭೂಷಣರ ಕಡೆಯ ದಿನಗಳಲ್ಲಿ ಲೇಖಕಿ ಭೇಟಿಯಾಗಿ ಅವರ ವ್ಯಕ್ತಿತ್ವನ್ನು ಸೊಗಸಾಗಿ ಚಿತ್ರಿಸುತ್ತಾರೆ. ಈ ಲೇಖನದಲ್ಲಿ ಸಂಭಾಷಣೆ ಹೊರತಾಗಿ ನಾನು ಮತ್ತೇನೂ ಬರೆಯಲು ಆಗದಿದ್ದರೂ ಏಕೆ ಬರೆದೆ? ಅವರೊಂದಿಗೆ ಗುರುತಿಸಿಕೊಳ್ಳುವ ಹಂಬಲಕ್ಕಾ..?? ಎಂಬ ಪ್ರಶ್ನೆ ಅವರನ್ನು ಕಾಡಿದೆ.
-- ಗೊರೂರು ಅನಂತರಾಜು, ಹಾಸನ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ